
ಭಾರತ ಕ್ರಿಕೆಟ್ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಸ್ತುತ 4 ಪಂದ್ಯಗಳು ನಡೆದಿದ್ದು ಭಾರತ ತಂಡ 1-2 ಅಂತರದಲ್ಲಿ ಹಿನ್ನಡೆಯಲ್ಲಿದೆ. ಉಭಯ ತಂಡಗಳ ನಡುವಿನ ಐದನೇ ಮತ್ತು ಅಂತಿಮ ಪಂದ್ಯ ಜುಲೈ 31 ರಿಂದ ನಡೆಯಲಿದೆ. ಅದರ ನಂತರ, ಟೀಂ ಇಂಡಿಯಾ ಬಾಂಗ್ಲಾದೇಶದಲ್ಲಿ ಟಿ20 ಮತ್ತು ಏಕದಿನ ಸರಣಿಯನ್ನು ಆಡಬೇಕಿತ್ತು. ಈ ಪ್ರವಾಸದಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಏಕದಿನ ಸರಣಿಯಲ್ಲಿ ಆಡುವುದು ಖಚಿತವಾಗಿತ್ತು. ಆದರೆ ಈ ಪ್ರವಾಸವನ್ನು ಮುಂದೂಡಲಾಗಿದೆ. ಇದೀಗ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ (Asia Cup 2025) ನಡೆಯಲಿದ್ದು, ಈ ಪಂದ್ಯಾವಳಿಯಲ್ಲೂ ಇವರಿಬ್ಬರು ಆಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಇವರಿಬ್ಬರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಕೆಲವು ತಿಂಗಳು ಕಾಯಬೇಕಾಗುತ್ತದೆ.
ವಾಸ್ತವವಾಗಿ 2023 ರ ಏಷ್ಯಾಕಪ್ ಅನ್ನು ಏಕದಿನ ಸ್ವರೂಪದಲ್ಲಿ ಆಡಲಾಯಿತು. ಇದಕ್ಕೆ ಕಾರಣ ಏಷ್ಯಾಕಪ್ ನಂತರ ಏಕದಿನ ವಿಶ್ವಕಪ್ ನಡೆಯಲಿತ್ತು. ಹೀಗಾಗಿ ಐಸಿಸಿ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಎಸಿಸಿ ಏಷ್ಯಾಕಪ್ ಸ್ವರೂಪವನ್ನು ನಿರ್ಧರಿಸುತ್ತದೆ. ಅದರಂತೆ ಏಕದಿನ ಸ್ವರೂಪದಲ್ಲಿ ನಡೆದಿದ್ದ ಏಷ್ಯಾಕಪ್ ಅನ್ನು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಗೆದ್ದುಕೊಂಡಿತು. ಈ ವರ್ಷ, ಮುಂಬರುವ 2026 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗುವುದು. 2024 ರಲ್ಲಿ ಟಿ20 ವಿಶ್ವಕಪ್ ಗೆಲುವಿನ ನಂತರ ವಿರಾಟ್ ಮತ್ತು ರೋಹಿತ್ ಇಬ್ಬರೂ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಹೀಗಾಗಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡಲು ಸಾಧ್ಯವಾಗುವುದಿಲ್ಲ.
ವಾಸ್ತವವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಜುಲೈ 26 ರ ಶನಿವಾರದಂದು ಬಹುನಿರೀಕ್ಷಿತ ಏಷ್ಯಾಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿತು. ಎಸಿಸಿ ನೀಡಿದ ಮಾಹಿತಿಯ ಪ್ರಕಾರ, ಪಂದ್ಯಾವಳಿಯು ಸೆಪ್ಟೆಂಬರ್ 9 ರಿಂದ 28 ರವರೆಗೆ ಒಟ್ಟು 8 ತಂಡಗಳೊಂದಿಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿರುವ 8 ತಂಡಗಳನ್ನು ತಲಾ 4ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ.
RCB: 2019 ರಲ್ಲಿಯೇ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ತೀರ್ಮಾನಿಸಿತ್ತು ಆರ್ಸಿಬಿ..!
ಪಹಲ್ಗಾಮ್ ದಾಳಿಯ ನಂತರ, ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದು ಹೇಳಲಾಗಿತ್ತು. ಆದಾಗ್ಯೂ, ಈ ಎರಡೂ ತಂಡಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಆದ್ದರಿಂದ ಈ ಎರಡು ತಂಡಗಳು ಪಂದ್ಯಾವಳಿಯಲ್ಲಿ ಕನಿಷ್ಠ ಎರಡು ಬಾರಿ ಮುಖಾಮುಖಿಯಾಗಲಿವೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಓಮನ್ ತಂಡಗಳಿದ್ದರೆ, ಹಾಂಗ್ ಕಾಂಗ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಬಿ ಗುಂಪು ನಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