CSK vs DC, IPL 2021 Match 2 Result: ನಾಯಕನಾಗಿ ಮೊದಲ ಪಂದ್ಯ ಗೆದ್ದ ಪಂತ್; ಚೆನ್ನೈ ಸೂಪರ್ ಕಿಂಗ್ಸ್​ಗೆ ಹೀನಾಯ ಸೋಲು

CSK vs DC Scorecard: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021ರ ಎರಡನೇ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿಕೊಂಡಿದೆ.

CSK vs DC, IPL 2021 Match 2 Result: ನಾಯಕನಾಗಿ ಮೊದಲ ಪಂದ್ಯ ಗೆದ್ದ ಪಂತ್; ಚೆನ್ನೈ ಸೂಪರ್ ಕಿಂಗ್ಸ್​ಗೆ ಹೀನಾಯ ಸೋಲು
ಶಿಖರ್ ಧವನ್- ಪೃಥ್ವಿ ಶಾ ಗೆಲುವಿನ ಜೊತೆಯಾಟ
Edited By:

Updated on: Apr 05, 2022 | 12:41 PM

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021ರ ಎರಡನೇ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿಕೊಂಡಿದೆ. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಭರ್ಜರಿ ಆಟವಾಡಿ ಗೆಲುವಿನ ಅಡಿಪಾಯ ಒದಗಿಸಿಕೊಟ್ಟರು.  ಪೃಥ್ವಿ ಶಾ ಬೌಂಡರಿ ಸಿಕ್ಸರ್​ಗಳ ಸುರಿಮಳೆಗೈದು 38 ಬಾಲ್​ಗೆ 72 ರನ್ ಕಲೆಹಾಕಿದರು. ಮತ್ತೊಂದೆಡೆ ಶಿಖರ್ ಧವನ್ 54 ಬಾಲ್​ಗೆ 85 ರನ್ ಸೇರಿಸಿ ತಂಡಕ್ಕೆ ಭರ್ಜರಿ ಗೆಲುವಿಗೆ ಸಹಕರಿಸಿದರು. ಇಬ್ಬರೂ ಶತಕದ ಜೊತೆಯಾಟ ಆಡಿದರೆ, ನಂತರ ಬಂದ ನಾಯಕ ಪಂತ್ 15 ರನ್ ಹಾಗೂ ಸ್ಟಾಯಿನಿಸ್ 14 ರನ್ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಚೆನ್ನೈ ಪರ ಬೌಲರ್​ಗಳು ಡೆಲ್ಲಿ ದಾಂಡಿಗರಿಂದ ಸರಿಯಾಗಿ ದಂಡಿಸಿಕೊಂಡರು. ಬ್ರಾವೋ 1 ಹಾಗೂ ಠಾಕುರ್ 2 ವಿಕೆಟ್ ಕಬಳಿಸಿದ ಹೊರತಾಗಿ ರನ್ ಕಟ್ಟಿಹಾಕಲು ಯಾರೂ ಸಹಕಾರಿಯಾಗಲಿಲ್ಲ. ಈ ಮೂಲಕ ಐಪಿಎಲ್ 2021ರ ಎರಡನೇ ಪಂದ್ಯಾಟದಲ್ಲಿ ಡೆಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಟೂರ್ನಿಯ ಉದ್ದಕ್ಕೂ ಉತ್ತಮ ಪ್ರದರ್ಶನ ತೋರುವ ಭರವಸೆ ಮೂಡಿಸಿದೆ.

ಇದಕ್ಕೂ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಡೆಲ್ಲಿ ಬೌಲರ್​ಗಳು ಧೋನಿ ಪಡೆಯನ್ನು 188 ರನ್​ಗೆ ಕಟ್ಟಿಹಾಕಿದ್ದರು. ಚೆನ್ನೈ ಪರ ಸುರೇಶ್ ರೈನಾ, ಅಂಬಟಿ ರಾಯುಡು, ಮೊಯೀನ್ ಅಲಿ ಉತ್ತಮ ಪ್ರದರ್ಶನ ತೋರಿದ್ದರು. ಡೆಲ್ಲಿ ಕ್ಯಾಪಿಟಲ್ಸ್​ನ ಬೌಲರ್​ಗಳು ಕೊಂಚ ದುಬಾರಿ ಎನಿಸಿದರೂ ಚೆನ್ನೈ ಆಟಗಾರರನ್ನು ರನ್ ಗಳಿಕೆಯಿಂದ ಸಾಧ್ಯವಾದಷ್ಟು ತಡೆಹಿಡಿದಿದ್ದರು. ಚೆನ್ನೈ ಪರ ರೈನಾ 54, ಮೊಯೀನ್ ಅಲಿ 36, ರಾಯುಡು 23 ರನ್ ಗಳಿಸಿದ್ದರು. ಧೋನಿ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದ್ದರು. ಕೊನೆಯಲ್ಲಿ ಆಡಿದ ಜಡೇಜಾ ಹಾಗೂ ಸಾಮ್ ಕುರ್ರನ್ ಕೂಡ ಉತ್ತಮ ಮೊತ್ತ ದಾಖಲಿಸಿ ತಂಡಕ್ಕೆ ನೆರವಾಗಿದ್ದರು. ಡೆಲ್ಲಿ ಪರ ಅವೆಶ್ ಖಾನ್ 2, ವೋಕ್ಸ್, ಅಶ್ವಿನ್, ಟಾಮ್ ಕುರ್ರನ್ ತಲಾ 1 ವಿಕೆಟ್ ಪಡೆದಿದ್ದರು.

ಪಂತ್-ಧೋನಿ ಎದುರಾಳಿ ನಾಯಕರಾಗಿದ್ದು ಇಂದಿನ ವಿಶೇಷವಾಗಿತ್ತು
ಐಪಿಎಲ್ 2021ರ ಎರಡನೇ ಪಂದ್ಯಾಟ ಇಂದು (ಏಪ್ರಿಲ್ 10) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದಿದೆ. ಕಳೆದ ಬಾರಿಯ ರನ್ನರ್ಸ್ ಅಪ್ ತಂಡ ಡೆಲ್ಲಿ ಕ್ಯಾಪಿಟಲ್ಸ್, ಮೂರು ಬಾರಿ ಚಾಂಪಿಯನ್ ಪಟ್ಟ ಪಡೆದಿರುವ ಚೆನ್ನೈ ವಿರುದ್ಧ ಆಡಿದ್ದಾರೆ. ಸಿಎಸ್​ಕೆ ಹಿರಿಯ ಅನುಭವಿಗಳು ಕೂಡಿರುವ ತಂಡವಾಗಿದ್ದರೆ, ಡೆಲ್ಲಿ ತಂಡದಲ್ಲಿ ಬಹುತೇಕ ಯುವ ಕ್ರಿಕೆಟಿಗರಿದ್ದರು. ಚೆನ್ನೈ ಹಾಗೂ ಡೆಲ್ಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ರಿಷಭ್ ಪಂತ್ ಕಾರಣದಿಂದಲೂ ವಿಶೇಷವಾಗಿ ಕಾಣಿಸಿಕೊಂಡಿತ್ತು. ಉಭಯ ತಂಡದ ವಿಕೆಟ್ ಕೀಪರ್ ಹಾಗೂ ನಾಯಕರೂ ಆಗಿರುವ ಇವರು, ಗುರು-ಶಿಷ್ಯರು ಎಂದು ಗುರುತಿಸಿಕೊಂಡಿದ್ದರು. ಪಂತ್ ಅದನ್ನು ಈ ಮೊದಲಿನ ಸುದ್ದಿಗೋಷ್ಠಿಯಲ್ಲಿ ಕೂಡ ತಿಳಿಸಿದ್ದರು. ಧೋನಿ-ಪಂತ್ ಪ್ರತಿನಾಯಕರಾಗಿ ಆಡುವುದು ಇಂದಿನ ವಿಶೇಷವಾಗಿತ್ತು.

