ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಸಾಕಷ್ಟು ರೋಚಕತೆ ಸೃಷ್ಟಿಯಾಗುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ಐಪಿಎಲ್ (Women IPL) ಅನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಮುಂದಾಗಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಮಹಿಳಾ ಐಪಿಎಲ್ಗೆ ಚಾಲನೆ ಸಿಗಲಿದೆ. ಈಗಾಗಲೇ ಇದಕ್ಕಾಗಿ ಭರ್ಜರಿ ತಯಾರಿ ಆರಂಭಿಸಿರುವ ಬಿಸಿಸಿಐ (BCCI) ಐದು ಫ್ರಾಂಚೈಸಿಗಳ ಖರೀದಿಗೆ ಬರೋಬ್ಬರಿ 400 ಕೋಟಿ ರೂಪಾಯಿ ಮೂಲಬೆಲೆ ನಿಗದಿ ಪಡಿಸಿದೆ. ಮಹಿಳಾ ಆಟಗಾರ್ತಿಯರು ಕೂಡ ಈ ಟೂರ್ನಿಗೆ ಕಾದು ಕುಳಿತಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ನ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur), ಈ ಐಪಿಎಲ್ ಟೂರ್ನಿ ದೇಶೀಯ ಆಟಗಾರ್ತಿಯರಿಗೆ ಒಂದು ಅತ್ಯುತ್ತಮ ವೇದಿಕೆ ಆಗಿದೆ ಎಂದು ಹೇಳಿದ್ದಾರೆ.
”ಐಪಿಎಲ್ ನಿಜವಾಗಿಯೂ ಪ್ರತಿಭಾವಂತ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ. ಯಾಕೆಂದರೆ ಯುವ ಆಟಗಾರ್ತಿಯರಿಗೆ ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ವಿರುದ್ಧ ಆಡುವ ಅವಕಾಶ ಸಿಗಲಿದೆ. ಆಗ ಅಂತರರಾಷ್ಟ್ರೀಯ ಕ್ರಿಕೆಟ್ ಎಂದರೇನು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಲ್ಲರು. ಮಹಿಳಾ ಐಪಿಎಲ್ ಭಾರತದಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಗೇಮ್ ಅನ್ನು ಅರಿತಾಗ ಅವರು ಭಾರತೀಯ ತಂಡಕ್ಕಾಗಿ ಆಡುವಾಗ, ಯಾವುದೇ ಹೆಚ್ಚು ಒತ್ತಡವನ್ನು ಎದುರಿಸಬೇಕಾಗಿಲ್ಲ,” ಎಂದು ಹೇಳಿದ್ದಾರೆ.
Rohit Sharma: ಪಂದ್ಯ ಮುಗಿದ ಬಳಿಕ ಬ್ಯಾಟರ್ಗಳಿಗೆ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ: ಏನಂದ್ರು ನೋಡಿ
”ದೇಶೀಯ ತಂಡಗಳಿಂದ ದಿಢೀರ್ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಅವರು ಆಡಿದಾಗ ಕೆಲವೊಮ್ಮೆ ಬ್ಲಾಂಕ್ ಆಗಿರುವುದು ನಾನು ನೋಡಿದ್ದೇನೆ. ಆ ಸಂದರ್ಭ ಅವರಿಗೆ ತಾನು ಹೇಗೆ ಆಟದ ಶೈಲಿಯಲ್ಲಿ ಬದಲಾವಣೆ ಮಾಡಬೇಕು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಗೊಂದಲವನ್ನು ಕಡಿಮೆ ಮಾಡಲು ಐಪಿಎಲ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಮುಂಬರುವ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಆಡುವ ಹುಡುಗಿಯರು ಖಂಡಿತವಾಗಿಯೂ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಾಗ ಪ್ರಬುದ್ಧರಾಗಿರುತ್ತಾರೆ,” ಎಂಬುದು ಹರ್ಮನ್ ಮಾತು.
400 ಕೋಟಿ ರೂಪಾಯಿ ಮೂಲಬೆಲೆ:
ಚೊಚ್ಚಲ ಸೀಸನ್‌ನಲ್ಲಿ ಬಿಸಿಸಿಐ ಒಟ್ಟು ಐದು ಫ್ರಾಂಚೈಸಿಗಳ ಖರೀದಿಗೆ ಬರೋಬ್ಬರಿ 400 ಕೋಟಿ ರೂಪಾಯಿ ಮೂಲಬೆಲೆ ನಿಗದಿ ಪಡಿಸಿದೆ. ಟೆಂಡರ್ ಡಾಕ್ಯುಮೆಂಟ್ ಪ್ರಕ್ರಿಯ ಮುಗಿದ ನಂತರ ಈ ಬಗ್ಗೆ ಖಚಿತ ಮಾಹಿತಿ ಹೊರಬೀಳಲಿದೆ. ಪುರುಷರ ಐಪಿಎಲ್ ಯಶಸ್ಸಿನ ಹಿನ್ನೆಲೆಯಲ್ಲಿ ಮಹಿಳಾ ಐಪಿಎಲ್ನಲ್ಲೂ ದೊಡ್ಡ ಮೊತ್ತದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. 5 ಫ್ರಾಂಚೈಸಿಗಳ ಟೆಂಡರ್ ಆಹ್ವಾನಿಸಲು ಬಿಸಿಸಿಐ 400 ಕೋಟಿ ರೂ. ನಿಗದಿಪಡಿಸಿದ್ದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಎನ್ನಬಹುದು. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಕೂಡ ಅನುಮೋದನೆ ನೀಡಿದೆ ಎನ್ನಲಾಗಿದೆ. ಅಂತೆಯೆ ಫ್ರಾಂಚೈಸ್ ಅನ್ನು 1000 ಮತ್ತು 1500 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಆಗಬಹುದೆಂದು ಬಿಸಿಸಿಐ ಯೋಚಿಸಿದೆಯಂತೆ. ಒಟ್ಟಾರೆಯಾಗಿ ಬಿಸಿಸಿಐ ಈ ಐದು ಫ್ರಾಂಚೈಸಿಗಳ ಮಾರಾಟದಿಂದ 6,000 ದಿಂದ 8000 ಕೋಟಿ (ಒಂದು ಬಿಲಿಯನ್ ಡಾಲರ್ ವ್ಯಾಪ್ತಿಯಲ್ಲಿ) ಸಂಗ್ರಹಿಸಲು ನೋಡುತ್ತಿದೆ.
ಮಹಿಳಾ ಐಪಿಎಲ್ ಚೊಚ್ಚಲ ಸೀಸನ್‌ನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಬೇಕಾಗುತ್ತದೆ. ಪುರುಷರ ಐಪಿಎಲ್ನಂತೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟರೆ ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯದ ಮೂಲಕ ಎರಡನೇ ಫೈನಲಿಸ್ಟ್ ಅನ್ನು ನಿರ್ಧರಿಸುತ್ತವೆ. ಪ್ರತಿ ಫ್ರಾಂಚೈಸಿ ತನ್ನ ಅಂತಿಮ ತಂಡದಲ್ಲಿ ಐದಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಿರಬಾರದು. ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 9 ರಿಂದ 26ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಮಹಿಳಾ ಐಪಿಎಲ್ ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:09 am, Tue, 6 December 22