AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final 2023: ಕಳಪೆ ಬೌಲಿಂಗ್, ಕೆಟ್ಟ ಬ್ಯಾಟಿಂಗ್! ಹೀನಾಯ ಸೋಲಿಗೆ ದ್ರಾವಿಡ್ ನೀಡಿದ ಕಾರಣಗಳಿವು

WTC Final 2023: ಟೀಂ ಇಂಡಿಯಾದ ಹೀನಾಯ ಸೋಲಿಗೆ ರಾಹುಲ್ ದ್ರಾವಿಡ್ ತೀವ್ರ ಅಸಮಾಧಾನ ಹೊರಹಾಕಿದ್ದು, ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿತು. ಅಲ್ಲಿಂದ ತಂಡಕ್ಕೆ ಮತ್ತೆ ಪಂದ್ಯಕ್ಕೆ ಮರಳಲು ಅಸಾಧ್ಯವಾಯಿತು ಎಂದಿದ್ದಾರೆ.

WTC Final 2023: ಕಳಪೆ ಬೌಲಿಂಗ್, ಕೆಟ್ಟ ಬ್ಯಾಟಿಂಗ್! ಹೀನಾಯ ಸೋಲಿಗೆ ದ್ರಾವಿಡ್ ನೀಡಿದ ಕಾರಣಗಳಿವು
ರಾಹುಲ್ ದ್ರಾವಿಡ್
ಪೃಥ್ವಿಶಂಕರ
|

Updated on:Jun 11, 2023 | 7:36 PM

Share

ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ (Team India) ಸೋಲಿನ ಸರಣಿ ಸಧ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship final) ಫೈನಲ್‌ನಲ್ಲಿ ಸೋಲು ಅನುಭವಿಸಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಫೈನಲ್‌ನಲ್ಲಿ ಸೋತಿದೆ. ಟಾಸ್ ಗೆದ್ದರೂ ಪಂದ್ಯ ಸೋತ ಭಾರತದ ನಿರ್ಧಾರಗಳ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ಅಲ್ಲದೆ ಕಾಂಗರೂಗಳ ವಿರುದ್ಧ ಟೀಂ ಇಂಡಿಯಾ ಬರೋಬ್ಬರಿ 209 ರನ್​ಗಳಿಂದ ಸೋತಿದ್ದು, ಡಬ್ಲ್ಯುಟಿಸಿ ಫೈನಲ್​ಗೆ ಯಾವ ರೀತಿ ತಯಾರಿ ನಡೆಸಿತ್ತು ಎಂಬುದನ್ನು ಜಗಜ್ಜಾಹೀರು ಮಾಡಿದೆ. ಇದೀಗ ಟೀಂ ಇಂಡಿಯಾ ಸೋಲಿನ ಪರಾಮರ್ಶೆ ಆರಂಭವಾಗಿದ್ದು, ಭಾರತ ತಂಡದ ಸೋಲಿಗೆ ಕಾರಣವೇನು? ಎಲ್ಲಿ ತಪ್ಪಾಯಿತು ಎಂಬ ಪ್ರಶ್ನೆಗಳಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ. ಟೀಂ ಇಂಡಿಯಾದ ಹೀನಾಯ ಸೋಲಿಗೆ ರಾಹುಲ್ ದ್ರಾವಿಡ್ (Rahul Dravid) ತೀವ್ರ ಅಸಮಾಧಾನ ಹೊರಹಾಕಿದ್ದು, ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿತು. ಅಲ್ಲಿಂದ ತಂಡಕ್ಕೆ ಮತ್ತೆ ಪಂದ್ಯಕ್ಕೆ ಮರಳಲು ಅಸಾಧ್ಯವಾಯಿತು ಎಂದಿದ್ದಾರೆ.

ಸೋಲಿನ ನಂತರ ಮಾತನಾಡಿದ ರಾಹುಲ್ ದ್ರಾವಿಡ್, ಓವಲ್ ವಿಕೆಟ್‌ ನೋಡಿದರೆ, ಆ ವಿಕೆಟ್​ನಲ್ಲಿ ಟೀಂ ಇಂಡಿಯಾ ವೇಗಿಗಳು 469 ರನ್‌ ಬಿಟ್ಟುಕೊಟ್ಟಿದ್ದು ತೀರ ದುಬಾರಿಯಾಯಿತು ಎಂದಿದ್ದಾರೆ. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಸಾಕಷ್ಟು ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಕೆಟ್ಟ ಹೊಡೆತಗಳನ್ನು ಆಡುತ್ತಾ ತಮ್ಮ ವಿಕೆಟ್‌ಗಳನ್ನು ತೀರ ಅಗ್ಗವಾಗಿ ಕಳೆದುಕೊಂಡರು ಎಂದಿದ್ದಾರೆ.

WTC Final 2023: ಬೇಡದ ಶಾಟ್ ಆಡಿ ಭಾರತದ ಸೋಲಿಗೆ ಕಾರಣರಾದ ರೋಹಿತ್, ಪೂಜಾರ, ಕೊಹ್ಲಿ..!

