
2025-27 ರ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2027) ಪಂದ್ಯದ ವೇಳಾಪಟ್ಟಿಯನ್ನು ಐಸಿಸಿ (ICC) ಇಂದು ಪ್ರಕಟಿಸಿದೆ. ಅದರಂತೆ ಈ ಆವೃತ್ತಿಯ ಫೈನಲ್ ಪಂದ್ಯ 2027 ರ ಜೂನ್ 9 ರಂದು ಆರಂಭವಾಗಲಿದ್ದು, ಜೂನ್ 13 ರವರೆಗೆ ನಡೆಯಲಿದೆ. ಐಸಿಸಿ ಈಗಾಗಲೇ 2027, 2029 ಮತ್ತು 2031 ರ ಡಬ್ಲ್ಯೂಟಿಸಿ ಫೈನಲ್‌ಗಳ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್‌ಗೆ ನೀಡಿದೆ. 2027ರ ಆವೃತ್ತಿಯ ಫೈನಲ್ ಪಂದ್ಯಕ್ಕೆ ಲಂಡನ್‌ನ ಐಕಾನಿಕ್ ದಿ ಓವಲ್ ಮೈದಾನ ಆತಿಥ್ಯವಹಿಸುತ್ತಿದೆ. ಈ ಮೈದಾನದಲ್ಲಿ ಎರಡನೇ ಬಾರಿಗೆ ಡಬ್ಲ್ಯೂಟಿಸಿ ಫೈನಲ್ ನಡೆಯುತ್ತಿದ್ದು, ಈ ಮೊದಲು ಅಂದರೆ 2023 ರಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.
2027 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ ತೀವ್ರ ಕುತೂಹಲ ಮೂಡಿಸಿದೆ. ಏಕೆಂದರೆ ಎಲ್ಲಾ 9 ತಂಡಗಳು ಫೈನಲ್‌ಗೆ ಟಿಕೆಟ್ ಪಡೆಯುವ ಪೈಪೋಟಿಯಲ್ಲಿವೆ. ಅಂತಹ ಪರಿಸ್ಥಿತಿಯಲ್ಲಿ, ಮುಂಬರುವ ಟೆಸ್ಟ್ ಸರಣಿಯು ಡಬ್ಲ್ಯೂಟಿಸಿ ಪಾಯಿಂಟ್ ಟೇಬಲ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. ಅದರಂತೆ ಜುಲೈ ಮತ್ತು ಆಗಸ್ಟ್‌ನಲ್ಲಿ ಹಲವಾರು ನಿರ್ಣಾಯಕ ಟೆಸ್ಟ್ ಸರಣಿಗಳು ನಡೆಯಲಿವೆ. ಈ ಸರಣಿಗಳಿಂದ ಹೊರಬರುವ ಫಲಿತಾಂಶ ಯಾವ ತಂಡ ರೇಸ್ನಲ್ಲಿ ಉಳಿಯಲಿದೆ ಎಂಬುದನ್ನು ನಿರ್ಧರಿಸಲಿದೆ.
ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳನ್ನು ನೋಡುವುದಾದರೆ.. ಜುಲೈ 25 ರಿಂದ ವೆಸ್ಟ್ ಇಂಡೀಸ್, ಪಾಕಿಸ್ತಾನ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ತವರಿನಲ್ಲಿ ಆಡಲಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ತಂಡವು ಆಗಸ್ಟ್ 13 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯಾ, ಬಾಂಗ್ಲ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿ ಮುಂದುವರೆಯುವ ಇರಾದೆಯಲ್ಲಿದೆ.
ಇದಾದ ನಂತರ, ಆಗಸ್ಟ್ 15 ರಿಂದ ಶ್ರೀಲಂಕಾ ಮತ್ತು ಭಾರತ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. WTC ಪಾಯಿಂಟ್ ಟೇಬಲ್ ವಿಷಯದಲ್ಲಿ ಈ ಸರಣಿ ಎರಡೂ ತಂಡಗಳಿಗೆ ಬಹಳ ಮುಖ್ಯವಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ತಂಡವು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
IND vs ENG: ಹಿಟ್ಮ್ಯಾನ್ ಅಲ್ಲ, ಟೆಸ್ಟ್ ಮ್ಯಾನ್..! ಏನಾಯ್ತು ರೋಹಿತ್ ಶರ್ಮಾ?
ಡಬ್ಲ್ಯೂಟಿಸಿ ಫೈನಲ್ ಜೊತೆಗೆ ಪ್ರತಿಷ್ಠಿತ ಆಶಸ್ ಸರಣಿಯ ವೇಳಾಪಟ್ಟಿಯೂ ಹೊರಬಿದ್ದಿದೆ. ಅದರಂತೆ ಆಶಸ್ ಸರಣಿಯು ಜೂನ್ 18, 2027 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಜೂನ್ 30 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಮೂರನೇ ಟೆಸ್ಟ್ ಜುಲೈ 8 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 21 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಐದನೇ ಟೆಸ್ಟ್ ಪಂದ್ಯ ಜುಲೈ 29 ರಂದು ಓವಲ್‌ನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Thu, 23 July 26