ಚೊಚ್ಚಲ ಟೆಸ್ಟ್ನಲ್ಲೇ ದ್ವಿಶತಕ ಬಾರಿಸಿ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡ ಡೆವನ್ ಕಾನ್ವೇ
ಸಾಮಾನ್ಯವಾಗಿ ಕ್ರಿಕೆಟ್ ಆಡುವ ಪ್ರತಿಯೊಂದು ದೇಶದ ಬ್ಯಾಟ್ಸ್ಮನ್ನ ಮಹದಾಸೆ ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುಬ ಲಾರ್ಡ್ಸ್ ಮೈದಾನದಲ್ಲಿ ಸೆಂಚುರಿ ಬಾರಿಸುವುದಾಗಿರುತ್ತದೆ. ಆದರೆ, ಕಾನ್ವೇ ತನ್ನ ಕರೀಯರ್ನ ಮೊದಲ ಪಂದ್ಯದಲ್ಲೇ ಆ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ಲಾರ್ಡ್ಸ್(ಲಂಡನ್): ಪದಾರ್ಪಣೆಯ ಟೆಸ್ಟ್ನಲ್ಲೇ ಅಮೋಘ ದ್ವಿಶತಕ ಬಾರಿಸಿರುವ ನ್ಯೂಜಿಲೆಂಡ್ ಆರಂಭ ಆಟಗಾರ ಡೆವನ್ ಕಾನ್ವೇ ಹಲವು ದಾಖಲೆಗಳಿಗೆ ಪಾತ್ರರಾಗುವ ಜೊತೆಗೆ ಇದೇ ತಿಂಗಳು 18 ರಿಂದ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಿವೀಸ್ ವಿರುದ್ಧ ಆಡುವ ಭಾರತದ ಬೌಲರ್ಗಳಿಗೆ ತಮ್ಮ ಫಾರ್ಮ್ ಬಗ್ಗೆ ಒಂದು ಸೂಚನೆಯನ್ನೂ ರವಾನಿಸಿದ್ದಾರೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ನ ಮೊದಲ ದಿನವಾಗಿದ್ದ ಮೊನ್ನೆ (ಮೇ 2, ಬುಧವಾರ) ಅಜೇಯ ಶತಕ ಬಾರಿಸಿದ್ದ ಕಾನ್ವೇ ನಿನ್ನೆ (ಮೇ 3, ಗುರುವಾರ) ಅದೇ ಫಾರ್ಮ್ ಮುಂದುವರೆಸಿ ದ್ವಿಶತಕವನ್ನು ಪೂರೈಸಿದರು. ಸಾಮಾನ್ಯವಾಗಿ ಕ್ರಿಕೆಟ್ ಆಡುವ ಪ್ರತಿಯೊಂದು ದೇಶದ ಬ್ಯಾಟ್ಸ್ಮನ್ನ ಮಹದಾಸೆ ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್ಸ್ ಮೈದಾನದಲ್ಲಿ ಸೆಂಚುರಿ ಬಾರಿಸುವುದಾಗಿರುತ್ತದೆ. ಆದರೆ, ಕಾನ್ವೇ ತನ್ನ ಕೆರಿಯರ್ನ ಮೊದಲ ಪಂದ್ಯದಲ್ಲೇ ಆ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.
