ಕಾರ್ಲ್ಸನ್ ಯುಗದ ಬಳಿಕ ಹೊಸ ಚೆಸ್ ಮಹಾಸಮರ: ವಿಶ್ವ ಕಿರೀಟಕ್ಕಾಗಿ ಗುಕೇಶ್‌ಗೆ ಸಿಂಡರೋವ್ ಸವಾಲು

ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಹಾಲಿ ಚಾಂಪಿಯನ್ ಗುಕೇಶ್ ಮತ್ತು ಸಿಂಡರೋವ್ ಮುಖಾಮುಖಿಯಾಗಲಿದ್ದಾರೆ. ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಆಟಗಾರರ ನಡುವಿನ ಈ ಪ್ರಶಸ್ತಿ ಹಣಾಹಣಿ ನವೆಂಬರ್ 24 ರಿಂದ ಆರಂಭವಾಗಲಿದೆ. 23.3 ಕೋಟಿ ಬಹುಮಾನದ ಈ ಪಂದ್ಯಾವಳಿಯ ನೇರ ಪ್ರಸಾರವನ್ನು FIDE ವೆಬ್‌ಸೈಟ್ ಹಾಗೂ YouTube ನಲ್ಲಿ ವೀಕ್ಷಿಸಬಹುದು. ಗುಕೇಶ್ ತಮ್ಮ ಪಟ್ಟ ಉಳಿಸಿಕೊಳ್ಳಲು ಸಿದ್ಧರಾದರೆ, ಸಿಂಡರೋವ್ ಮೊದಲ ಬಾರಿ ಚಾಂಪಿಯನ್ ಆಗುವ ಕನಸಿನಲ್ಲಿದ್ದಾರೆ.

ಕಾರ್ಲ್ಸನ್ ಯುಗದ ಬಳಿಕ ಹೊಸ ಚೆಸ್ ಮಹಾಸಮರ: ವಿಶ್ವ ಕಿರೀಟಕ್ಕಾಗಿ ಗುಕೇಶ್‌ಗೆ ಸಿಂಡರೋವ್ ಸವಾಲು
Gukesh Vs Sindarov

Updated on: Nov 21, 2026 | 4:28 PM

ಚೆಸ್ ಜಗತ್ತಿನ ಕಣ್ಣು ಈಗ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ನಗರದ ಮೇಲೆ ನೆಟ್ಟಿದೆ. ಭಾರತದ ಯುವ ಚೆಸ್ ತಾರೆ, ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಮತ್ತು ಉಜ್ಬೇಕಿಸ್ತಾನದ ಪ್ರತಿಭಾವಂತ ಗ್ರ್ಯಾಂಡ್‌ಮಾಸ್ಟರ್ ಜಾವೋಖಿರ್ ಸಿಂಡರೋವ್ ನಡುವೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ರೋಚಕ ಹಣಾಹಣಿ ನಡೆಯಲಿದೆ. ಒಂದೆಡೆ ತನ್ನ ವಿಶ್ವ ಕಿರೀಟ ಉಳಿಸಿಕೊಳ್ಳಲು ಸಜ್ಜಾಗಿರುವ ಭಾರತದ ಗುಕೇಶ್. ಮತ್ತೊಂದೆಡೆ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಕನಸು ಹೊತ್ತಿರುವ ಸಿಂಡರೋವ್. ವಿಶೇಷವೆಂದರೆ, ಇಬ್ಬರೂ ಪಂದ್ಯ ಆರಂಭವಾಗುವ ವೇಳೆಗೆ ಕೇವಲ 20 ವರ್ಷದವರಾಗಿರುತ್ತಾರೆ. ಇದು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಆಟಗಾರರ ನಡುವಿನ ಪ್ರಶಸ್ತಿ ಹಣಾಹಣಿಯಾಗಲಿದೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಸಂಪೂರ್ಣ ಮಾಹಿತಿ

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ಯಾವಾಗ, ಎಲ್ಲಿ ಆರಂಭವಾಗಲಿದೆ?

