ರೋಹಿತ್, ಗಂಭೀರ್ ಅಲ್ಲ; ಹಾರ್ದಿಕ್ ನಾಯಕತ್ವದ ಕನಸಿಗೆ ಕೊಳ್ಳಿ ಇಟ್ಟಿದ್ಯಾರು ಗೊತ್ತಾ?
Team India: ಲಂಕಾ ಪ್ರವಾಸಕ್ಕೆ ಹಾರ್ದಿಕ್ರನ್ನು ನಾಯಕನಾಗಿ ಮಾಡುವುದಿರಲಿ, ಕನಿಷ್ಠ ಪಕ್ಷ ಉಪನಾಯಕನನ್ನಾಗಿಯೂ ಮಾಡಲಾಗಿಲ್ಲ. ಈ ನಡುವೆ ಹಾರ್ದಿಕ್ರನ್ನು ನಾಯಕತ್ವದಿಂದ ವಂಚಿತರನ್ನಾಗಿ ಮಾಡುವಲ್ಲಿ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಮಾಜಿ ಟಿ20 ನಾಯಕ ರೋಹಿತ್ ಶರ್ಮಾ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಹಿಂದಿನ ಅಸಲಿ ಕಥೆಯೇ ಬೇರೆ ಇದೆ.
ಇದೇ ಜುಲೈ 27 ರಿಂದ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ ಮೂರು ಟಿ20 ಪಂದ್ಯಗಳು ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪ್ರವಾಸಕ್ಕಾಗಿ ಬಿಸಿಸಿಐ ನಿನ್ನೆಯಷ್ಟೇ ಟೀಂ ಇಂಡಿಯಾವನ್ನು ಆಯ್ಕೆ ಮಾಡಿತ್ತು. ಈ ಪ್ರವಾಸಕ್ಕೆ ವಿಭಿನ್ನ ತಂಡವನ್ನು ಆಯ್ಕೆ ಮಾಡಲಾಗಿದೆ. ಅದರಲ್ಲೂ ನಾಯಕ ಹಾಗೂ ಉಪನಾಯಕರ ಆಯ್ಕೆಯಲ್ಲಿ ಆಯ್ಕೆ ಸಮಿತಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕರನ್ನಾಗಿ ಮಾಡಲಾಗಿದ್ದು, ಹಾರ್ದಿಕ್ಗೆ ಉಪನಾಯಕತ್ವ ಸಿಗದಿರುವುದು ಕೂಡ ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಗಂಭೀರ್- ರೋಹಿತ್ ಅಲ್ಲ
ವಾಸ್ತವವಾಗಿ ರೋಹಿತ್ ಶರ್ಮಾ ಬಳಿಕ ಭಾರತ ಟಿ20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದಲ್ಲಿ ತಂಡವನ್ನು ಹಲವು ಜಯದೆಡೆಗೆ ಮುನ್ನಡೆಸಿದ್ದರು. ಅದಾಗ್ಯೂ ಹಾರ್ದಿಕ್ರನ್ನು ನಾಯಕನಾಗಿ ಮಾಡುವುದಿರಲಿ, ಕನಿಷ್ಠ ಪಕ್ಷ ಉಪನಾಯಕನನ್ನಾಗಿಯೂ ಮಾಡಲಾಗಿಲ್ಲ. ಈ ನಡುವೆ ಹಾರ್ದಿಕ್ರನ್ನು ನಾಯಕತ್ವದಿಂದ ವಂಚಿತರನ್ನಾಗಿ ಮಾಡುವಲ್ಲಿ ತಂಡದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಮಾಜಿ ಟಿ20 ನಾಯಕ ರೋಹಿತ್ ಶರ್ಮಾ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಹಿಂದಿನ ಅಸಲಿ ಕಥೆಯೇ ಬೇರೆ ಇದೆ.
ವದಂತಿಗಳು ಹೇಳಿದ್ದೇನು?