ಕಾನ್ವೇ, ಪದಾರ್ಪಣೆ ಟೆಸ್ಟ್ನಲ್ಲೇ ದ್ವಿಶತಕ ಬಾರಿಸಿದ ವಿಶ್ವದ 7ನೇ ಮತ್ತು ನ್ಯೂಜಿಲೆಂಡ್ನ ಎರಡನೇ ಆಟಗಾರನಾಗಿದ್ದಾರೆ. ಕಾನ್ವೇಗಿಂತ ಮೊದಲು ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದ ಮ್ಯಾಥ್ಯೂ ಸಿಂಕ್ಲೇರ್ 1999ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ವೃತ್ತಿಬದುಕಿನ ಮೊದಲ ಪಂದ್ಯದಲ್ಲೇ (ವೆಲ್ಲಿಂಗ್ಟನ್) 214 ರನ್ ಬಾರಿಸಿದ್ದರು. ಇವರಿಬ್ಬರಲ್ಲದೆ, ಲಾರೆನ್ಸ್ ರೋವ್ (ವೆಸ್ಟ್ ಇಂಡೀಸ್), ಬ್ರೆಂಡನ್ ಕುರುಪ್ಪು (ಶ್ರೀಲಂಕಾ), ಜಾಕೆಸ್ ರುಡಾಲ್ಫ್ (ದಕ್ಷಿಣ ಆಫ್ರಿಕಾ), ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್) ತಮ್ಮ ಚೊಚ್ಚಲು ಪಂದ್ಯಗಳಲ್ಲೇ ದ್ವಿಶತಕ ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಅಂದಹಾಗೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ ಆಟಗಾರರಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕಾನ್ವೇ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೆ ಮೊದಲು ವೆಸ್ಟ್ ಇಂಡೀಸ್ನ ಜಾರ್ಜ್ ಹೆಡ್ಲೀ ಅವರು 1930 ರಲ್ಲಿ ಬ್ರಿಜ್ಟೌನ್ ಮೈದಾನದಲ್ಲಿ ಬಾರಿಸಿದ 176 ರನ್ ದಾಖಲೆಯಾಗಿತ್ತು. ನ್ಯೂಜಿಲೆಂಡ್ನವರೇ ಆಗಿರುವ ಹಮೀಶ್ ರುದರ್ಫೋರ್ಡ್ ಡ್ಯುನೆಡಿನ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ತಮ್ಮ ಕೆರಿಯರ್ನ ಮೊದಲ ಪಂದ್ಯದಲ್ಲಿ 171 ರನ್ ಬಾರಿಸಿದ್ದರು. ಹಾಗೆಯೇ, ಇಂಗ್ಲೆಂಡ್ನಲ್ಲಿ ಪದಾರ್ಪಣೆ ಮಾಡಿದ ಆಟಗಾರರ ಪೈಕಿಯೂ ಕಾನ್ವೇ ಅವೆ ಸ್ಕೋರ್ ಅತ್ಯಧಿಕವಾಗಿದೆ. ಇಂಗ್ಲೆಂಡ್ನವರೇ ಆಗಿದ್ದ ಭಾರತದ ಕೆ.ಎಸ್ ರಣ್ಜಿತ್ ಸಿನ್ಹಜೀ ಅವರು 1896ರಲ್ಲಿ ಮ್ಯಾಂಚೆಸ್ಟರ್ನಲ್ಲಿ ಬಾರಿಸಿದ ಅಜೇಯ 154 ರನ್ ಇದುವರೆಗಿನ ಅತ್ಯಧಿಕ ಸ್ಕೋರ್ ಆಗಿತ್ತು.
ಇಂಗ್ಲೆಂಡ್ ವಿರುದ್ಧ ಡಬಲ್ ಸೆಂಚುರಿ ಬಾರಿಸಿದ ಕೇವಲ ನಾಲ್ಕನೇ ಆಟಗಾರ ಕಾನ್ವೇ ಆಗಿದ್ದಾರೆ ಮತ್ತು ಲಾರ್ಡ್ಸ್ ಮೈದಾನದಲ್ಲಿ ಮಾರ್ಟಿನ್ ಡೊನ್ನೆಲ್ಲಿ (206) ನಂತರ ಆ ಸಾಧನೆ ಮಾಡಿರುವ ಎರಡನೇ ಬ್ಯಾಟ್ಸ್ಮನ್ ಆಗಿದ್ದಾರೆ. ನೇಥನ್ ಆಸ್ಲೆ ಮತ್ತು ಬಿಜೆ ವಾಟ್ಲಿಂಗ್ ದ್ವಿಶತಕ ಬಾರಿಸಿರುವ ಇನ್ನಿಬ್ಬರು ಕಿವೀಸ್ ಆಟಗಾರರಾಗಿದ್ದಾರೆ.