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ನವೆಂಬರ್ 24 ರಂದು ಫೊಂಡೇಶನ್ ಮಾರ್ಟಿನ್ ಬೋಡ್ಮರ್, ಕೊಲೊನಿ, ಜಿನೀವಾ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆರಂಭವಾಗಲಿದೆ.

Loading...

ಭಾರತದಲ್ಲಿ ಪಂದ್ಯ ಆರಂಭವಾಗುವ ಸಮಯ ಎಷ್ಟು?

ಭಾರತೀಯ ಚೆಸ್ ಅಭಿಮಾನಿಗಳು ಪ್ರತಿದಿನ ಸಂಜೆ 7.30ರಿಂದ ಪಂದ್ಯವನ್ನು ವೀಕ್ಷಿಸಬಹುದು.

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ ಅನ್ನು ಎಲ್ಲಿ ವೀಕ್ಷಿಸಬಹುದು?

ವಿಶ್ವ ಚೆಸ್ ಚಾಂಪಿಯನ್‌ಶಿಪ್​ನ ನೇರ ಪ್ರಸಾರ FIDE ಅಧಿಕೃತ ವೆಬ್‌ಸೈಟ್ ಮತ್ತು YouTube ಚಾನೆಲ್ ಲಭ್ಯವಿರಲಿದೆ.

ವಿಶ್ವ ಚೆಸ್ ಚಾಂಪಿಯನ್‌ಶಿಪ್​ನ ಒಟ್ಟು ಬಹುಮಾನ ಮೊತ್ತ ಎಷ್ಟು?

ಒಟ್ಟು ಬಹುಮಾನ ಮೊತ್ತ ಒಟ್ಟು ಬಹುಮಾನ ಮೊತ್ತ 23.37 ಕೋಟಿ ರೂ.

ಪಂದ್ಯ ಹೇಗೆ ನಡೆಯಲಿದೆ? ನಿಯಮಗಳೇನು?

  • ಈ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ 14 ಕ್ಲಾಸಿಕಲ್ ಪಂದ್ಯಗಳು ನಡೆಯಲಿವೆ.
  • ಗೆಲುವು: 1 ಪಾಯಿಂಟ್.
  • ಡ್ರಾ: ಅರ್ಧ ಪಾಯಿಂಟ್.
  • ಸೋಲು: 0 ಪಾಯಿಂಟ್.
  • ಮೊದಲು 7.5 ಪಾಯಿಂಟ್ ತಲುಪುವ ಆಟಗಾರ ವಿಶ್ವ ಚಾಂಪಿಯನ್.
  • 14 ಪಂದ್ಯಗಳ ಬಳಿಕ ಇಬ್ಬರೂ 7-7ರಲ್ಲಿ ಸಮಬಲ ಸಾಧಿಸಿದರೆ ಡಿಸೆಂಬರ್ 12ರಂದು ಟೈಬ್ರೇಕ್ ನಡೆಯಲಿದೆ.

ವಿಶ್ವ ಚಾಂಪಿಯನ್ ಗುಕೇಶ್ ಯಾರು?

ಭಾರತೀಯ ಚೆಸ್ ಜಗತ್ತಿನ ಹೊಸ ತಾರೆ ಡಿ. ಗುಕೇಶ್. 2006ರಲ್ಲಿ ಜನಿಸಿದ ಅವರು ಚಿಕ್ಕ ವಯಸ್ಸಿನಲ್ಲೇ ಚೆಸ್‌ನಲ್ಲಿ ಅದ್ಭುತ ಪ್ರತಿಭೆ ತೋರಿದ್ದರು. 2024ರಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿದ್ದರು. ಆ ಮೂಲಕ ತಮ್ಮ 18 ವರ್ಷ 6 ತಿಂಗಳ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ, ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಿರ್ವಿವಾದ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮೊದಲು 2024ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಗೆದ್ದು ವಿಶ್ವ ಪ್ರಶಸ್ತಿ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು. ಈಗ ಮೊದಲ ಬಾರಿಗೆ ತಮ್ಮ ವಿಶ್ವ ಕಿರೀಟವನ್ನು ಉಳಿಸಿಕೊಳ್ಳುವ ಸವಾಲು ಗುಕೇಶ್ ಮುಂದಿದೆ.

