ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮ ಮೂರು ಶತಕ ಬಾರಿಸಲಿದ್ದಾರೆ: ಗಾವಸ್ಕರ್
ಮೊದಲ ಕೆಲ ಓವರ್ಗಳಲ್ಲಿ ರೋಹಿತ್ ತೊಂದರೆ ಎದುರಿಸುವುದು ನಿಜ ಎಂದು ಗಾವಸ್ಕರ್ ಹೇಳುತ್ತಾರೆ. ಅವರ ಫುಟ್ವರ್ಕ್ ಗೊಂದಲಮಯವಾಗಿರುತ್ತದೆ ಮತ್ತು ಫ್ರಂಟ್ಫುಟ್ ಬಾಲ್ ಪಿಚ್ ಆಗುವೆಡೆ ಚಲಿಸುವುದಿಲ್ಲ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಆಗಸ್ಟ್ನಿಂದ ನಡೆಯಲಿರುವ 5-ಟೆಸ್ಟ್ಗಳ ಸರಣಿಯನ್ನು ಭಾರತ 4-0 ಅಂತರದಿಂದ ಗೆಲ್ಲಲಿದೆ ಎಂದು ಕೆಲ ದಿನಗಳ ಹಿಂದೆ ಭಾರತದ ಮಾಜಿ ಆರಂಭ ಆಟಗಾರ ಮತ್ತು ಈಗ ಕಾಮೆಂಟೇಟರ್ ಆಗಿರುವ ಸುನಿಲ್ ಮನೋಹರ್ ಗಾವಸ್ಕರ್ ಭವಿಷ್ಯವಾಣಿ ನುಡಿದಿದ್ದರು. ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಆಂಗ್ಲರ ನಾಡಿನಲ್ಲಿ ಭಾರತ ಕೊನೆಯ ಬಾರಿಗೆ ಟೆಸ್ಟ್ ಸರಣಿಯೊಂದನ್ನು ಗೆದ್ದಿದ್ದು 14 ವರ್ಷಗಳ ಹಿಂದೆ 2007 ರಲ್ಲಿ. ಭಾರತದಲ್ಲಿ ಇತ್ತೀಚೆಗೆ ನಡೆದ ಸರಣಿಯನ್ನು ಸುಲಭವಾಗಿ ಗೆದ್ದಿದ್ದ ವಿರಾಟ್ ಕೊಹ್ಲಿ ಪಡೆಗೆ ಈ ಬಾರಿ ಇಂಗ್ಲೆಂಡನ್ನು ಅದರ ಹಿತ್ತಲಲ್ಲೇ ಸೋಲಿಸುವ ಅತ್ಯುತ್ತಮ ಅವಕಾಶವಿದೆ ಎಂದು ಗಾವಸ್ಕರ್ ಹೇಳಿದ್ದರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪ್ರಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪೈನಲ್ ಪಂದ್ಯ ಮುಗಿದ ಸುಮಾರು ಒಂದೂವರೆ ತಿಂಗಳ ನಂತರ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಆರಂಭ ಆಟಗಾರ ರೋಹಿತ್ ಶರ್ಮ ಬ್ಯಾಟಿಂಗ್ನಲ್ಲಿ ಮಿಂಚಲಿದ್ದಾರೆ ಎಂದು ಗಾವಸ್ಕರ್ ಹೇಳಿದ್ದಾರೆ.