ಕಾನ್ವೇ ಅವರು ಮಾರ್ಕ್ ವುಡ್ ಅವರ ಎಸೆತವೊಂದನ್ನು ಸ್ಕ್ವೇರ್ಲೆಗ್ ಮೇಲಿಂದ ಸಿಕ್ಸರ್ ಬಾರಿಸಿ ತಮ್ಮ ದ್ವಿಶತಕವನ್ನು ಪೂರೈಸಿದರು. ಅವರಿಗಿಂತ ಮೊದಲು ಸಿಂಕ್ಲೇರ್ (ಕ್ರೈಸ್ಟ್ಚರ್ಚ್ನಲ್ಲಿ ಪಾಕಿಸ್ತಾನದ ವಿರುದ್ಧ, 2001) ಮತ್ತು ಬ್ರೆಂಡನ್ ಮೆಕಲ್ಲಮ್ (ಶಾರ್ಜಾ, 2014-15, ಪಾಕಿಸ್ತಾನದ ವಿರುದ್ಧ) ಸಿಕ್ಸ್ ಬಾರಿಸಿ ದ್ವಿಶತಕ ಪೂರೈಸಿದ್ದರು.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗಳಿಸಿದ ಮೊತ್ತ 378 ಮತ್ತು ಕಾನ್ವೇ ಅವರ ಕಾಣಿಕೆ 200. ಅಂದರೆ ಶೇಕಡಾ 52.91 ರಷ್ಟು ರನ್ ಅವರ ಬ್ಯಾಟ್ನಿಂದ ಬಂದವು. ಪಾದಾರ್ಪಣೆಯ ಟೆಸ್ಟ್ನಲ್ಲಿ ಟೀಮಿಗೆ ಅತ್ಯಧಿಕ ಕಾಣಿಗೆ ನೀಡಿದ ಆಟಗಾರರಲ್ಲಿ ಕಾನ್ವೇಗೆ ಎರಡನೇ ಸ್ಥಾನ. 1876-77 ಆಶಸ್ ಸರಣಿಯ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ 245 ರನ್ ಗಳಿಸಿತ್ತು ಮತ್ತು ಅದರಲ್ಲಿ ಚಾರ್ಲ್ಸ್ ಬ್ಯಾನರ್ಮನ್ ಅವರು ಕಾಂಟ್ರಿಬ್ಯೂಶನ್ 165 (ಶೇಕಡಾ 67.35) ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದ ಮೊಟ್ಟ ಮೊದಲ ಟೆಸ್ಟ್ ಆಗಿತ್ತು.
ಹೆನ್ರಿ ನಿಕೊಲಾಸ್ ಜೊತೆ ಕಾನ್ವೇ ಸೇರಿಸಿದ 174ರನ್ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಟೀಮಿನ ಅತ್ಯಧಿಕ ನಾಲ್ಕನೇ ವಿಕೆಟ್ ಜತೆಗಾರಿಕೆಯಾಗಿದೆ. ಇದಕ್ಕೆ ಮೊದಲು, 1987-88ರಲ್ಲಿ ಮಾರ್ಕ್ ಗ್ರೇಟ್ಬ್ಯಾಚ್ ಮತ್ತು ಮಾರ್ಟಿನ್ ಕ್ರೋವ್ 155 ರನ್ಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು.
ಅಂದಹಾಗೆ, ನ್ಯೂಜಿಲೆಂಡ್ 378ರನ್ಗಳ ಮೊತ್ತಕ್ಕೆ ಉತ್ತರವಾಗಿ ಎರಡನೇ ದಿನದಾಟ ಕೊನೆಗೊಂಡಾಗ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತ್ತು. ಆರಂಭ ಆಟಗಾರ ರೋರಿ ಬರ್ನ್ಸ್ 59 ಮತ್ತು ನಾಯಕ ಜೋ ರೂಟ್ 42 ರನ್ ಗಳಿಸಿ ಕ್ರೀಸ್ ಮೇಲಿದ್ದರು.
ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್, ಪಾಕ್ ವಿರುದ್ಧದ ಸೋಲಿನೊಂದಿಗೆ ಅಂತ್ಯವಾಯ್ತು ಈ ಇಬ್ಬರು ಭಾರತೀಯರ ಕ್ರಿಕೆಟ್ ಬದುಕು