‘ವರ್ಲ್ಡ್ ಬೆಸ್ಟ್ ಕಾರನ್ನು ಗ್ಯಾರೇಜ್‌ನಲ್ಲಿ ನಿಲ್ಲಿಸಿದಂತಾಯಿತು’; ಟೀಂ ಇಂಡಿಯಾವನ್ನು ಲೇವಡಿ ಮಾಡಿದ ಬ್ರೆಟ್ ಲೀ
ಆಸೀಸ್ ಪಿಚ್ಗಳಲ್ಲಿ ಒಬ್ಬ ಬೌಲರ್ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವಾಗಲೇ ಪಲಿತಾಂಶ ಭಿನ್ನವಾಗಿರುತ್ತದೆ. ಇನ್ನ ಒಬ್ಬ ಬೌಲರ್ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾನೆ ಎಂದರೆ ಪಲಿತಾಂಶ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿ ಎಂದು ಲೀ ರೋಹಿತ್ ಪಡೆಗೆ ಸಲಹೆ ನೀಡಿದ್ದಾರೆ.
ಟಿ20 ವಿಶ್ವಕಪ್‌ಗಾಗಿ (T20 World Cup 2022) ರೋಹಿತ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಆಸೀಸ್ ನೆಲಕ್ಕೆ ಕಾಲಿಟ್ಟಿದೆ. ಜೊತೆಗೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಿರುವ ರೋಹಿತ್ ಸೈನ್ಯ ಒಂದರಲ್ಲಿ ಗೆದ್ದಿದ್ದರೆ, ಮತ್ತೊಂದು ಪಂದ್ಯದಲ್ಲಿ ಸೋಲುಂಡಿದೆ. ಮೊದಲ ಪಂದ್ಯದಲ್ಲಿ ಕಷ್ಟಪಟ್ಟು ಗೆದ್ದಿದ್ದ ಭಾರತ, ಎರಡನೇ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ನಿಂದ ಸೋಲೊಪ್ಪಿಕೊಂಡಿತು. ಹೀಗಾಗಿ ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿರುವ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವುದರ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಅನುಮಾನ ಶುರುವಾಗಿದೆ. ಈ ಮೊದಲು ವಿಶ್ವಕಪ್‌ಗೆ ಸರ್ವ ತಯಾರಿ ನಡೆಸಿದ್ದ ಭಾರತಕ್ಕೆ ಆಟಗಾರರ ಇಂಜುರಿ ನುಂಗಲಾರದ ತುತ್ತಾಗಿ ಪರಿಣಮಿಸಿತು. ಮೊದಲು ಜಡೇಜಾ (Ravindra Jadeja) ಇಂಜುರಿಗೊಂಡರೆ, ಆ ಬಳಿಕ ತಂಡದ ವೇಗದ ಬೌಲರ್ ಬುಮ್ರಾ (Jasprit Bumrah) ಇಂಜುರಿಯಿಂದ ವಿಶ್ವಕಪ್‌ಗೆ ಅಲಭ್ಯರಾದರು. ಈ ಇಬ್ಬರ ಬಳಿಕ ಬುಮ್ರಾ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ದೀಪಕ್ ಚಹರ್ ಕೂಡ ಇಂಜುರಿಯಿಂದ ಟಿ20 ವಿಶ್ವಕಪ್ನಿಂದ ಹಿಂದೆ ಸರಿದಿದ್ದಾರೆ. ಈಗ ಬುಮ್ರಾ ಸ್ಥಾನಕ್ಕೆ ಶಮಿಯವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಟಾಕ್ ಶುರುವಾಗಿದೆ. ಆದರೆ ಈ ಎಲ್ಲದರ ನಡುವೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಟೀಂ ಇಂಡಿಯಾದ ಆಯ್ಕೆಯನ್ನು ಲೇವಡಿ ಮಾಡಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವ ಖಚಿತತೆಯೊಂದಿಗೆ ಶಮಿ ಈಗಾಗಲೇ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಆದರೆ ಶಮಿ ಜೊತೆ ನೆಟ್ ಬೌಲರ್ಸ್ಗಳಾಗಿ ತಂಡ ಸೇರಿಕೊಳ್ಳಬೇಕಾಗಿದ್ದ ಉಮ್ರಾನ್ ಮತ್ತು ಸಿರಾಜ್ ವೀಸಾ ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ವಿಶ್ವಕಪ್ ಆರಂಭಕ್ಕೂ ಮುನ್ನ ಈ ಇಬ್ಬರ ವೀಸಾ ಸಮಸ್ಯೆ ಪರಿಹಾರವಾದರೆ ಈ ಇಬ್ಬರು ತಂಡ ಸೇರಿಕೊಳ್ಳಲಿದ್ದಾರೆ. ಕೊನೆಯದಾಗಿ ಜೂನ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರ ಆಡಿದ್ದ ಉಮ್ರಾನ್ ಮಲಿಕ್, ಆ ನಂತರ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇತ್ತ ದಕ್ಷಿಣ ಆಫ್ರಿಕಾ ವಿರುದ್ಧದ ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರದರ್ಶನ ನೀಡಿದ್ದ ಸಿರಾಜ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಯೋಜನೆಯಲ್ಲಿದ್ದಾರೆ.
