Wtc Final
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025–2027ರ ಸರಣಿಯು ರೋಚಕ ಘಟ್ಟ ತಲುಪಿದೆ. ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಆಡಿದ ದ್ವಿತೀಯ ಟೆಸ್ಟ್ ಪಂದ್ಯ ‘ಡ್ರಾ’ ನಲ್ಲಿ ಅಂತ್ಯಗೊಂಡ ಬೆನ್ನಲ್ಲೇ, ಫೈನಲ್ ತಲುಪುವ ತಂಡಗಳ ಸಮೀಕರಣ ಸಂಪೂರ್ಣ ಬದಲಾಗಿದೆ. ಪ್ರಸ್ತುತ ಅಂಕಪಟ್ಟಿಯ ಆಧಾರದ ಮೇಲೆ ಕೇವಲ ಐದು ತಂಡಗಳಿಗೆ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ತಲುಪಲು ನೇರ ಅವಕಾಶವಿದೆ. ಅದರಂತೆ ಯಾವ ತಂಡಗಳು ಫೈನಲ್ಗೇರಬಹುದು ಎಂದು ನೋಡುವುದಾದರೆ…
ಆಸ್ಟ್ರೇಲಿಯಾ (80.00% PCT): ಬಾಂಗ್ಲಾದೇಶ್ ವಿರುದ್ಧದ ಇನಿಂಗ್ಸ್ ಗೆಲುವಿನ ನಂತರ ಆಸ್ಟ್ರೇಲಿಯಾ ತಂಡವು ಅಂಕಪಟ್ಟಿಯಲ್ಲಿ ಅತ್ಯಂತ ಬಲಿಷ್ಠ ಸ್ಥಾನದಲ್ಲಿದೆ.
- ಫೈನಲ್ ಹಾದಿ: ಆಸೀಸ್ ಪಡೆಗೆ ಇನ್ನು 12 ಟೆಸ್ಟ್ ಪಂದ್ಯಗಳು ಬಾಕಿ ಇವೆ. ಇವುಗಳಲ್ಲಿ ಕೇವಲ 5 ಗೆಲುವು ಮತ್ತು ಒಂದು ಡ್ರಾ ಸಾಧಿಸಿದರೂ ಅವರ PCT ಶೇ. 60ಕ್ಕಿಂತ ಹೆಚ್ಚಾಗಲಿದ್ದು, ಫೈನಲ್ ಹಾದಿ ಸುಲಭವಾಗಲಿದೆ. ಆದರೆ ಮುಂಬರುವ ದಿನಗಳಲ್ಲಿ ಆಸೀಸ್ ಪಡೆ ಸೌತ್ ಆಫ್ರಿಕಾ ಮತ್ತು ಭಾರತ ವಿರುದ್ಧ ಕಠಿಣ ಸವಾಲು ಎದುರಿಸಬೇಕಿದೆ.
ಸೌತ್ ಆಫ್ರಿಕಾ (75.00% PCT): ಕಡಿಮೆ ಪಂದ್ಯಗಳನ್ನು ಆಡಿದ್ದರೂ ಸೌತ್ ಆಫ್ರಿಕಾ ಅತ್ಯುತ್ತಮ ಪ್ರದರ್ಶನ ನೀಡಿದೆ. ಪಾಕಿಸ್ತಾನದಲ್ಲಿ ಡ್ರಾ ಹಾಗೂ ಭಾರತದ ವಿರುದ್ಧ 2-0 ಸರಣಿ ಗೆದ್ದಿರುವುದು ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ
- ಫೈನಲ್ ಹಾದಿ: ಸೌತ್ ಆಫ್ರಿಕಾ ಪಡೆಗೆ ಬಾಕಿ ಇರುವ 10 ಪಂದ್ಯಗಳಲ್ಲಿ 8 ಪಂದ್ಯಗಳು ತಾಯ್ನಾಡಿನಲ್ಲೇ ನಡೆಯಲಿವೆ. ಬಾಕಿ ಇರುವ ಪಂದ್ಯಗಳಲ್ಲಿ ಕನಿಷ್ಠ 6 ಅಥವಾ 7 ಪಂದ್ಯ ಗೆದ್ದರೆ ಸೌತ್ ಆಫ್ರಿಕಾ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ.
ನ್ಯೂಝಿಲೆಂಡ್ (72.22% PCT): ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅಮೋಘ ಜಯ ಸಾಧಿಸಿರುವ ಕಿವೀಸ್ ಪಡೆ ಸದ್ದಿಲ್ಲದೆ ಮೂರನೇ ಸ್ಥಾನದಲ್ಲಿದೆ.
- ಫೈನಲ್ ಹಾದಿ: ನ್ಯೂಝಿಲೆಂಡ್‌ಗೆ ಇನ್ನು 10 ಪಂದ್ಯಗಳು ಬಾಕಿ ಇವೆ. ತಾಯ್ನಾಡಿನಲ್ಲಿ ಶ್ರೀಲಂಕಾ ಮತ್ತು ಭಾರತದ ವಿರುದ್ಧ ನಡೆಯಲಿರುವ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಕನಿಷ್ಠ ಒಂದೆರಡು ಪಂದ್ಯ ಗೆಲ್ಲಬೇಕಾದ ಅನಿವಾರ್ಯತೆ ಇವರಿಗಿದೆ.
ಬಾಂಗ್ಲಾದೇಶ್ (55.56% PCT): ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯ ಗೆದ್ದು 1-1 ಸರಣಿ ಡ್ರಾ ಮಾಡಿಕೊಂಡಿರುವ ಬಾಂಗ್ಲಾದೇಶ ಇತಿಹಾಸ ಸೃಷ್ಟಿಸಲು ಕಾಯುತ್ತಿದೆ
- ಫೈನಲ್ ಹಾದಿ: ಬಾಂಗ್ಲಾಗೆ ಇನ್ನು ಕೇವಲ 6 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ 5 ಪಂದ್ಯಗಳನ್ನು ಗೆದ್ದರೆ ಮಾತ್ರ ಇವರು ರೇಸ್‌ನಲ್ಲಿ ಉಳಿಯಲಿದ್ದಾರೆ. ಇವರ ಮುಂದಿನ ಹಾದಿ ಅತ್ಯಂತ ಕಠಿಣವಾಗಿದೆ.
ಇದನ್ನೂ ಓದಿ: 47 ಎಸೆತಗಳಲ್ಲಿ ಪಂದ್ಯ ಮುಗಿಸಿದ ಶ್ರೀಲಂಕಾ!
ಭಾರತ (51.52% PCT): ಕೊಲೊಂಬೊದಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲಬೇಕಿದ್ದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರಿಂದ ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ.
- ಫೈನಲ್ ಹಾದಿ: ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡಕ್ಕೆ ಇನ್ನು ಕೇವಲ 7 ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಇವೆ. ಇದರಲ್ಲಿ ನ್ಯೂಝಿಲೆಂಡ್ ವಿರುದ್ಧ 2 ಹಾಗೂ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳನ್ನಾಡಬೇಕಿದೆ. ಈ ಪಂದ್ಯಗಳಲ್ಲಿ ಕನಿಷ್ಠ 6 ಮ್ಯಾಚ್ ಗೆಲ್ಲುವುದು ಅನಿವಾರ್ಯ. ಇನ್ನು ಒಂದಕ್ಕಿಂತ ಹೆಚ್ಚು ಪಂದ್ಯ ಸೋತರೆ ಭಾರತದ WTC ಫೈನಲ್ ಕನಸು ನುಚ್ಚುನೂರಾಗಲಿದೆ.