AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಪಂದ್ಯದಲ್ಲಿ ಮೂರು ಶತಕ; ಹೀನಾಯ ದಾಖಲೆ ಬರೆದ ಟೀಂ ಇಂಡಿಯಾ

ಗುವಾಹಟಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಐತಿಹಾಸಿಕ ಸಾಧನೆ ಮಾಡಿದೆ. ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್ ಹಾಗೂ ಆಮಿರ್ ಜಂಗೂ ಶತಕ ಬಾರಿಸಿ, ತಂಡದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ಭಾರತದ ಕಳಪೆ ಬೌಲಿಂಗ್ ಇದಕ್ಕೆ ಕಾರಣವಾಯಿತು. ಈ ಮೂಲಕ ಭಾರತ ತಂಡ ಎರಡನೇ ಬಾರಿಗೆ ಮೂರು ಶತಕಗಳನ್ನು ಹೊಡಿಸಿಕೊಂಡ ಬೇಡದ ದಾಖಲೆಗೂ ಪಾತ್ರವಾಗಿದೆ.

ಒಂದೇ ಪಂದ್ಯದಲ್ಲಿ ಮೂರು ಶತಕ; ಹೀನಾಯ ದಾಖಲೆ ಬರೆದ ಟೀಂ ಇಂಡಿಯಾ
ಜಾನ್ ಕ್ಯಾಂಪ್ಬೆಲ್, ಶಾಪ್ ಹೋಪ್, ಅಮೀರ್ ಜಂಗು
ಪೃಥ್ವಿಶಂಕರ
|

Updated on:Sep 30, 2026 | 6:12 PM

Share

ತನ್ನ ಕಳಪೆ ಪ್ರದರ್ಶನದಿಂದಾಗಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾಗಿ ಅರ್ಹತಾ ಪಂದ್ಯಾವಳಿಯನ್ನಾಡಬೇಕಾದ ದುಸ್ಥಿತಿಗೆ ತಲುಪಿರುವ ವೆಸ್ಟ್ ಇಂಡೀಸ್ ತಂಡ ಇದೀಗ ಟೀಂ ಇಂಡಿಯಾ ವಿರುದ್ಧ ಐತಿಹಾಸಿಕ ಸಾಧನೆ ಮಾಡಿದೆ. ತವರಿನಲ್ಲಿ ಟೀಂ ಇಂಡಿಯಾವನ್ನು ಮಣಿಸುವುದು ಮತ್ತು ಟೀಂ ಇಂಡಿಯಾ ವೇಗಿಗಳನ್ನು ಸಮರ್ಥವಾಗಿ ಎದುರಿಸುವುದು ಕಷ್ಟಕರ ಎಂಬುದು ಎಲ್ಲಾ ತಂಡಗಳ ಅಭಿಪ್ರಾಯ. ಆದರೆ ವಿಂಡೀಸ್ ವಿರುದ್ಧ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಯಾವ ವೇಗಿಯೂ ಪರಿಣಾಮಕಾರಿಯಾಗಲಿಲ್ಲ. ಇದರ ಫಲವಾಗಿ ವೆಸ್ಟ್ ಇಂಡೀಸ್ ತಂಡದ ಮೂವರು ಆಟಗಾರರು ದಾಖಲೆಯ ಶತಕ ಸಿಡಿಸಿದರು.

ವಿಂಡೀಸ್ ತಂಡದಿಂದ 3 ಶತಕ

ಗುವಾಹಟಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆರಂಭಿಕ ಬ್ಯಾಟರ್ ಜಾನ್ ಕ್ಯಾಂಪ್‌ಬೆಲ್, ನಾಯಕ ಶಾಯ್ ಹೋಪ್ ಹಾಗೂ ಆಮಿರ್ ಜಂಗೂ ಶತಕ ಬಾರಿಸಿ ಮಿಂಚಿದರು. ಈ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ನ ಪಂದ್ಯವೊಂದರಲ್ಲಿ ಮೂರು ಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಇತ್ತ ಟೀಂ ಇಂಡಿಯಾ ಎರಡು ತಂಡಗಳ ವಿರುದ್ಧ ಮೂರು ಮೂರು ಶತಕಗಳನ್ನು ಹೊಡಿಸಿಕೊಂಡ ಮೊದಲ ತಂಡವೆಂಬ ಬೇಡದ ದಾಖಲೆಗೆ ಕೊರಳೊಡ್ಡಿತು. ವಾಸ್ತವವಾಗಿ ಏಕದಿನ ಪಂದ್ಯವೊಂದರಲ್ಲಿ ಮೂರು ಶತಕಗಳನ್ನು ಬಾರಿಸಿರುವುದು ಇದೆ ಮೊದಲಲ್ಲ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ 2 ಬಾರಿ ಈ ಸಾಧನೆಯನ್ನು ಮಾಡಿದೆ.

