Emma Chamberlain: ಭಾರತದ ರಾಜರಿಗೆ ಸೇರಿದ ನೆಕ್ಲೇಸ್ ಧರಿಸಿ ಹೆಜ್ಜೆ ಹಾಕಿದ್ರಾ ಖ್ಯಾತ ತಾರೆ? ಏನಿದರ ಇತಿಹಾಸ?
Met Gala 2022: ಎಮ್ಮಾ ಚೇಂಬರ್ಲೀನ್ ಧರಿಸಿದ್ದ ನೆಕ್ಲೆಸ್ ಭಾರತದ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸ್ ಧರಿಸಿರುವ ಎಮ್ಮಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.
ಅಮೇರಿಕದ ಜನಪ್ರಿಯ ಯುಟ್ಯೂಬ್ ತಾರೆಯಾಗಿರುವ ಎಮ್ಮಾ ಚೇಂಬರ್ಲೇನ್ (Emma Chamberlain) ಪ್ರಸ್ತುತ ಭಾರತದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಇತ್ತೀಚೆಗೆ ಧರಿಸಿದ್ದ ನೆಕ್ಲೆಸ್. ಹೌದು, ಪ್ರಖ್ಯಾತ ಫ್ಯಾಶನ್ ಕಾರ್ಯಕ್ರಮವಾದ ‘ಮೆಟ್ ಗಾಲಾ 2022’ದಲ್ಲಿ (Met Gala 2022) ಮೊದಲ ಬಾರಿಗೆ ಕಾಣಿಸಿಕೊಂಡ ಎಮ್ಮಾ ವಿಶೇಷ ಬಗೆಯ ದಿರಿಸನ್ನು ಧರಿಸಿದ್ದರು. ಆದರೆ ಅದಕ್ಕಿಂತ ಅವರು ಹೆಚ್ಚು ಸುದ್ದಿಯಾಗಿದ್ದು ತಮ್ಮ ನೆಕ್ಲೇಸ್ ಮೂಲಕ. ಎಮ್ಮಾ ಚೇಂಬರ್ಲೀನ್ ಧರಿಸಿದ್ದ ಆಭರಣ ಭಾರತದ ಪಂಜಾಬ್‌ನ ಪಟಿಯಾಲಾದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್‌ಗೆ ಸೇರಿದ್ದು ಎನ್ನಲಾಗಿದೆ. ಕಾರ್ಟಿಯರ್ ವಿನ್ಯಾಸ ಮಾಡಿರುವ ಆ ನೆಕ್ಲೇಸನ್ನು ಧರಿಸಿರುವ ಎಮ್ಮಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿರೋದೇಕೆ? ಏನಿದರ ಇತಿಹಾಸ? ಈ ಕುರಿತ ಮಾಹಿತಿ ಇಲ್ಲಿದೆ.
ಆಭರಣದ ಬಗ್ಗೆ ಇತಿಹಾಸ ಏನು ಹೇಳುತ್ತದೆ?
ವರದಿಗಳ ಪ್ರಕಾರ, ಪಟಿಯಾಲದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್ ಡಿ-ಬೀರ್ಸ್ ವಜ್ರಗಳನ್ನು ಹೊಂದಿದ್ದರು. ಅದನ್ನಿಟ್ಟುಕೊಂಡು ನೆಕ್ಲೇಸ್ ತಯಾರಿಸಲು ಅವರು ಕಾರ್ಟಿಯರ್ಗೆ (ಪ್ರಖ್ಯಾತ ವಿನ್ಯಾಸ ಸಂಸ್ಥೆ) ನೀಡಿದ್ದರು. ನೆಕ್ಲೇಸ್ ಅನ್ನು 1928ರಲ್ಲಿ ತಯಾರಿಸಲಾಯಿತು. ಅದನ್ನು ಪಟಿಯಾಲಾ ನೆಕ್ಲೇಸ್ ಎಂದು ಕರೆಯಲಾಗುತ್ತಿತ್ತು.
ಈ ನೆಕ್ಲೇಸ್‌ನ ವಿಶೇಷವೆಂದರೆ ಇದು 2930 ವಜ್ರಗಳು ಮತ್ತು ಕೆಲವು ಬರ್ಮೀಸ್ ಮಾಣಿಕ್ಯಗಳಿಂದ ಅಲಂಕರಿಸಲ್ಪಟ್ಟ ಐದು ಸಾಲುಗಳ ಪ್ಲಾಟಿನಂ ಚೈನ್ಗಳನ್ನು ಹೊಂದಿದೆ. ತುಸು ಹಳದಿ ಬಣ್ಣದ ಡಿ-ಬೀರ್ಸ್ ವಜ್ರವನ್ನು ಮಧ್ಯದಲ್ಲಿ ಇರಿಸಲಾಗಿದೆ. ಇತಿಹಾಸದಲ್ಲೇ ಅತ್ಯಂತ ದುಬಾರಿ ವೆಚ್ಚದಲ್ಲಿ ತಯಾರಾದ ಆಭರಣ ಇದು ಎನ್ನಲಾಗಿದ್ದು, ಇದರ ತಯಾರಿಕೆಗೆ ಇಂದಿನ ಲೆಕ್ಕದಲ್ಲಿ ಸುಮಾರು 30 ಮಿಲಿಯನ್ ಡಾಲರ್ ವೆಚ್ಚವಾಗಿತ್ತು ಎಂದು ಹೇಳಲಾಗಿದೆ.
