Glenn Maxwell: ಭಾರತದಲ್ಲಿ ಹೆಚ್ಚಿದ ಕೊರೊನಾ; ಮನೆಗೆ ಹೋಗಲು ಹೊಸ ಉಪಾಯ ಮಾಡಿದ ಗ್ಲೆನ್ ಮ್ಯಾಕ್ಸ್ವೆಲ್
RCB: ಕೊರೊನಾ ಹರಡುವುದನ್ನು ತಪ್ಪಿಸಲು ಭಾರತದಿಂದ ಹೊರಡುವ ಎಲ್ಲ ವಿಮಾನಗಳನ್ನು ನಿರ್ಬಂಧಿಸಲಾಗಿದೆ ಈ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಒಂದು ಉಪಾಯ ಮಾಡಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹಬ್ಬುತ್ತಿದೆ. ಕಲವು ಕಡೆ ಲಾಕ್ಡೌನ್ ಮಾಡಿದ್ದರೂ ಸಹ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಸೂಕ್ತ ಸಮಯದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಜನರು ಬೀದಿಯಲ್ಲಿ ಹೆಣವಾಗುತ್ತಿರುವ ದೃಶ್ಯ ಕಾಣಿಸುತ್ತಿದೆ. ಆಕ್ಸಿಜನ್ ಸಿಲಿಂಡರ್ಗಳಿಗಾಗಿ ರೋಗಿಗಳು ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಐಪಿಎಲ್ಗಾಗಿ ಬಂದಿರುವ ವಿದೇಶಿ ಆಟಗಾರರಿಗೆ ಮನೆಗೆ ಹೋಗುವ ಚಿಂತೆ ಶುರು ಆಗಿದೆ.
ಭಾರತದಲ್ಲಿ ಕೊರೊನಾ ಹೆಚ್ಚಿರುವುದರಿಂದ ಬೇರೆಲ್ಲ ದೇಶಗಳೂ ಭಾರತಕ್ಕೆ ವಿಮಾನಯಾನ ನಿರ್ಬಂಧಿಸಿವೆ. ಐಪಿಎಲ್ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರ ತಲೆನೋವಿಗೆ ಇದು ಕಾರಣ ಆಗಿದೆ. ಇನ್ನೊಂದು ತಿಂಗಳಲ್ಲಿ ಐಪಿಎಲ್ ಪಂದ್ಯಗಳು ಮುಗಿಯಲಿದ್ದು, ಆ ಬಳಿಕ ಮನೆಗೆ ಹೋಗುವುದು ಹೇಗೆ ಎಂದು ಅವರೆಲ್ಲ ತಲೆ ಕೆಡಿಸಿಕೊಂಡಿದ್ದಾರೆ. ಈ ನಡುವೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಒಂದು ಉಪಾಯ ಮಾಡಿದ್ದಾರೆ.
ಆರ್ಸಿಬಿ ಪರವಾಗಿ ಆಡುತ್ತಿರುವ ಮಾಕ್ಸ್ವೆಲ್ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಭಾರತದಿಂದ ತೆರಳುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿರುವುದರ ನಡುವೆಯೂ ಅವರು ಆಸ್ಟ್ರೇಲಿಯಾಗೆ ತೆರಳಲು ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯ ನಡೆಯಲಿದೆ. ಅದಕ್ಕಾಗಿ ಚಾರ್ಟರ್ಡ್ ಫ್ಲೈಟ್ ಮೂಲಕ ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಆಟಗಾರರು ಇಂಗ್ಲೆಂಡ್ಗೆ ತೆರಳಲಿದ್ದಾರೆ. ಅದೇ ವಿಮಾನದಲ್ಲಿ ತಾವೂ ಪ್ರಯಾಣ ಮಾಡಬಹುದು ಎಂಬ ಬಗ್ಗೆ ಮ್ಯಾಕ್ಸ್ವೆಲ್ ಆಲೋಚಿಸಿದ್ದಾರೆ.
ಈ ರೀತಿಯಾಗಿ ಮೊದಲ ಭಾರತದಿಂದ ಇಂಗ್ಲೆಂಡ್ಗೆ ತೆರಳಿ, ನಂತರ ಅಲ್ಲಿಂದ ಎಲ್ಲಾ ಆಟಗಾರರು ಅವರವರ ದೇಶಕ್ಕೆ ತೆರಳಬಹುದು ಎಂಬುದು ಮ್ಯಾಕ್ಸ್ವೆಲ್ ಉಪಾಯ. ಇದನ್ನು ಬಿಸಿಸಿಐ ಕೂಡ ಪರಿಗಣಿಸುವ ಸಾಧ್ಯತೆ ಇದೆ. ‘ಬಿಸಿಸಿಐ ಕೂಡ ಆಟಗಾರರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಮೊದಲು ಇಂಗ್ಲೆಂಡ್ ಕಳಿಸಿ, ನಂತರ ಅಲ್ಲಿಂದ ಅವರವರ ದೇಶಕ್ಕೆ ಹೋಗಲು ವ್ಯವಸ್ಥೆ ಮಾಡುವ ಆಯ್ಕೆ ಸೂಕ್ತವಾಗಿದೆ’ ಎಂದು ಬಿಸಿಸಿಐ ಖಜಾಂಜಿ ಅರುಣ್ ಧುಮಲ್ ಹೇಳಿದ್ದಾರೆ.
ಸದ್ಯ ಆಟಗಾರರೆಲ್ಲರೂ ಸುರಕ್ಷಿತವಾಗಿದ್ದಾರೆ. ಕೊವಿಡ್ ಸೋಂಕು ತಗುಲದಂತೆ ಬಯೋ ಬಬಲ್ನಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿದೆ. ಆದರೆ ಐಪಿಎಲ್ ಮುಗಿದ ಬಳಿಕ ಇಷ್ಟೆಲ್ಲ ಸುರಕ್ಷತೆಯನ್ನು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಐಪಿಎಲ್ ಮುಗಿಯುತ್ತಿದ್ದಂತೆಯೇ ಮನೆ ಸೇರುವುದು ಹೇಗೆ ಎಂದು ವಿದೇಶಿ ಆಟಗಾರರು ಈಗಲೇ ಆಲೋಚಿಸುತ್ತಿದ್ದಾರೆ.
ಇದನ್ನೂ ಓದಿ: IPL 2021: ಈ ಸೀಸನ್ನ 10 ಕೋಟಿ ಚಿಯರ್ ಲೀಡರ್! ಸೆಹ್ವಾಗ್ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಂಡ ಮ್ಯಾಕ್ಸ್ವೆಲ್