ವಿಶ್ವ ದಾಖಲೆಯೊಂದಿಗೆ ಗೆದ್ದು ಬೀಗಿದ ಸೌತ್ ಆಫ್ರಿಕಾ
Zimbabwe vs South Africa Test: ಝಿಂಬಾಬ್ವೆ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಸೌತ್ ಆಫ್ರಿಕಾ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ನಲ್ಲಿ 328 ರನ್ಗಳ ವಿಜಯ ಸಾಧಿಸಿದ್ದ ಸೌತ್ ಆಫ್ರಿಕಾ ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 236 ರನ್ಗಳ ಅಮೋಘ ಗೆಲುವು ದಾಖಲಿಸಿದೆ.

ಝಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಹಂಗಾಮಿ ನಾಯಕ ವಿಯಾನ್ ಮುಲ್ಡರ್ ಭರ್ಜರಿ ತ್ರಿಶತಕ ಬಾರಿಸಿದರು.
334 ಎಸೆತಗಳನ್ನು ಎದುರಿಸಿದ ಮುಲ್ಡರ್ 4 ಸಿಕ್ಸ್ ಹಾಗೂ 49 ಫೋರ್ ಗಳೊಂದಿಗೆ ಅಜೇಯ 367 ರನ್ ಕಲೆಹಾಕಿದರು. ಈ ತ್ರಿಪಲ್ ಸೆಂಚುರಿ ನೆರವಿನೊಂದಿಗೆ ಝಿಂಬಾಬ್ವೆ ತಂಡವು ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 626 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಝಿಂಬಾಬ್ವೆ ಕೇವಲ 170 ರನ್ ಗಳಿಗೆ ಆಲೌಟ್ ಆಗಿದೆ. ಫಾಲೋಆನ್ ಹೇರಿದ ಹಿನ್ನಲೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಝಿಂಬಾಬ್ವೆಯನ್ನು 220 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಸೌತ್ ಆಫ್ರಿಕಾ ಬೌಲರ್‌ಗಳು ಯಶಸ್ವಿಯಾದರು. ಈ ಮೂಲಕ ಸೌತ್ ಆಫ್ರಿಕಾ ತಂಡವು ಇನಿಂಗ್ಸ್ ಮತ್ತು 236 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಝಿಂಬಾಬ್ವೆ ಪ್ಲೇಯಿಂಗ್ 11: ಡಿಯೋನ್ ಮೈಯರ್ಸ್ , ತಕುಡ್ಜ್ವಾನಾಶೆ ಕೈಟಾನೊ , ನಿಕ್ ವೆಲ್ಚ್ , ಸೀನ್ ವಿಲಿಯಮ್ಸ್ , ಕ್ರೇಗ್ ಎರ್ವಿನ್ (ನಾಯಕ) , ವೆಸ್ಲಿ ಮಾಧೆವೆರೆ , ತಫದ್ಜ್ವಾ ತ್ಸಿಗಾ (ವಿಕೆಟ್ ಕೀಪರ್) , ವೆಲ್ಲಿಂಗ್ಟನ್ ಮಸಕಡ್ಜಾ , ಕುಂಡೈ ಮಟಿಗಿಮು , ಬ್ಲೆಸ್ಸಿಂಗ್ ಮುಝರಬಾನಿ, ಟನಕ ಚಿವಾಂಗ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಟೋನಿ ಡಿ ಝೋರ್ಝಿ, ಲೆಸೆಗೊ ಸೆನೊಕ್ವಾನೆ , ವಿಯಾನ್ ಮುಲ್ಡರ್ (ನಾಯಕ) , ಡೇವಿಡ್ ಬೆಡಿಂಗ್ಹ್ಯಾಮ್ , ಲುವಾನ್-ಡ್ರೆ ಪ್ರಿಟೋರಿಯಸ್ , ಡೆವಾಲ್ಡ್ ಬ್ರೆವಿಸ್ , ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್) , ಸೆನುರಾನ್ ಮುತ್ತುಸಾಮಿ , ಕಾರ್ಬಿನ್ ಬಾಷ್ , ಪ್ರೆನೆಲನ್ ಸುಬ್ರಾಯೆನ್ , ಕೋಡಿ ಯೂಸುಫ್.
ಸೌತ್ ಆಫ್ರಿಕಾ ವಿಶ್ವ ದಾಖಲೆ:
ಈ ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ 10 ಮ್ಯಾಚ್ ಗೆದ್ದ ವಿಶ್ವ ದಾಖಲೆಯೊಂದನ್ನು ಸೌತ್ ಆಫ್ರಿಕಾ ತನ್ನದಾಗಿಸಿಕೊಂಡಿದೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೂರನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು. ಆಸ್ಟ್ರೇಲಿಯಾ ತಂಡವು ಎರಡು ಬಾರಿ ಸತತ 16 ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಇನ್ನು ವೆಸ್ಟ್ ಇಂಡೀಸ್ ಸತತ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇದೀಗ ಸತತ 10ನೇ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಇದನ್ನೂ ಓದಿ: CSK ತಂಡವನ್ನು ಹಿಂದಿಕ್ಕಿದ RCB
ಟೆಸ್ಟ್‌ನಲ್ಲಿ ಸತತ ಅತೀ ಹೆಚ್ಚು ಪಂದ್ಯ ಗೆದ್ದ ತಂಡಗಳು:
- ಸತತ 16 ಗೆಲುವು – ಆಸ್ಟ್ರೇಲಿಯಾ (1999-2001)
- ಸತತ 16 ಗೆಲುವು – ಆಸ್ಟ್ರೇಲಿಯಾ (2006-2008)
- ಸತತ 11 ಗೆಲುವು – ವೆಸ್ಟ್ ಇಂಡೀಸ್ (1984)
- ಸತತ 10 ಗೆಲುವು – ಸೌತ್ ಆಫ್ರಿಕಾ (2024-2025*)