2019ರಲ್ಲಿ ಆರಂಭ ಆಟಗಾರನಾಗಿ ಆಡಲಾರಂಭಿಸಿದ ನಂತರ ರೋಹಿತ್ ಅವರ ಬ್ಯಾಟ್ನಿಂದ ರನ್ಗಳು ಹೇರಳವಾಗಿ ಬರುತ್ತಿವೆ. ಇದುವರೆಗೆ 38 ಟೆಸ್ಟ್ಗಳಲ್ಲಿ ಕಾಣಿಸಿಕೊಂಡಿರುವ ಆಕ್ರಮಣಕಾರ ಬಲಗೈ ಆರಂಭ ಆಟಗಾರ, 46.7 ಸರಾಸರಿಯಲ್ಲಿ 2,625 ರನ್ ಕಲೆಹಾಕಿದ್ದು ಇದರಲ್ಲಿ 7 ಶತಕಗಳಿವೆ. ಆದರೆ, ಇಂಗ್ಲೆಂಡ್ನಲ್ಲಿ ಅವರು 2014 ರಲ್ಲಿ ಒಂದು ಟೆಸ್ಟ್ ಆಡಿದ್ದು ಬಿಟ್ಟರೆ ದೀರ್ಘಾವಧಿಯ ಆವೃತ್ತಿಯಲ್ಲಿ ಇಂಗ್ಲಿಷ್ ಕಂಡೀಷನ್ಗಳಲ್ಲಿ ಅಡಿರುವ ಅನುಭವವಿಲ್ಲ.
ಆ ಪಂದ್ಯದಲ್ಲಿ ಅವರು ಕೇವಲ 34 ರನ್ ಗಳಿಸುವಲ್ಲಿ ಸಫಲರಾಗಿದ್ದರು. ಜೇಮ್ಸ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅತ್ಯಂತ ಅನುಭವಿ ವೇಗದ ಬೌಲಿಂಗ್ ಜೋಡಿಯಾಗಿದ್ದು ಅವರನ್ನು ಎದುರಿಸಿ ಆಡುವುದು ರೋಹಿತ್ಗೆ ಸುಲಭವಾಗಲಾರದು.
ಮೊದಲ ಕೆಲ ಓವರ್ಗಳಲ್ಲಿ ರೋಹಿತ್ ತೊಂದರೆ ಎದುರಿಸುವುದು ನಿಜ ಎಂದು ಗಾವಸ್ಕರ್ ಹೇಳುತ್ತಾರೆ. ಅವರ ಫುಟ್ವರ್ಕ್ ಗೊಂದಲಮಯವಾಗಿರುತ್ತದೆ ಮತ್ತು ಫ್ರಂಟ್ಫುಟ್ ಬಾಲ್ ಪಿಚ್ ಆಗುವೆಡೆ ಚಲಿಸುವುದಿಲ್ಲ. ಆದರೆ ಆರಂಭಿಕ ಓವರ್ಗಳನ್ನು ಅವರು ಯಶಸ್ವೀಯಾಗಿ ನೆಗೋಷಿಯೇಟ್ ಮಾಡಿದರೆ ಮತ್ತು ಅವರ ಪಾದಗಳು ಚೆನ್ನಾಗಿ ಚಲಿಸಲಾರಂಭಿಸಿದರೆ ಎದುರಾಳಿ ಬೌಲರ್ಗಳ ಬದುಕನ್ನು ನರಕವಾಗಿಸುತ್ತಾರೆ ಎಂದು ಗಾವಸ್ಕರ್ ಹೇಳುತ್ತಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ರೋಹಿತ್ಅಲ್ಲಿನ ವೇಗದ ಬೌಲರ್ಗಳ ವೇಗ ಭಯಾನಕವಾಗಿದ್ದರೂ ಯಾವುದೇ ತೊಂದರೆಯಿಲ್ಲದೆ ಎದುರಿಸಿದರು ಎಂದು ಗಾವಸ್ಕರ್ ಹೇಳುತ್ತಾರೆ.