ಕೀಪರ್ ಹಾಗೂ ಬ್ಯಾಟ್ಸ್​ಮನ್ ಆಗಿರುವ ರಿಷಭ್ ಪಂತ್ ಗಾಯಗೊಂಡು ಇಂದಿನ ಪಂದ್ಯಕ್ಕೆ ಅಲಭ್ಯರಾಗಿರುವ ಶ್ರೇಯಸ್ ಅಯ್ಯರ್ ಬದಲಿಯಾಗಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಭಾರತ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅನುಭವ ಚೆನ್ನೈಗೆ ಸಿಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚಿಮ್ಮುವ ಉತ್ಸಾಹದಲ್ಲಿರುವ ಯುವ ಆಟಗಾರರು ವರವಾಗಿದ್ದಾರೆ. ಐಪಿಎಲ್ ಟೂರ್ನಿ ಆಡಲು ಬೇಕಾದ ಚಾಕಚಕ್ಯತೆ ಈ ತಂಡಕ್ಕಿದೆ. ಮತ್ತೊಂದೆಡೆ, ಸಿಎಸ್​ಕೆ ಹಿರಿಯ ಹಾಗೂ ಉತ್ತಮ ಹೊಂದಾಣಿಕೆ ಇರುವ ಅನುಭವಿ ಆಟಗಾರರ ಪಡೆ ಹೊಂದಿದೆ.

LIVE NEWS & UPDATES

The liveblog has ended.
  • 10 Apr 2021 11:13 PM (IST)

    ಡೆಲ್ಲಿ ಕ್ಯಾಪಿಟಲ್ಸ್​ಗೆ 7 ವಿಕೆಟ್​ಗಳ ಅಮೋಘ ಗೆಲುವು

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈ ತಂಡ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯ ಆರಂಭ ಪಡೆದುಕೊಂಡಿದೆ.

  • 10 Apr 2021 11:10 PM (IST)

    ಗೆಲುವಿನ ಹೊಸಿಲಲ್ಲಿ ಡೆಲ್ಲಿ 3ನೇ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 9 ಬಾಲ್​ಗೆ 3 ರನ್ ಬೇಕಾಗಿದೆ. ಈ ನಡುವೆ ಸ್ಟಾಯಿನಿಸ್ ವಿಕೆಟ್ ಕಳೆದುಕೊಂಡಿದ್ದಾರೆ.


  • 10 Apr 2021 11:08 PM (IST)

    ಡೆಲ್ಲಿ ಗೆಲುವಿಗೆ 11 ಬಾಲ್​ಗೆ 3 ರನ್

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಕೇವಲ 3 ರನ್ ಬೇಕಾಗಿದೆ. 11 ಬಾಲ್ ಹಾಗೂ 8 ವಿಕೆಟ್​ಗಳು ಡೆಲ್ಲಿ ಪಾಲಿಗೆ ಉಳಿದಿವೆ. ಡೆಲ್ಲಿ ಪರ ನಾಯಕ ಪಂತ್ ಮತ್ತು ಸ್ಟಾಯಿನಿಸ್ ಆಟವಾಡುತ್ತಿದ್ದಾರೆ.

  • 10 Apr 2021 11:01 PM (IST)

    ಡೆಲ್ಲಿ ಗೆಲುವಿಗೆ 17 ರನ್ ಬೇಕು

    ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 18 ಬಾಲ್​ಗೆ 17 ರನ್ ಬೇಕಾಗಿದೆ. ಅಂದರೆ, ಡೆಲ್ಲಿ ಕ್ಯಾಪಿಟಲ್ಸ್ 17 ಓವರ್​ಗೆ 2 ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿದ್ದಾರೆ.

  • 10 Apr 2021 10:59 PM (IST)

    ಧವನ್ ವಿಕೆಟ್ ಪತನ

    ಶತಕದ ಹೊಸ್ತಿಲಲ್ಲಿದ್ದ, ಅಮೋಘ ಬ್ಯಾಟಿಂಗ್ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ ಧವನ್ ಔಟ್ ಆಗಿದ್ದಾರೆ. ಶಾರ್ದುಲ್ ಠಾಕುರ್​ಗೆ ವಿಕೆಟ್ ಒಪ್ಪಿಸಿದ್ದಾರೆ.

  • 10 Apr 2021 10:57 PM (IST)

    ಧವನ್ ಫೋರ್-ಫೋರ್

    ಶಿಖರ್ ಧವನ್ ಮತ್ತೆ ಬೌಂಡರಿ ಬಾರಿಸಿದ್ದಾರೆ. ಶಿಖರ್ ಧವನ್ 53 ಬಾಲ್​ಗೆ 85 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ 600 ಫೋರ್ ದಾಖಲಿಸಿದ ಮೊದಲ ಬ್ಯಾಟ್ಸ್​ಮನ್ ಆಗಿ ಶಿಖರ್ ಧವನ್ ಹೊರಹೊಮ್ಮಿದ್ದಾರೆ. ಐಪಿಎಲ್ 2021ರ ತಂಡದ ಮೊದಲ ಪಂದ್ಯದಲ್ಲಿ ಧವನ್ ದಾಖಲೆ ಮಾಡಿದ್ದಾರೆ.

  • 10 Apr 2021 10:52 PM (IST)

    ಡೆಲ್ಲಿ ಗೆಲುವಿಗೆ 24 ಬಾಲ್​ಗೆ 31 ರನ್

    ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 24 ಬಾಲ್​ಗಳು ಉಳಿದಿರುವಂತೆ 31 ರನ್ ಬೇಕಾಗಿದೆ. ತಂಡ 1 ವಿಕೆಟ್ ಮಾತ್ರ ಕಳೆದುಕೊಂಡಿದೆ. ಪಂತ್ ಹಾಗೂ ಧವನ್ ಆಟವಾಡುತ್ತಿದ್ದಾರೆ. ಓವರ್​ಗೆ 10ರ ಸರಾಸರಿಯಲ್ಲಿ ಆರಂಭದಿಂದಲೂ ಬ್ಯಾಟ್ ಬೀಸಿದ ತಂಡ ಈಗಲೂ ಅದೇ ವೇಗವನ್ನು ಉಳಿಸಿಕೊಂಡಿದೆ.

  • 10 Apr 2021 10:46 PM (IST)

    ಡೆಲ್ಲಿ ಕ್ಯಾಪಿಟಲ್ಸ್ 151/1 (15 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 15 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿದೆ. ಡೆಲ್ಲಿ ಪರ ನಾಯಕ ಪಂತ್ ಹಾಗೂ ಶಿಖರ್ ಧವನ್ ಬ್ಯಾಟ್ ಬೀಸುತ್ತಿದ್ದಾರೆ. ತಂಡದ ಗೆಲುವಿಗೆ 30 ಬಾಲ್​ಗೆ 38 ರನ್ ಬೇಕಿದೆ.

