ವಿರಾಟ್ ಕೊಹ್ಲಿ ಬಯಸಿದರೂ RCB ನಾಯಕತ್ವ ನೀಡಿಲ್ವಾ..!

|

Updated on: Mar 19, 2025 | 12:09 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ (ಐಪಿಎಲ್ 2025) ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಕಿಂಗ್ ಕೊಹ್ಲಿ ಬದಲಿಗೆ ಯುವ ದಾಂಡಿಗ ರಜತ್ ಪಾಟಿದಾರ್ ನಾಯಕನಾಗಿ ಆಯ್ಕೆಯಾಗಿದ್ದರು. ಆರ್​ಸಿಬಿ ಫ್ರಾಂಚೈಸಿಯ ಈ ನಿರ್ಧಾರಕ್ಕೆ ಕೊಹ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಬಯಸಿದರೂ RCB ನಾಯಕತ್ವ ನೀಡಿಲ್ವಾ..!
Virat Kohli
Follow us on

ಈ ಬಾರಿಯ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಕಣಕ್ಕಿಳಿಯಬೇಕೆಂದು ಬಯಸಿದ್ದರು. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿಲ್ಲ ಎಂಬ ವಿಚಾರ ಬಹಿರಂಗವಾಗಿದೆ. ತೆರೆಮರೆಯ ಈ ವಿಚಾರವನ್ನು ಬಹಿರಂಗಪಡಿಸಿದ್ದು ಮತ್ಯಾರೂ ಅಲ್ಲ, ಕಿಂಗ್ ಕೊಹ್ಲಿಯ ಅತ್ಯಾಪ್ತರಲ್ಲಿ ಒಬ್ಬೆರನಿಸಿಕೊಂಡಿರುವ ಎಬಿ ಡಿವಿಲಿಯರ್ಸ್.

ಖಾಸಗಿ ಚಾನೆಲ್ ಚರ್ಚೆಯೊಂದರಲ್ಲಿ ಕಾಣಿಸಿಕೊಂಡ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲಿ ಕೊಹ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದರು. ಆದಾಗ್ಯೂ, ಮ್ಯಾನೇಜ್‌ಮೆಂಟ್ ಬೇರೆ ದಿಕ್ಕಿನಲ್ಲಿ ಸಾಗಲು ಬಯಸಿದೆ. ಅಂದರೆ ಆರ್​ಸಿಬಿ ಫ್ರಾಂಚೈಸಿ ಹೊಸ ನಾಯಕನನ್ನು ಪರಿಚಯಿಸಲು ಮುಂದಾಗಿತ್ತು. ಈ ನಿರ್ಧಾರವನ್ನು ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ ಎಂದು ಎಬಿಡಿ ತಿಳಿಸಿದ್ದಾರೆ.

ಆರ್​ಸಿಬಿ ಕೋಚ್ ಆ್ಯಂಡಿ ಫ್ಲವರ್ ಮತ್ತು ಮೊ ಬೊಬಾಟ್ ಬಹಳ ಸಮಯದಿಂದ ಈ ಬಗ್ಗೆ ಯೋಚಿಸಿರಬೇಕು. ಹೊಸ ಆಟಗಾರನನ್ನು ನಾಯಕನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದರು. ಅವರು ಈ ಬಗ್ಗೆ ಖಂಡಿತವಾಗಿಯೂ ವಿರಾಟ್ ಜೊತೆ ಚರ್ಚೆ ನಡೆಸಿರುತ್ತಾರೆ. ಅದಕ್ಕೆ ವಿರಾಟ್ ಒಪ್ಪಿಗೆ ನೀಡಿದ್ದಾರೆ. ಇದರ ಹೊರತಾಗಿ ಕೊಹ್ಲಿ ನಾಯಕತ್ವವನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ನಾನು ನಂಬಲ್ಲ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಇದನ್ನೂ ಓದಿ
IPL 2025: RCB ನೂತನ ಜೆರ್ಸಿ ಫೋಟೋ ಇಲ್ಲಿದೆ
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ಈ ಸಲನೂ RCB ಕಪ್ ಗೆಲ್ಲದಿರಲಿ, ಅದಕ್ಕಾಗಿ ನಾನು ಪ್ರಾರ್ಥಿಸುವೆ..!
ಗಂಭೀರ್ ಅವರ ಒಂದು ದೃಢ ನಿರ್ಧಾರ ಚಾಂಪಿಯನ್ಸ್ ಟ್ರೋಫಿಯ ಚಿತ್ರಣ ಬದಲಿಸಿತು

ಇದು ವಿರಾಟ್ ಕೊಹ್ಲಿಯ ಅತ್ಯಂತ ಪ್ರಬುದ್ಧ ಪ್ರತಿಕ್ರಿಯೆಯಾಗಿತ್ತು. ಏಕೆಂದರೆ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ಅವರು ಆರ್​ಸಿಬಿ ತಂಡವನ್ನು ಮತ್ತೆ ಮುನ್ನಡೆಸಲು ಬಯಸುತ್ತಿದ್ದರು. ಆದರೆ ಆರ್‌ಸಿಬಿಯ ಭವಿಷ್ಯಕ್ಕಾಗಿ ಅವರು ಅದನ್ನು ಸಹ ಬಿಟ್ಟುಕೊಟ್ಟರು. ಇದೊಂದು ಒಂದು ದೊಡ್ಡ ಮತ್ತು ಉತ್ತಮ ನಡೆ ಎಂದು ನಾನು ಭಾವಿಸುತ್ತೇನೆ ಎಂದು ಎಬಿಡಿ ಹೇಳಿದ್ದಾರೆ.

ಇನ್ನು ರಜತ್ ಪಾಟಿದಾರ್​ಗೆ ವಿರಾಟ್ ಕೊಹ್ಲಿ ಕಡೆಯಿಂದ ಉತ್ತಮ ಬೆಂಬಲ ಸಿಗಲಿದೆ. ಮೂರು ಸೀಸನ್​ಗಳಲ್ಲಿ ಫಾಫ್ ಡುಪ್ಲೆಸಿಸ್​ಗೆ ಹೇಗೆ ಬೆಂಬಲವಾಗಿ ನಿಂತಿದ್ದರೋ ಅದೇ ರೀತಿ ಪಾಟಿದಾರ್​ ಜೊತೆಗೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಅಂದಹಾಗೆ ವಿರಾಟ್ ಕೊಹ್ಲಿ ಈ ಹಿಂದೆ ಆರ್​ಸಿಬಿ ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 66 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲ್ಲದೆ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್​ಸಿಬಿ 2016 ರಲ್ಲಿ ಫೈನಲ್​ಗೆ ಪ್ರವೇಶಿಸಿದರೆ, 3 ಬಾರಿ ಪ್ಲೇಆಫ್ಸ್ ಆಡಿತ್ತು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಿಂಗ್ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ನಿರೀಕ್ಷೆಯಿತ್ತು.

ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ

ಆದರೆ ಅಚ್ಚರಿ ಎಂಬಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಈ ಬಾರಿ ಕೂಡ ಕಿಂಗ್ ಕೊಹ್ಲಿ ಆರ್​ಸಿಬಿ ಪರ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.