India vs England: ಸರಣಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅದು ನನ್ನ ಶ್ರೇಷ್ಠ ಸಾಧನೆ; ಅಂತಿಮ ಪಂದ್ಯಕ್ಕೆ ಸಜ್ಜಾದ ಇಂಗ್ಲೆಂಡ್ ನಾಯಕ, ತಂಡದ ಬಲಾಬಲ ಹೀಗಿದೆ
India vs England: ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಭಾರತದ ವಿರುದ್ಧದ ಈ ಸರಣಿಯನ್ನು ಕನಿಷ್ಠ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅದು ನನ್ನ ಶ್ರೇಷ್ಠ ಸಾಧನೆಗಳಲ್ಲಿ ಒಂದೆನಿಸುತ್ತದೆ ಎಂದು ಹೇಳಿದ್ದಾರೆ.
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಈ ಪಂದ್ಯ ಆರಂಭವಾಗಲಿದ್ದು ಭಾರತ ಈ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಅಂತಿಮ ಪಂದ್ಯವನ್ನು ಕನಿಷ್ಟ ಡ್ರಾ ಮಾಡಿಕೊಂಡರೂ ಟೀಂ ಇಂಡಿಯಾ ಸರಣಿಯನ್ನು ಗೆಲ್ಲಲಿದೆ. ಜೊತೆಗೆ WTC ಫೈನಲ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಆದರೆ ಭಾರತವನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿ ಸರಣಿಯನ್ನು ಸಮಗೊಳಿಸುವ ಮೂಲಕ WTC ಫೈನಲ್ ಕನಸು ಕಾಣುತ್ತಿರುವ ಭಾರತಕ್ಕೆ ಅಡ್ಡಗಾಲು ಹಾಕುವ ಉಮೇದಿಯಲ್ಲಿದ್ದಾರೆ ಇಂಗ್ಲೆಂಡ್ ನಾಯಕ ಜೋ ರೂಟ್. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಭಾರತದ ವಿರುದ್ಧದ ಈ ಸರಣಿಯನ್ನು ಕನಿಷ್ಠ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅದು ನನ್ನ ಶ್ರೇಷ್ಠ ಸಾಧನೆಗಳಲ್ಲಿ ಒಂದೆನಿಸುತ್ತದೆ ಎಂದು ಅದಾಗಲೇ ಹೇಳಿಬಿಟ್ಟಿದ್ದಾರೆ. ಇಂಗ್ಲೆಂಡ್ ತಂಡ ಸರಣಿಯನ್ನು ಡ್ರಾ ಮಾಡಿಕೊಳ್ಳಬೇಕಾದರೆ ಅಂತಿಮ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ!
ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗ ಹೀಗಿರಬಹುದು.. ಜೋ ರೂಟ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸುವುದರೊಂದಿಗೆ ಸರಣಿಯಲ್ಲಿ ಮಿಂಚುವ ಮುನ್ಸೂಚನೆ ನೀಡಿದ್ದರು. ಆದರೆ ಮೊದಲ ಪಂದ್ಯದ ನಂತರ ರೂಟ್ ಅವರ ಬ್ಯಾಟ್ ಹೆಚ್ಚಾಗಿ ಸದ್ದು ಮಾಡುತ್ತಿಲ್ಲ. ಅಲ್ಲದೆ ತಂಡದಲ್ಲಿ ಆರಂಭಿಕರು ಕೈಕೊಡುತ್ತಿರುವುದು ರೂಟ್ಗೆ ದೊಡ್ಡ ಹೊಡೆತವಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ರೂಟ್ ಯಾವೆಲ್ಲಾ ಬದಲಾವಣೆ ಮಾಡಲಿದ್ದಾರೆ ಕಾದು ನೋಡಬೇಕಿದೆ.
ಜಾಕ್ ಕ್ರಾಲೆ: ಮೊದಲನೇ ಟೆಸ್ಟ್ನಿಂದಲೂ ತಂಡಕ್ಕೆ ಯಾವುದೇ ಕೊಡುಗೆ ನೀಡದ ಜಾಕ್ ಕ್ರಾಲೆ ಮೇಲೆ ಅಂತಿಮ ಪಂದ್ಯದಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಕ್ರಾಲೆ ಸಾಧ್ಯವಾದಷ್ಟು ಮೈದಾನದಲ್ಲಿ ನಿಂತು ಆಡುವ ಯೋಚನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ಇದರಿಂದ ನಂತರ ಬರುವ ಆಟಗಾರರಿಗೆ ಯಾವುದೇ ಒತ್ತಡ ಇರುವುದಿಲ್ಲ.