  • 10 Apr 2021 10:41 PM (IST)

    ಕ್ರೀಸ್​ಗಿಳಿದ ನಾಯಕ ಪಂತ್

    ಆರಂಭಿಕರಾದ ಧವನ್-ಶಾ ಜೊತೆಯಾಟ ಕೊನೆಗೂ ಬೇರ್ಪಟ್ಟಿದೆ. ಡೆಲ್ಲಿ ಪರ ಕಪ್ತಾನ ರಿಷಭ್ ಪಂತ್ ಕ್ರೀಸ್​ಗೆ ಇಳಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 14 ಓವರ್ ಮುಕ್ತಾಯಕ್ಕೆ 139 ರನ್ ಕಲೆಹಾಕಿದೆ. 1 ವಿಕೆಟ್ ಕಳೆದುಕೊಂಡಿದೆ. ಡೆಲ್ಲಿ ಗೆಲುವಿಗೆ ಇನ್ನು 36 ಬಾಲ್​ಗೆ 50 ರನ್ ಬೇಕಿದೆ.

  • 10 Apr 2021 10:37 PM (IST)

    ಕೊನೆಗೂ ಔಟ್ ಆದ ಪೃಥ್ವಿ ಶಾ

    ಅಬ್ಬರದ ಬ್ಯಾಟಿಂಗ್ ಪ್ರದರ್ಶಸಿದ ಪೃಥ್ವಿ ಶಾ 38 ಬಾಲ್​ಗೆ 72 ರನ್ ಗಳಿಸಿ ಬ್ರಾವೋಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಧವನ್-ಶಾ ಶತಕದ ಜೊತೆಯಾಟ ಬೇರ್ಪಟ್ಟಿದೆ. ಡೆಲ್ಲಿ ತಂಡಕ್ಕೆ ಗೆಲ್ಲಲು 39 ಬಾಲ್​ಗೆ 51 ರನ್ ಬೇಕಿದೆ.

  • 10 Apr 2021 10:35 PM (IST)

    ಡೆಲ್ಲಿ ಕ್ಯಾಪಿಟಲ್ಸ್ 136/0 (13 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಓವರ್​ಗೆ 136 ರನ್ ಕಲೆಹಾಕಿದೆ. ವಿಕೆಟ್ ನಷ್ಟವಿಲ್ಲದೆ ಬೃಹತ್ ಮೊತ್ತ ಸಂಪಾದಿಸಿದೆ. ಆರಂಭಿಕ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಕೊನೆಯ ಓವರ್​ನಲ್ಲಿ ಪೃಥ್ವಿ ಶಾ ಸಿಕ್ಸರ್ ಸಿಡಿಸಿದ್ದಾರೆ. 9 ಬೌಂಡರಿ, 3 ಸಿಕ್ಸರ್ ಸಹಿತ 36 ಬಾಲ್​ಗೆ 71 ರನ್ ದಾಖಲಿಸಿದ್ದಾರೆ.

  • 10 Apr 2021 10:32 PM (IST)

    ಡೆಲ್ಲಿ ಗೆಲುವಿಗೆ 48 ಬಾಲ್​ಗೆ 67 ರನ್ ಬೇಕು

    ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 67 ರನ್ ಬೇಕಾಗಿದ್ದು, 48 ಬಾಲ್ ಉಳಿದುಕೊಂಡಿದೆ. ಎಲ್ಲಾ ವಿಕೆಟ್​ಗಳೂ ತನ್ನ ಕೈಯಲ್ಲಿರುವುದು ಡೆಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

  • 10 Apr 2021 10:25 PM (IST)

    ಡೆಲ್ಲಿ ಕ್ಯಾಪಿಟಲ್ಸ್ 113/0 (11 ಓವರ್)

    ಡೆಲ್ಲಿ ತಂಡ 10ಕ್ಕೂ ಹೆಚ್ಚು ಸರಾಸರಿ ರನ್​ಗಳನ್ನು ಪೇರಿಸುತ್ತಿದೆ. ಶಿಖರ್ ಧವನ್- ಪೃಥ್ವಿ ಶಾ ಅರ್ಧಶತಕದ ಮೂಲಕ ತಂಡದ ಮೊತ್ತ 100 ದಾಟುವಂತೆ ಮಾಡಿದ್ದಾರೆ. ಒಂದೂ ವಿಕೆಟ್ ಕಳೆದುಕೊಳ್ಳದಿರುವುದು ದೆಹಲಿ ಧೈರ್ಯ ಹೆಚ್ಚಿಸಿದೆ.

    ಶಿಖರ್ ಅರ್ಧಶತಕವನ್ನು ತಂಡದವರು ಸಂಭ್ರಮಿಸಿದ್ದು ಹೀಗೆ..

  • 10 Apr 2021 10:22 PM (IST)

    ಫೋರ್ ಫೋರ್!

    ಡೆಲ್ಲಿ ದಾಂಡಿಗರು ಬೌಂಡರಿ ಮೇಲೆ ಬೌಂಡರಿ ಪೇರಿಸುತ್ತಿದ್ದು, ಚೆನ್ನೈ ಎಸೆತಗಾರರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದಾರೆ.

  • 10 Apr 2021 10:21 PM (IST)

    ಶಿಖರ್ ಧವನ್ ಕೂಡ ಅರ್ಧಶತಕ

    ಪೃಥ್ವಿ ಶಾ ಅರ್ಧಶತಕದ ಆಟದ ಬೆನ್ನಲ್ಲೇ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ 50 ರನ್ ಗಡಿದಾಟಿದ್ದಾರೆ. ಇಬ್ಬರ ಜೊತೆಯಾಟ ತಂಡಕ್ಕೆ ಗೆಲ್ಲುವ ಧೈರ್ಯ ನೀಡಿದ್ದು, ಶುಭಾರಂಭದ ನಿರೀಕ್ಷೆ ಮೂಡಿಸಿದೆ. ಚೆನ್ನೈ ಬೌಲರ್​ಗಳು ಒಂದು ವಿಕೆಟ್​ಗಾಗಿ ಪರದಾಡುತ್ತಿದ್ದಾರೆ.

  • 10 Apr 2021 10:19 PM (IST)

    ಪೃಥ್ವಿ ಶಾ 50!

    ಡೆಲ್ಲಿ ಪರ ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಅಮೋಘ ಅರ್ಧಶತಕ ದಾಖಲಿಸಿದ್ದಾರೆ. 27 ಬಾಲ್​ಗೆ 52 ರನ್ ಕಲೆಹಾಕಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಲು ಸಹಕಾರಿಯಾಗಿದ್ದಾರೆ.

