AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026: ಸತತ 4ನೇ ಗೆಲುವು; ಸ್ಮೃತಿ ಸುನಾಮಿಗೆ ದಿವಾಳಿಯಾದ ದೆಹಲಿ

RCB Unbeaten Streak: ನವಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಸ್ಮೃತಿ ಮಂಧಾನ 96 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಈ ಆವೃತ್ತಿಯಲ್ಲಿ ಸತತ ನಾಲ್ಕನೇ ಗೆಲುವು ಸಾಧಿಸಿದ ಆರ್‌ಸಿಬಿ, ತನ್ನ ಅಜೇಯ ಓಟ ಮುಂದುವರಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಸೆಮಿಫೈನಲ್ ಸ್ಥಾನವನ್ನು ಭಾಗಶಃ ಖಚಿತಪಡಿಸಿಕೊಂಡಿದೆ.

WPL 2026: ಸತತ 4ನೇ ಗೆಲುವು; ಸ್ಮೃತಿ ಸುನಾಮಿಗೆ ದಿವಾಳಿಯಾದ ದೆಹಲಿ
Rcb
ಪೃಥ್ವಿಶಂಕರ
|

Updated on:Jan 17, 2026 | 11:30 PM

Share

ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್​ಗಳಿಂದ ಗೆದ್ದುಕೊಂಡು ಈ ಆವೃತ್ತಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಈ ಆವೃತ್ತಿಯಲ್ಲಿ ಆರ್​ಸಿಬಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಸೆಮಿಫೈನಲ್ ಸುತ್ತಿಗೆ ತನ್ನ ಸ್ಥಾನವನ್ನು ಭಾಗಶಃ ಖಚಿತಪಡಿಸಿಕೊಂಡಿದೆ. ಇದು ಮಾತ್ರವಲ್ಲದೆ ಮೊದಲ ನಾಲ್ಕು ಪಂದ್ಯಗಳನ್ನು ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ಇತಿಹಾಸವನ್ನು ನಿರ್ಮಿಸಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 166 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಸ್ಮೃತಿ ಮಂಧಾನ (Smriti Mandhana) ಸಿಡಿಸಿದ 96 ರನ್​ಗಳಿಂದ ಸುಲಭ ಜಯ ದಾಖಲಿಸಿತು.

ಡೆಲ್ಲಿಗೆ ಆರಂಭಿಕ ಆಘಾತ

ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಎರಡು ಓವರ್​ಗಳಲ್ಲಿ ಅಂದರೆ ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್​ಗಳು ಪತನಗೊಂಡವು. ಡೆಲ್ಲಿಗೆ ಆರಂಭಿಕ ಆಘಾತ ನೀಡಿದ ಲಾರೆನ್ ಬೆಲ್ ಮೊದಲ ಓವರ್​ನಲ್ಲೇ ಲಿಜೆಲ್ಲೆ ಲೀ ಹಾಗೂ ಲಾರಾ ವೊಲ್ವಾರ್ಡ್ಟ್ ಅವರನ್ನು ಪೆವಿಲಿಯನ್‌ಗಟ್ಟಿದರು. ನಂತರದ ಓವರ್​ನಲ್ಲಿ ಸಯಾಲಿ ಸತ್ಘರೆ ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್ ಹಾಗೂ ಮರಿಝನ್ನೆ ಕಪ್ ಅವರನ್ನು ಸತತ ಎರಡು ಎಸೆತಗಳಲ್ಲಿ ಔಟ್ ಮಾಡಿದರು.

ಶಫಾಲಿ ಸ್ಫೋಟಕ ಬ್ಯಾಟಿಂಗ್

ಹೀಗಾಗಿ ಡೆಲ್ಲಿ ತಂಡ ಕೇವಲ 10 ರನ್​ಗಳಿಗೆ ತನ್ನ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಆದಾಗ್ಯೂ ಸತತ ವಿಕೆಟ್​ಗಳ ಪತನದ ನಡುವೆಯೂ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ 62 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಲೂಸಿ ಹ್ಯಾಮಿಲ್ಟನ್ ಕೂಡ ಕೆಳಕ್ರಮಾಂಕದಲ್ಲಿ 36 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಅಂತಿಮವಾಗಿ ಡೆಲ್ಲಿ 20 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಆರ್‌ಸಿಬಿ ಪರ ಲಾರೆನ್ ಬೆಲ್ ಮತ್ತು ಸಯಾಲಿ ಸತ್‌ಘರೆ ತಲಾ ಮೂರು ವಿಕೆಟ್ ಪಡೆದರೆ, ಪ್ರೇಮಾ ರಾವತ್ ಎರಡು ವಿಕೆಟ್ ಪಡೆದರು. ಇವರ ಜೊತೆಗೆ ನಾಡಿನ್ ಡಿ ಕ್ಲರ್ಕ್ ಒಂದು ವಿಕೆಟ್ ಪಡೆದರು.

ಶತಕ ವಂಚಿತರಾದ ಸ್ಮೃತಿ

ಈ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಮತ್ತೆ ಆರಂಭಿಕ ಆಘಾತ ಎದುರಾಯಿತು. ಮತ್ತೊಮ್ಮೆ ನಿರಾಸೆ ಮೂಡಿಸಿದ ಗ್ರೇಸ್ ಹ್ಯಾರಿಸ್ 1 ರನ್​ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವುದರ ಜೊತೆಗೆ 2ನೇ ವಿಕೆಟ್​ಗೆ 142 ರನ್​ಗಳ ಜೊತೆಯಾಟವನ್ನಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ಆದಾಗ್ಯೂ ಸ್ಮೃತಿ ಮಂಧಾನ ಶತಕದಂಚಿನಲ್ಲಿ ಎಡವಿ ಕೇವಲ 4 ರನ್​ಗಳಿಂದ ಶತಕ ವಂಚಿತರಾದರು.

ಅಜೇಯ 54 ರನ್ ಬಾರಿಸಿದ ವಾಲ್

ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ ಸ್ಮೃತಿ ಮಂಧಾನ 61 ಎಸೆತಗಳಲ್ಲಿ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 96 ರನ್ ಬಾರಿಸಿದರೆ, ಮತ್ತೊಂದು ಕಡೆ ಜಾರ್ಜಿಯಾ ವಾಲ್ 42 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸಿದರು. ಮಂಧಾನ ಔಟಾದ ಹೊತ್ತಿಗೆ, ಪಂದ್ಯವು ಬಹುತೇಕ ಆರ್‌ಸಿಬಿ ನಿಯಂತ್ರಣದಲ್ಲಿತ್ತು. ಅಂತಿಮವಾಗಿ, ಆರ್‌ಸಿಬಿ 18.2 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 169 ರನ್ ಗಳಿಸಿ ಎಂಟು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:01 pm, Sat, 17 January 26