Dewald Brevis: ಜೆರ್ಸಿ ನಂಬರ್ 17, RCB ಫ್ಯಾನ್: ಯಾರು ಈ ಬೇಬಿ AB?
Who is Baby AB?: 18ರ ಹರೆಯದ ಬೇಬಿ ಎಬಿ ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೀಡಿದ್ದು, ಆರ್ಸಿಬಿ ತಂಡದ ಪರ ಆಡುವ ಕನಸು ಕಾಣುತ್ತಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಕಲಾತ್ಮಕತೆಗೆ ಹೊಸ ಅರ್ಥ ಕಲ್ಪಿಸಿದ ಬ್ಯಾಟರ್ ಎಂದರೆ ಅದು ಎಬಿ ಡಿವಿಲಿಯರ್ಸ್ (Ab de villiers). ಸ್ಟ್ರೈಟ್ ಡ್ರೈವ್, ಕವರ್ ಡ್ರೈವ್, ಪುಲ್ ಶಾಟ್ ಅಲ್ಲದೆ 360 ಡಿಗ್ರಿಯಲ್ಲೂ ಅದ್ಭುತ ಶಾಟ್ಗಳನ್ನು ಬಾರಿಸಬಹುದು ಎಂದು ಇಡೀ ಕ್ರಿಕೆಟ್ ಜಗತ್ತಿಗೆ ಎಬಿಡಿ ತೋರಿಸಿಕೊಟ್ಟಿದ್ದರು. ಎಬಿಡಿಯನ್ನು ಇಂತಹ ಭರ್ಜರಿ ಹೊಡೆತಗಳನ್ನೂ ಅನೇಕ ಆಟಗಾರರು ಅನುಕರಿಸಿದ್ದಾರೆ. ಅದರಲ್ಲೂ ಪ್ರಸ್ತುತ ಕ್ರಿಕೆಟ್ ಅಂಗಳದ ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಕೂಡ ಎಬಿಡಿಯ ಹೊಡೆತಗಳಿಂದ ಪ್ರೇರಿತರಾದವರೇ. ಹೀಗಾಗಿಯೇ ಎಬಿಡಿಯನ್ನು ಕೊಹ್ಲಿ ಎಲಿಯನ್ ಡಿವಿಲಿಯರ್ಸ್ ಎಂದಿದ್ದು. ಹೀಗೆ ಎಬಿಡಿಯನ್ನೇ ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಮತ್ತೋರ್ವ ಆಟಗಾರ ಇದೀಗ ಕ್ರಿಕೆಟ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅವರು ಕೂಡ ಸೌತ್ ಆಫ್ರಿಕಾದ ಬ್ಯಾಟರ್ ಎಂಬುದೇ ಇಲ್ಲಿ ವಿಶೇಷ.
ಹೆಸರು ಡೆವಾಲ್ಡ್ ಬ್ರೆವಿಸ್ (Dewald Brevis)…ಅಂಡರ್ 19 ವಿಶ್ವಕಪ್ ಮೂಲಕ ಇದೀಗ ಬೇಬಿ ಎಬಿ ಎಂದೇ ಫೇಮಸ್ ಆಗಿದ್ದಾರೆ. ಟೀಮ್ ಇಂಡಿಯಾ ಅಂಡರ್ 19 ತಂಡದ ವಿರುದ್ದದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ ಎಬಿಡಿ ಶೈಲಿಯಲ್ಲಿ ಬೀಸಿ ಎಲ್ಲರ ಗಮನ ಸೆಳೆದಿದ್ದ. 3ನೇ ಕ್ರಮಾಂಕಕ್ಕೆ ಕಣಕ್ಕಿಳಿದ ಬ್ರೆವಿಸ್ ಭಾರತದ ವಿರುದ್ಧ 65 ರನ್ ಬಾರಿಸಿದ್ದರು. ಈ ವೇಳೆ 6 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಈ ಭರ್ಜರಿ ಇನಿಂಗ್ಸ್ ವೇಳೆ ಸ್ಟೇಟ್ ಡ್ರೈವ್‌ಗಳು, ರಿವರ್ಸ್ ಸ್ವೀಪ್‌ಗಳು ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಅನ್ನು ಹೋಲುತ್ತಿತ್ತು. ಇದರ ಬೆನ್ನಲ್ಲೇ ತಂಡದ ಸಹ ಆಟಗಾರರು ಕೂಡ ಬೇಬಿ ಎಬಿ ಎಂಬ ಪೋಸ್ಟರ್ಗಳನ್ನು ಪ್ರದರ್ಶಿಸಿ ಬ್ರೆವಿಸ್ ಅವರನ್ನು ಹುರಿದುಂಬಿಸಿದರು. ಇದರೊಂದಿಗೆ ಈತ ಎಬಿಡಿಯಂತೆ ಬ್ಯಾಟ್ ಬೀಸುತ್ತಿರುವುದು ಕನ್ಫರ್ಮ್ ಆಗಿತ್ತು.