  • 10 Apr 2021 10:18 PM (IST)

    ಡೆಲ್ಲಿ ಕ್ಯಾಪಿಟಲ್ಸ್ 99/0 (10 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 10 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 99 ರನ್ ಕಲೆಹಾಕಿದೆ. ತಂಡದ ಪರ ಶಿಖರ್ ಧವನ್ 47, ಪೃಥ್ವಿ ಶಾ 52 ರನ್ ದಾಖಲಿಸಿದ್ದಾರೆ. ಡೆಲ್ಲಿಗೆ ಗೆಲ್ಲಲು 60 ಬಾಲ್​ಗೆ 90 ರನ್ ಬೇಕಿದೆ.

  • 10 Apr 2021 10:16 PM (IST)

    ಪೃಥ್ವಿ ಶಾ ಎರಡು ಬಾರಿ ಜೀವದಾನ

    ಡೆಲ್ಲಿ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಪೃಥ್ವಿ ಶಾ ಎರಡು ಬಾರಿ ಜೀವದಾನ ಪಡೆದುಕೊಂಡಿದ್ದಾರೆ. ಶಾ ಬ್ಯಾಟ್​ನಿಂದ ಪುಟಿದ ಚೆಂಡು ಎರಡು ಬಾರಿ ಫೀಲ್ಡರ್​ಗಳ ಕೈಜಾರಿದೆ. ಈ ನಡುವೆ ಡೆಲ್ಲಿ ತಂಡದ ದಾಂಡಿಗರು ಬೌಂಡರಿ ಮೇಲೆ ಬೌಂಡರಿಗಳನ್ನು ಬಾರಿಸುತ್ತಿದ್ದಾರೆ.

  • 10 Apr 2021 10:15 PM (IST)

    ಡೆಲ್ಲಿ ಕ್ಯಾಪಿಟಲ್ಸ್ 86/0 (9 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಆರಂಭ ಪಡೆದುಕೊಂಡಿದೆ. 189 ರನ್ ಟಾರ್ಗೆಟ್ ಬೆನ್ನತ್ತಿರುವ ತಂಡ 9 ಓವರ್​ಗೆ ವಿಕೆಟ್ ನಷ್ಟವಿಲ್ಲದೆ 86 ರನ್ ಕಲೆಹಾಕಿದೆ.

  • 10 Apr 2021 10:13 PM (IST)

    ಪೃಥ್ವಿ ಶಾ ಸಿಕ್ಸರ್

    ಪೃಥ್ವಿ ಶಾ ಸಿಕ್ಸರ್ 9ನೇ ಓವರ್​ನಲ್ಲಿ ಸಿಕ್ಸರ್ ಬಾರಿಸಿದ್ದಾರೆ. ಶಾ 47 ರನ್ ಗಳಿಸಿದ್ದು 50ರ ಹೊಸ್ತಿಲಲ್ಲಿದ್ದಾರೆ.

  • 10 Apr 2021 10:09 PM (IST)

    ಸ್ಪಿನ್ನರ್​ಗಳು ಕಮಾಲ್ ಮಾಡುವ ನಿರೀಕ್ಷೆ?

    ಪವರ್​ಪ್ಲೇನಲ್ಲಿ ಅದ್ಭುತ ಆಟವಾಡಿದ ಡೆಲ್ಲಿ ಆರಂಭಿಕ ಜೋಡಿ, 7ನೇ ಮತ್ತು 8ನೇ ಓವರ್​ನಲ್ಲಿ ಕೊಂಚ ನಿಧಾನಗತಿಯಲ್ಲಿ ಸಾಗಿದ್ದಾರೆ. ಜಡೇಜಾ, ಮೊಯೀನ್ ಅಲಿ ಎಸೆತಗಳನ್ನು ಜಾಗೃತರಾಗಿ ಎದುರಿಸಿದ್ದಾರೆ. ಡೆಲ್ಲಿ ತಂಡದ ಮೊತ್ತ 8 ಓವರ್​ಗೆ 75 ಆಗಿದೆ.

  • 10 Apr 2021 10:06 PM (IST)

    ಡೆಲ್ಲಿ ಕ್ಯಾಪಿಟಲ್ಸ್ 70/0 (7 ಓವರ್)

    ಡೆಲ್ಲಿ ತಂಡ ಚೆನ್ನೈ ಬೌಲರ್​ಗಳನ್ನು ಸುಸ್ತಾಗಿಸಿದ್ದಾರೆ. 7 ಓವರ್​ಗೆ 70 ರನ್ ದಾಖಲಿಸಿ ಸರಾಸರಿ 10 ರನ್ ಗತಿಯಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ. ಜಡೇಜಾ ಮೊದಲ ಓವರ್ ಎಸೆದಿದ್ದಾರೆ. ಚೆನ್ನೈ ಪರ ಸ್ಪಿನ್ನರ್​ಗಳು ಬೌಲಿಂಗ್ ಆರಂಭಿಸಿದ್ದಾರೆ. ಸ್ಪಿನ್ ಬೌಲರ್​ಗಳ ಆಟ ಡೆಲ್ಲಿಗೆ ಸವಾಲೊಡ್ಡುತ್ತಾ ಕಾದುನೋಡಬೇಕಿದೆ.

  • 10 Apr 2021 10:01 PM (IST)

    ಡೆಲ್ಲಿ ಕ್ಯಾಪಿಟಲ್ಸ್ 65/0 (6 ಓವರ್)

    ಅಮೋಘ ಆರಂಭ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ಓವರ್​ಗೆ 65 ರನ್ ದಾಖಲಿಸಿದೆ. ಒಂದೂ ವಿಕೆಟ್ ಕಳೆದುಕೊಳ್ಳದೆ ತಂಡಕ್ಕೆ ಗೆಲ್ಲುವ ಭರವಸೆ ಮೂಡಿಸಿದೆ. ಭದ್ರ ಅಡಿಪಾಯ ಹಾಕಿಕೊಟ್ಟಿದೆ. ಅರ್ಧಶತಕದ ಜೊತೆಯಾಟವನ್ನು ಧವನ್-ಶಾ ನೀಡಿದ್ದಾರೆ.

  • 10 Apr 2021 09:57 PM (IST)

    ಪೃಥ್ವಿ ಶಾ ಸಾಲು ಸಾಲು ಬೌಂಡರಿಗಳು

    ಡೆಲ್ಲಿ ಪರ ಶಾ ಸಾಲು ಸಾಲು ಬೌಂಡರಿ ಬಾರಿಸುತ್ತಿದ್ದಾರೆ. ಚೆನ್ನೈ ಬೌಲರ್​ಗಳು ದುಬಾರಿ ಎನಿಸುತ್ತಿದ್ದಾರೆ. ಪೃಥ್ವಿ 6 ಬೌಂಡರಿ, 1 ಸಿಕ್ಸರ್ ಸಹಿತ 17 ಬಾಲ್​ಗೆ 35 ರನ್ ಪೇರಿಸಿದ್ದಾರೆ. ಚೆನ್ನೈ ಪರ ಬೌಲರ್​ಗಳು 10ಕ್ಕೂ ಹೆಚ್ಚು ಎಕನಮಿಯಲ್ಲಿ ಬಾಲ್ ಮಾಡುತ್ತಿದ್ದಾರೆ.

