
ಫಿಫಾ ವಿಶ್ವಕಪ್ 2026ರ ನಾಕೌಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ಹೊರಬಿದ್ದಿದೆ. ಈ ಸೋಲಿನ ಬೆನ್ನಲ್ಲೇ ಡಿಆರ್ ಕಾಂಗೋ ತಂಡದ ಮುಖ್ಯ ಕೋಚ್ ಸೆಬಾಸ್ಟಿಯನ್ ಡೆಸಾಬ್ರೆ ಅವರಿಗೆ ಮತ್ತೊಂದು ಆಘಾತ ಎದುರಾಗಿತ್ತು. ಅದು ಸಹ ತಂದೆಯ ನಿಧನದ ಸುದ್ದಿಯೊಂದಿಗೆ!
ಅಟ್ಲಾಂಟಾದ ಮರ್ಸಿಡಿಸ್-ಬೆಂಜ್ ಸ್ಟೇಡಿಯಂನಲ್ಲಿ ನಡೆದ ರೌಂಡ್ ಆಫ್ 32 ಹಂತದ ಪಂದ್ಯ ಮುಗಿಸಿ ಡಿಆರ್ ಕಾಂಗೋ ತಂಡದ ಮುಖ್ಯ ಕೋಚ್ ಸೆಬಾಸ್ಟಿಯನ್ ಡೆಸಾಬ್ರೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಕಾಂಗೋ ತಂಡದ ಮಾಧ್ಯಮ ಅಧಿಕಾರಿಯೊಬ್ಬರು ಡೆಸಾಬ್ರೆ ಅವರಿಗೆ ತಂದೆಯ ನಿಧನದ ಸುದ್ದಿ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯ ಮುಗಿದ ನಂತರ ಕೋಚ್ ಡೆಸಾಬ್ರೆ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗೋ ತಂಡದ ಸಂವಹನ ಅಧಿಕಾರಿ ಮಾಧ್ಯಮಗೋಷ್ಠಿಯನ್ನು ಕೊನೆಗೊಳಿಸಲು ನಿರ್ಧರಿಸಿದರು.
ಅಲ್ಲದೆ ಫ್ರೆಂಚ್ ಭಾಷೆಯಲ್ಲಿ, “ಧನ್ಯವಾದಗಳು… ನಮ್ಮ ಕೋಚ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ನಾವು ಪ್ರಕಟಿಸುತ್ತಿದ್ದೇವೆ. ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಹೇಳಿದರು.
ಈ ಮಾತನ್ನು ಕೇಳುತ್ತಿದ್ದಂತೆ ಡೆಸಾಬ್ರೆ ಅವರು ಸಂಪೂರ್ಣವಾಗಿ ಸ್ತಬ್ದರಾದರು. ತೀವ್ರ ನೋವು ಮತ್ತು ನಂಬಲಾಗದ ಭಾವನೆಯಿಂದ ಮಾಧ್ಯಮ ಅಧಿಕಾರಿಯನ್ನು ದಿಟ್ಟಿಸಿದ ಅವರು, “ಮರ್ಸಿ” (ಧನ್ಯವಾದಗಳು) ಎಂದು ಹೇಳಿ ತಕ್ಷಣವೇ ಪತ್ರಿಕಾಗೋಷ್ಠಿಯಿಂದ ಹೊರನಡೆದರು.
🌍⚽️C’est comme que le Coach Sébastien Desabre a appris la disparition de son père ! #Mondial2026 #Desabre #RDC 🇨🇩 pic.twitter.com/P3ktvOajNo
— Jenovic Mbowa (@jenovicmbowa1) July 1, 2026
ಈ ಆಘಾತಕಾರಿ ಸುದ್ದಿಯನ್ನು ಕೋಚ್ ಅವರ ಅನುಮತಿಯಿಲ್ಲದೆ, ಲೈವ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಜಗತ್ತಿನ ಮುಂದೆ ಅನೌನ್ಸ್ ಮಾಡಿದ ಮಾಧ್ಯಮ ಅಧಿಕಾರಿಯ ನಡೆಗೆ ಕ್ರೀಡಾಲೋಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ 7ನೇ ನಿಮಿಷದಲ್ಲೇ ಬ್ರಿಯಾನ್ ಸಿಪೆಂಗಾ ಗಳಿಸಿದ ಗೋಲಿನಿಂದ ಕಾಂಗೋ 1-0 ಮುನ್ನಡೆ ಸಾಧಿಸಿ ಇಂಗ್ಲೆಂಡ್‌ಗೆ ಮೊದಲಾರ್ಧದಲ್ಲೇ ಶಾಕ್ ನೀಡಿತ್ತು.
ಆದರೆ 75ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಸಮಬಲದ ಗೋಲು ಬಾರಿಸಿದರು. ಬಳಿಕ 86ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಇಂಗ್ಲೆಂಡ್‌ಗೆ 2-1 ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಪ್ರಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಇತ್ತ ಕಾಂಗೋ ತಂಡದ ವಿಶ್ವಕಪ್ ಅಭಿಯಾನ ಅಂತ್ಯವಾಗಿದೆ.
ಇದನ್ನೂ ಓದಿ: ವೈಭವ್ ಸೂರ್ಯವಂಶಿಯ ‘ಆರಾ’ ಕಂಡು ಸ್ಟಾರ್ ಕ್ರಿಕೆಟಿಗರೇ ದಂಗು..!
ಈ ಸೋಲಿನ ಹೊರತಾಗಿಯೂ ಕಾಂಗೋ ತಂಡವು ನಾಕೌಟ್ ಹಂತಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಯೊಂದಿಗೆ ಮುಂಬರುವ ವಿಶ್ವಕಪ್ನಲ್ಲಿ ಪುಟಿದೇಳುವ ವಿಶ್ವಾಸದೊಂದಿಗೆ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿದೆ.