ವೈಭವ್​ ಸೂರ್ಯವಂಶಿಯನ್ನು ಮತ್ತೆ ಕಡೆಗಣಿಸಲು ಕಾರಣವೇನು? ಇಲ್ಲಿದೆ ಉತ್ತರ

Vaibhav Sooryavanshi: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್​ ಮಳೆಯಿಂದಾಗಿ ರದ್ದಾಗಿದೆ. ಇನ್ನು ಸರಣಿಯ ಎರಡನೇ ಟಿ20 ಪಂದ್ಯವು ಶನಿವಾರ (ಜು.4) ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದ್ದು, ಈ ಮ್ಯಾಚ್ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಲಿದ್ದಾರಾ ಎಂಬುದೇ ಈಗ ದೊಡ್ಡ ಪ್ರಶ್ನೆ.

ವೈಭವ್​ ಸೂರ್ಯವಂಶಿಯನ್ನು ಮತ್ತೆ ಕಡೆಗಣಿಸಲು ಕಾರಣವೇನು? ಇಲ್ಲಿದೆ ಉತ್ತರ
Vaibhav Sooryavanshi
Image Credit source: Vaibhav IG

Updated on: Jul 02, 2026 | 8:23 AM

ಐರ್ಲೆಂಡ್ ವಿರುದ್ಧದ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭಿಸಿದೆ. ಈ ಸರಣಿಯ ಮೊದಲ ಮ್ಯಾಚ್​​​ನಲ್ಲಿ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ ಐರ್ಲೆಂಡ್ ವಿರುದ್ಧದ ಸರಣಿಯ ಮ್ಯಾಚ್​ಗಳಲ್ಲಿ ಆರಂಭಿಕ ದಾಂಡಿಗ ಸಂಜು ಸ್ಯಾಮ್ಸನ್ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ವೈಭವ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದಾಗ ಹನ್ನೊಂದರ ಬಳಗದಲ್ಲಿ ವೈಭವ್ ಹೆಸರು ಕಾಣಿಸಿಕೊಂಡಿರಲಿಲ್ಲ.

ಇದರ ಬೆನ್ನಲ್ಲೇ  ವೈಭವ್ ಸೂರ್ಯವಂಶಿಯನ್ನು ಟೀಮ್ ಇಂಡಿಯಾದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದ್ದವು. ಅಷ್ಟಕ್ಕೂ ವೈಭವ್​ನನ್ನು ಈ ಮ್ಯಾಚ್​ನಿಂದ ಹೊರಗಿಟ್ಟಿದ್ದೇಕೆ ಎಂದು ನೋಡುವುದಾದರೆ…

ಟಿ20 ವಿಶ್ವಕಪ್ ವಿಜೇತ ಸೂತ್ರಕ್ಕೆ ಮನ್ನಣೆ:

ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್‌ಮೆಂಟ್, ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆದ್ದು ತಂದಿದ್ದ ಕೋರ್ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟ ಹಳೆಯ ಫಾರ್ಮ್ಯುಲಾವನ್ನು ತಕ್ಷಣವೇ ಬದಲಾಯಿಸಲು ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ ಎಂಬುದನ್ನು ಮತ್ತೊಮ್ಮೆ ಸಾರಿದ್ದಾರೆ.

ಆರಂಭಿಕ ಆಟಗಾರರ ಮೇಲಿನ ನಂಬಿಕೆ:

ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾದರೆ ಸದ್ಯದ ಆರಂಭಿಕ ಜೋಡಿಯಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತಿತ್ತು. ಐರ್ಲೆಂಡ್ ಪ್ರವಾಸದಲ್ಲಿ ಇಬ್ಬರೂ ಆರಂಭಿಕರು ವೈಫಲ್ಯ ಅನುಭವಿಸಿದ್ದರೂ (ಸಂಜು 5, 0 ಮತ್ತು ಅಭಿಷೇಕ್ 49, 0), ಆಟಗಾರರಿಗೆ ಸುರಕ್ಷತೆ ಮತ್ತು ಅವರ ಜವಾಬ್ದಾರಿಯ ಸ್ಪಷ್ಟತೆ ನೀಡುವ ಸಲುವಾಗಿ ಮ್ಯಾನೇಜ್‌ಮೆಂಟ್ ಅವರಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿತು.