  • 10 Apr 2021 09:54 PM (IST)

    ಡೆಲ್ಲಿ ಕ್ಯಾಪಿಟಲ್ಸ್ 58/0 (5 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ಓವರ್​ಗೆ ಭರ್ಜರಿ 58 ರನ್ ದಾಖಲಿಸಿದೆ. ಯಾವುದೇ ವಿಕೆಟ್ ನಷ್ಟವಿಲ್ಲದೆ ಆಟ ಮುಂದುವರಿಸಿದೆ. ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬೌಂಡರಿಗಳ ಸುರಿಮಳೆ ಸುರಿಸುತ್ತಿದ್ದಾರೆ. ಡೆಲ್ಲಿ ಗೆಲ್ಲಲು 90 ಬಾಲ್​ಗಳಲ್ಲಿ 131 ರನ್ ಬೇಕಾಗಿದೆ.

  • 10 Apr 2021 09:52 PM (IST)

    ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್

    ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಉತ್ತಮ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ಡೆಲ್ಲಿ ಪರ ಶಿಖರ್ ಧವನ್, ಪೃಥ್ವಿ ಶಾ ಜೊತೆಯಾಟ ಭದ್ರ ಅಡಿಪಾಯ ಹಾಕಿಕೊಡುತ್ತಿದೆ. ಶಾ 23 ರನ್​ಗಳಿಸಿದರೆ, ಧವನ್ 27 ರನ್ ಕಲೆಹಾಕಿ ಕ್ರೀಸ್​ನಲ್ಲಿದ್ದಾರೆ.

  • 10 Apr 2021 09:14 PM (IST)

    ಚೆನ್ನೈ ಸೂಪರ್ ಕಿಂಗ್ಸ್ 188/7 (20 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 20 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 188 ರನ್ ದಾಖಲಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 189 ರನ್ ಟಾರ್ಗೆಟ್ ನೀಡಿದ್ದಾರೆ. ಚೆನ್ನೈ ಪರ ಅಂತಿಮ ಓವರ್​ಗಳಲ್ಲಿ ಸಾಮ್ ಕುರ್ರನ್ ಹಾಗೂ ಜಡೇಜಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕುರ್ರನ್ 15 ಎಸೆತಗಳನ್ನು ಎದುರಿಸಿ 34 ರನ್ ದಾಖಲಿಸಿದ್ದಾರೆ.

  • 10 Apr 2021 09:08 PM (IST)

    ಚೆನ್ನೈ ಸೂಪರ್ ಕಿಂಗ್ಸ್ 178/6 (19 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 19ನೇ ಓವರ್​ನಲ್ಲಿ ಭರ್ಜರಿ ಆಟ ಆಡಿದ್ದಾರೆ. ಟಾಮ್ ಕುರ್ರನ್ ಎಸೆತವನ್ನು ಬೌಂಡರಿಗಟ್ಟಿದ್ದಾರೆ. ಈ ಮೂಲಕ ಚೆನ್ನೈ ಮೊತ್ತ 19 ಓವರ್​ಗೆ 178 ರನ್ ಆಗಿದೆ. 6 ವಿಕೆಟ್ ಕಳೆದುಕೊಂಡಿದೆ. ಇನ್ನೂ ಒಂದು ಓವರ್ ಬಾಕಿ ಇದ್ದು, ಚೆನ್ನೈ ಒಟ್ಟು ಮೊತ್ತ 180 ಗಡಿ ದಾಟುವುದು ಖಚಿತವಾಗಿದೆ.

  • 10 Apr 2021 09:06 PM (IST)

    ಕುರ್ರನ್ ಆಟ- ಸಿಕ್ಸ್ ಮೇಲೆ ಸಿಕ್ಸ್

    ಟಾಂ್ ಕುರ್ರನ್ ಎಸೆತಕ್ಕೆ ಸಾಮ್ ಕುರ್ರನ್ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ್ದಾರೆ. 18 ಓವರ್​ನಲ್ಲಿ 2 ಸಿಕ್ಸರ್, 2 ಬೌಂಡರಿ ಬಾರಿಸಿದ್ದಾರೆ. ತಂಡದ ಮೊತ್ತ 177-6 ಆಗಿದೆ.

  • 10 Apr 2021 09:03 PM (IST)

    ಚೆನ್ನೈ ಸೂಪರ್ ಕಿಂಗ್ಸ್ 155/6 (18 ಓವರ್)

    18 ಓವರ್ ಮುಕ್ತಾಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿದೆ. ಚೆನ್ನೈ ಪರ ಜಡೇಜಾ ಹಾಗೂ ಸಾಮ್ ಕುರ್ರನ್ ಆಟವಾಡುತ್ತಿದ್ದಾರೆ.

  • 10 Apr 2021 08:53 PM (IST)

    ಚೆನ್ನೈ ಸೂಪರ್ ಕಿಂಗ್ಸ್ 143/6 (16 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 150 ರನ್ ಗಡಿಯ ಹೊಸ್ತಿಲಲ್ಲಿದೆ. 16 ಓವರ್​ಗಳ ಬಳಿಕ ಚೆನ್ನೈ ಮೊತ್ತ 6 ವಿಕೆಟ್​ಗೆ 143 ಆಗಿದೆ. ರಾಯುಡು, ರೈನಾ, ಧೋನಿ ವಿಕೆಟ್ ನಷ್ಟವಾದ ಬಳಿಕ ರನ್ ಗಳಿಕೆಯ ವೇಗ ಕೊಂಚ ಕಡಿಮೆಯಾಗಿದೆ.

  • 10 Apr 2021 08:49 PM (IST)

    ಸೊನ್ನೆ ಸುತ್ತಿದ ನಾಯಕ ಧೋನಿ

    ರೈನಾ ಔಟಾದ ಬಳಿಕ ಕ್ರೀಸ್​ಗಿಳಿದ ಚೆನ್ನೈ ತಂಡದ ನಾಯಕ ಧೋನಿ ಕೂಡ ಔಟ್ ಆಗಿದ್ದಾರೆ. ರೈನಾ ಬಳಿಕ ಬಂದ ಧೋನಿ ಒಂದು ರನ್ ಕೂಡ ದಾಖಲಿಸದೆ ಸೊನ್ನೆ ಸುತ್ತಿ, ಬಂದಂತೆ ತೆರಳಿದ್ದಾರೆ.

  • 10 Apr 2021 08:48 PM (IST)

    ಅಬ್ಬರಿಸುತ್ತಿದ್ದ ರೈನಾ ರನೌಟ್

    ಚೆನ್ನೈ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ, ಅರ್ಧಶತಕದ ಕೊಡುಗೆ ನೀಡಿದ್ದ ಸುರೇಶ್ ರೈನಾ ಅವಸರದ ಓಟದ ಎಡವಟ್ಟಿಗೆ ಸಿಲುಕಿ ಔಟ್ ಆಗಿದ್ದಾರೆ. ಹೆಚ್ಚಿನ ಎರಡನೇ ಓಟ ಬೆನ್ನತ್ತಿದ ರೈನಾ ರನೌಟ್ ಆಗಿದ್ದಾರೆ. 36 ಬಾಲ್​ಗೆ 54 ರನ್ ನೀಡಿ ಔಟ್ ಆಗಿದ್ದಾರೆ. ಜಡೇಜಾಗೆ ಕಪ್ತಾನ ಧೋನಿ ಜೊತೆಯಾಗಿದ್ದಾರೆ.

