ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಏಕದಿನ ಮತ್ತು ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿ ತವರಿಗೆ ಮರಳಿರುವ ಭಾರತ ಕ್ರಿಕೆಟ್ ತಂಡ ಇದೀಗ ಮತ್ತೊಂದು ಸವಾಲಿಗೆ ಸಜ್ಜಾಗುತ್ತಿದೆ. ಸದ್ಯದಲ್ಲೇ ಟೀಮ್ ಇಂಡಿಯಾ ಜಿಂಬಾಬ್ವೆ (india vs Zimbabwe) ಪ್ರವಾಸ ಬೆಳೆಸಲಿದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾವನ್ನು (Team India) ಕೂಡ ಪ್ರಕಟ ಮಾಡಿದೆ. ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ ಸೇರಿದಂತೆ ಕೆಲವರು ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ, ಪ್ರವಾಸ ಬೆಳೆಸುವ ಮುನ್ನವೇ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sunder) ಇಂಜುರಿಗೆ ತುತ್ತಾಗಿದ್ದು ಜಿಂಬಾಬ್ವೆ ಪ್ರವಾಸಕ್ಕೆ ಅನುಮಾನ ಎಂದು ಹೇಳಲಾಗತ್ತಿದೆ.
ವಾಷಿಂಗ್ಟನ್ ಸುಂದರ್ ಸದ್ಯ ಇಂಗ್ಲೆಂಡ್ನಲ್ಲಿ ಬೀಡುಬಿಟ್ಟಿದ್ದು ರಾಯಲ್ ಲಂಡನ್ ಒನ್–ಡೇ ಚಾಂಪಿಯನ್ಷಿಪ್ ಮ್ಯಾಚ್ನಲ್ಲಿ ಲ್ಯಾಂಚೆಶೈರ್ ತಂಡದ ಪರ ಆಡುತ್ತಿದ್ದಾರೆ. ಬುಧವಾರ ನಡೆದ ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಸುಂದರ್ ಗಾಯಕ್ಕೆ ತುತ್ತಾಗಿದ್ದಾರೆ. ಫೀಲ್ಡಿಂಗ್ ಮಾಡಲಾಗದೆ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದಾರೆ. ಈ ಬಗ್ಗೆ ಲ್ಯಾಂಚೆಶೈರ್ ಕ್ರಿಕೆಟ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಹಿತಿ ತಿಳಿಸಿದೆ.
? @Sundarwashi5 has left the field after receiving treatment on his left shoulder following a heavy landing.
No breakthroughs with the ball just yet.
27-0 (8)
? #RedRoseTogether pic.twitter.com/IRODWuDEF5
— Lancashire Cricket (@lancscricket) August 10, 2022
ಸುಂದರ್ ಅನೇಕ ತಿಂಗಳುಗಳ ಬಳಿಕ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಮೂಲಕ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ಇದೀಗ ಇಂಜುರಿಗೆ ಗುರಿಯಾಗಿರುವ ಕಾರಣ ಇವರು ಈ ಸರಣಿಯಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಬದಲಿ ಆಟಗಾರನನ್ನು ಬಿಸಿಸಿಐ ಸದ್ಯದಲ್ಲೇ ಪ್ರಕಟಿಸಬೇಕಿದೆ.
ಇನ್ನು ಭಾರತ ತಂಡವು 6 ವರ್ಷಗಳ ಬಳಿಕ ಜಿಂಬಾಬ್ವೆ ನಾಡಿಗೆ ತೆರಳುತ್ತಿದೆ. ಈ ಹಿಂದೆ ಎಂಎಸ್ ಧೋನಿ ನೇತೃತ್ವದ ತಂಡವು 2016 ರಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಜಿಂಬಾಬ್ವೆಯಲ್ಲಿ ಆಡಿತ್ತು. ಈ ಎರಡೂ ಸರಣಿಯಲ್ಲಿ ಅಂದು ಭಾರತ ತಂಡ ಗೆಲುವು ದಾಖಲಿಸಿತ್ತು. ಇದೀಗ 6 ವರ್ಷಗಳ ಬಳಿಕ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿದೆ.
ಈ ಬಾರಿ ಶಿಖರ್ ಧವನ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿದ್ದಾರೆ. ರೋಹಿತ್ ಶರ್ಮಾ, ರಿಷಭ್ ಪಂತ್, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಕೆಲ ಹಿರಿಯರಿಗೆ ವಿಶ್ರಾಂತಿ ನೀಡಲಾಗಿದೆ. ಇದೇ ವೇಳೆ ಸುದೀರ್ಘ ಗಾಯದ ನಂತರ ದೀಪಕ್ ಚಹಾರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚು ಹರಿಸಿದ್ದ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಲಾಗಿದೆ.
ಐಸಿಸಿ ಸೂಪರ್ ಲೀಗ್ ಭಾಗವಾಗಿ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿವೆ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್ 18, 20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ. ಐಸಿಸಿ ಲೀಗ್ ಶ್ರೇಯಾಂಕದಲ್ಲಿ ಜಿಂಬಾಬ್ವೆ ಪ್ರಸ್ತುತ 12ನೇ ಸ್ಥಾನದಲ್ಲಿದೆ.
ಭಾರತ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.