BAN vs ZIM: ಜಿಂಬಾಬ್ವೆ ವಿರುದ್ಧ ತನ್ನ ನೆಲದಲ್ಲೇ ಸೋತ ಬಾಂಗ್ಲಾದೇಶ
Zimbabwe Stuns Bangladesh in Test Series Opener: ಬಾಂಗ್ಲಾದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ 3 ವಿಕೆಟ್‌ಗಳ ಅಂತರದಿಂದ ಬಾಂಗ್ಲಾದೇಶವನ್ನು ಮಣಿಸಿ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿದ ಜಿಂಬಾಬ್ವೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ 255 ರನ್ ಗಳಿಸಿದರೂ, ಜಿಂಬಾಬ್ವೆ 174 ರನ್ ಗುರಿಯನ್ನು 7 ವಿಕೆಟ್ ಕಳೆದುಕೊಂಡು ಗೆದ್ದಿತು. ಈ ಮೂಲಕ ನಾಲ್ಕು ವರ್ಷಗಳ ನಂತರ ಬಾಂಗ್ಲಾದೇಶದಲ್ಲಿ ಜಿಂಬಾಬ್ವೆ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿತು.

ಪ್ರಸ್ತುತ ಭಾರತದಲ್ಲಿ ಐಪಿಎಲ್ ಜ್ವರ ಜೋರಾಗಿದೆ. ಹೀಗಾಗಿ ಇತರೆ ಕ್ರಿಕೆಟ್ ಆಡುವ ದೇಶಗಳು ಆಡುತ್ತಿರುವ ಸರಣಿಯ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಆದರೀಗ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಅವರ ನೆಲದಲ್ಲೇ ಮಣಿಸಿರುವ ಜಿಂಬಾಬ್ವೆ ತಂಡ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. 3 ವಿಕೆಟ್‌ಗಳಿಂದ ಜಯಗಳಿಸಿದ ಜಿಂಬಾಬ್ವೆ, ನಾಲ್ಕು ವರ್ಷಗಳ ನಂತರ ಬಾಂಗ್ಲಾದೇಶ ನೆಲದಲ್ಲಿ ಟೆಸ್ಟ್ ಗೆಲುವು ಸಾಧಿಸಿದೆ. ಗೆಲುವಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳ ಗುರಿ ಪಡೆದಿದ್ದ ಜಿಂಬಾಬ್ವೆ, ಪಂದ್ಯದ ನಾಲ್ಕನೇ ದಿನದಂದು 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಜಿಂಬಾಬ್ವೆ ಅದ್ಭುತ ಬೌಲಿಂಗ್
ಏಪ್ರಿಲ್ 20 ರಂದು ಪ್ರಾರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 191 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಜಿಂಬಾಬ್ವೆ ಪರ ಮಾರಕ ದಾಳಿ ನಡೆಸಿದ ಬ್ಲೆಸಿಂಗ್ ಮುಜರಬಾನಿ ಮತ್ತು ವೆಲ್ಲಿಂಗ್ಟನ್ ಮಸಕಡ್ಜಾ ತಲಾ ತಲಾ 3 ವಿಕೆಟ್ ಪಡೆದರೆ, ವಿಕ್ಟರ್ ನ್ಯಾಚಿ ಮತ್ತು ವೆಸ್ಲಿ ಮಾಧೆವೆರೆ ತಲಾ 2 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 273 ರನ್ ಬಾರಿಸಿತು. ತಂಡದ ಪರ ಬ್ರಿಯಾನ್ ಬೆನೆಟ್ 64 ಎಸೆತಗಳಲ್ಲಿ 57 ರನ್ ಗಳಿಸಿದರೆ, ಸೀನ್ ವಿಲಿಯಮ್ಸ್ 108 ಎಸೆತಗಳಲ್ಲಿ 59 ರನ್ ಗಳಿಸಿ ಅದ್ಭುತ ಆಟವಾಡಿದರು. ಕೊನೆಯಲ್ಲಿ ಮಾಧೆವೆರೆ (24 ರನ್) ಮತ್ತು ನ್ಯಾಶಾ ಮಾಯಾವೊ (35 ರನ್) ಸಹ ಕೊಡುಗೆ ನೀಡಿದರು. ಈ ಮೂಲಕ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆ ಸಾಧಿಸಿತು.
2ನೇ ಇನ್ನಿಂಗ್ಸ್‌ನಲ್ಲೂ ಎಡವಿದ ಬಾಂಗ್ಲಾ
ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ರನ್‌ಗಳಿಗೆ ಕುಸಿದಿದ್ದ ಬಾಂಗ್ಲಾದೇಶ, ಎರಡನೇ ಇನ್ನಿಂಗ್ಸ್‌ನಲ್ಲೂ ಉತ್ತಮ ಆರಂಭದ ಹೊರತಾಗಿಯೂ, ಕೇವಲ 255 ರನ್‌ಗಳಿಗೆ ಆಲೌಟ್ ಆಯಿತು. ಕೊನೆಯ 61 ರನ್ ಗಳಿಸುವಷ್ಟರಲ್ಲಿ ತಂಡವು 6 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ಮೊಮುನುಲ್ ಹಕ್ 47 ರನ್ ಮತ್ತು ನಾಯಕ ನಜ್ಮುಲ್ ಹಸನ್ ಶಾಂಟೋ 60 ರನ್ ಗಳಿಸಿದರೆ, ಜಾಕಿರ್ ಅಲಿ 58 ರನ್‌ಗಳ ಕೊಡುಗೆ ನೀಡಿದರು.
ರೋಚಕ ಪಂದ್ಯದಲ್ಲಿ ಗೆದ್ದ ಜಿಂಬಾಬ್ವೆ
ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 174 ರನ್‌ಗಳ ಗುರಿ ಪಡೆದಿದ್ದ ಜಿಂಬಾಬ್ವೆ ಇದರ ಹೊರತಾಗಿಯೂ ಗೆಲುವಿಗಾಗಿ ಸಾಕಷ್ಟು ಹರಸಾಹಸ ಪಡಬೇಕಾಯಿತು. ಮೆಹದಿ ಹಸನ್ ಮಿರಾಜ್ ದಾಳಿಗೆ ಜಿಂಬಾಬ್ವೆ ತಂಡ ತತ್ತರಿಸಲಾರಂಭಿಸಿತು. ವಾಸ್ತವವಾಗಿ, ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತು. ಬ್ರಿಯಾನ್ ಬೆನೆಟ್ (57 ರನ್) ಮತ್ತು ಬೆನ್ ಕರನ್ (44 ರನ್) ಅವರ ನೆರವಿನಿಂದ 2ವಿಕೆಟ್‌ಗೆ 127 ರನ್ ಗಳಿಸಿತು. ಆದರೆ ಆ ಬಳಿಕ ವಿಕೆಟ್‌ಗಳ ಪತನ ಶುರುವಾಯಿತು. ಹೀಗಾಗಿ ಮುಂದಿನ 34 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಸ್ಕೋರ್ 2 ವಿಕೆಟ್‌ಗೆ 127 ರಿಂದ 7 ವಿಕೆಟ್‌ಗೆ 161 ರನ್ ಆಯಿತು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಾಳ್ಮೆ ಆಟವನ್ನಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Wed, 23 April 25