  • 10 Apr 2021 08:45 PM (IST)

    ಚೆನ್ನೈ ಸೂಪರ್ ಕಿಂಗ್ಸ್ 136/4 (15 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 15 ಓವರ್​ಗಳ ಅಂತ್ಯಕ್ಕೆ 136 ರನ್ ಕೂಡಿಸಿದೆ. 4 ವಿಕೆಟ್ ಕಳೆದುಕೊಂಡರೂ ಚೇತರಿಸಿ ಆಟವಾಡಿದೆ.

  • 10 Apr 2021 08:38 PM (IST)

    ಚೆನ್ನೈ ಸೂಪರ್ ಕಿಂಗ್ಸ್ 124/4 (14 ಓವರ್)

    14 ಓವರ್​ಗಳ ಮುಕ್ತಾಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಕಳೆದುಕೊಂಡು 124 ರನ್ ಪೇರಿಸಿದ್ದಾರೆ. ಚೆನ್ನೈ ಪರ ರೈನಾ ಅಬ್ಬರದ ಆಟ ಆಡುತ್ತಿದ್ದಾರೆ. ರಾಯುಡು ಔಟ್ ಆದ ಬಳಿಕ, ರೈನಾಗೆ ರವೀಂದ್ರ ಜಡೇಜಾ ಜೊತೆಯಾಗಿದ್ದಾರೆ.

  • 10 Apr 2021 08:37 PM (IST)

    ರಾಯುಡು ಔಟ್

    ರೈನಾ ಜೊತೆಗೆ ಉತ್ತಮ ಜೊತೆಯಾಟ ಆಡುತ್ತಿದ್ದ ಅಂಬಟಿ ರಾಯುಡು ಸಿಕ್ಸರ್ ಹೊಡೆತಕ್ಕೆ ಕೈಹಾಕಿ, ಶಿಖರ್ ಧವನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರಾಯುಡು 2 ಸಿಕ್ಸ್, 1 ಫೋರ್ ಸಹಿತ 16 ಬಾಲ್​ಗೆ 23 ರನ್ ಪೇರಿಸಿ ನಿರ್ಗಮಿಸಿದ್ದಾರೆ.

  • 10 Apr 2021 08:35 PM (IST)

    ಚೆನ್ನೈ ಸೂಪರ್ ಕಿಂಗ್ಸ್ 117/3 (13 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 13 ಓವರ್ ಅಂತ್ಯಕ್ಕೆ 117 ರನ್ ಕೂಡಿಸಿದೆ. ರೈನಾ ಹಾಗೂ ರಾಯುಡು ಉತ್ತಮ ಆಟವಾಡುತ್ತಿದ್ದಾರೆ.

  • 10 Apr 2021 08:32 PM (IST)

    ಸಿಕ್ಸರ್! ರೈನಾ ಅರ್ಧಶತಕ

    ಚೆನ್ನೈ ಪರ ಅದ್ಭುತ ಆಟವಾಡುತ್ತಿರುವ ಸುರೇಶ್ ರೈನಾ ಅರ್ಧ ಶತಕ ಪೂರೈಸಿದ್ದಾರೆ. ಇದು ಸೀಸನ್​ನ ಮೊದಲ ಅರ್ಧ ಶತಕವಾಗಿದೆ. ಬೌಂಡರಿ-ಸಿಕ್ಸರ್​ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೈನಾ, 32 ಎಸೆತಗಳಲ್ಲಿ 50 ರನ್ ದಾಖಲಿಸಿದ್ದಾರೆ. ರಾಯುಡು-ರೈನಾ ಜೋಡಿ ಕೂಡ ಅರ್ಧಶತಕ ಪೂರೈಸಿದೆ.

     

  • 10 Apr 2021 08:26 PM (IST)

    ಚೆನ್ನೈ ಸೂಪರ್ ಕಿಂಗ್ಸ್ 98/3 (12 ಓವರ್)

    ಚೆನ್ನೈ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ರೈನಾ-ರಾಯುಡು, ಆರಂಭಿಕ ಆಘಾತದಿಂದ ತಂಡವನ್ನು ಹೊರತಂದಿದ್ದಾರೆ. ಸ್ಪಿನ್ ಎಸೆತಗಳನ್ನು ಬಿಟ್ಟೂಬಿಡದೆ ಫೋರ್-ಸಿಕ್ಸರ್​ಗೆ ಅಟ್ಟಿದ್ದಾರೆ. ಈ ಮೂಲಕ ತಂಡದ ಮೊತ್ತ 12 ಓವರ್​ಗಳಲ್ಲಿ 98 ಆಗಿದೆ.

  • 10 Apr 2021 08:22 PM (IST)

    ರೈನಾ ಭರ್ಜರಿ ಬ್ಯಾಟಿಂಗ್

    ರೈನಾ ಭರ್ಜರಿ ಫಾರ್ಮ್​ನಲ್ಲಿ ಇರುವಂತೆ ಕಾಣುತ್ತಿದೆ. ವೇಗದ ಆಟವಾಡುತ್ತಿರುವ ಅವರು ಫೋರ್ಸ-ಸಿಕ್ಸ್ ಸುರಿಮಳೆ ಸುರಿಸುತ್ತಿದ್ದಾರೆ. ಚೆನ್ನೈ ಪರ 2 ಬೌಂಡರಿ, 3 ಸಿಕ್ಸರ್ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

  • 10 Apr 2021 08:21 PM (IST)

    ಅಶ್ವಿನ್ ಬಾಲ್​ಗೆ ಬೌಂಡರಿ-ಸಿಕ್ಸರ್

    ಅಶ್ವಿನ್ ಎಸೆತವನ್ನು ಚೆನ್ನೈ ಸೂಪರ್ ಕಿಂಗ್ಸ್​ ದಾಂಡಿಗರು ಅಟ್ಟಾಡಿಸುತ್ತಿದ್ದಾರೆ. ಅಶ್ವಿನ್ ಡೆಲ್ಲಿಗೆ ಹೊರೆಯಾಗಿ ಕಂಡುಬಂದಿದ್ದಾರೆ. 4 ಓವರ್​ಗಳನ್ನು ಎಸೆದ ಅಶ್ವಿನ್ 11.80ರ ಎಕನಮಿಯಲ್ಲಿ 47 ರನ್ ಬಿಟ್ಟುಕೊಟ್ಟಿದ್ದಾರೆ. 1 ವಿಕೆಟ್ ಕಬಳಿಸಿದ್ದಾರೆ.

  • 10 Apr 2021 08:18 PM (IST)

    ಚೆನ್ನೈ ಸೂಪರ್ ಕಿಂಗ್ಸ್ 71/3 (10 ಓವರ್)

    ಚೆನ್ನೈ ಪರ ದಾಂಡಿಗರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. 3 ವಿಕೆಟ್ ಕಳೆದುಕೊಂಡರೂ ಅಬ್ಬರದ ಆಟಕ್ಕೆ ಮುಂದಾಗಿದ್ದಾರೆ.

