WTC Final: ಫೈನಲ್​ಗೇರಲು ಟೀಮ್ ಇಂಡಿಯಾಗೆ 3 ಗೆಲುವಿನ ಅವಶ್ಯಕತೆ

WTC final 2025: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ. ಇದೀಗ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದೆ. ಆದರೆ ಫೈನಲ್​​ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನಿರ್ಣಾಯಕ.

WTC Final: ಫೈನಲ್​ಗೇರಲು ಟೀಮ್ ಇಂಡಿಯಾಗೆ 3 ಗೆಲುವಿನ ಅವಶ್ಯಕತೆ
Team India
Follow us
ಝಾಹಿರ್ ಯೂಸುಫ್
|

Updated on: Nov 27, 2024 | 8:56 AM

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೀಗೆ ಅಗ್ರಸ್ಥಾನ ಅಲಂಕರಿಸುವ ಮೂಲಕ ಭಾರತ ತಂಡವು WTC ಫೈನಲ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ತಂಡವನ್ನು ಮುಂದಿನ ಮೂರು ಪಂದ್ಯಗಳಲ್ಲಿ ಸೋಲಿಸಿ, ಒಂದು ಮ್ಯಾಚ್​​ ಅನ್ನು ಡ್ರಾ ಮಾಡಿಕೊಂಡರೆ ಭಾರತ ತಂಡವು ನೇರವಾಗಿ ಫೈನಲ್​​​ಗೇರಬಹುದು.

ಅತ್ತ ನ್ಯೂಝಿಲೆಂಡ್ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ವಿಜಯ ಸಾಧಿಸಿದರೂ, ಮೊದಲ ಅಥವಾ ಎರಡನೇ ಸ್ಥಾನದೊಂದಿಗೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್​ ಆಡುವುದು ಖಚಿತವಾಗಲಿದೆ.

  • ಭಾರತ ತಂಡವು ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್​​ಶಪ್ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಶೇಕಡಾವಾರು ಅಂಕ 65.79 ಕ್ಕೆ ತಲುಪಲಿದೆ.
  • ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನ್ಯೂಝಿಲೆಂಡ್ ತಂಡವು 3-0 ಅಂತರದಿಂದ ಗೆದ್ದುಕೊಂಡರೂ ಶೇಕಡಾವಾರು ಅಂಕ 64.29 ಕ್ಕೆ ಬಂದು ನಿಲ್ಲಲಿದೆ.
  • ಇನ್ನು ಸೌತ್ ಆಫ್ರಿಕಾ ತಂಡವು ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡರೆ ಒಟ್ಟು 69.44 ಶೇಕಡಾವಾರು ಅಂಕ ಪಡೆಯಲಿದೆ.

ಅಂದರೆ ಇಲ್ಲಿ ಸೌತ್ ಆಫ್ರಿಕಾ ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ.

ಹಾಗೆಯೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿ, 1 ಪಂದ್ಯವನ್ನು ಡ್ರಾ ಮಾಡಿಕೊಂಡರೆ WTC ಪಾಯಿಂಟ್ಸ್ ಟೇಬಲ್​​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಲಿದೆ. ಈ ಮೂಲಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನಲ್ಲಿ ಫೈನಲ್​ಗೇರಬಹುದು.

ಒಂದು ವೇಳೆ ಸೋತರೆ?

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು 2-3 ಅಂತರದಿಂದ ಸೋತರೆ, ಉಳಿದ ತಂಡಗಳ ಸರಣಿಯ ಫಲಿತಾಂಶಗಳು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಲಿದೆ.

ಇಲ್ಲಿ ನ್ಯೂಝಿಲೆಂಡ್-ಇಂಗ್ಲೆಂಡ್ ನಡುವಣ ಸರಣಿಯು 1-1 ಅಂತರದಲ್ಲಿ ಅಂತ್ಯಗೊಳ್ಳಬೇಕು. ಹಾಗೆಯೇ ಸೌತ್ ಆಫ್ರಿಕಾ-ಶ್ರೀಲಂಕಾ/ಪಾಕಿಸ್ತಾನ್ ನಡುವಣ ಸರಣಿಯು 1-1 ಅಂತರದಲ್ಲಿ ಕೊನೆಗೊಳ್ಳಬೇಕು. ಅದೇ ರೀತಿ ಆಸ್ಟ್ರೇಲಿಯಾ-ಶ್ರೀಲಂಕಾ ನಡುವಣ ಸರಣಿಯು 0-0 ಅಂತರದಿಂದ ಡ್ರಾಗೊಳ್ಳಬೇಕು.

ಹೀಗಾದಲ್ಲಿ ಆಸ್ಟ್ರೇಲಿಯಾ ತಂಡವು 58.77 ಶೇಕಡಾವಾರು ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಲಿದೆ. ಹಾಗೆಯೇ ಟೀಮ್ ಇಂಡಿಯಾ 53.51% ಅಂಕಗಳೊಂದಿಗೆ ದ್ವಿತೀಯ ಸ್ಥಾನದೊಂದಿಗೆ ಫೈನಲ್​​ಗೆ ಅರ್ಹತೆ ಪಡೆಯಲಿದೆ.

ಇದನ್ನೂ ಓದಿ: IPL 2025: ಐಪಿಎಲ್​ ಅಖಾಡದಲ್ಲಿ 13 ಕನ್ನಡಿಗರು

ಅಂದರೆ ಇಲ್ಲಿ ಟೀಮ್ ಇಂಡಿಯಾ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನಲ್ಲಿ ಫೈನಲ್​​ಗೇರಬೇಕಿದ್ದರೆ ಆಸ್ಟ್ರೇಲಿಯಾ ತಂಡವನ್ನು 4-0 ಅಂತರದಿಂದ ಬಗ್ಗು ಬಡಿಯಲೇಬೇಕು. ಇಲ್ಲದಿದ್ದರೆ ಉಳಿದ ತಂಡಗಳ ಫಲಿತಾಂಶಗಳ ಮೇಲೆ ಭಾರತ ತಂಡದ WTC ಫೈನಲ್ ಭವಿಷ್ಯ ನಿರ್ಧಾರವಾಗಲಿದೆ.