
ಭಾರತ-ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿ ಬುಧವಾರ (ಆಗಸ್ಟ್ 4) ದಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದ್ದು, ಈ ಮೂಲಕ ಗೆಲುವಿನ ಮೂಲಕ ಮುನ್ನಡೆ ಸಾಧಿಸುವ ತವಕದಲ್ಲಿದೆ. ಆದರೆ ಅತ್ತ ಟೀಮ್ ಇಂಡಿಯಾದ ಆಯ್ಕೆ ಬಗ್ಗೆ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಹಲವು ವೇಗಿಗಳಿದ್ದರೂ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಸ್ಥಾನ ನೀಡದಿರುವ ಬಗ್ಗೆ ಯುವಿ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್, ನನ್ನ ಪ್ರಕಾರ ಇಂಗ್ಲೆಂಡ್ ಸರಣಿಗೆ ಭುವನೇಶ್ವರ್ ಕುಮಾರ್ ಆಯ್ಕೆಯಾಗಬೇಕಿತ್ತು. ಏಕೆಂದರೆ ಇಂಗ್ಲೆಂಡ್ ಪಿಚ್ನಲ್ಲಿ ಸ್ವಿಂಗ್ ಬೌಲರ್‌ಗಳು ಅಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಿದ್ದಾರೆ. ಹೀಗಾಗಿ ತಂಡದಲ್ಲಿ ಭುವಿಗೆ ಅವಕಾಶ ನೀಡಬೇಕಿತ್ತು ಎಂದು ಯುವಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ‘ನಮ್ಮಲ್ಲಿ ಹಲವು ಮ್ಯಾಚ್ ವಿನ್ನರ್ ಆಟಗಾರರಿದ್ದಾರೆ. ಆದರೆ ಇಂಗ್ಲೆಂಡಿನಲ್ಲಿ ಆಡುವುದು ತುಂಬಾ ಕಷ್ಟಕರ. ಅಲ್ಲಿನ ಪಿಚ್ಗಳಿಗೆ ಭಾರತ ತಂಡಕ್ಕೆ ಸ್ವಿಂಗ್ ಬೌಲರ್ ಅಗತ್ಯವಿದೆ. ಡ್ಯೂಕ್ ಬಾಲ್ ಹೇಗೆ ಸ್ವಿಂಗ್ ಆಗುತ್ತದೆ ಎಂದು ತಿಳಿದಿರಬೇಕು. ವೇಗದ ಬೌಲರುಗಳಾಗಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಇದ್ದಾರೆ, ಆದರೆ ಅದರೊಂದಿಗೆ ಸ್ವಿಂಗ್ ಮೂಲಕ ಕಾಡುವ ಭುವನೇಶ್ವರ್ ಕುಮಾರ್ ಅವರಂತಹ ಬೌಲರ್ ತಂಡಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟರು.
ಭುವಿ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈಗ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಬೇಕಿತ್ತು. ಭಾರತಕ್ಕೆ ಇಂಗ್ಲೆಂಡಿನಲ್ಲಿ ಭುವನೇಶ್ವರ್ ಕುಮಾರ್ ನಂತಹ ಆಟಗಾರನ ಅನುಭವದ ಅಗತ್ಯವಿದೆ. ಭಾರತೀಯ ಟೆಸ್ಟ್ ತಂಡವನ್ನು ಘೋಷಿಸಿದಾಗ, ಅದರಲ್ಲಿ ಭುವನೇಶ್ವರ್ ಹೆಸರಿರಲಿಲ್ಲ ಎಂಬುದೇ ಅಚ್ಚರಿ ಎಂದು ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಯುವರಾಜ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಭುವನೇಶ್ವರ್ ಕುಮಾರ್ ಇಂಗ್ಲೆಂಡ್‌ನಲ್ಲಿ 5 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 19 ವಿಕೆಟ್ ಉರುಳಿಸಿ ಮಿಂಚಿದ್ದರು. ಹಾಗೆಯೇ ಎರಡು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 2014 ರಲ್ಲಿ ಲಾರ್ಡ್ಸ್‌ನಲ್ಲಿ 82 ರನ್ ಗಳಿಗೆ 6 ವಿಕೆಟ್ ಪಡೆದು ಭುವನೇಶ್ವರ್ ಕುಮಾರ್ ಭರ್ಜರಿ ಪ್ರದರ್ಶನ ನೀಡಿದ್ದರು.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್
ಮೀಸಲು ಆಟಗಾರರು: ಪ್ರಸಿದ್ಧ್ ಕೃಷ್ಣ, ಅರ್ಝಾನ್ ನಾಗ್ವಾಸ್ವಾಲಾ
ಇದನ್ನೂ ಓದಿ: India vs England: ಯಾರಾಗಲಿದ್ದಾರೆ ಆರಂಭಿಕ: ಟೀಮ್ ಇಂಡಿಯಾ ಮುಂದಿದೆ 4 ಆಯ್ಕೆ
ಇದನ್ನೂ ಓದಿ: IPL 2021: ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 12 ಆಟಗಾರರು ಕಣಕ್ಕಿಳಿಯುವುದು ಖಚಿತ
ಇದನ್ನೂ ಓದಿ: 108mp ಕ್ಯಾಮೆರಾ ಜೊತೆ ಸೂಪರ್ ಆಫರ್: ಅತೀ ಕಡಿಮೆ ಬೆಲೆಗೆ 5G ಸ್ಮಾರ್ಟ್ಫೋನ್