  • 10 Apr 2021 08:15 PM (IST)

    ಚೆನ್ನೈ ಸೂಪರ್ ಕಿಂಗ್ಸ್ 66/3 (9 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 9 ಓವರ್​ಗೆ 3 ವಿಕೆಟ್ ಕಳೆದು 66 ರನ್ ಕಲೆಹಾಕಿದೆ. ಚೆನ್ನೈ ಪರ ರೈನಾ ಜೊತೆಗೆ ಅಂಬಟಿ ರಾಯುಡು ಆಡುತ್ತಿದ್ದಾರೆ. ಅಶ್ವಿನ್ ಡೆಲ್ಲಿಗೆ ಭಾರಿ ದುಬಾರಿಯಾಗುತ್ತಿದ್ದಾರೆ. ಅಶ್ವಿನ್ ಎಸೆತವನ್ನು ಚೆನ್ನೈ ದಾಂಡಿಗರು ಬೌಂಡರಿ-ಸಿಕ್ಸರ್​ಗೆ ಅಟ್ಟುತ್ತಿದ್ದಾರೆ.

  • 10 Apr 2021 08:12 PM (IST)

    ಸಿಕ್ಸ್ ಮೇಲೆ ಸಿಕ್ಸ್ ಬಾರಿಸಿ ಔಟ್ ಆದ ಮೊಯೀನ್ ಅಲಿ

    ರವಿಚಂದ್ರನ್ ಅಶ್ವಿನ್ ಎಸೆದ ಮೂರನೇ ಓವರ್​ನಲ್ಲಿ ಚೆನ್ನೈ ಬ್ಯಾಟ್ಸ್​ಮನ್ ಮೊಯೀನ್ ಅಲಿ ಬೆನ್ನುಬೆನ್ನಿಗೆ 2 ಸಿಕ್ಸರ್ ಬಾರಿಸಿದ್ದಾರೆ. ಮೂರನೇ ಸಿಕ್ಸರ್​ಗೆ ರಿವರ್ಸ್ ಸ್ವೀಪ್​ಗೆ ಬ್ಯಾಟ್ ಬೀಸಿದ ಮೊಯೀನ್ ಅಲಿ ಶಾಟ್ ಪರಿಪೂರ್ಣ ಯಶಸ್ವಿಯಾಗಲು ವಿಫಲವಾಗಿದೆ. ಮೂರನೇ ಹೊಡೆತವನ್ನು ಶಿಖರ್ ಧವನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಮೊಯೀನ್ ಅಲಿ 24 ಬಾಲ್​ಗೆ 4 ಬೌಂಡರಿ, 2 ಸಿಕ್ಸರ್ ಸಹಿತ 36 ರನ್ ಕಲೆಹಾಕಿ ನಿರ್ಗಮಿಸಿದ್ದಾರೆ.

  • 10 Apr 2021 08:09 PM (IST)

    ಚೆನ್ನೈ ಸೂಪರ್ ಕಿಂಗ್ಸ್ 48/2 (8 ಓವರ್)

    8ನೇ ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ಕಳೆದುಕೊಂಡು, 48 ರನ್ ಗಳಿಸಿದ್ದಾರೆ.

  • 10 Apr 2021 08:04 PM (IST)

    ಚೆನ್ನೈ ಸೂಪರ್ ಕಿಂಗ್ಸ್ 43/2 (7 ಓವರ್)

    ಡೆಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್​ನ 2ನೇ ಓವರ್​ನಲ್ಲಿ ಮತ್ತೆ 2 ಬೌಂಡರಿ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಚೆನ್ನೈ 7 ಓವರ್ ಅಂತ್ಯಕ್ಕೆ 43 ರನ್ ಕೂಡಿಸಿದ್ದಾರೆ. ಅಶ್ವಿನ್ ಡೆಲ್ಲಿಗೆ ಕೊಂಚ ದುಬಾರಿ ಎನಿಸುತ್ತಿದ್ದಾರೆ.

  • 10 Apr 2021 08:01 PM (IST)

    ಚೆನ್ನೈ ಸೂಪರ್ ಕಿಂಗ್ಸ್ 33/2 (6 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 6 ಓವರ್​ಗೆ 33 ರನ್ ಕಲೆಹಾಕಿದ್ದಾರೆ. 2 ಮುಖ್ಯ ವಿಕೆಟ್ ಕಳೆದುಕೊಂಡರೂ ನಂತರ ಬಂದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

  • 10 Apr 2021 07:58 PM (IST)

    ಚೆನ್ನೈ ಸೂಪರ್ ಕಿಂಗ್ಸ್ 30/2 (5 ಓವರ್)

    ಚೆನ್ನೈ ತಂಡ 5 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 30 ರನ್ ಬಾರಿಸಿದೆ. ಚೆನ್ನೈ ಪರ ಮೊಯೀನ್ ಅಲಿ ಹಾಗೂ ಸುರೇಶ್ ರೈನಾ ಬಿರುಸಿನ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ. ಡೆಲ್ಲಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಸೆದ 5ನೇ ಓವರ್​ನಲ್ಲಿ ಎರಡು ಬೌಂಡರಿ ಬಿಟ್ಟುಕೊಟ್ಟಿದ್ದಾರೆ.

  • 10 Apr 2021 07:53 PM (IST)

    ಚೆನ್ನೈ ಸೂಪರ್ ಕಿಂಗ್ಸ್ 20/2 (4 ಓವರ್)

    ಚೆನ್ನೈನ 2 ವಿಕೆಟ್​ಗಳು ಬೆನ್ನುಬೆನ್ನಿಗೆ ಪತನವಾದ ಬಳಿಕ, ಕೊಂಚ ಸುಧಾರಿಸಿಕೊಂಡು ಬ್ಯಾಟಿಂಗ್ ಮಾಡುತ್ತಿದೆ. 4ನೇ ಓವರ್​ನಲ್ಲಿ ಚೆನ್ನೈ ದಾಂಡಿಗ ಮೊಯೀನ್ ಅಲಿ 2 ಬೌಂಡರಿ ಬಾರಿಸಿದ್ದಾರೆ. ತಂಡದ ಮೊತ್ತ 20ಕ್ಕೆ ಕೊಂಡೊಯ್ದಿದ್ದಾರೆ.

  • 10 Apr 2021 07:48 PM (IST)

    ಚೆನ್ನೈ ಸೂಪರ್ ಕಿಂಗ್ಸ್ 11/2 (3 ಓವರ್)

    ಚೆನ್ನೈ ತಂಡ 3 ಓವರ್​ಗಳ ಅಂತ್ಯಂಕೆ ಪ್ರಮುಖ 2 ವಿಕೆಟ್ ಕೈಚೆಲ್ಲಿದೆ. 11 ರನ್​ಗಳಿಸಿ ಆಟ ಮುಂದುವರಿಸಿದೆ. ಕ್ರಿಸ್ ವೋಕ್ಸ್, ಆವೇಶ್ ಖಾನ್ ಡೆಲ್ಲಿ ಪರ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ. ರೈನಾ-ಮೊಯೀನ್ ಅಲಿ ಆಟ ಮುಂದುವರಿಸಿದ್ದಾರೆ.

