ಆರ್ ಪ್ರಗ್ನಾನಂದ… ಖ್ಯಾತ ಚೆಸ್ ಪಟುಗಳಾದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ , ಲೆವ್ ಅರೋನಿಯನ್, ರಷ್ಯಾದ ಆಂಡ್ರೆ ಎಸ್ಪಿಯೆಂಕೊ, ಮಾಜಿ ಮಹಿಳಾ ವಿಶ್ವ ಚಾಂಪಿಯನ್ ಅಲೆಕ್ಸಾಂಡ್ರಾ ಕೊಸ್ಟಾನ್ಯುಕ್ ಮತ್ತು ಕೆಮರ್…ಇವರ್ಯಾರು 16 ವರ್ಷದ ಈ ಬಾಲಕ ಹೆಸರನ್ನು ಈ ಜೀವಮಾನದಲ್ಲಿ ಮರೆಯಲ್ಲ. ಏಕೆಂದರೆ ಅತಿರಥ ಮಹಾರಥರನ್ನೇ ಸೋಲಿಸಿದ್ದ ಇವರಿಗೆ 16 ವರ್ಷದ ಪ್ರಗ್ನಾನಂದ (R Praggnanandhaa) ಆನ್‌ಲೈನ್ ರ್ಯಾಪಿಡ್ ಚೆಸ್ ಸ್ಪರ್ಧೆಯಾದ ಏರ್‌ಥಿಂಗ್ಸ್ ಮಾಸ್ಟರ್ಸ್‌ನಲ್ಲಿ ಸೋಲಿನ ರುಚಿ ತೋರಿಸಿದ್ದರು. ಅದರಲ್ಲೂ ಚೆಸ್‌ನಲ್ಲಿ ಸೋಲನ್ನೇ ಮರೆತಂತಿದ್ದ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ಗೆ ಸೋಲುಣಿಸಿ ನಿಬ್ಬೆರಗಾಗುವಂತೆ ಮಾಡಿದ್ದ ಪುಟ್ಟ ಪ್ರಗ್ನಾನಂದ. ಆದರೆ ಈ ಕಿರಿಯ ವಯಸ್ಸಿನಲ್ಲಿ ಪ್ರಗ್ನಾನಂದ ಅವರ ಈ ಸಾಧನೆಯ ಹಿಂದಿರುವುದು ಸಹೋದರಿ ವೈಶಾಲಿ. ಇಬ್ಬರು ಚೆಸ್ ಆಟವನ್ನು ಅನ್ನು ವಿಪರೀತ ಪ್ರೀತಿಸಲು ಕಾರಣವಾಗಿದ್ದು ಟಿವಿ ಕಾರ್ಟೂನ್ ಎಂಬುದು ವಿಶೇಷ.
ಹೌದು, ಎಲ್ಲರಂತೆ ಬಾಲ್ಯದಲ್ಲಿ ಪ್ರಗ್ನಾನಂದ ಕೂಡ ಟಿವಿ ಕಾರ್ಟೂನ್ ಅನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದರು. ಅತ್ತ ಸಹೋದರಿ ವೈಶಾಲಿ ಕೂಡ ಅದಾಗಲೇ ಕಾರ್ಟೂನ್ಗೆ ಮಾರು ಹೋಗಿದ್ದರು. ಇದರಿಂದ ಚಿಂತೆಗೀಡಾಗಿದ್ದು ಪೋಲಿಯೋ ಪೀಡಿತ ಬ್ಯಾಂಕ್ ಉದ್ಯೋಗಿ ತಂದೆ ರಮೇಶಬಾಬು ಮತ್ತು ತಾಯಿ ನಾಗಲಕ್ಷ್ಮಿ. ಮಕ್ಕಳಿಬ್ಬರೂ ಟಿವಿ ಮುಂದೆ ಹೆಚ್ಚಿನ ಸಮಯ ಕಾಲ ಕಳೆಯುತ್ತಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಮಗಳನ್ನು ಟಿವಿಯಿಂದ ದೂರ ಮಾಡಲು ತಂದೆ ಚೆಸ್ ಬೋರ್ಡ್ಗಳನ್ನು ತಂದುಕೊಟ್ಟಿದ್ದರು.
ಇತ್ತ ಟಿವಿಯಿಂದ ವೈಶಾಲಿ ಚೆಸ್ನತ್ತ ಮುಖ ಮಾಡುತ್ತಿದ್ದಂತೆ 3 ವರ್ಷದ ಪ್ರಗ್ನಾನಂದ ಕೂಡ ಅಕ್ಕನೊಂದಿಗೆ ಆಟ ವೀಕ್ಷಿಸಲಾರಂಭಿಸಿದ. ವೈಶಾಲಿ ಹೊಸ ಹವ್ಯಾಸವು ಪ್ರಗ್ನಾನಂದ ಅವರ ಆಸಕ್ತಿಯ ಕೇಂದ್ರವಾಯಿತು. ಅದರಂತೆ ಇಬ್ಬರೂ ಕಾರ್ಟೂನ್ನಿಂದ ದೂರವಾಗಿ ಚೆಸ್ನತ್ತ ಮುಖ ಮಾಡಿದರು. ಬಾಲ್ಯದಲ್ಲೇ ಚೆಸ್ ಆಟವನ್ನು ಕರಗತ ಮಾಡಿಕೊಂಡರು.