ಜಾವೋಖಿರ್ ಸಿಂಡರೋವ್ ಯಾರು?

ಉಜ್ಬೇಕಿಸ್ತಾನದ ಯುವ ಗ್ರ್ಯಾಂಡ್‌ಮಾಸ್ಟರ್ ಜಾವೋಖಿರ್ ಸಿಂಡರೋವ್ ಈಗ ವಿಶ್ವ ಚೆಸ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರತಿಭೆ. 2025ರ FIDE ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿರುವ ಅವರು 2026ರ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲೂ ಪ್ರಶಸ್ತಿ ಗೆದಿದ್ದಾರೆ. ಅಲ್ಲದೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಉಜ್ಬೇಕಿಸ್ತಾನದ ಮೊದಲ ಆಟಗಾರನೆಂಬ ಹೆಗ್ಗಳಿಕೆಯೂ ಅವರದ್ದು. ವಿಶೇಷವೆಂದರೆ, ವಿಶ್ವಕಪ್ ಗೆಲುವಿನ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಸಿಂಡರೋವ್, ಕ್ಯಾಂಡಿಡೇಟ್ಸ್ ಟೂರ್ನಿಯಲ್ಲೂ ಪ್ರಾಬಲ್ಯ ಮೆರೆದಿದ್ದಾರೆ. ಈಗ ವಿಶ್ವದ ಅತ್ಯುನ್ನತ ಚೆಸ್ ಪಟ್ಟಕ್ಕಾಗಿ ಗುಕೇಶ್ ಎದುರು ಸೆಣಸಲಿದ್ದಾರೆ.

ಕಾರ್ಲ್ಸನ್ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯಲು ಕಾರಣವೇನು?

ಚೆಸ್ ಜಗತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಹೆಸರು ಬಹಳ ದೊಡ್ಡದು. ನಾರ್ವೆಯ ಈ ಆಟಗಾರ 2013ರಿಂದ 2023ರವರೆಗೆ ವಿಶ್ವ ಚಾಂಪಿಯನ್ ಆಗಿದ್ದರು. ಆದರೆ 2021ರಲ್ಲಿ ಐದನೇ ಬಾರಿ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಂಡ ಬಳಿಕ, 2023ರಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮತ್ತೆ ಪಂದ್ಯವಾಡುವುದಿಲ್ಲ ಎಂದು ಘೋಷಿಸಿದರು. ಇದಕ್ಕೆ ಕಾರಣಗಳು

  • ಸತತವಾಗಿ ವಿಶ್ವ ಪ್ರಶಸ್ತಿ ಪಂದ್ಯಗಳನ್ನು ಆಡುವುದರಲ್ಲಿ ಆಸಕ್ತಿ ಕಡಿಮೆಯಾಗಿತ್ತು.
  • ಮತ್ತೊಂದು ಪ್ರಶಸ್ತಿ ಪಂದ್ಯ ಆಡುವ ಪ್ರೇರಣೆ ಇಲ್ಲ ಎಂದು ಹೇಳಿದ್ದರು.
  • ಚಾಂಪಿಯನ್‌ಶಿಪ್‌ನ ಸಾಂಪ್ರದಾಯಿಕ ಸ್ವರೂಪದ ಬಗ್ಗೆಯೂ ಅವರಿಗೆ ಕೆಲವು ಅಸಮಾಧಾನಗಳಿದ್ದವು.
  • ರ‍್ಯಾಪಿಡ್ ಮತ್ತು ಬ್ಲಿಟ್ಜ್ ಮಾದರಿಯ ಚೆಸ್‌ನತ್ತ ಹೆಚ್ಚಿನ ಆಸಕ್ತಿ ತೋರಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us