ಈ ಬಾರಿ ಜಿಂಬಾಬ್ವೆ ಕ್ರಿಕೆಟ್ ತಂಡ (Zimbabwe cricket team) ಟಿ20 ವಿಶ್ವಕಪ್‌ನಲ್ಲಿ (T20 World Cup) ಅದ್ಭುತ ಪ್ರದರ್ಶನ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪಾಕಿಸ್ತಾನದ ವಿರುದ್ಧ 1 ರನ್‌ಗಳ ಜಯ ಸಾಧಿಸುವುದರೊಂದಿಗೆ ಪಾಕ್ ತಂಡದ ಸೇಮಿಸ್ ಕನಸನ್ನೇ ನುಚ್ಚುನೂರು ಮಾಡಿತ್ತು. ಹೀಗಾಗಿ ಇಡೀ ವಿಶ್ವವೇ ಜಿಂಬಾಬ್ವೆ ಪ್ರದರ್ಶನವನ್ನು ಕೊಂಡಾಡುತ್ತಿದೆ. ಇದೆಲ್ಲವುಗಳೊಂದಿಗೆ ಈಗ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಹಾಲಿ ಅಧ್ಯಕ್ಷ ಐಸಿಸಿಯನ್ನಾಳುವ ಮಹದಾಸೆಯನ್ನು ಹೊರಹಾಕಿದ್ದಾರೆ. ಮುಂದಿನ ವಾರ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಐಸಿಸಿ ಅಧ್ಯಕ್ಷರ (ICC chairman) ಚುನಾವಣೆಯಲ್ಲಿ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ಗ್ರೆಗ್ ಬಾರ್ಕ್ಲಿ (Tavengwa Mukuhlani) ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.
ಹೊಸ ನಿಯಮಗಳ ಆಧಾರದ ಮೇಲೆ ಚುನಾವಣೆ
ಐಸಿಸಿ ಮಂಡಳಿಯಲ್ಲಿ ಒಟ್ಟು 16 ಸದಸ್ಯ ಮತದಾರರಿದ್ದಾರೆ. ಇವರಲ್ಲಿ ಒಬ್ಬ ಸ್ವತಂತ್ರ ನಿರ್ದೇಶಕ (ಇಂದ್ರ ನೂಯಿ) ಮತ್ತು ಮೂರು ಅಸೋಸಿಯೇಟ್ ದೇಶಗಳ ಸದಸ್ಯರು ಸೇರಿದಂತೆ 12 ಸದಸ್ಯರು ಪೂರ್ಣಾವಧಿಯ ದೇಶಗಳವರು. ಕಳೆದ ಬಾರಿ ಮೂರನೇ ಎರಡರಷ್ಟು ಬಹುಮತದ ಪ್ರಕಾರ ಅಧ್ಯಕ್ಷರನ್ನು ನಿರ್ಧರಿಸಲಾಗಿತ್ತು, ಆದರೆ ಈ ಬಾರಿ ಹೊಸ ನಿಯಮಗಳ ಪ್ರಕಾರ ಐಸಿಸಿಯ ಹೊಸ ಅಧ್ಯಕ್ಷರನ್ನು ನಿರ್ಧರಿಸಲು ಸರಳ ಬಹುಮತದ ಅಗತ್ಯವಿದೆ.
ಇದನ್ನೂ ಓದಿ: India Vs Zimbabwe Live Streaming: ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ; ಪಂದ್ಯ ಆರಂಭ ಎಷ್ಟು ಗಂಟೆಗೆ?
ಬಿಸಿಸಿಐನಿಂದ ಬೆಂಬಲ ಕೋರುವುದಿಲ್ಲ
ಕ್ರಿಕ್‌ಇನ್ಫೋ ಪ್ರಕಾರ, ಮುಕುಹ್ಲಾನಿ ಅವರು ಸಣ್ಣ ಸದಸ್ಯ ರಾಷ್ಟ್ರಗಳು ಮತ್ತು ಸಹವರ್ತಿ ರಾಷ್ಟ್ರಗಳ ಧ್ವನಿಯಾಗಲು ಬಯಸುವುದಾಗಿ ಹೇಳಿಕೊಂಡಿರುವುದಲ್ಲದೆ, ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಕಷ್ಟು ಅನುಭವವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬಾರ್ಕ್ಲಿ ಅವರು ಬಿಸಿಸಿಐ ಹೊರತುಪಡಿಸಿ ಏಷ್ಯಾದ ಇತರ ದೇಶಗಳ ಬೆಂಬಲವನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ, ಬಾರ್ಕ್ಲಿಗೆ ಬಿಸಿಸಿಐ ಬೆಂಬಲ ನೀಡಲಿದೆ ಎಂದು ಊಹಿಸಲಾಗಿದ್ದು, ಈ ಎಲ್ಲಾ ವದಂತಿಗಳಿಗೆ ಚುನಾವಣೆ ದಿನದಂದು ತೆರೆ ಬೀಳಲಿದೆ.
ಮುಕುಹ್ಲಾನಿ ಯಾರು?
ಮುಕುಹ್ಲಾನಿ ಸದ್ಯ ಐಸಿಸಿಯ ಆಡಿಟ್ ಸಮಿತಿಯ ಸದಸ್ಯರಾಗಿದ್ದು, ಸದಸ್ಯ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ. ಜಿಂಬಾಬ್ವೆ ಕ್ರಿಕೆಟ್‌ನ ಮುಖ್ಯಸ್ಥರಾಗುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ಒಲಿಂಪಿಕ್ ವರ್ಕಿಂಗ್ ಗ್ರೂಪ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಲಾಸ್ ಏಂಜಲೀಸ್‌ನಲ್ಲಿ ನಡೆಯಲ್ಲಿರುವ 2028 ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲು ಪ್ರಯತ್ನಿಸುತ್ತಿದೆ. ನವೆಂಬರ್ 12 ಮತ್ತು 13 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಐಸಿಸಿ ಚುನಾವಣೆ ನಡೆಯಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