Team India: ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ದಂಡದ ಬರೆ..!
India vs Bangladesh: ಬಾಂಗ್ಲಾದೇಶ್ ತಂಡವು 136 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ಕೊನೆಯ ವಿಕೆಟ್ ಪಡೆಯಲು ಪರದಾಡಿದ ಟೀಮ್ ಇಂಡಿಯಾ ಅಂತಿಮವಾಗಿ 1 ವಿಕೆಟ್ನಿಂದ ಸೋಲೊಪ್ಪಿಕೊಂಡಿತು.
Bangladesh vs India, 1st ODI: ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲನುಭವಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಕೇವಲ 186 ರನ್‌ಗಳಿಗೆ ಆಲೌಟ್ ಆಗಿತ್ತು. ಇತ್ತ ಸುಲಭ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ್ ತಂಡವು 136 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ಕೊನೆಯ ವಿಕೆಟ್ ಪಡೆಯಲು ಪರದಾಡಿದ ಟೀಮ್ ಇಂಡಿಯಾ ಅಂತಿಮವಾಗಿ 1 ವಿಕೆಟ್ನಿಂದ ಸೋಲೊಪ್ಪಿಕೊಂಡಿತು.
ಈ ಹೀನಾಯ ಸೋಲಿನ ಬೆನ್ನಲ್ಲೇ ಐಸಿಸಿ ಟೀಮ್ ಇಂಡಿಯಾಗೆ ಪಂದ್ಯದ ಶುಲ್ಕ ಶೇ.80 ರಷ್ಟು ದಂಡ ವಿಧಿಸಿದೆ. ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ಗಾಗಿ ಈ ದಂಡ ವಿಧಿಸಲಾಗಿದ್ದು, ಅದರಂತೆ ಎಲ್ಲಾ ಆಟಗಾರರು ಪಂದ್ಯ ಶುಲ್ಕದಿಂದ ಭಾರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ಐಸಿಸಿ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ನಿಗದಿತ ಸಮಯದಲ್ಲಿ ಕಡಿಮೆ ಓವರ್‌ಗಳನ್ನು ಎಸೆದಿದ್ದಕ್ಕಾಗಿ ಭಾರತ ತಂಡವನ್ನು ತಪ್ಪಿತಸ್ಥರೆಂದು ಐಸಿಸಿಗೆ ದೂರು ನೀಡಿದ್ದಾರೆ. ನಿಗದಿತ ಸಮಯದಲ್ಲಿ ಟೀಮ್ ಇಂಡಿಯಾ ನಿಗದಿತ ಓವರ್‌ಗಳಿಗಿಂತ 4 ಓವರ್‌ಗಳು ಕಡಿಮೆ ಬೌಲ್ ಮಾಡಿರುವುದನ್ನು ಫೀಲ್ಡ್ ಅಂಪೈರ್ ಮತ್ತು ಮ್ಯಾಚ್ ರೆಫರಿ ಗಣನೆಗೆ ತೆಗೆದುಕೊಂಡಿದ್ದರು. ಅಲ್ಲದೆ ನಾಯಕ ರೋಹಿತ್ ಶರ್ಮಾ ನಿಧಾನಗತಿಯ ಓವರ್ ರೇಟ್ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಐಸಿಸಿ ನೀತಿ ಸಂಹಿತೆ 2.22 ಪ್ರಕಾರ ನಿಧಾನಗತಿಯ ಓವರ್ ರೇಟ್ ವಿಷಯದಲ್ಲಿ ಟೀಮ್ ಇಂಡಿಯಾ ತಪ್ಪಿತಸ್ಥರೆಂದು ಸಾಬೀತಾಗಿದೆ. ಹೀಗಾಗಿ 1 ಓವರ್‌ಗೆ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. ಅದರಂತೆ 4 ಓವರ್‌ಗಳಿಗಾಗಿ ಪಂದ್ಯ ಶುಲ್ಕ ಶೇ. 80 ರಷ್ಟು ಟೀಮ್ ಇಂಡಿಯಾ ದಂಡ ಪಾವತಿಸಬೇಕಾಗಿದೆ.
ಬಾಂಗ್ಲಾ ವಿರುದ್ಧ ಮೊದಲ ಏಕದಿನದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ) , ಶಿಖರ್ ಧವನ್ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ಕೆಎಲ್ ರಾಹುಲ್ (ವಿಕೆಟ್ ಕೀಪರ್ ) , ವಾಷಿಂಗ್ಟನ್ ಸುಂದರ್ , ಶಹಬಾಜ್ ಅಹ್ಮದ್ , ದೀಪಕ್ ಚಹಾರ್ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್ , ಕುಲದೀಪ್ ಸೇನ್.