ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮಾಜಿ ಕಪ್ತಾನ ವಿರಾಟ್ ಕೊಹ್ಲಿಯವರ (Virat Kohli) ಬೆಂಗಳೂರು ಪ್ರೀತಿಯ ಬಗ್ಗೆ ಹೇಳಬೇಕಾಗಿಲ್ಲ. ಈ ಬಗ್ಗೆ ಅವರೇ ಮಾತನಾಡುತ್ತಾ ತಮ್ಮ ನೆಚ್ಚಿನ ನಗರಿಯ ಬಗ್ಗೆ ಹಲವು ಬಾರಿ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ವಿರಾಟ್ಗೆ ಬೆಂಗಳೂರು ಮತ್ತಷ್ಟು ಆಪ್ತವಾಗಲು ಇನ್ನೊಂದು ಕಾರಣವಿದೆ. ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಬಾಲ್ಯವನ್ನು ಕಳೆದಿದ್ದು ಬೆಂಗಳೂರಿನಲ್ಲಿಯೇ. ಹೀಗಾಗಿ ಆ ನೆನಪುಗಳನ್ನು ಈ ತಾರಾ ಜೋಡಿ ಸ್ಮರಿಸಿಕೊಳ್ಳುತ್ತಿರುತ್ತಾರೆ. ಇದೀಗ ಆರ್ಸಿಬಿ ತಂಡ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ವಿರಾಟ್ ಬೆಂಗಳೂರಿನಲ್ಲಿ ಏಕಾಂಗಿಯಾಗಿ ಅಡ್ಡಾಡಿದ ಬಗ್ಗೆ ಅಚ್ಚರಿಯ ವಿಚಾರಗಳನ್ನು ಹೊರಹಾಕಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಜನರ ರಿಯಾಕ್ಷನ್ ಏನಿತ್ತು ಎನ್ನುವುದನ್ನೂ ತಿಳಿಸಿದ್ದಾರೆ. ಖ್ಯಾತ ನಿರೂಪಕ ದಾನಿಶ್ ಸೇಠ್ (Danish Sait) ಜತೆ ಮಾತನಾಡುತ್ತಾ ವಿರಾಟ್ ಕೊಹ್ಲಿ ಇತ್ತೀಚಿನ ಘಟನೆಯೊಂದನ್ನು ವಿವರಿಸಿದ್ದಾರೆ. ದಾನಿಷ್ ಮಾತನಾಡುತ್ತಾ, ಫ್ರೇಜರ್ ಟೌನ್ ಗೆ ವಿರಾಟ್ ಏಕಾಂಗಿಯಾಗಿ ಹೋಗಿದ್ದರ ಬಗ್ಗೆ ಕೇಳಿದ್ದರು. ಈ ಬಗ್ಗೆ ವಿಕೆ ಉತ್ತರಿಸಿದ್ದಾರೆ.
ಅನುಷ್ಕಾ ಶರ್ಮಾ ಫ್ರೇಜರ್ ಟೌನ್ನಲ್ಲಿರುವ ಥಾಮಸ್ ಬೇಕರಿಯ ಬಗ್ಗೆ ಹೇಳುತ್ತಿದ್ದರಂತೆ. ಅಲ್ಲಿ ಸಿಗುವ ಪಫ್ ಅದ್ಭುತವಾಗಿರುತ್ತದೆ ಎಂದು ಅನುಷ್ಕಾ ಹೇಳಿದ್ದನ್ನು ವಿರಾಟ್ ಸ್ಮರಿಸಿದ್ದಾರೆ. ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದ ನಂತರ ವಿರಾಟ್ ಥಾಮಸ್ ಬೇಕರಿಗೆ ತೆರಳಿದ್ದರಂತೆ.
ಸೆಕ್ಯುರಿಟಿಗೆ ಕಾರಿನಲ್ಲೇ ಕುಳಿತುಕೊಳ್ಳಲು ಹೇಳಿದ ವಿರಾಟ್, ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಒಬ್ಬರೇ ಬೇಕರಿಗೆ ತೆರಳಿದರಂತೆ. ‘‘ಎಲ್ಲರೂ ಅವರವರಿಗೆ ಬೇಕಾದ ತಿನಿಸುಗಳನ್ನು ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಅಲ್ಲದೇ ಆ ಅವತಾರದಲ್ಲಿ ಯಾರೂ ನನ್ನನ್ನು ಗುರುತಿಸುತ್ತಿರಲಿಲ್ಲ. ಯಾರೂ ನನ್ನನ್ನು ಗುರುತಿಸುತ್ತಿಲ್ಲ ಎನ್ನುವುದು ಎಷ್ಟೊಂದು ಆರಾಮದಾಯಕ ವಿಚಾರವಾಗಿತ್ತು ಎಂದಿದ್ದಾರೆ’’ ವಿರಾಟ್.