ಮೊದಲ ದಿನವೇ ಟೀಂ ಇಂಡಿಯಾ ಸೋತಿತ್ತು!

ಓವಲ್ ವಿಕೆಟ್ ಗಮನಿಸಿದರೆ, ಈ ವಿಕೆಟ್​ನಲ್ಲಿ ಆಸೀಸ್ ತಂಡವನ್ನು 300 ರನ್ ಒಳಗೆ ಕಟ್ಟಿಹಾಕಬಹುದಾಗಿತ್ತು. ಆದರೆ ಮೊದಲ ಇನ್ನಿಂಗ್ಸ್​ನಲ್ಲಿ 469 ರನ್ ಬಿಟ್ಟುಕೊಟ್ಟಿದ್ದು, ತುಂಬಾ ದುಬಾರಿಯಾಯಿತು. ಅಲ್ಲದೆ, ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ಭಾರತ 157 ರನ್‌ಗಳನ್ನು ಬಿಟ್ಟುಕೊಟ್ಟಿತು, ಇದು ತಂಡಕ್ಕೆ ದುಬಾರಿಯಾಯಿತು. ನಮ್ಮ ತಂಡದ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಅವಕಾಶ ನೀಡಿದರು. ಉತ್ತಮ ಲೈನ್ ಅಂಡ್ ಲೆಂಗ್ತ್​ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದರ ಲಾಭ ಪಡೆದ ಟ್ರಾವಿಸ್ ಹೆಡ್ ವೇಗವಾಗಿ ಸ್ಕೋರ್ ಮಾಡಿದರು. ಇದಾದ ಬಳಿಕ ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳು ನಾಲ್ಕನೇ ದಿನ ಕೆಟ್ಟ ಹೊಡೆತಗಳನ್ನು ಆಡುವ ಮೂಲಕ ವಿಕೆಟ್ ಕಳೆದುಕೊಂಡರು ಎಂದು ದ್ರಾವಿಡ್, ಟೀಂ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ.

ಟಾಸ್ ಬಗ್ಗೆ ದ್ರಾವಿಡ್ ಹೇಳಿದ್ದೇನು?

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ರಾಹುಲ್ ದ್ರಾವಿಡ್ ಕೂಡ ಸಮರ್ಥಿಸಿಕೊಂಡಿದ್ದಾರೆ. ದ್ರಾವಿಡ್ ಪ್ರಕಾರ, ಇಂಗ್ಲೆಂಡ್‌ನಲ್ಲಿ ಕಳೆದ ಕೆಲವು ಪಂದ್ಯಗಳನ್ನು ನೋಡುವುದಾದರೆ ಮೊದಲು ಫೀಲ್ಡಿಂಗ್ ಮಾಡಿದ ತಂಡಕ್ಕೆ ಹೆಚ್ಚು ಲಾಭವಾಗಿದೆ. ಇಂಗ್ಲೆಂಡ್‌ನ ಪಿಚ್ ನಂತರ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಅಲ್ಲದೆ ಓವಲ್ ಮೈದಾನದಲ್ಲಿ ಮೊದಲ ದಿನ ಮೋಡ ಕವಿದ ವಾತಾವರಣವಿತ್ತು, ಪಿಚ್ ಹಸಿರಿನಿಂದ ಕೂಡಿತ್ತು, ಹೀಗಾಗಿ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. 70 ರನ್‌ಗಳಿಗೆ ಆಸ್ಟ್ರೇಲಿಯಾದ ಮೂರು ವಿಕೆಟ್‌ಗಳು ಬಿದ್ದಾಗ, ಈ ನಿರ್ಧಾರ ಸರಿಯಾಗಿದೆ ಎಂದು ತೋರುತ್ತಿತ್ತು. ಆದರೆ ಕೊನೆಯ ಸೆಷನ್‌ನಲ್ಲಿ ನಮ್ಮ ಬೌಲರ್​ಗಳು ಕೆಟ್ಟದಾಗಿ ಬೌಲಿಂಗ್ ಮಾಡಿದ ರೀತಿ, ನಮ್ಮನ್ನು ಪಂದ್ಯದಿಂದ ಹೊರಹಾಕಿತು ಎಂದಿದ್ದಾರೆ.

ಇದೆಲ್ಲದ್ದರ ಹೊರತಾಗಿ ಐದನೇ ದಿನ ಗೆಲುವಿನ ನಿರೀಕ್ಷೆಯಲ್ಲಿದ್ದೆ. ಕಳೆದ 2 ವರ್ಷಗಳಲ್ಲಿ ಟೀಂ ಇಂಡಿಯಾ ಇಂತಹ ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮತ್ತೊಮ್ಮೆ ಐಸಿಸಿ ಟೂರ್ನಿ ಗೆಲ್ಲುವಲ್ಲಿ ಟೀಂ ಇಂಡಿಯಾ ವಿಫಲವಾಗಿದೆ ಎಂದು ರಾಹುಲ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Sun, 11 June 23