ಆಂಗ್ಲರ ಹುಟ್ಟಡಗಿಸಿದ್ದ 6 ಸಿಕ್ಸರ್‌ಗಳಿಗೆ 15 ವರ್ಷ! ಮಗನೊಂದಿಗೆ ವಿಡಿಯೋ ನೋಡಿ ಸಂಭ್ರಮಿಸಿದ ಯುವಿ
Yuvraj Singh: ಆಂಗ್ಲರೆದುರು ಭಾರತಕ್ಕೆ ಸೋಲು ಖಚಿತವೆಂದು ಟಿವಿ ಆಫ್ ಮಾಡಿ ಮಲಗುತ್ತಿದ್ದ ಅದೇಷ್ಟೋ ಭಾರತೀಯ ಅಭಿಮಾನಿಗಳಿಗೆ ಯುವರಾಜ್ ಸಿಂಗ್ ಮನರಂಜನೆಯ ಮಹಾಪೂರವನ್ನೆ ಹರಿಸಿ ಇಲ್ಲಿಗೆ 15 ವರ್ಷಗಳು ಪೂರ್ಣಗೊಂಡಿವೆ.
ಆ ಒಂದು ಓವರ್… ಆ ಒಂದು ಓವರ್ ಟಿ20 ವಿಶ್ವಕಪ್‌ನಲ್ಲಿ (T20 World Cup) ಟೀಂ ಇಂಡಿಯಾದ ಹಣೆಬರಹವನ್ನೇ ಬದಲಾಯಿಸಿತ್ತು. ಆ ಒಂದು ಓವರ್ನ ಐತಿಹಾಸಿಕ ದಾಖಲೆಗೆ ಇಂದು 15ನೇ ವರ್ಷದ ಸಂಭ್ರಮ. ಆಂಗ್ಲರೆದುರು ಭಾರತಕ್ಕೆ ಸೋಲು ಖಚಿತವೆಂದು ಟಿವಿ ಆಫ್ ಮಾಡಿ ಮಲಗುತ್ತಿದ್ದ ಅದೇಷ್ಟೋ ಭಾರತೀಯ ಅಭಿಮಾನಿಗಳಿಗೆ ಯುವರಾಜ್ ಸಿಂಗ್ ಮನರಂಜನೆಯ ಮಹಾಪೂರವನ್ನೆ ಹರಿಸಿ ಇಲ್ಲಿಗೆ 15 ವರ್ಷಗಳು ಪೂರ್ಣಗೊಂಡಿವೆ. 15 ವರ್ಷಗಳ ಹಿಂದೆ ಇದೇ ದಿನ ಟೀಂ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ (Yuvraj Singh), ಇಂಗ್ಲೆಂಡ್ ಎದುರು ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿ ಮುರಿಯದ ದಾಖಲೆ ನಿರ್ಮಿಸಿದ್ದರು. ಈಗ 15 ವರ್ಷಗಳ ನಂತರ, ಯುವರಾಜ್ ಮತ್ತೊಮ್ಮೆ ತಾವು ಆಡಿದ ಅಬ್ಬರದ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡಿದ್ದಾರೆ. ಆದರೆ ಈ ಬಾರಿ ಯುವಿಗೆ, ಧೋನಿ ಬದಲು ಹೊಸ ಪಾಲುದಾರರೊಬ್ಬರು ಸಿಕ್ಕಿದ್ದು ವಿಶೇಷವಾಗಿದೆ.
ಮಗನೊಂದಿಗೆ ವಿಡಿಯೋ ವೀಕ್ಷಿಸಿದ ಯುವಿ
ಸೋಮವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯುವರಾಜ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯುವರಾಜ್ ಸಿಂಗ್ 15 ವರ್ಷಗಳ ಹಿಂದೆ ಸಿಡಿಸಿದ ಆರು ಸಿಕ್ಸರ್‌ಗಳ ವೀಡಿಯೊ ಟಿವಿಯಲ್ಲಿ ಪ್ಲೇ ಆಗುತ್ತಿದೆ. ಬರೋಬ್ಬರಿ 15 ವರ್ಷಗಳ ನಂತರ ತಮ್ಮ ಇನ್ನಿಂಗ್ಸ್ ಅನ್ನು ನೋಡುತ್ತ ಎಂಜಾಯ್ ಮಾಡುತ್ತಿದ್ದ ಯುವರಾಜ್ಗೆ ಅವರ ಮಗ ಓರಿಯನ್ ಕೀಚ್ ಸಿಂಗ್ ಸಾಥ್ ನೀಡುತ್ತಿರುವುದು ವಿಶೇಷವಾಗಿತ್ತು. ಯುವರಾಜ್ ಸಿಡಿಸಿದ ಆರು ಸಿಕ್ಸರ್‌ಗಳ ವಿಡಿಯೋವನ್ನು ಅವರ ಮಗ ಅವರ ಮಡಿಲಲ್ಲಿ ಕುಳಿತು ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 15 ವರ್ಷಗಳ ನಂತರ ಈ ಇನ್ನಿಂಗ್ಸ್ ವೀಕ್ಷಿಸಲು ನನಗೆ ಇವನಿಗಿಂತ ಉತ್ತಮ ಜೊತೆಗಾರ ಸಿಗಲಿಲ್ಲ ಎಂದು ಯುವಿ ವೀಡಿಯೊದ ಶೀರ್ಷಿಕೆಯಲ್ಲಿ ಬರೆದಿಕೊಂಡಿದ್ದಾರೆ.