ಪಫ್ಗಳನ್ನು ಆರ್ಡರ್ ಮಾಡಿದ ವಿರಾಟ್ಗೆ ನರ್ವಸ್ ಆಗಲು ಶುರುವಾಗಿದ್ದು ಬಿಲ್ ಕೊಡುವ ವೇಳೆಗಂತೆ. ‘‘ಆಗ ನಾನು ನರ್ವಸ್ ಆದೆ. ಕಾರಣ, ನನ್ನ ಬಳಿ ಕ್ಯಾಶ್ ಇರಲಿಲ್ಲ. ಕ್ರೆಡಿಟ್ ಕಾರ್ಡ್ ನೀಡಿದೆ. ಅದರಲ್ಲಿ ನಮ್ಮ ಹೆಸರಿರುತ್ತದೆ. ಭಯವಾಗಲು ಆರಂಭವಾಯಿತು. ಕ್ಯಾಶಿಯರ್ಗೆ ನನ್ನ ಗುರುತು ತಿಳಿದರೆ ಸ್ಥಳದಲ್ಲಿ ಏನೂ ಸಂಭವಿಸಬಹುದು. ಹೀಗಾಗಿ ಸೆಕ್ಯುರಿಟಿಯನ್ನು ಕರೆಯಲು ಮೊಬೈಲ್ನಲ್ಲಿ ನಂಬರ್ ಓಪನ್ ಮಾಡಿ ತಯಾರಾಗಿದ್ದೆ’’ ಎಂದು ಹೇಳಿದ್ದಾರೆ ವಿರಾಟ್.
ಮುಂದೇನಾಯ್ತು ಎಂದು ವಿವರಿಸಿದ ಕೊಹ್ಲಿ, ‘‘ಅಚ್ಚರಿಯೆಂದರೆ ಕ್ಯಾಶಿಯರ್ ಕಾರ್ಡ್ನ ಹೆಸರನ್ನು ನೋಡಲೇ ಇಲ್ಲ. ಅವರು ಅಷ್ಟು ಬ್ಯುಸಿಯಾಗಿದ್ದರು. ಆಗ ಆ ಬೇಕರಿಯ ಖ್ಯಾತಿ ನನಗೆ ಅರ್ಥವಾಯಿತು. ನಾನು ಸೈನ್ ಮಾಡಿ ಬಿಲ್ ಪಾವತಿಸಿದೆ. ಅದಾಗ್ಯೂ ಯಾರಿಗೂ ತಿಳಿಯಲಿಲ್ಲ. ಇದು ನನಗೆ ಅಚ್ಚರಿ ತಂದಿತು’’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ‘ಮಿಸ್ಟರ್ ನಾಗ್’ ಖ್ಯಾತಿಯ ದಾನಿಶ್, ಇನ್ನು ಆ ಬೇಕರಿಯ ಖ್ಯಾತಿ ಮತ್ತಷ್ಟು ಏರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಮಾತಿನ ವಿಡಿಯೋ ಇಲ್ಲಿದೆ:
Interview of the year! Catch Virat Kohli in a relaxed, honest and fun avatar, even as Mr. Nags tries to annoy him just like he’s done over the years. ??
Tell us what the best moment from this interview was for you, in the comments section. ??#PlayBold #IPL2022 #RCB #ನಮ್ಮRCB pic.twitter.com/vV6MyRDyRt
— Royal Challengers Bangalore (@RCBTweets) May 11, 2022
ತಮ್ಮ ಈಗಿನ ಫಾರ್ಮ್ ಕುರಿತು ಸಂದರ್ಶನದಲ್ಲಿ ಮಾತನಾಡಿದ ವಿರಾಟ್, ಇದನ್ನು ಮೊದಲ ಬಾರಿಗೆ ಎದುರಿಸುತ್ತಿದ್ದೇನೆ. ಜೀವನದಲ್ಲಿ ಎಲ್ಲವನ್ನೂ ನೋಡಿದ ಹಾಗಾಯಿತು ಎಂದು ನಗುತ್ತಲೇ ಉತ್ತರಿಸಿದ್ದಾರೆ. ಇದಲ್ಲದೇ ದಾನಿಶ್ ಸೇಠ್ ಜತೆಗಿನ ಸಂದರ್ಶನದಲ್ಲಿ ವಿರಾಟ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Wed, 11 May 22