ಆದಾಗ್ಯೂ, ಈ ಇಬ್ಬರ ನಡುವೆ ನಾನು ಉಮ್ರಾನ್‌ಗೆ ತಂಡದಲ್ಲಿ ಅವಕಾಶ ನೀಡಲು ಬಯಸುವುದಾಗಿ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹೇಳಿಕೊಂಡಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನು ನೀಡಿರುವ ಲೀ, “ಉಮ್ರಾನ್ ಮಲಿಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೂ ಅವರನ್ನು ಮುಖ್ಯ ತಂಡಕ್ಕೆ ಆಯ್ಕೆ ಮಾಡಿಲ್ಲ. ಇದರರ್ಥ ಹೇಗಿದೆ ಅಂದರೆ ನಿಮ್ಮ ಬಳಿ ವಿಶ್ವದ ಅತ್ಯುತ್ತಮ ಕಾರಿದ್ದು ಅದನ್ನು ಕೇವಲ ಗ್ಯಾರೇಜ್‌ನಲ್ಲಿ ನಿಲ್ಲಿಸಿದರೆ, ಆ ಕಾರನ್ನು ನೀವು ಖರೀದಿಸಿದಕ್ಕೂ ಏನು ಪ್ರಯೋಜನ? ಎಂದು ಲೀ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಉಮ್ರಾನ್ ಮಲಿಕ್ ಅವರನ್ನು ಭಾರತ ತಂಡದಲ್ಲಿ ಆಯ್ಕೆ ಮಾಡಬೇಕಿತ್ತು ಎಂದು ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಬ್ರೆಟ್ ಲೀ ಹೇಳಿಕೊಂಡಿದ್ದಾರೆ.
“ಹೌದು, ಉಮ್ರಾನ್ ಈಗ ತಾನೆ ಬೆಳೆಯುತ್ತಿರುವ ಯುವ ಪ್ರತಿಭೆ. ಅವರ ಬೌಲಿಂಗ್ನಲ್ಲಿ ಇನ್ನೂ ಪರಿಪಕ್ವತೆ ಇಲ್ಲದಿರುಬಹುದು. ಆದರೆ ಅವರು 150 ಕಿಮೀ ವೇಗದಲ್ಲಿ ಬೌಲ್ ಮಾಡುವ ಸಾಮಥ್ಯ್ರ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆಡುವಾಗ ಇಂತಹ ವೇಗದ ಬೌಲರ್ಗಳೇ ತಂಡಕ್ಕೆ ಬೇಕಾಗಿರುವುದು. ಆದ್ದರಿಂದ ಉಮ್ರಾನ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿ ಎಂದಿದ್ದಾರೆ. ಅಲ್ಲದೆ ಆಸೀಸ್ ಪಿಚ್ಗಳಲ್ಲಿ ಒಬ್ಬ ಬೌಲರ್ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವಾಗಲೇ ಪಲಿತಾಂಶ ಭಿನ್ನವಾಗಿರುತ್ತದೆ. ಇನ್ನ ಒಬ್ಬ ಬೌಲರ್ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾನೆ ಎಂದರೆ ಪಲಿತಾಂಶ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿ ಎಂದು ಲೀ ರೋಹಿತ್ ಪಡೆಗೆ ಸಲಹೆ ನೀಡಿದ್ದಾರೆ.
Published On - 4:02 pm, Thu, 13 October 22