Couldn’t have found a better partner to watch this together with after 15 years ? ? #15YearsOfSixSixes #ThisDayThatYear #Throwback #MotivationalMonday #GetUpAndDoItAgain #SixSixes #OnThisDay pic.twitter.com/jlU3RR0TmQ
— Yuvraj Singh (@YUVSTRONG12) September 19, 2022
ಬ್ರಾಡ್ಗೆ ಮರೆಯದ ನೋವು ನೀಡಿದ್ದ ಯುವಿ
15 ವರ್ಷಗಳ ಹಿಂದೆ 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಆ ಪಂದ್ಯದಲ್ಲಿ ಯುವಿಯ ಈ ಆರ್ಭಟಕ್ಕೆ ಸಿಲುಕಿ ನಲುಗಿದ್ದು ಮಾತ್ರ ಸ್ಟುವರ್ಟ್ ಬ್ರಾಡ್. ಈ ರೀತಿಯ ದಾಳಿ ನನ್ನ ಮೇಲೆ ನಡೆಯುತ್ತದೆ ಎಂಬ ಅರಿವೆ ಇಲ್ಲದೆ ಓವರ್ ಎಸೆದಿದ್ದ ಬ್ರಾಡ್, ಓವರ್ ಮುಗಿಯುವಷ್ಟರಲ್ಲಿ 36 ರನ್ ನೀಡಿ ಬಿಟ್ಟಿದ್ದರು. ಈ ಓವರ್‌ಗೂ ಮುನ್ನ ಯುವರಾಜ್ ಇಂಗ್ಲೆಂಡ್‌ನ ಆಂಡ್ರ್ಯೂ ಫ್ಲಿಂಟಾಫ್ ಅವರೊಂದಿಗೆ ಮೈದಾನದಲ್ಲೇ ವಾಗ್ವಾದ ನಡೆಸಿದ್ದರು. ಇಬ್ಬರ ನಡುವಿನ ವಾಗ್ವಾದ ಕೊಂಚ ತಾರಕಕ್ಕೇರಿತ್ತು. ಬಳಿಕ ಮಹೇಂದ್ರ ಸಿಂಗ್ ಧೋನಿ ಮಧ್ಯ ಪ್ರವೇಶಿಸಿ ಇಬ್ಬರ ನಡುವಿನ ವಾಕ್ಸಮರಕ್ಕೆ ತೆರೆ ಎಳಿದಿದ್ದರು.
ಆದರೆ, ಫ್ಲಿಂಟಾಫ್ ಮೇಲಿನ ಕೋಪವನ್ನು ಕಡಿಮೆ ಮಾಡಿಕೊಳ್ಳದ ಯುವರಾಜ್, ಮುಂದಿನ ಓವರ್ ಎಸೆಯಲು ಬಂದ ಬ್ರಾಡ್ ಮೇಲೆ ತೀವ್ರ ದಾಳಿ ನಡೆಸಿದರು. ಈ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯುವರಾಜ್ 16 ಎಸೆತಗಳಲ್ಲಿ 58 ರನ್ ಗಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಯನ್ನು ಯುವಿ ಬರೆದಿದ್ದರು. ಯುವರಾಜ್ ಸಿಂಗ್ ಅವರಿಗಿಂತ ಮೊದಲು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಅದೇ ವರ್ಷ ಈ ಸಾಧನೆ ಮಾಡಿದ್ದರು. ನೆದರ್ಲೆಂಡ್ಸ್ ವಿರುದ್ಧ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಗಿಬ್ಸ್ ಈ ದಾಖಲೆಗೆ ಕೊರಳೊಡ್ಡಿದ್ದರು.
Published On - 4:23 pm, Mon, 19 September 22