2 ಬಾರಿ ಈ ಸಾಧನೆ ಮಾಡಿರುವ ಆಫ್ರಿಕಾ

ಏಕದಿನ ಪಂದ್ಯದಲ್ಲಿ ಒಂದೇ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದ ದಾಖಲೆಯನ್ನು 2015 ರಲ್ಲಿ ಇದೇ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ನಿರ್ಮಿಸಿತ್ತು. ಆ ಪಂದ್ಯದಲ್ಲಿ ಹಾಶಿಮ್ ಆಮ್ಲಾ, ರಿಲೀ ರುಸ್ಸೋ ಮತ್ತು ಎಬಿ ಡಿವಿಲಿಯರ್ಸ್ ಶತಕ ಬಾರಿಸಿದ್ದರು. ನಂತರ 2015 ರಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಎರಡನೇ ಬಾರಿಗೆ ಈ ಸಾಧನೆ ಮಾಡಿತ್ತು. ಮುಂಬೈನಲ್ಲಿ ನಡೆದ ಆ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್, ಫಾಫ್ ಡು ಪ್ಲೆಸಿಸ್ ಮತ್ತು ಎಬಿ ಡಿವಿಲಿಯರ್ಸ್ ಶತಕ ಸಿಡಿಸಿದ್ದರು.

2022 ರಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಮೂವರು ಬ್ಯಾಟ್ಸ್‌ಮನ್‌ಗಳಾದ ಫಿಲ್ ಸಾಲ್ಟ್, ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ ಶತಕ ಬಾರಿಸಿದ್ದರು. ಹಾಗೆಯೇ 2023 ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾದ ಮೂವರು ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿ ಕಾಕ್, ರಾಸ್ಸಿ ವ್ಯಾನ್ ಡಾರ್ ಡಸ್ಸೆನ್ ಮತ್ತು ಏಡೆನ್ ಮಾರ್ಕ್ರಾಮ್ ಶತಕದ ಇನ್ನಿಂಗ್ಸ್ ಆಡಿದ್ದರು.

ಇನ್ನು ಕಳೆದ ವರ್ಷ ಅಂದರೆ 2025 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೂವರು ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಮತ್ತು ಕ್ಯಾಮರೂನ್ ಗ್ರೀನ್ ಈ ಸಾಧನೆ ಮಾಡಿದ್ದರು. ಈಗ, ವೆಸ್ಟ್ ಇಂಡೀಸ್ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಈ ಸಾಧನೆ ಮಾಡಿದ್ದಾರೆ.

ಭಾರತದ ವಿರುದ್ಧ ಅತಿ ವೇಗದ ಶತಕ ಬಾರಿಸಿದ ಕೆರಿಬಿಯನ್ ಬ್ಯಾಟರ್ ಕ್ಯಾಂಪ್ಬೆಲ್..!

ಬೇಡದ ದಾಖಲೆ ಬರೆದ ಟೀಂ ಇಂಡಿಯಾ

ಇತ್ತ ಎರಡನೇ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ ಮೂರು ಶತಕಗಳನ್ನು ಹೊಡಿಸಿಕೊಂಡ ತಂಡವೆಂಬ ಬೇಡದ ದಾಖಲೆ ಭಾರತದ ಪಾಲಾಗಿದೆ. ಇದಲ್ಲದೆ ವೆಸ್ಟ್ ಇಂಡೀಸ್, ಭಾರತ ವಿರುದ್ಧ ತನ್ನ ಅತ್ಯಧಿಕ ಏಕದಿನ ಸ್ಕೋರ್ ಅನ್ನು ಸಹ ದಾಖಲಿಸಿದೆ. ಭಾರತದ ವಿರುದ್ಧದ ಏಕದಿನ ಪಂದ್ಯದಲ್ಲಿ ವಿಂಡೀಸ್ 350 ರನ್‌ಗಳನ್ನು ದಾಟಿದ್ದು ಇದೇ ಮೊದಲು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Wed, 30 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More