ಟೀಮ್ ಇಂಡಿಯಾ ಆಟಗಾರರಿಗೆ ಗಂಭೀರ್ ಖಡಕ್ ಸೂಚನೆ
T20 World Cup 2026: ಬಹುನಿರೀಕ್ಷಿತ ಟಿ20 ವಿಶ್ವಕಪ್ಗೆ ಫೆಬ್ರವರಿ 7 ರಿಂದ ಶುರುವಾಗಲಿದ್ದು, ಮೊದಲ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಮಾರ್ಚ್ 8 ರಂದು ನಡೆಯಲಿದೆ ಎಂದು ತಿಳಿದು ಬಂದಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಸಂಪೂರ್ಣವಾಗಿ ಸದೃಢರಾಗಬೇಕೆಂದು ಭಾರತ ತಂಡ ಕೋಚ್ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಸೋತಿದ್ದ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಈ ಪ್ರದರ್ಶನೊಂದಿಗೆ ಭಾರತ ತಂಡ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿ ಗೆಲುವಿನ ಹೊರತಾಗಿಯೂ ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್ಗೆ ಸದೃಢವಾಗಿಲ್ಲ ಎಂದು ಕೋಚ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಗೌತಮ್ ಗಂಭೀರ್, ಟಿ20 ವಿಶ್ವಕಪ್ಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿವೆ. ಇದಾಗ್ಯೂ ನಮ್ಮ ತಂಡವು ಫಿಟ್‌ನೆಸ್ ವಿಷಯದಲ್ಲಿ ‘ನಾವು ಬಯಸುವ ಸ್ಥಾನದಲ್ಲಿ’ ಇಲ್ಲ ಎಂದಿದ್ದಾರೆ. ಐಸಿಸಿಯಂತಹ ದೊಡ್ಡ ಟೂರ್ನಿಗಳನ್ನು ಆಡುವಾಗ ಹೆಚ್ಚಿನ ಒತ್ತಡವಿರುತ್ತದೆ. ಇಂತಹ ಸಂದರ್ಭಗಳಲ್ಲಿ ದೈಹಿಕ ಸದೃಢತೆ ಮುಖ್ಯ,
ದೈಹಿಕ ಸದೃಢತೆಯು ಆಟಗಾರರ ಮಾನಸಿಕ ಬಲದ ಮೇಲೆ ನೇರವಾಗಿ ಹೇಗೆ ಪರಿಣಾಮ ಬೀರುತ್ತದೆ. ಈ ಬಗ್ಗೆ ನಾನು ಟೀಮ್ ಇಂಡಿಯಾ ಆಟಗಾರರೊಂದಿಗೆ ಸಹ ಚರ್ಚಿಸಿತ್ತೇನೆ. ಅಲ್ಲದೆ ದೈಹಿಕವಾಗಿ ಮತ್ತಷ್ಟು ಫಿಟ್ ಆಗಿರಬೇಕೆಂದು ಸೂಚಿಸಿರುವುದಾಗಿ ಗೌತಮ್ ಗಂಭೀರ್ ಹೇಳಿದ್ದಾರೆ.
ಇದೇ ವೇಳೆ ಮುಂಬರುವ ಟೆಸ್ಟ್ ಸರಣಿ ಬಗ್ಗೆ ಕೂಡ ಮಾತನಾಡಿದ ಗಂಭೀರ್, ಸೌತ್ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಮೇಲೆ ಪ್ರಾಥಮಿಕ ಗಮನ ಹರಿಸಿದ್ದೇವೆ. ಏಕೆಂದರೆ ಈ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಭಾಗವಾಗಿದೆ.
ಅದರಲ್ಲೂ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸೌತ್ ಆಫ್ರಿಕಾ ನಿಸ್ಸಂಶಯವಾಗಿ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಅವರೊಂದಿಗೆ ಗೆಲ್ಲುವುದು ಬಹಳ ಮುಖ್ಯ. ಅದರಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಭಾಗವಾಗಿರುವುರಿಂದ ಈ ಎರಡು ಪಂದ್ಯಗಳು ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ ಎಂದು ಗಂಭೀರ್ ಹೇಳಿದ್ದಾರೆ.
ಈ ಟೆಸ್ಟ್ ಸರಣಿಯ ಬಳಿಕ ನಮ್ಮ ಗಮನವು ಟಿ20 ವಿಶ್ವಕಪ್ ಆಗಿರುತ್ತದೆ. ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಈ ಟೂರ್ನಿ ಕೂಡ ನಮಗೆ ಬಹಳ ಮುಖ್ಯ. ಪ್ರಸ್ತುತ ಸನ್ನಿವೇಶದ ಬಗ್ಗೆ ಹೇಳುವುದಾದರೆ, ಫಿಟ್ನೆಸ್ ದೃಷ್ಟಿಕೋನದಿಂದ, ನಾವು ಇನ್ನೂ ಟಿ20 ವಿಶ್ವಕಪ್‌ಗಾಗಿ ಸಂಪೂರ್ಣ ಸಿದ್ಧವಾಗಿಲ್ಲ.
ಇದನ್ನೂ ಓದಿ: IPL 2026: ಲೈಂಗಿನ ದೌರ್ಜನ್ಯ ಪ್ರಕರಣ: RCB ಆಟಗಾರ ಕಿಕ್ ಔಟ್ ಖಚಿತ
ನಾವು ಟೀಮ್ ಇಂಡಿಯಾ ಮತ್ತಷ್ಟು ಚುರುಕಾಗಿರಲು ಮತ್ತು ಫಿಟ್ ಆಗಿರಲು ಬಯಸುತ್ತೇವೆ. ಫಿಟ್ ಆಗಿದ್ದಷ್ಟೂ, ಮಾನಸಿಕವಾಗಿ ಹೆಚ್ಚು ಬಲಶಾಲಿಯಾಗುತ್ತೇವೆ. ಇನ್ನುಳಿದಿರುವುದು ಕೇವಲ ಮೂರು ತಿಂಗಳುಗಳು ಮಾತ್ರ. ಅದಕ್ಕೂ ಮುನ್ನ ಎಲ್ಲರೂ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಗೌತಮ್ ಗಂಭೀರ್ ಟೀಮ್ ಇಂಡಿಯಾ ಆಟಗಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.
