ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಸದ್ಯ ತಂಡದಿಂದ ದೂರ ಉಳಿದಿದ್ದಾರೆ. ಗಾಯದ ಕಾರಣ ಇವರು ಕ್ರಿಕೆಟ್ ಮೈದಾನಕ್ಕೆ ಇಳಿಯದೆ ಒಂದು ವರ್ಷ ಕಳೆದಿದೆ. ಇದರ ನಡುವೆ ಮೊಹಮ್ಮದ್ ಶಮಿ ಹಾಗು ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಒಟ್ಟಿಗೆ ಕಾಣಿಸಿಕೊಂಡಿರುವ ಪೋಸ್ಟ್ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಶಮಿ ಮತ್ತು ಸಾನಿಯಾ ಅವರ ಈ ಫೋಟೋವನ್ನು ದುಬೈನಲ್ಲಿ ತೆಗೆಯಲಾಗಿದೆ ಎಂದು ವೈರಲ್ ಆಗುತ್ತಿದೆ. ಈ ಸುದ್ದಿ ನಿಜವೇ?, ಇಲ್ಲಿದೆ ಸತ್ಯಾಂಶ.
ಫೇಸ್‌ಬುಕ್ ಬಳಕೆದಾರ ಮುಬ್ಬಾ ಛರೋಡಾ ಎಂಬವರು ಡಿಸೆಂಬರ್ 22, 2024 ರಂದು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ‘‘ದುಬೈನಲ್ಲಿರುವ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುದ್ದಾದ ಚಿತ್ರ’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದ ಟಿವಿ9 ಕನ್ನಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಫೋಟೋಗಳು ನಿಜವಲ್ಲ ಎಂಬುದನ್ನು ಕಂಡುಹಿಡಿದಿದೆ. ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ ಎಂಬುದು ತಿಳಿದುಬಂದಿದೆ. ಇದನ್ನೇ ನಿಜ ಎಂದು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಮೊದಲಿಗೆ ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ಪೋಸ್ಟ್ಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದ್ದೇವೆ. ಆದರೆ, ಶಮಿ-ಸಾನಿಯಾ ಜೊತೆಗಿರುವ ಕುರಿತು ಯಾವುದೇ ಸುದ್ದಿ ಮಾಧ್ಯಮದಲ್ಲಿ ವರದಿ ಆಗಿಲ್ಲ. ಇವರಿಬ್ಬರು ಜೊತೆಗಿರುವ ಫೋಟೋ ಇರುತ್ತಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಜೊತೆಗೆ ನಮಗೆ ಇಂಡಿಯನ್ ಟೈಮ್ಸ್ ಮರಾಠಿ ವೆಬ್‌ಸೈಟ್‌ನಲ್ಲಿ 23 ಡಿಸೆಂಬರ್ 2024 ರಂದು ಪ್ರಕಟವಾದ ಸುದ್ದಿಯಲ್ಲಿ, ಈ ಚಿತ್ರಗಳನ್ನು AI ನೊಂದಿಗೆ ಮಾಡಲಾಗಿದೆ ಎಂದು ಬರೆದಿರುವುದು ಕಂಡುಬಂತು.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ವೈರಲ್ ಫೋಟೋವನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಈ ಚಿತ್ರವು ನೈಜ್ಯವಾಗಿದೆ ಎಂದು ಕಾಣುತ್ತಿಲ್ಲ, ಇದು AI ನಿಂದ ಮಾಡಲ್ಪಟ್ಟಿದೆ ಎಂದು ಮೇಲ್ನೋಟಕ್ಕೆ ಸೂಚಿಸುತ್ತದೆ. ಬಳಿಕ ನಾವು AI ನಿಂದ ಫೋಟೋಗಳನ್ನು ರಚಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಹೈವ್ ಮಾಡರೇಶನ್ ಉಪಕರಣದ ಸಹಾಯದಿಂದ ಪರಿಶೀಲಿಸಿದಾಗ, AI ನಿಂದ ಈ ಚಿತ್ರವನ್ನು ಮಾಡಿರುವ ಸಂಭವನೀಯತೆಯು 99.8 ಪ್ರತಿಶತ ಎಂದು ಕಂಡುಬಂದಿದೆ.
ನಾವು ಇನ್ನೊಂದು ಟೂಲ್ decopy.ai ಮೂಲಕ ಫೋಟೋವನ್ನು ಹುಡುಕಿದೆವು. ಈ ಉಪಕರಣವು ಚಿತ್ರವನ್ನು 96.8 ಪ್ರತಿಶತ AI ಸಂಭವನೀಯ ಎಂದು ಘೋಷಿಸಿದೆ. ಜೊತೆಗೆ AI ಇಮೇಜ್ ಡಿಟೆಕ್ಷನ್ ಟೂಲ್ ಆಗಿರುವ ಸೈಟ್ ಎಂಜಿನ್‌ನೊಂದಿಗೆ ನಾವು ಚಿತ್ರವನ್ನು ಪರಿಶೀಲಿಸಿದ್ದೇವೆ. ಇಲ್ಲಿ AI ನಿಂದ ಈ ಚಿತ್ರವನ್ನು ರಚಿಸುವ ಸಂಭವನೀಯತೆ 99 ಪ್ರತಿಶತ ಎಂದು ಹೇಳಲಾಗಿದೆ.
ಹೀಗಾಗಿ ದುಬೈನಲ್ಲಿ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಫೋಟೋ ಎಂದು ಹೇಳಲಾಗುವ ಚಿತ್ರವನ್ನು AI ಯಿಂದ ರಚಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ, ಕೆಲವು ಬಳಕೆದಾರರು ತಪ್ಪಾಗಿ ಗ್ರಹಿಸಿ ನೈಜವೆಂದು ಹಂಚಿಕೊಳ್ಳುತ್ತಿದ್ದಾರೆ.
2023 ರ ಏಕದಿನ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿ ಅಂದಿನಿಂದ ಟೀಂ ಇಂಡಿಯಾದಿಂದ ಹೊರಗಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವೈದ್ಯಕೀಯ ತಂಡದೊಂದಿಗೆ ತಮ್ಮ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಶಮಿ ನಿರಂತರ ಬೌಲಿಂಗ್ ಮಾಡಿದಕ್ಕಾಗಿ ಅವರ ಮೊಣಕಾಲಿನಲ್ಲಿ ಊತ ಕಂಡುಬಂದಿದೆ. ಹಿಮ್ಮಡಿ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಶಮಿ ರಣಜಿ ಟ್ರೋಫಿ ಆಡಿದ್ದರು. ನಂತರ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಕಣಕ್ಕಿಳಿದಿದ್ದರು. ಈ ಪಂದ್ಯಗಳಲ್ಲದೆ, ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿಯೂ ಶಮಿ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