
ಬೆಂಗಳೂರು (ಮೇ. 08): ಐಪಿಎಲ್ 2025 ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders vs Chennai Super Kings) ಅನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ, ಸಿಎಸ್‌ಕೆ ಹೊಸ ಆಟಗಾರನಿಗೆ ಪಾದಾರ್ಪಣೆ ಮಾಡಲು ಅವಕಾಶ ನೀಡಿತು. ಈ ಆಟಗಾರನ ಹೆಸರು ಉರ್ವಿಲ್ ಪಟೇಲ್. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸುವುದರೊಂದಿಗೆ ಈ ಯುವ ಆಟಗಾರ ತನ್ನ ಐಪಿಎಲ್ ವೃತ್ತಿಜೀವನಕ್ಕೆ ಅದ್ಭುತ ಆರಂಭವನ್ನು ನೀಡಿದರು. ಪಟೇಲ್ ಕೇವಲ 11 ಎಸೆತಗಳಲ್ಲಿ 31 ರನ್ ಗಳಿಸಿ ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಔಟಾದರು. ಪಟೇಲ್ ಅವರು ಕ್ರೀಸ್ನಲ್ಲಿ ಸ್ವಲ್ಪ ಸಮಯ ಮಾತ್ರ ಇದ್ದರೂ, ಅವರ ಸ್ಫೋಟಕ ಸಿಕ್ಸರ್‌ಗಳು ಭವಿಷ್ಯದಲ್ಲಿ ಸಿಎಸ್‌ಕೆಯ ವಿಶ್ವಾಸಾರ್ಹ ಆಟಗಾರನಾಗಬಹುದು ಎಂಬುದರ ಸೂಚನೆಯಾಗಿದೆ.
ಉರ್ವಿಲ್ ಪಟೇಲ್ ಬಲಗೈ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್, ಇವರು ದೇಶೀಯ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಉರ್ವಿಲ್ ಪಟೇಲ್ ದೇಶೀಯ ಕ್ರಿಕೆಟ್ನಲ್ಲಿ ಬರೋಡಾ ಮತ್ತು ಗುಜರಾತ್ ತಂಡಗಳನ್ನು ಪ್ರತಿನಿಧಿಸಿದ್ದಾರೆ ಮತ್ತು ಐಪಿಎಲ್ 2023 ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದರು.
ಪಟೇಲ್ ಜನವರಿ 2018 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ಪರ T20 ಗೆ ಪಾದಾರ್ಪಣೆ ಮಾಡಿದರು ಮತ್ತು ಫೆಬ್ರವರಿ 2018 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ A ಗೆ ಕಾಲಿಟ್ಟರು. 2023-24 ರ ರಣಜಿ ಟ್ರೋಫಿ ಋತುವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
KKR vs CSK, IPL 2025: ಆಪರೇಷನ್ ಸಿಂಧೂರ್: ಈಡನ್ ಗಾರ್ಡನ್ಸ್‌ನಲ್ಲಿ ರಾಷ್ಟ್ರಗೀತೆ, ಭಾರತ್ ಮಾತಾ ಕಿ ಜೈ ಘೋಷಣೆ
2024 ರ ನವೆಂಬರ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತ್ರಿಪುರಾ ವಿರುದ್ಧ 28 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಉರ್ವಿಲ್ ಪಟೇಲ್ ದಾಖಲೆ ಪುಟದಲ್ಲಿ ತಮ್ಮ ಹೆಸರನ್ನು ಬರೆದರು, ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ವೇಗದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು 35 ಎಸೆತಗಳಲ್ಲಿ 12 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳನ್ನು ಒಳಗೊಂಡು 113 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡಕ್ಕೆ ಅದ್ಭುತ ಗೆಲುವನ್ನು ತಂದುಕೊಟ್ಟರು. ಇದಕ್ಕೂ ಮೊದಲು, ನವೆಂಬರ್ 2023 ರಲ್ಲಿ, ಅವರು ಅರುಣಾಚಲ ಪ್ರದೇಶ ವಿರುದ್ಧ ವಿಜಯ್ ಹಜಾರೆ ಟ್ರೋಫಿಯಲ್ಲಿ 41 ಎಸೆತಗಳಲ್ಲಿ ಶತಕ ದಾಖಲಿಸಿದರು, ಇದು ಭಾರತೀಯರಿಂದ ಎರಡನೇ ಅತಿ ವೇಗದ ಲಿಸ್ಟ್ ಎ ಶತಕವಾಗಿದೆ.
ಉರ್ವಿಲ್ ಪಟೇಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 26.43 ಸರಾಸರಿಯಲ್ಲಿ 423 ರನ್ ಗಳಿಸಿದರು, ಇದರಲ್ಲಿ 1 ಶತಕ ಮತ್ತು 2 ಅರ್ಧಶತಕಗಳು ಸೇರಿವೆ, ಅವರ ಅತ್ಯಧಿಕ ಸ್ಕೋರ್ 140. ಲಿಸ್ಟ್ ಎ ನಲ್ಲಿ, ಅವರು 22 ಪಂದ್ಯಗಳನ್ನು ಆಡಿದರು ಮತ್ತು 44.00 ಸರಾಸರಿಯಲ್ಲಿ 748 ರನ್ ಗಳಿಸಿದರು. ಇದರಲ್ಲಿ 3 ಶತಕಗಳು ಮತ್ತು 2 ಅರ್ಧಶತಕಗಳು ಸೇರಿವೆ, ಗರಿಷ್ಠ ಸ್ಕೋರ್ 116.
ಐಪಿಎಲ್ 2023 ರ ಹರಾಜಿನಲ್ಲಿ ಉರ್ವಿಲ್ ಪಟೇಲ್ ಅವರನ್ನು ಗುಜರಾತ್ ಟೈಟಾನ್ಸ್ 20 ಲಕ್ಷ ರೂ.ಗೆ ಖರೀದಿಸಿತು. ಆದರೆ ಆ ಋತುವಿನಲ್ಲಿ ಯಾವುದೇ ಪಂದ್ಯವನ್ನು ಆಡಲಿಲ್ಲ. ಅವರ ದೇಶೀಯ ಪ್ರದರ್ಶನದ ಹೊರತಾಗಿಯೂ, ಅವರು ಐಪಿಎಲ್ 2025 ರ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಆದಾಗ್ಯೂ, ಮೇ 2025 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಅವರನ್ನು ಋತುವಿನ ಮಧ್ಯದಲ್ಲಿ ಬದಲಿಯಾಗಿ ಕರೆದು ತಂಡ ಸೇರಿಕೊಂಡು ಇಂದು ತನ್ನನ್ನು ತಾನು ಸಾಭೀತು ಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