Viral Video: ಅಂದು ದ್ರಾವಿಡ್ ಬಾರಿಸಿದ ಸಿಕ್ಸ್ ಹೋಗಿ ಬಿದ್ದಿದ್ದು ಎಲ್ಲಿ ಗೊತ್ತಾ?
Rahul Dravid: ರಾಹುಲ್ ದ್ರಾವಿಡ್ ಬ್ಯಾಟ್ನಿಂದ ಸಿಕ್ಸ್ಗಳು ಮೂಡಿಬಂದಿದ್ದೇ ಅಪರೂಪ. ಆದರೆ ಅವರು ಬಾರಿಸುತ್ತಿದ್ದ ಸಿಕ್ಸರ್ ಕೂಡ ಕಲಾತ್ಮಕತೆಯಿಂದ ಕೂಡಿರುತ್ತಿದ್ದವು.
ನ್ಯೂಜಿಲೆಂಡ್ ಕ್ರಿಕೆಟಿಗ ಡೇರಿಲ್ ಮಿಚೆಲ್ (Daryl Mitchell ) ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿಡಿಸಿದ ಸಿಕ್ಸರ್ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಕಾರಣ ಈ ಸಿಕ್ಸರ್ ಚೆಂಡು ಹೋಗಿ ಬಿದ್ದಿದ್ದು ಪ್ರೇಕ್ಷಕರ ಬಿಯರ್ ಗ್ಲಾಸ್ನಲ್ಲಿ ಎಂಬುದು ವಿಶೇಷ. ಆದರೆ, ಗ್ಯಾಲರಿಯಲ್ಲಿದ್ದ ಪ್ರೇಕ್ಷಕನ ಬಿಯರ್ ಗ್ಲಾಸ್ನಲ್ಲಿ ಚೆಂಡು ಬೀಳುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಇಂತಹದೊಂದು ಅತ್ಯಾಕರ್ಷಕ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದರು.
ರಾಹುಲ್ ದ್ರಾವಿಡ್ ಬ್ಯಾಟ್ನಿಂದ ಸಿಕ್ಸ್ಗಳು ಮೂಡಿಬಂದಿದ್ದೇ ಅಪರೂಪ. ಆದರೆ ಅವರು ಬಾರಿಸುತ್ತಿದ್ದ ಸಿಕ್ಸರ್ ಕೂಡ ಕಲಾತ್ಮಕತೆಯಿಂದ ಕೂಡಿರುತ್ತಿದ್ದವು. ಇದಕ್ಕೆ ಸಾಕ್ಷಿಯೇ 2006 ರಲ್ಲಿ ಇಂಗ್ಲೆಂಡ್ ವಿರುದ್ದ ಬಾರಿಸಿದ್ದ ಆ ಸಿಕ್ಸ್. ಅಂದು ಭಾರತ-ಇಂಗ್ಲೆಂಡ್ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 48 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಬಾರಿಸಿ ಸುಸ್ಥಿತಿಯಲ್ಲಿತ್ತು. ಈ ವೇಳೆ ಕ್ರೀಸ್ನಲ್ಲಿದ್ದದ್ದು ರಾಹುಲ್ ದ್ರಾವಿಡ್. ಹಾಗೆಯೇ ಡೆತ್ ಓವರ್ ಎಸೆಯಲು ಜೇಮ್ಸ್ ಅ್ಯಂಡರ್ಸನ್ ಬಂದರು.
ಅ್ಯಂಡರ್ಸನ್ ಆಫ್ ಸೈಡ್ನಲ್ಲಿ ಎಸೆತದ ಚೆಂಡನ್ನು ಅತ್ಯಾಕರ್ಷಕ ಸ್ಕ್ವೇರ್ ಶಾಟ್ ಮೂಲಕ ರಾಹುಲ್ ದ್ರಾವಿಡ್ ಸಿಕ್ಸ್ಗೆ ಅಟ್ಟಿದ್ದರು. ಎಲ್ಲರೂ ದ್ರಾವಿಡ್ ಅವರ ಈ ಅದ್ಭುತ ಸಿಕ್ಸ್ ನೋಡಿ ವಿಸ್ಮತರಾಗಿದ್ದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕ್ರಿಕೆಟ್ ಪ್ರೇಮಿಯೊಬ್ಬ ಕೈ ಮೇಲೆತ್ತಿ ನಗುತ್ತಿದ್ದರು. ಏಕೆಂದರೆ ದ್ರಾವಿಡ್ ಬಾರಿಸಿದ ಈ ಫ್ಲ್ಯಾಟ್ ಸಿಕ್ಸ್ ಹೋಗಿ ಬಿದ್ದಿದ್ದು ಆತನ ಬಿಯರ್ ಗ್ಲಾಸ್ಗೆ. ನನ್ನ ಬಿಯರ್ ಕೂಡ ಹೋಯಿತು ಎಂದು ಪ್ರೇಕ್ಷಕರ ಗ್ಯಾಲರಿಯಿಂದ ಆತ ಎದ್ದು ನಗುತ್ತಿದ್ದ. ಇದೀಗ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಇಂಗ್ಲೆಂಡ್ ವಿರುದ್ದ ಸಿಕ್ಸ್ ಬಾರಿಸಿ ಬಿಯರ್ ಗ್ಲಾಸ್ ಹೊಡೆದು ಹಾಕುತ್ತಿದ್ದಂತೆ, 2006 ರಲ್ಲಿ ರಾಹುಲ್ ದ್ರಾವಿಡ್ ಬಾರಿಸಿದ ಸಿಕ್ಸ್ ವಿಡಿಯೋ ಕೂಡ ವೈರಲ್ ಆಗಿದೆ.
Since the video of Daryl Mitchell destroying a cricket fan’s beer pint is going viral, here’s Rahul Dravid doing it with a flat six.pic.twitter.com/vL37u8KSzN
— TheRandomCricketPhotosGuy (@RandomCricketP1) June 11, 2022
ಇನ್ನು ಆ ಪಂದ್ಯದಲ್ಲಿ, ದ್ರಾವಿಡ್ ಸಂಪೂರ್ಣವಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದರು ವಿಶೇಷ. ಏಕೆಂದರೆ ಕೇವಲ 63 ಎಸೆತಗಳಲ್ಲಿ ಅಜೇಯ 92 ರನ್ ಬಾರಿಸಿದ್ದರು. ದ್ರಾವಿಡ್ ಅವರ ಆರ್ಭಟದ ನೆರವಿನಿಂದ ಅಂದು ಟೀಮ್ ಇಂಡಿಯಾ 50 ಓವರ್ಗಳಲ್ಲಿ 329 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು. ಅಲ್ಲದೆ ಇಂಗ್ಲೆಂಡ್ ತಂಡವನ್ನು 320 ರನ್‌ಗಳಿಗೆ ಸೀಮಿತಗೊಳಿಸುವ ಮೂಲಕ ಆ ಪಂದ್ಯವನ್ನು ಟೀಮ್ ಇಂಡಿಯಾ 9 ರನ್ಗಳಿಂದ ಜಯ ಸಾಧಿಸಿತ್ತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:45 pm, Sat, 11 June 22