‘ರೋಹಿತ್ ವಿಷಯದಲ್ಲಿ ಹೇಳುವುದಾದರೆ, ಮೊದಲ 2-3 ಓವರ್ಗಳಲ್ಲಿ ಅವರ ಫುಟ್ ಮೂವ್ಮೆಂಟ್ ಸರಿ ಇರುವುದಿಲ್ಲ, ಅವರ ಫ್ರಂಟ್ಪುಟ್ ಬಾಲ್ ಪಿಚ್ ಆಗುವ ಸ್ಥಳ ತಲುಪುವುದಿಲ್ಲ. ಆದರೆ ಆ ಓವರ್ಗಳ ನಂತರ ಬಾಲ್ ಪಿಚ್ ಆಗುವ ಸ್ಥಳಕ್ಕೆ ಫ್ರಂಟ್ಫುಟ್ ಒಯ್ದರೆ ಅವರನ್ನು ತಡೆಯುವುದು ಬೌಲರ್ಗಳಿಗೆ ಕಷ್ಟವಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಅವರು ಹೆಚ್ಚು ರನ್ ಸ್ಕೋರ್ ಮಾಡಲಿಲ್ಲ. ಆದರೆ, ಅವರು ವೇಗದ ಬೌಲರ್ಗಳನ್ನು ಎದುರಿಸಿದ ರೀತಿ ಅಮೋಘವಾಗಿತ್ತು. ಆಸ್ಸೀ ಬೌಲರ್ಗಳು 90 ಮೈಲಿ/ಗಂಟೆ ವೇಗದಲ್ಲಿ ಬೌಲ್ ಮಾಡುತ್ತಿದದ್ದರೆ ಅವರ ವೇಗ 40 ಮೈಲಿ/ಗಂಟೆ ಇದೆಯೇನೋ ಎಂಬಂತೆ ಆಡಿದರು. ಅವರ ಎಸೆತಗಳನ್ನು ಆಡಲು ರೋಹಿತ್ರಲ್ಲಿ ಅಷ್ಟೊಂದು ಸಮಯವಿತ್ತು,’ ಎಂದು ಗಾವಸ್ಕರ್ ಹಿಂದುಸ್ತಾನ್ ಟೈಮ್ಸ್ ಜೊತೆ ಮಾತಾಡುವಾಗ ಹೇಳಿದ್ದಾರೆ.
ರೋಹಿತ್ ಹೊಡೆತಗಳನ್ನಾಡುವಾಗ ಟೈಮಿಂಗ್ ಅದ್ಭುತವಾಗಿರುತ್ತದೆ ಎಂದು ಭಾರತದ ಪರ 125 ಟೆಸ್ಟ್ಗಳನ್ನಾಡಿದ ಗಾವಸ್ಕರ್ ಹೇಳುತ್ತಾರೆ. ಆದರೆ ಶಾಟ್ ಸೆಲೆಕ್ಷನ್ ಬಗ್ಗೆ ಸ್ವಲ್ಪ ಎಚ್ಚರಹಿಸಬೇಕೆಂದು ಸನ್ನಿ ಸಲಹೆ ನೀಡುತ್ತಾರೆ. ಅದರ ಕಡೆ ಗಮನ ಹರಿಸಿದರೆ ರೋಹಿತ್ ಸರಣಿಯಲ್ಲಿ ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಅವರ ಹೇಳುತ್ತಾರೆ.
‘ಬ್ಯಾಟಿಂಗ್ ಮಾಡುವಾಗ ರೋಹಿತ್ ಆಕ್ರಮಣಕಾರಿ ಪ್ರವೃತ್ತಿ ಪ್ರದರ್ಶಿಸುವುದು ಗಮನಾರ್ಹ ಅಂಶವಾಗಿದೆ. ಅವರ ಆಕ್ರಮಣಕಾರಿ ಆಟದ ಸೊಬಗನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಚಿಂತೆಯ ವಿಷಯವೆಂದರೆ ಅವರ ಶಾಟ್ ಸೆಲಕ್ಷನ್. ಹೊಡೆತ ಬಾರಿಸುವ ಪ್ರಯತ್ನದಲ್ಲಿ ಅವರು ವಿಕೆಟ್ ಒಪ್ಪಿಸಿಬಿಡುತ್ತಾರೆ. ಈ ಅಂಶವನ್ನು ಅವರು ತಿದ್ದಿಕೊಂಡರೆ 5ಟೆಸ್ಟಗಳ ಸರಣಿಯಲ್ಲಿ ಖಂಡಿತವಾಗಿಯೂ ಮೂರು ಶತಕಗಳನ್ನು ಬಾರಿಸಲಿದ್ದಾರೆ,’ ಎಂದು ಗಾವಸ್ಕರ್ ಹೇಳಿದ್ದಾರೆ.