  • 10 Apr 2021 07:46 PM (IST)

    ಮತ್ತೊಂದು ಆಘಾತ; ಗಾಯಕ್ವಾಡ್ ಪೆವಿಲಿಯನ್ ಕಡೆಗೆ

    ಒಂದು ಆಘಾತ ಜೀರ್ಣವಾಗುವ ಮುನ್ನವೇ ಚೆನ್ನೈ ಮತ್ತೊಂದು ಏಟು ತಿಂದಿದೆ. ಸಿಎಸ್​ಕೆಯ ಎರಡನೇ ವಿಕೆಟ್ ಕಳೆದುಕೊಂಡಿದೆ. ರುತುರಾಜ್ ಗಾಯಕ್ವಾಡ್ 5 ರನ್​ಗಳಿಸಿ ನಿರ್ಗಮಿಸಿದ್ದಾರೆ. ಡು ಪ್ಲೆಸಿಸ್, ಗಾಯಕ್ವಾಡ್ ಬಳಿಕ ರೈನಾ ಕ್ರೀಸ್​ಗಿಳಿದಿದ್ದಾರೆ.

  • 10 Apr 2021 07:42 PM (IST)

    ಚೆನ್ನೈ ಮೊದಲ ವಿಕೆಟ್ ಅವೇಶ್ ಖಾನ್​ ಪಾಲು

    ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಘಾತ ಎದುರಿಸಿದೆ. ಫಾಫ್ ಡು ಪ್ಲೆಸಿಸ್ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಮೊದಲ ವಿಕೆಟ್ ಬಳಿಕ, ಮೊಯೀನ್ ಅಲಿ ಒನ್ ಡೌನ್​ಗೆ ಕಣಕ್ಕಿಳಿದಿದ್ದಾರೆ. ಎರಡು ಓವರ್ ಅಂತ್ಯಕ್ಕೆ ಚೆನ್ನೈ ತಂಡ 1 ಮುಖ್ಯ ವಿಕೆಟ್ ಕಳೆದುಕೊಂಡು 7 ರನ್ ಗಳಿಸಿದೆ.

  • 10 Apr 2021 07:36 PM (IST)

    ಚೆನ್ನೈ ಸೂಪರ್ ಕಿಂಗ್ಸ್ 5/0 (1 ಓವರ್)

    ಮೊದಲ ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 1 ಬೌಂಡರಿ ಸಹಿತ 5 ರನ್ ಕಲೆಹಾಕಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ವೋಕ್ಸ್ ಮೊದಲ ಓವರ್ ಪೂರೈಸಿದ್ದಾರೆ. ಎರಡನೇ ಓವರ್​ಗೆ ಗಾಯಕ್ವಾಡ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 10 Apr 2021 07:35 PM (IST)

    ಐಪಿಎಲ್ 2021 ವಿಶೇಷ ಮಾಹಿತಿಗೆ ಟಿವಿ9 ಕನ್ನಡ ಡಿಜಿಟಲ್ ಹಿಂಬಾಲಿಸಿ

  • 10 Apr 2021 07:31 PM (IST)

    ಫಾಫ್ ಡು ಪ್ಲೆಸಿಸ್-ರುತುರಾಜ್ ಗಾಯಕ್ವಾಡ್ ಓಪನಿಂಗ್

    ಚೆನ್ನೈ ಸೂಪರ್ ಕಿಂಗ್ಸ್ ಪರ ಫಾಫ್ ಡು ಪ್ಲೆಸಿಸ್-ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ವೇಗಿ ವೋಕ್ಸ್ ಬೌಲಿಂಗ್ ಆರಂಭಿಸಿದ್ದಾರೆ.

  • 10 Apr 2021 07:29 PM (IST)

    ಅಜಿಂಕ್ಯಾ ರಹಾನೆಗೆ ಇದು 150ನೇ ಪಂದ್ಯ

    ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್​ಮನ್, ಭಾರತದ ಭರವಸೆಯ ಆಟಗಾರ ಅಜಿಂಕ್ಯಾ ರಹಾನೆಗೆ ಇದು 150ನೇ ಐಪಿಎಲ್ ಪಂಡ್ಯವಾಗಿದೆ. ಐಪಿಎಲ್​ನಲ್ಲಿ ಅವರು 31.72 ಸರಾಸರಿಯಲ್ಲಿ ಇದುವರೆಗೆ 3933 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಹಾಗೂ 28 ಅರ್ಧಶತಕವೂ ಸೇರಿದೆ.

  • 10 Apr 2021 07:13 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಟಾಮ್ ಕುರ್ರನ್, ಅಮಿತ್ ಮಿಶ್ರಾ, ಅವೇಶ್ ಖಾನ್

  • 10 Apr 2021 07:12 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಚೆನ್ನೈ ಪ್ಲೇಯಿಂಗ್ ಇಲೆವೆನ್: ರುತುರಾಜ್ ಗೈಕ್ವಾಡ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಎಂ.ಎಸ್.ಧೋನಿ (ನಾಯಕ/ ವಿಕೆಟ್ ಕೀಪರ್), ಮೊಯೀನ್ ಅಲಿ, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್

  • 10 Apr 2021 07:03 PM (IST)

    ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯಾಟ ಇಂದು ನಡೆಯಲಿದೆ. ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲಿದೆ.

  • 10 Apr 2021 06:51 PM (IST)

    ಯಂಗ್ ಕ್ಯಾಪ್ಟನ್ ರಿಷಭ್ ಪಂತ್

    ಯಂಗ್ & ಎನರ್ಜಿಟಿಕ್ ಕ್ಯಾಪ್ಟನ್ ರಿಷಭ್ ಪಂತ್ ಮೊದಲ ಬಾರಿಗೆ ಐಪಿಎಲ್ ತಂಡದ ನಾಯಕತ್ವ ವಹಿಸಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲೇ ಭಾರತ ಕಂಡ ಯಶಸ್ವಿ ನಾಯಕ ಧೋನಿ ತಂಡದ ವಿರುದ್ಧ ಆಡಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟರ್ ಹ್ಯಾಂಡಲ್ ಹಂಚಿಕೊಂಡ ವಿಶೇಷ ಚಿತ್ರವಿದು.

  • 10 Apr 2021 06:45 PM (IST)

    ಧೋನಿ ಪಡೆ ಗೆಲ್ಲೋಕೆ ರೆಡಿ

    ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುವ ಮುನ್ನ ಹೀಗೆ ತಯಾರಿ. ಮೂರು ಬಾರಿ ಚಾಂಪಿಯನ್ ಆಗಿರೋ ಧೋನಿ ಪಡೆ, ಈ ಬಾರಿಯ ಐಪಿಎಲ್​ಗೆ ಶುಭಾರಂಭ ಮಾಡುವ ತವಕದಲ್ಲಿದೆ.

  • 10 Apr 2021 06:40 PM (IST)

    ಡೆಲ್ಲಿ ದಾಂಡಿಗರ ಬ್ಯಾಟಿಂಗ್ ಡ್ರಿಲ್

    ಹಿರಿಯ, ಅನುಭವಿ ಆಟಗಾರರ ಚೆನ್ನೈ ಪಡೆಯನ್ನು ಹಿಮ್ಮೆಟ್ಟಿಸಲು ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ತಯಾರಿ. ಇಂದಿನ ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಡ್ರಿಲ್ ಮಾಡುತ್ತಿದ್ದ ಡೆಲ್ಲಿ ದಾಂಡಿಗರು ಕಂಡುಬಂದಿದ್ದು ಹೀಗೆ..

  • Published On - 11:13 pm, Sat, 10 April 21