Virat Kohli: ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿಯ ಮಸ್ತ್ ಡ್ಯಾನ್ಸ್: ವಿಡಿಯೋ ವೀಕ್ಷಿಸಿ
T20 World Cup 2024: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್ ಕಲೆಹಾಕಿದರೆ, ಸೌತ್ ಆಫ್ರಿಕಾ ತಂಡವು 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್ಗಳ ರೋಚಕ ವಿಜಯ ಸಾಧಿಸಿದೆ. ಈ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಚುಟುಕು ಕ್ರಿಕೆಟ್ಗೆ ಕಿಂಗ್ ಕೊಹ್ಲಿ ವಿದಾಯ ಹೇಳಿದ್ದಾರೆ.
ಭಾರತ ತಂಡವು 17 ವರ್ಷಗಳ ಬಳಿಕ ಟಿ20 ಕ್ರಿಕೆಟ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್ಗಳಿಂದ ಮಣಿಸಿ ಟೀಮ್ ಇಂಡಿಯಾ (Team India) ವಿಶ್ವಕಪ್ ಅನ್ನು ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತದ ಪರ ವಿರಾಟ್ ಕೊಹ್ಲಿ (76) ಆಕರ್ಷಕದ ಅರ್ಧಶತಕ ಬಾರಿಸಿದರೆ, ಅಕ್ಷರ್ ಪಟೇಲ್ 47 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ದಿಟ್ಟ ಹೋರಾಟವನ್ನೇ ನಡೆಸಿದ್ದರು. ಅದರಲ್ಲೂ 15 ಓವರ್ ತನಕ ಪಂದ್ಯವು ಸೌತ್ ಆಫ್ರಿಕಾ ಪರವಿತ್ತು. ಆದರೆ ಅಂತಿಮ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಸೌತ್ ಆಫ್ರಿಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು. ಈ ಮೂಲಕ ಭಾರತ ತಂಡವು 7 ರನ್ಗಳ ರೋಚಕ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದರು. ಅದರಲ್ಲೂ ಅಂತಿಮ ಟಿ20 ಪಂದ್ಯವಾಡಿದ ವಿರಾಟ್ ಕೊಹ್ಲಿ ಯುವ ಆಟಗಾರರಾದ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಹಾಗೂ ರಿಂಕು ಸಿಂಗ್ ಜೊತೆಗೂಡಿ ಸಖತ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
ಇದನ್ನೂ ಓದಿ: Virat Kohli – Rohit Sharma: T20I ಕ್ರಿಕೆಟ್ಗೆ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ವಿದಾಯ
ದಲೇರ್ ಮೆಹೆಂದಿ ಹಾಡಿರುವ ಜನಪ್ರಿಯ ಪಂಜಾಬಿ ಗೀತೆ ‘ತುನಕ್ ತುನಕ್ ತುನ್’ ಹಾಡಿಗೆ ಭಾಂಗ್ರಾ ಸ್ಟೈಲ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅರ್ಷದೀಪ್ ಸಿಂಗ್ ಸಖತ್ ಸ್ಟೆಪ್ಸ್ ಹಾಕಿದರು. ಇದೀಗ ಕಿಂಗ್ ಕೊಹ್ಲಿಯ ಡ್ಯಾನ್ಸಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿರಾಟ್ ಕೊಹ್ಲಿ ಡ್ಯಾನ್ಸ್ ವಿಡಿಯೋ:
View this post on Instagram
ವಿರಾಟ್ ಕೊಹ್ಲಿ ನಿವೃತ್ತಿ:
ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕಿಂಗ್ ಆಳ್ವಿಕೆ ಅಂತ್ಯಗೊಂಡಾಂತಾಗಿದೆ. ಭಾರತದ ಪರ ಪರ 125 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಒಟ್ಟು 117 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 3056 ಎಸೆತಗಳನ್ನು ಎದುರಿಸಿ 4188 ರನ್ ಕಲೆಹಾಕಿದ್ದಾರೆ.