1888 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆಯ ಮೂಲಕ ತೆಗೆಯಲಾದ ಈ ವಜ್ರವನ್ನು ಭೂಪಿಂದರ್ ಸಿಂಗ್ 1889ರಲ್ಲಿ ಖರೀದಿಸಿದ್ದರು ಎಂದು ವರದಿಯಾಗಿದೆ. ಆದರೆ 1948 ರಲ್ಲಿ ಪಟಿಯಾಲಾ ರಾಜಮನೆತನದ ಖಜಾನೆಯಿಂದ ಪ್ರಸಿದ್ಧ ಹಾರ ಕಾಣೆಯಾಗಿತ್ತು. 32 ವರ್ಷಗಳವರೆಗೆ ಈ ಹಾರದ ಯಾವುದೇ ಕುರುಹು ಇರಲಿಲ್ಲ.
1982ರಲ್ಲಿ ಸೋಥೆಬಿ ಹರಾಜಿನ ಸಮಯದಲ್ಲಿ ಹಾರವು ನಿಗೂಢವಾಗಿ ಪತ್ತೆಯಾಯಿತು. ಅಚ್ಚರಿಯೆಂದರೆ ಹಾರವು ಅದರ ಮೊದಲಿನ ರೂಪದಲ್ಲಿ ಪತ್ತೆಯಾಗಿರಲಿಲ್ಲ. ಬದಲಾಗಿ ಕೇವಲ ಡಿ-ಬಿಯರ್ಸ್ ವಜ್ರ ಮಾತ್ರ ಹರಾಜಿಗೆ ಲಭ್ಯವಾಗಿತ್ತು. ಕಾರ್ಟಿಯರ್ ಹರಾಜಿನಲ್ಲಿ ವಜ್ರವನ್ನು ಖರೀದಿಸಿತ್ತು. ಲಂಡನ್‌ನ ಪುರಾತನ ವಸ್ತುಗಳ ಅಂಗಡಿಯೊಂದರಲ್ಲಿ ನೆಕ್ಲೇಸ್‌ನ ಒಂದು ಭಾಗ ಪತ್ತೆಯಾಗಿತ್ತು. ಕಾರ್ಟಿಯರ್ ನಂತರ ಹಾರವನ್ನು ಖರೀದಿಸಿ, ಅದರಲ್ಲಿ ನಾಪತ್ತೆಯಾಗಿದ್ದನ್ನು ಪ್ರತಿಕೃತಿಯೊಂದಿಗೆ ಬದಲಾಯಿಸಿತ್ತು.
ಈಗ ವಿವಾದವೇಕೆ?
‘‘ಮೆಟ್ ಗಾಲಾದಲ್ಲಿ ಪ್ರದರ್ಶಿತವಾದ ನೆಕ್ಲೇಸ್‌ನ ಮೂಲವು ಭಾರತದಲ್ಲಿದೆ. ಅದು ಅಚಾನಕ್ಕಾಗಿ ನಾಪತ್ತೆಯಾಗಿ ಹೇಗೇಗೋ ಕಾರ್ಟಿಯರ್ಗೆ ಸೇರಿದೆ. ದುರದೃಷ್ಟವಶಾತ್ ಜನರಿಗೆ ಇದರ ಬಗ್ಗೆ ಅರಿವಿಲ್ಲ’’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ ನೆಟ್ಟಿಗರು. ಹಳೆಯ ನೆಕ್ಲೇಸ್ ಹಾಗೂ ಈಗಿನ ಹೊಸ ವಿನ್ಯಾಸದ ನೆಕ್ಲೇಸ್ಗಳ ಚಿತ್ರಗಳನ್ನು ತುಲನೆ ಮಾಡಿ ಚರ್ಚೆಗಳು ನಡೆಯುತ್ತಿವೆ.
‘‘ಭಾರತದ ಅನೇಕ ಆಭರಣಗಳು ಹಾಗೂ ಅಮೂಲ್ಯ ವಸ್ತುಗಳು ಅನಿವಾರ್ಯ ಕಾರಣಗಳಿಂದ ಬೇರೆಯವರಲ್ಲಿದೆ. ಕೊಹಿನೂರ್ ವಜ್ರವೂ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಈಗಲೂ ಅದರ ಮೂಲ ಮಾಲಿಕರಿಗೆ ಹಿಂತಿರುಗಿಸಲಾಗಿಲ್ಲ’’ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ನೆಟ್ಟಿಗರ ಕೆಲವು ಅಭಿಪ್ರಾಯಗಳು ಇಲ್ಲಿವೆ:
It makes me so angry that a random white girl is wearing a priceless artefact that was stolen during British colonisation of India. This piece should not be in the hands of white ppl https://t.co/W6xOyWhpLy
— k (@commedefleurr) May 7, 2022
So i just found out emma chamberlain wore the maharaja of patiala’s necklace at the met gala… this is wayyy worse than kim wearing marilyn monroe’s dress. It has a deep and painful history attached to it. Very on theme, nothing screams gilded glamour quite like expropriation pic.twitter.com/XqqHwqusdU
— ? (@arianaspovv) May 7, 2022
ಭಾರತದ ಪರಂಪರೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದೂ ಹಲವರು ಟ್ವಿಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Tue, 10 May 22