ಮಹಿಳಾ ಗ್ರ್ಯಾಂಡ್ ಮಾಸ್ಟರ್ ಆಗಿರುವ 19 ವರ್ಷದ ವೈಶಾಲಿ ಅವರು ಪಂದ್ಯಾವಳಿಯನ್ನು ಗೆದ್ದ ನಂತರ ಚೆಸ್‌ನಲ್ಲಿ ತನ್ನ ಆಸಕ್ತಿಯನ್ನು ತೀವ್ರಗೊಳಿಸಿದ್ದರು. ಅಷ್ಟೇ ಅಲ್ಲದೆ ಸಹೋದರನಿಗೂ ಕ್ರೀಡೆಯತ್ತ ಸೆಳೆದರು. ನಾನು ಆರು ವರ್ಷದವಳಿದ್ದಾಗ ನಾನು ಬಹಳಷ್ಟು ಕಾರ್ಟೂನ್‌ಗಳನ್ನು ನೋಡುತ್ತಿದ್ದೆ. ನನ್ನ ಪೋಷಕರು ನನ್ನನ್ನು ಟಿವಿಯಿಂದ ದೂರವಿಡಲು ಬಯಸಿದ್ದರು. ಅದಕ್ಕಾಗಿ ನನ್ನನ್ನು ಚೆಸ್ ಮತ್ತು ಡ್ರಾಯಿಂಗ್ ತರಗತಿಗಳಿಗೆ ಸೇರಿಸಿದರು. ನನ್ನ ಹೊಸ ಹವ್ಯಾಸ ಪ್ರಗ್ನಾನಂದನನ್ನು ಕೂಡ ಸೆಳೆಯಿತು. ಅದರಂತೆ ಇಬ್ಬರು ಚೆಸ್ ಪಟುಗಳಾಗಿದ್ದೇವೆ ಎಂದು ಖುಷಿ ಹಂಚಿಕೊಂಡಿದ್ದಾರೆ ವೈಶಾಲಿ.
ವಿಶೇಷ ಎಂದರೆ ಇಂತಹದೊಂದು ಬದಲಾವಣೆ ಖುದ್ದು ತಂದೆಯೇ ನಿರೀಕ್ಷಿಸಿರಲಿಲ್ಲ. “ಬಾಲ್ಯದಲ್ಲಿ ಟಿವಿ ನೋಡುವ ಹವ್ಯಾಸಕ್ಕೆ ಕಡಿವಾಣ ಹಾಕಲು ವೈಶಾಲಿಗೆ ಚೆಸ್‌ಗೆ ಪರಿಚಯಿಸಿದ್ದೆವು. ಇದಾದ ಬಳಿಕ ಮಕ್ಕಳಿಬ್ಬರು ಚೆಸ್ ಆಟವನ್ನು ಇಷ್ಟಪಟ್ಟರು. ಅದನ್ನು ಮುಂದುವರಿಸಲು ನಿರ್ಧರಿಸಿದರು. ಅದು ಇಂತಹ ಸಾಧನೆಗೆ ಕಾರಣವಾಗುತ್ತದೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ” ಎನ್ನುತ್ತಾರೆ ರಮೇಶ್‌ಬಾಬು.
ಅದರಂತೆ 2016 ರಲ್ಲಿ 10 ವರ್ಷದ ಪ್ರಗ್ನಾನಂದ ಅಂತರರಾಷ್ಟ್ರೀಯ ಚೆಸ್‌ನಲ್ಲಿ ಲಿಟ್ಲ್ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಅಲ್ಲಿಂದಲೇ ಈ ಪುಟ್ಟ ಬಾಲಕನಿಗೆ ಚೆಸ್ನಲ್ಲೇ ಭವಿಷ್ಯವಿದೆ ಎಂದು ತರಬೇತುದಾರರು ಕೂಡ ಷರಾ ಬರೆದಿದ್ದರು. ಆ ಎಲ್ಲಾ ನಿರೀಕ್ಷೆಗಳು ಈಗ ನಿಜವಾಗಿದೆ. ವಿಶ್ವ ಚಾಂಪಿಯನ್ ಎನಿಸಿಕೊಂಡವರ ಮುಂದೆ ಪ್ರಗ್ನಾನಂದ ಗೆದ್ದು ತೋರಿಸಿದ್ದಾರೆ. ಅಷ್ಟೇ ಅಲ್ಲದೆ ಭವಿಷ್ಯದ ಭಾರತದ ಚೆಸ್ ಮಾಸ್ಟರ್ ಎನಿಸಿಕೊಂಡಿದ್ದಾರೆ.
ಈ ಇಬ್ಬರ ಚದುರಂಗದ ಆಟದ ನಿಗೂಢ ನಡೆಗೆ ಬೆನ್ನೆಲುಬಾಗಿ ನಿಂತಿದ್ದು ತಾಯಿ ನಾಗಲಕ್ಷ್ಮಿ ಎನ್ನುತ್ತಾರೆ ರಮೇಶ್ ಬಾಬು. ಏಕೆಂದರೆ ನಾಗಲಕ್ಷ್ಮಿ ಅವರಿಬ್ಬರನ್ನು ಟೂರ್ನಮೆಂಟ್‌ಗಳಿಗೆ ಕರೆದುಕೊಂಡು ಹೋಗುತ್ತಾರೆ. ಮನೆಯಿಂದಲೇ ಅವರ ಆಟಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಮಕ್ಕಳ ಸಾಧನೆಯ ಸಂಪೂರ್ಣ ಶ್ರೇಯಸ್ಸು ಹೆಂಡತಿಗೆ ಸಲ್ಲುತ್ತದೆ ಎಂದು ರಮೇಶ್ ಬಾಬು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!