ಯುವ ಆಟಗಾರನ ಮೇಲಿನ ಒತ್ತಡ ನಿರ್ವಹಣೆ:

ವೈಭವ್ ಸೂರ್ಯವಂಶಿ ಅವರಿಗೆ ಸದ್ಯ ಕೇವಲ 15 ವರ್ಷ. ಅವರ ಸುತ್ತ ಮಾಧ್ಯಮಗಳು ಮತ್ತು ಅಭಿಮಾನಿಗಳು ಸೃಷ್ಟಿಸಿರುವ ಭಾರಿ ನಿರೀಕ್ಷೆಯ ಒತ್ತಡವನ್ನು ನಾಯಕ ಶ್ರೇಯಸ್ ಅಯ್ಯರ್ ಪಂದ್ಯದ ಹಿಂದಿನ ದಿನವೇ ತಳ್ಳಿಹಾಕಿದ್ದರು. ಇಂಗ್ಲೆಂಡ್‌ನ ಕಠಿಣ ಪಿಚ್‌ಗಳಲ್ಲಿ ಅನುಭವೀ ಬೌಲರ್‌ಗಳ ಎದುರು ಈ ಹಂತದಲ್ಲೇ ಅವರನ್ನು ಕಣಕ್ಕಿಳಿಸಿದರೆ, ಅದು ಯುವ ಆಟಗಾರನ ಆತ್ಮವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯುವ ದಾಂಡಿಗನನ್ನು ಆಡುವ ಬಳಗದಿಂದ​ ಹೊರಗಿಟ್ಟಿದ್ದಾರೆ ಎನ್ನಬಹುದು.

ಬೌಲಿಂಗ್ ಸಮತೋಲನದ ತಂತ್ರ:

ಮೊದಲ ಪಂದ್ಯದಲ್ಲಿ ಭಾರತ ತಂಡವು ಬೌಲಿಂಗ್ ವಿಭಾಗವನ್ನು ಬಲಪಡಿಸಲು ಮೂವರು ಪ್ರಮುಖ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಿತು. ಈ ಬೌಲಿಂಗ್ ಆಧಾರಿತ ತಂತ್ರದ ಕಾರಣದಿಂದಾಗಿ, ಹೆಚ್ಚುವರಿ ಬ್ಯಾಟರ್ ಒಬ್ಬರನ್ನು ಮೇಲಿನ ಕ್ರಮಾಂಕದಲ್ಲಿ ಸೇರಿಸಲು ತಂಡದಲ್ಲಿ ಜಾಗವಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ವೈಭವ್ ಸೂರ್ಯವಂಶಿಯನ್ನು ಮೊದಲ ಮ್ಯಾಚ್​ನಿಂದ ಕೈ ಬಿಡಲಾಗಿದೆ.

ಇದನ್ನೂ ಓದಿ: IND vs ENG: ಮೊದಲ ಮ್ಯಾಚ್​ನಲ್ಲೇ 5 ಭರ್ಜರಿ ದಾಖಲೆಗಳು ನಿರ್ಮಾಣ!

ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಲಿದೆಯೇ?

5 ಪಂದ್ಯಗಳ ಈ ಸರಣಿಯಲ್ಲಿ ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡೊಶ್ಚೇಟ್ ಅವರು ವೈಭವ್ ಸೂರ್ಯವಂಶಿ ಆಡಲು ಸಂಪೂರ್ಣ “ರೆಡಿ” ಇದ್ದಾರೆ ಎಂದು ಖಚಿತಪಡಿಸಿರುವುದರಿಂದ, ಸರಣಿಯ ಮುಂದಿನ ಪಂದ್ಯಗಳ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತ ಎನ್ನಬಹುದು. ಆದರೆ ಅದು 2ನೇ ಪಂದ್ಯ ಆಗಿರಬಹುದು, ಇಲ್ಲಾ 3ನೇ ಅಥವಾ 4ನೇ ಮ್ಯಾಚ್ ಆಗಿರಬಹುದು. ಹೀಗಾಗಿ ವೈಭವ್ ಸೂರ್ಯವಂಶಿಯ ಎಂಟ್ರಿಗೆ ಕೆಲ ದಿನಗಳವರೆಗೆ ಕಾಯಲೇಬೇಕಾಗುತ್ತದೆ.

 

Follow Us