ಬಾಲ್ಯದಿಂದಲೇ ಎಬಿಡಿ ಅಭಿಮಾನಿಯಾಗಿರುವ ಬ್ರೆವಿಸ್ ಅವರ ಬ್ಯಾಟಿಂಗ್ ಶೈಲಿಯನ್ನೇ ನಕಲಿಸಿದ್ದಾರೆ. ಅಷ್ಟೇ ಅಲ್ಲದೆ ಅದರಲ್ಲಿ ಯಶಸ್ಸನ್ನು ಕೂಡ ಕಂಡಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ಎಬಿಡಿಯ ಜೆರ್ಸಿ ನಂಬರ್ 17 ಅನ್ನೇ ಧರಿಸಿ ಬ್ರೆವಿಸ್ ಕೂಡ ಕಣಕ್ಕಿಳಿಯುತ್ತಿದ್ದಾರೆ. ಈ ಮೂಲಕ ಇದೀಗ ದಕ್ಷಿಣ ಆಫ್ರಿಕಾ ತಂಡದ ಎಬಿಡಿಯ ಉತ್ತರಾಧಿಕಾರಿ ಎಂದು ಫೇಮಸ್ ಆಗಿದ್ದಾರೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ಡೆವಾಲ್ಡ್ ಬ್ರೆವಿಸ್ ಹಾಗೂ ಎಬಿಡಿ ಒಂದೇ ಕಡೆಯಿಂದ ಕ್ರಿಕೆಟ್ ಕೆರಿಯರ್ ಶುರು ಮಾಡಿರುವುದು. ಹೌದು, ಎಬಿಡಿ ಮೊದಲ ಬಾರಿಗೆ ಆಡಿದ್ದ ಆಫ್ರಿಕಾನ್ಸ್ ಹೋಯರ್ ಸೆಯುನ್‌ಸ್ಕೂಲ್ (ಅಫೀಸ್) ತಂಡದಿಂದಲೇ ಡೆವಾಲ್ಡ್ ಬ್ರೆವಿಸ್ ಕೂಡ ಕ್ರಿಕೆಟ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇದೀಗ ‘Mr.360’ ಅವರಿಂದ ಸ್ಪೂರ್ತಿ ಪಡೆದು ಅವರಂತೆ ಬ್ಯಾಟ್ ಬೀಸುತ್ತಿದ್ದಾರೆ. ಅದರಂತೆ ಬೇಬಿ ಎಬಿ ಅಂಡರ್ 19 ವಿಶ್ವಕಪ್ನಲ್ಲಿ 90 ಸರಾಸರಿಯಲ್ಲಿ ಒಟ್ಟು 362 ರನ್ ಕಲೆಹಾಕಿದ್ದಾರೆ. ಈ ಮೂಲಕ ಪ್ರಸ್ತುತ U19 ವಿಶ್ವಕಪ್‌ನ ಪ್ರಮುಖ ರನ್ ಸ್ಕೋರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಂಡರ್ 19 ವಿಶ್ವಕಪ್ನಲ್ಲಿ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಚೊಚ್ಚಲ ವಿಶ್ವಕಪ್ನಲ್ಲೇ ಅಬ್ಬರಿಸುವ ಮೂಲಕ ಬೇಬಿ ಎಬಿ ಸಂಚಲ ಸೃಷ್ಟಿಸಿದ್ದಾರೆ.
18ರ ಹರೆಯದ ಬೇಬಿ ಎಬಿ ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೀಡಿದ್ದು, ಆರ್ಸಿಬಿ ತಂಡದ ಪರ ಆಡುವ ಕನಸು ಕಾಣುತ್ತಿದ್ದಾರೆ. ಆರ್ಸಿಬಿ ತಂಡದ ಅಭಿಮಾನಿಯಾಗಿರುವ ಬೇಬಿ ಎಬಿ, ಡಿವಿಲಿಯರ್ಸ್ರಂತೆ ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ನನ್ನ ನೆಚ್ಚಿನ ಆಟಗಾರರು ಆಡಿದ ಐಪಿಎಲ್ ತಂಡದ ಪರ ಆಡಬೇಕೆಂಬ ಕನಸು ಹೊತ್ತಿದ್ದಾರೆ ಬೇಬಿ ಎಬಿ. ಇತ್ತ ಅಂಡರ್ 19 ವಿಶ್ವಕಪ್ನಲ್ಲಿ 360 ಕ್ಕೂ ಹೆಚ್ಚು ರನ್ ಕಲೆಹಾಕಿರುವ ಕಾರಣ ಬೇಬಿ ಎಬಿಯ ಖರೀದಿಗೆ ಕೆಲ ಫ್ರಾಂಚೈಸಿಗಳು ಆಸಕ್ತಿ ತೋರಲಿವೆ. ಇದಾಗ್ಯೂ ಬೇಬಿ ಎಬಿಯನ್ನು ಆರ್ಸಿಬಿ ಖರೀದಿಸಲಿದೆಯಾ ಕಾದು ನೋಡಬೇಕಿದೆ.
ಅಂದಹಾಗೆ ಬೇಬಿ ಎಬಿಗೂ ಎಬಿ ಡಿವಿಲಿಯರ್ಸ್ಗೂ ಯಾವುದೇ ಸಂಬಂಧವಿಲ್ಲ. ಎಬಿಡಿಯಂತೆ ಬ್ಯಾಟ್ ಬೀಸುವ ಕಾರಣ ಡೆವಾಲ್ಡ್ ಬ್ರೆವಿಸ್ ಅವರನ್ನು ಬೇಬಿ ಎಬಿ ಎಂದು ಫೇಮಸ್ ಆಗಿದ್ದಾರೆ. ಇದರ ಹೊರತಾಗಿ ಬೇಬಿ ಎಬಿ, ಎಬಿಡಿ ಅವರ ಮಗನಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(Who is South Africa’s Dewald Brevis, famously known as Baby AB?)