ಗಂಭೀರ್ ಅವರೇ ಸೂರ್ಯನನ್ನು ನಾಯಕನನ್ನಾಗಿ ಮಾಡಿದ್ದಾರೆ. ಏಕೆಂದರೆ ಸೂರ್ಯಕುಮಾರ್ ಈ ಹಿಂದೆ ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ನಾಯಕರಾಗಿದ್ದ ವೇಳೆ ಕೆಕೆಆರ್ ತಂಡದಲ್ಲಿ ಆಡಿದ್ದರು. ಆ ವೇಳೆ ಗಂಭೀರ್, ಸೂರ್ಯನನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದೀಗ ಆ ಸರಣಿಯನ್ನು ಮುಂದುವರೆಸಿ, ಗಂಭೀರ್ ಅವರೇ ಸೂರ್ಯನಿಗೆ ನಾಯಕನ ಪಟ್ಟಕಟ್ಟಿದ್ದಾರೆ ಎಂಬುದು ವದಂತಿ. ಇತ್ತ ಐಪಿಎಲ್‌ನಲ್ಲಿ ನಾಯಕತ್ವ ಕಿತ್ತುಕೊಂಡ ದ್ವೇಷದಿಂದ ರೋಹಿತ್ ಶರ್ಮಾ ಅವರು ಹಾರ್ದಿಕ್ರನ್ನು ಖಾಯಂ ನಾಯಕನನ್ನಾಗಿ ಮಾಡುವುದನ್ನು ತಡೆದಿದ್ದಾರೆ ಎಂಬುದು ಇನ್ನೊಂದು ವದಂತಿ. ಆದರೆ ಹಾರ್ದಿಕ್ಗೆ ನಾಯಕತ್ವ ಕೈತಪ್ಪುವುದರ ಹಿಂದೆ ಬೇರೆಯದ್ದೆ ಕಥೆ ಇದೆ ಎಂಬುದು ಹೊಸ ವರದಿಯಾಗಿದೆ.
ಇದೆಲ್ಲ ಅಗರ್ಕರ್ ತೀರ್ಮಾನ
ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ್ದು, ಗಂಭೀರ್ ಅವರೇ ನೇರವಾಗಿ ಸೂರ್ಯ ಟಿ20 ತಂಡದ ನಾಯಕನಾಗಬೇಕು ಎಂದು ಕೇಳಿಲ್ಲ. ಆದರೆ ಗೌತಮ್ ಗಂಭೀರ್ ಅವರ ಪ್ರಕಾರ, ಟಿ20 ತಂಡದ ನಾಯಕತ್ವವಹಸಿಕೊಳ್ಳುವವನು ಕೆಲಸದ ಹೊರೆ ನಿರ್ವಹಣೆಯ ಸಮಸ್ಯೆಯಿಂದ ದೂರ ಇರಬೇಕು ಎಂಬುದಾಗಿತ್ತು. ಅಂದರೆ ಕೆಲಸದ ಹೊರೆ ಅಡ್ಡಿಯಾಗದ ನಾಯಕನೊಂದಿಗೆ ಕೆಲಸ ಮಾಡಲು ಬಯಸುತ್ತೇನೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ತಂತ್ರ ರೂಪಿಸಲು ಮುಂದಾದ ಆಯ್ಕೆ ಮಂಡಳಿ ಅಧ್ಯಕ್ಷ ಅಜಿತ್ ಅಗರ್ಕರ್ ಸೂರ್ಯನಿಗೆ ಪಟ್ಟಕಟ್ಟಲು ಮುಂದಾದರು. ಮತ್ತೊಂದೆಡೆ ಆಯ್ಕೆಗಾರರು ಕೂಡ ಆಟಗಾರರ ಜತೆ ಮಾತುಕತೆ ನಡೆಸಿದ್ದು, ಇದರಲ್ಲಿ ಹಾರ್ದಿಕ್ಗಿಂತ ಸೂರ್ಯ ಉತ್ತಮ ನಾಯಕ ಎಂಬುದು ಬೆಳಕಿಗೆ ಬಂದಿತು. ಹೀಗಾಗಿ ಹಾರ್ದಿಕ್ ಬದಲು ಸೂರ್ಯಕುಮಾರ್ ಯಾದವ್ಗೆ ನಾಯಕತ್ವ ನೀಡಲಾಯಿತು ಎಂಬುದು ಬೆಳಕಿಗೆ ಬಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