Paris Olympics 2024: ಒಲಿಂಪಿಕ್ಸ್ ಉದ್ಘಾಟನೆಗೆ ಕೆಲವೇ ಗಂಟೆ ಬಾಕಿ; ಫ್ರಾನ್ಸ್‌ ಹೈಸ್ಪೀಡ್ ರೈಲು ಮಾರ್ಗದ ಮೇಲೆ ದಾಳಿ

|

Updated on: Jul 26, 2024 | 4:48 PM

France Train Attack: ಮಾಹಿತಿಯ ಪ್ರಕಾರ, ಈ ದಾಳಿಯಿಂದ ಫ್ರಾನ್ಸ್‌ನ ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳ ರೈಲು ಮಾರ್ಗಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ದೇಶೀಯ ರೈಲುಗಳಷ್ಟೇ ಅಲ್ಲ, ಚಾನೆಲ್ ಟನಲ್ ಮೂಲಕ ನೆರೆಯ ದೇಶಗಳಾದ ಬೆಲ್ಜಿಯಂ ಮತ್ತು ಲಂಡನ್​ಗೆ ತೆರಳುವ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.

Paris Olympics 2024: ಒಲಿಂಪಿಕ್ಸ್ ಉದ್ಘಾಟನೆಗೆ ಕೆಲವೇ ಗಂಟೆ ಬಾಕಿ; ಫ್ರಾನ್ಸ್‌ ಹೈಸ್ಪೀಡ್ ರೈಲು ಮಾರ್ಗದ ಮೇಲೆ ದಾಳಿ
ಫ್ರಾನ್ಸ್ ರೈಲು ಮಾರ್ಗದ ಮೇಲೆ ದಾಳಿ
Follow us on

ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಫ್ರಾನ್ಸ್‌ ನಗರದಲ್ಲಿ ಅಹಿತಕರ ಘಟನೆ ನಡೆದಿದೆ. ಫ್ರಾನ್ಸ್‌ನ ಹೈಸ್ಪೀಡ್ ರೈಲು ಮಾರ್ಗಗಳಿಗೆ ಕಿಡಿಕೇಡಿಗಳು ಬೆಂಕಿ ಹಚ್ಚಿದ್ದು, ಇದರಿಂದಾಗಿ ರೈಲು ಪ್ರಯಾಣಕ್ಕೆ ಅಡಚಣೆಯುಂಟಾಗಿದೆ. ಹೀಗಾಗಿ ಸುಮಾರು 8 ಲಕ್ಷಕ್ಕೂ ಅಧಿಕ ರೈಲು ಪ್ರಯಾಣಿಕರಿಗೆ ತೊಂದರೆಯಾಗಿದೆ. ವಿಶ್ವದ ಮಹಾ ಕ್ರೀಡಾಕೂಟ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಇಂತಹ ಕೃತ್ಯ ನಡೆದಿರುವುದು ಭದ್ರತಾ ಲೋಪಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ.

ಒಲಿಂಪಿಕ್ಸ್ ಕ್ರೀಡಾಕೂಟವನ್ನು ಗುರಿಯಾಗಿಸುಕೊಂಡು ಈ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಈ ದಾಳಿಯಿಂದ ರೈಲು ಸೇವೆ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಫ್ರಾನ್ಸ್‌ನ ರಾಷ್ಟ್ರೀಯ ರೈಲು ನಿರ್ವಾಹಕ ಎಸ್‌ಎನ್‌ಸಿಎಫ್ ತನ್ನ ಹೈಸ್ಪೀಡ್ ರೈಲು ಮಾರ್ಗಗಳ ಮೇಲೆ ವಿಧ್ವಂಸಕ ದಾಳಿ ನಡೆದಿದ್ದು, ಇದರಿಂದಾಗಿ ರೈಲು ಸೇವೆಗಳು ದೊಡ್ಡ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿವೆ ಎಂದಿದೆ.

ರೈಲ್ವೆ ಸಂಚಾರ ಸ್ಥಗಿತ

ಮಾಹಿತಿಯ ಪ್ರಕಾರ, ಈ ದಾಳಿಯಿಂದ ಫ್ರಾನ್ಸ್‌ನ ಪಶ್ಚಿಮ, ಉತ್ತರ ಮತ್ತು ಪೂರ್ವ ಪ್ರದೇಶಗಳ ರೈಲು ಮಾರ್ಗಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ದೇಶೀಯ ರೈಲುಗಳಷ್ಟೇ ಅಲ್ಲ, ಚಾನೆಲ್ ಟನಲ್ ಮೂಲಕ ನೆರೆಯ ದೇಶಗಳಾದ ಬೆಲ್ಜಿಯಂ ಮತ್ತು ಲಂಡನ್​ಗೆ ತೆರಳುವ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ. ಮಾಹಿತಿಯ ಪ್ರಕಾರ, ಈ ವಿಧ್ವಂಸಕ ಕೃತ್ಯ ಮತ್ತು ಬೆಂಕಿಯಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಕನಿಷ್ಠ ಭಾನುವಾರದವರೆಗೆ ಸಮಯ ಬೇಕಾಗಬಹುದು.

ಈಗಾಗಲೇ ಫ್ರೆಂಚ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು, SNCF ಈ ದಾಳಿಯನ್ನು ದುರುದ್ದೇಶಪೂರಿತ ಕೃತ್ಯ ಎಂದಿದ್ದು, ಈ ವಿಧ್ವಂಸಕ ಕೃತ್ಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ನಡೆದ ಈ ಘಟನೆಯನ್ನು ಫ್ರೆಂಚ್ ಸರ್ಕಾರಿ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

8 ಲಕ್ಷ ರೈಲ್ವೆ ಪ್ರಯಾಣಿಕರಿಗೆ ತೊಂದರೆ

ದಿ ಗಾರ್ಡಿಯನ್ ವರದಿಯ ಪ್ರಕಾರ, ಫ್ರಾನ್ಸ್‌ನ ಕ್ರೀಡಾ ಸಚಿವರು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಕ್ರೀಡೆಯನ್ನು ಗುರಿಯಾಗಿಸುವುದು ಫ್ರಾನ್ಸ್‌ನನ್ನೇ ಗುರಿಯಾಗಿಸುವುದಕ್ಕೆ ಸಮ ಎಂದಿದ್ದಾರೆ. ಈ ದಾಳಿಯಿಂದಾಗಿ ಸುಮಾರು 8 ಲಕ್ಷ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ ಎಂದು ಎಸ್‌ಎನ್‌ಸಿಎಫ್ ಮುಖ್ಯ ಕಾರ್ಯನಿರ್ವಾಹಕ ಜೀನ್ ಪಿಯರ್ ಹೇಳಿದ್ದಾರೆ.

ಸೀನ್ ನದಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ

ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಫ್ರಾನ್ಸ್‌ನಲ್ಲಿ ವಿಶಿಷ್ಟ ಶೈಲಿಯಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದ ಸಂಪೂರ್ಣ ಕಾರ್ಯಕ್ರಮವು ಐಫೆಲ್ ಟವರ್ ಮತ್ತು ಸೀನ್ ನದಿಯಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ 10500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಇದಲ್ಲದೆ, ಈ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಮತ್ತು ಅತಿಥಿಗಳು ಆಗಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಈ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಫ್ರಾನ್ಸ್‌ನ ರೈಲು ಮಾರ್ಗದ ಮೇಲಿನ ಈ ದಾಳಿಯು ಉದ್ಘಾಟನಾ ಸಮಾರಂಭದ ಮೇಲೆ ಯಾವುದೇ ಪರಿಣಾಮ ಬೀರಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Fri, 26 July 24