
ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ(Women’s Asia Cup 2026) ಭಾರತ ಮತ್ತು ಥೈಲ್ಯಾಂಡ್ ಮಹಿಳಾ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದು ಮೊದಲ ಪಂದ್ಯವಾದರೆ, ಥೈಲ್ಯಾಂಡ್ ತಂಡಕ್ಕೆ ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು ಮಣಿಸಿರುವ ಥೈಲ್ಯಾಂಡ್ ಗೆಲುವಿನ ಆತ್ಮವಿಶ್ವಾಸದೊಂದಿಗೆ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿದೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದು, ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ವಿಕೆಟ್ ಕಳೆದುಕೊಂಡಿದೆ.
ಟೀಂ ಇಂಡಿಯಾ ಪರ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಇನ್ನಿಂಗ್ಸ್ ಆರಂಭಿಸಿದರು. ಸ್ಮೃತಿ ಮೊದಲ ಓವರ್ನಲ್ಲೇ 3 ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಎರಡನೇ ಓವರ್ನಲ್ಲಿ ಶಫಾಲಿ ವರ್ಮಾ 2 ಬೌಂಡರಿಗಳನ್ನು ಬಾರಿಸಿದರು. ಮೂರನೇ ಓವರ್ನಲ್ಲಿ ಸ್ಮೃತಿ 1 ಬೌಂಡರ ಬಾರಿಸಿದರೆ, ಶಫಾಲಿ 1 ಸಿಕ್ಸರ್ ಬಾರಿಸಿದರು. ಹೀಗಾಗಿ ಟೀಂ ಇಂಡಿಯಾ ಮೊದಲ ಮೂರು ಓವರ್‌ಗಳಲ್ಲಿ 38 ರನ್ ಕಲೆಹಾಕಿತು. ಆದರೆ ಇದೇ ಮೂರನೇ ಓವರ್ನ ಕೊನೆಯ ಎಸೆತದಲ್ಲಿ ಸ್ಮೃತಿ ಮಂಧಾನ ತೊರಿದ ನಿರ್ಲಕ್ಷ್ಯತನ ಅವರ ವಿಕೆಟ್ ಉರುಳುವಂತೆ ಮಾಡಿತು.
ಮೂರನೇ ಓವರ್ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಶಫಾಲಿ, ಕೊನೆಯ ಎಸೆತವನ್ನು ಲಾಂಗ್ ಆನ್ ಕಡೆಗೆ ಆಡಿ ರನ್ಗಾಗಿ ಓಡಿದರು. ಇಬ್ಬರು ಮೊದಲ ರನ್ ಅನ್ನು ಸುಲಭವಾಗಿ ಪೂರ್ಣಗೊಳಿಸಿದರು. ಇತ್ತ ಮೊದಲ ರನ್ ವೇಗವಾಗಿ ಓಡಿದ ಸ್ಮೃತಿ ಎರಡನೇ ರನ್ಗಾಗಿ ಓಡಲು ಆರಂಭಿಸಿದರು. ಆದರೆ ಲಾಂಗ್ ಆನ್ನಿಂದ ಥೈಲ್ಯಾಂಡ್ ಫಿಲ್ಡರ್ ನೇರ ಎಸೆತದಲ್ಲಿ ತನ್ನನ್ನು ರನೌಟ್ ಮಾಡುತ್ತಾರೆ ಎಂಬುದನ್ನು ಕನಸಲ್ಲೂ ಊಹಿಸದ ಮಂಧಾನ ಎರಡನೇ ರನ್ ಅನ್ನು ಕೊಂಚ ನಿಧಾನವಾಗಿ ಓಡಿದರು. ಇದರ ಪರಿಣಾಮವಾಗಿ ಮಂಧಾನ ರನೌಟ್ಗೆ ಬಲಿಯಾಗಿ ತಮ್ಮ ಇನ್ನಿಂಗ್ಸ್ ಮುಗಿಸಬೇಕಾಯಿತು.
ಔಟಾಗುವುದಕ್ಕೂ ಮುನ್ನ ಸ್ಮೃತಿ ಮಂಧಾನ 10 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 19 ರನ್ ಬಾರಿಸಿದ್ದರು. ಸ್ಮೃತಿ ಔಟಾದ ಬಳಿಕ ಬಂದ ಪ್ರತೀಕಾ, ಶಫಾಲಿಗೆ ಉತ್ತಮ ಬೆಂಬಲ ನೀಡಿದರು. ಇವರಿಬ್ಬರು ಎರಡನೇ ವಿಕೆಟ್ಗೆ ತಂಡವನ್ನು ಶತಕದ ಸಮೀಪಕ್ಕೆ ತಂದಿದ್ದಾರೆ. ಈ ಸುದ್ದಿ ಬರೆಯುವ ಹೊತ್ತಿಗೆ 9 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 91 ರನ್ ಕಲೆಹಾಕಿದೆ. ಶಫಾಲಿ ವರ್ಮಾ 26 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದರೆ, ಪ್ರತೀಕಾ 9ನೇ ಓವರ್ ಕೊನೆಯ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿದ್ದಾರೆ.
Published On - 8:39 pm, Sun, 30 August 26