ಯುವ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ (D Gukesh) ಚದುರಂಗ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚಿನ FIDE ಶ್ರೇಯಾಂಕದಲ್ಲಿ ಎಂಟನೇ ಸ್ಥಾನವನ್ನು ಅಲಂಕರಿಸಿರುವ 17 ವರ್ಷದ ಗುಕೇಶ್ ಭಾರತದ ಚೆಸ್ ಆಟಗಾರರ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಈ ಮೂಲಕ ಸುಮಾರು 37 ವರ್ಷಗಳಿಂದ ಭಾರತದ ಚೆಸ್ ಲೋಕವನ್ನು ಆಳಿದ್ದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ( Viswanathan Anand) ಅವರನ್ನು ಗುಕೇಶ್ ಹಿಂದಿಕ್ಕಿದ್ದಾರೆ. ಪ್ರಸ್ತುತ, FIDE ರ್ಯಾಂಕಿಂಗ್ ಪ್ರಕಾರ, ಗುಕೇಶ್ 2,758 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದು, ವಿಶ್ವನಾಥನ್ ಆನಂದ್ 2,754 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ವಾಸ್ತವವಾಗಿ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಕಳೆದ 37 ವರ್ಷಗಳಿಂದ ಅಂದರೆ ಜುಲೈ 1986 ರಿಂದ ಭಾರತದ ನಂಬರ್ ಒನ್ ಚೆಸ್ ಆಟಗಾರನಾಗಿ ದಾಖಲೆ ಬರೆದಿದ್ದರು. ಆದರೀಗ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ದಾಖಲೆಯನ್ನು ಮುರಿದ ಗುಕೇಶ್, ಭಾರತ ಚೆಸ್ ಲೋಕದಲ್ಲಿ ಹೊಸ ಶರ ಬರೆದಿದ್ದಾರೆ. ಕಳೆದ ಆಗಸ್ಟ್ 1ರಿಂದ ಶ್ರೇಯಾಂಕದಲ್ಲಿ ಮೂರು ಸ್ಥಾನಗಳನ್ನು ಸುಧಾರಿಸಿಕೊಂಡಿರುವ ಗುಕೇಶ್ ಬಾಕುದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ FIDE ವಿಶ್ವಕಪ್‌ನ ಕ್ವಾರ್ಟರ್-ಫೈನಲ್ನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಸೋಲನುಭವಿಸಿದ್ದರು.
It’s official! Gukesh is India’s #1 in the #FIDErating list!
🔥 The 17-year-old prodigy makes history by overtaking the five-time World Champion Vishy Anand and terminating his uninterrupted 37-year reign as India’s top-rated player!
📷 Stev Bonhage pic.twitter.com/paDli9hslX
— International Chess Federation (@FIDE_chess) September 1, 2023
ಈ ಪಟ್ಟಿಯಲ್ಲಿ ಇತ್ತೀಚೆಗಷ್ಟೇ ಚೆಸ್ ವಿಶ್ವಕಪ್ ಗೆದ್ದಿರುವ ಕಾರ್ಲ್‌ಸನ್ 2,839 ಫಿಡ್ ಪಾಯಿಂಟ್ಸ್ಗಳೊಂದಿಗೆ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್, 2023ರ ಚೆಸ್ ವಿಶ್ವಕಪ್ ಫೈನಲಿಸ್ಟ್ ಆರ್. ಪ್ರಜ್ಞಾನಂದ 2,727 ಅಂಕಗಳೊಂದಿಗೆ 19 ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಗುಕೇಶ್ ಮತ್ತು ಆನಂದ್ ನಂತರ ಭಾರತದ ಮೂರನೇ ಅಗ್ರ ಚೆಸ್ ಆಟಗಾರನೆನಿಸಿಕೊಂಡಿದ್ದಾರೆ.
ಈ ಮೂವರಲ್ಲದೆ ವಿದಿತ್ ಸಂತೋಷ್ (27) ಮತ್ತು ಅರ್ಜುನ್ ಇರಿಗೈಸಿ (29) ಅಗ್ರ-30 ರೊಳಗೆ ಸ್ಥಾನ ಪಡೆದಿದ್ದಾರೆ. ಮತ್ತೋರ್ವ ಹಿರಿಯ ಚೆಸ್ ಆಟಗಾರ ಪೆಂಡ್ಯಾಲ ಹರಿಕೃಷ್ಣ 31ನೇ ರ್ಯಾಂಕ್ ಗಳಿಸಿದ್ದು, ಮಹಿಳೆಯರ ಪಟ್ಟಿಯಲ್ಲಿ ಭಾರತದ ಚೆಸ್ ಆಟಗಾರ್ತಿ ಕೊನೇರು ಹಂಪಿ 2,550 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಮುಂಬರುವ ಏಷ್ಯನ್ ಗೇಮ್ಸ್‌ಗೆ ಭಾರತೀಯ ತಂಡದ ಭಾಗವಾಗಿ ಆಯ್ಕೆಯಾಗಿರುವ ಗುಕೇಶ್ ಮತ್ತು ಪ್ರಜ್ಞಾನಂದ ಅವರು ಕೋಲ್ಕತ್ತಾದಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಆ ನಂತರ ಸೆಪ್ಟೆಂಬರ್ 5 ರಿಂದ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