BBL: ಸಿಡಿಲಬ್ಬರದ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..! ವಿಡಿಯೋ
Glenn Maxwell: ಹೊಬಾರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 76 ರನ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಗಳೊಂದಿಗೆ 6 ಸಿಕ್ಸರ್‌ಗಳನ್ನು ಹೊಡೆದರು. ತಮ್ಮ ಅದ್ಭುತ ಇನ್ನಿಂಗ್ಸ್‌ಗಾಗಿ ಮ್ಯಾಕ್ಸ್‌ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಈ ಸೀಸನ್ನಲ್ಲಿ ಇಲ್ಲಿಯವರೆಗೆ, ಮ್ಯಾಕ್ಸ್‌ವೆಲ್ 8 ಪಂದ್ಯಗಳಲ್ಲಿ 59.40 ರ ಸರಾಸರಿಯಲ್ಲಿ 297 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಐಪಿಎಲ್ 2025 ರ ಹರಾಜಿಗೂ ಮುನ್ನ, ಆರ್‌ಸಿಬಿ ತನ್ನ ಅನೇಕ ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿತ್ತು. ಇದಾದ ನಂತರ, ಮೆಗಾ ಹರಾಜಿನಲ್ಲಿಯೂ ಆರ್‌ಸಿಬಿ, ತಂಡದಲ್ಲಿ ಬಹಳ ವರ್ಷಗಳಿಂದ ಆಡಿದ್ದ ಅನೇಕ ಆಟಗಾರರ ಖರೀದಿಗೆ ಮುಂದೆ ಬರಲಿಲ್ಲ. ಅಂತಹ ಆಟಗಾರರಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಬ್ಬರು. ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ತೋರಿದ ಕಳಪೆ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಫ್ರಾಂಚೈಸಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಆದರೀಗ ಭರ್ಜರಿ ಫಾರ್ಮ್‌ಗೆ ಮರಳಿರುವ ಮ್ಯಾಕ್ಸ್‌ವೆಲ್ ಿಇದೀಗ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅವರು ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಸತತ ಮೂರು ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಲಬ್ಬರ
ಬಿಗ್ ಬ್ಯಾಷ್ ಲೀಗ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿರುವ ಮ್ಯಾಕ್ಸ್‌ವೆಲ್ ಕಳೆದ ಮೂರು ಪಂದ್ಯಗಳಲ್ಲಿ 3 ಬಿರುಗಾಳಿಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು ತಮ್ಮ ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 58, 90 ಮತ್ತು 76 ರನ್‌ಗಳನ್ನು ಗಳಿಸುವ ಮೂಲಕ ಐಪಿಎಲ್ ಆರಂಭಕ್ಕೂ ಮುಂಚಿತವಾಗಿ ತಮ್ಮ ಹಳೆಯ ಲಯಕ್ಕೆ ಮರಳಿರುವುದು ಪಂಜಾಬ್ ಕಿಂಗ್ಸ್ ತಂಡಕ್ಕೆ ಸಂತಸ ತಂದಿದೆ. ವಾಸ್ತವವಾಗಿ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮ್ಯಾಕ್ಸ್ವೆಲ್ರನ್ನು ಖರೀದಿ ಮಾಡಿದೆ.
ಕಳೆದ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ
ಕಳೆದ ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಅನೇಕ ಅವಕಾಶಗಳನ್ನು ನೀಡಿದರು. ಆದರೆ ಮ್ಯಾಕ್ಸಿ ಒಂದೇ ಒಂದು ಅವಕಾಶವನ್ನು ಸಹ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಆಡಿದ 10 ಪಂದ್ಯಗಳಲ್ಲಿ 5.77 ರ ಕಳಪೆ ಸರಾಸರಿಯಲ್ಲಿ 52 ರನ್ ಗಳಿಸಿದರು. ಬೌಲಿಂಗ್‌ನಲ್ಲೂ ಮ್ಯಾಕ್ಸ್‌ವೆಲ್ ಕೇವಲ 6 ವಿಕೆಟ್‌ಗಳನ್ನು ಮಾತ್ರ ಪಡೆದರು. ಆದಾಗ್ಯೂ, 2025 ರ ಐಪಿಎಲ್ಗೂ ಮುನ್ನ, ಸ್ಟಾರ್ ಆಲ್‌ರೌಂಡರ್ ಮಾರಕ ಫಾರ್ಮ್‌ಗೆ ಮರಳಿದ್ದಾರೆ.