ಡೊಮಿನಿಕ್ ಸಿಬ್ಲಿ: ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ನಾಯಕ ರೂಟ್ನೊಂದಿಗೆ ಅಬ್ಬರಿಸಿದ್ದ ಸಿಬ್ಲಿ ಅಂದು ಶತಕ ವಂಚಿತರಾಗಿದ್ದರು. ಆ ಪಂದ್ಯವನ್ನು ಹೊರತುಪಡಿಸಿ ಇನ್ನುಳಿದಂತೆ ಸಿಬ್ಲಿ ಯಾವ ಪಂದ್ಯದಲ್ಲಿ ನಿರೀಕ್ಷೆಯಂತೆ ಬ್ಯಾಟ್ ಬೀಸಿಲ್ಲ. ಹೀಗಾಗಿ ನಾಯಕ ರೂಟ್ಗೆ ಆರಂಭಿಕರ ವೈಫಲ್ಯ ದೊಡ್ಡ ತಲೆನೋವಾಗಿದೆ.
ಜಾನಿ ಬೈರ್‌ಸ್ಟೋವ್: ಅಂತಿಮ 2 ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಇಂಗ್ಲೆಂಡ್ ತಂಡದ ಸ್ಪೋಟಕ ಆಟಗಾರ ಬೈರ್‌ಸ್ಟೋವ್ ಖಾತೆ ತೆರೆಯುವ ಮುನ್ನವೆ ಪೆವಿಲಿಯನ್ ಸೇರುತ್ತಿದ್ದಾರೆ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಆಡಿದ ಮೊದಲ ಪಂದ್ಯದಲ್ಲಿ ಬೈರ್‌ಸ್ಟೋವ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಗಳಿವೆ.
ಬೆನ್ ಸ್ಟೋಕ್ಸ್: ಐಪಿಎಲ್‌ನಲ್ಲಿ ಅಬ್ಬರಿಸುವ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಸ್ಟೋಕ್ಸ್ ಈ ಸರಣಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯುವ ಸ್ಟೋಕ್ಸ್ ತಂಡದ ಇತರ ಆಟಗಾರರಿಗೆ ನೆರವಾಗದೆ ಬೀರುಸಿನ ಆಟವಾಡಿ ಬಹುಬೇಗನೆ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ.
ಆಲ್ಲಿ ಪೋಪ್: ಭಾರತದಲ್ಲಿ ಆಡಿರುವ 3 ಟೆಸ್ಟ್ ಮ್ಯಾಚ್ಗಳಲ್ಲೂ ಪೋಪ್ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಹೀಗಾಗಿ 4ನೇ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ನ ನಿರೀಕ್ಷೆಯಲ್ಲಿ ತಂಡವಿದೆ.
ಬೆನ್ ಫೋಕ್ಸ್: ವಿಕೆಟ್ ಕೀಪಿಂಗ್ನಲ್ಲಿ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನೇ ಹೋಲುವ ಫೋಕ್ಸ್, ವಿಕೆಟ್ ಹಿಂದೆ ಚುರುಕಿನ ಕೀಪಿಂಗ್ ಮಾಡುತ್ತಿದ್ದಾರೆ. ಆದರೆ ವಿಕೆಟ್ ಮುಂದೆ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.
ಡೊಮ್ ಬೆಸ್: ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳ ಬೆವರಿಳಿಸಿದ್ದ ಬೆಸ್, ನಂತರದ ಪಂದ್ಯಗಳಲ್ಲಿ ಕಾಣಿಸಿಕೊಳಲಿಲ್ಲ. ಹೀಗಾಗಿ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗುತ್ತಿರುವುದರಿಂದ ಬೆಸ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆಗಳಿವೆ.
ಜ್ಯಾಕ್ ಲೀಚ್: ಇಂಗ್ಲೆಂಡ್ ತಂಡದಲ್ಲಿರುವ ಏಕೈಕ ಪೂರ್ಣಪ್ರಮಾಣದ ಸ್ಪಿನ್ನರ್ ಎಂದರೆ ಅದು ಲೀಚ್. ಮೊದಲ ಪಂದ್ಯದಿಂದಲೂ ತಮ್ಮ ಸಾಮಥ್ರ್ಯಕ್ಕೆ ತಕ್ಕಂತ ಆಟ ಪ್ರದರ್ಶಿಸಿಸುತ್ತಿರುವ ಲೀಚ್ ಅಂತಿಮ ಪಂದ್ಯದಲ್ಲೂ ಮಿಂಚುವ ನಿರೀಕ್ಷೆ ಇದೆ.
ಮಾರ್ಕ್ ವುಡ್: ಇಂಗ್ಲೆಂಡ್ ತಂಡದ ವೇಗಿ ಆರ್ಚರ್ರಿಂದ ಇಲ್ಲಿಯವರೆಗೆ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲಿ ಆರ್ಚರ್ ಬದಲು ಮತ್ತೊಬ್ಬ ವೇಗಿ ಮಾರ್ಕ್ ವುಡ್ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.
ಜೇಮ್ಸ್ ಆಂಡರ್ಸನ್: ಮೊದಲೆರೆಡು ಪಂದ್ಯಗಳಲ್ಲಿ ಉತ್ತಮವಾಗಿ ಸ್ಪೆಲ್ ಮಾಡಿದ್ದ ಆಂಡರ್ಸನ್, 3ನೇ ಟೆಸ್ಟ್ ಪಂದ್ಯದಲ್ಲಿ ಅಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲಿ ಆಂಡರ್ಸನ್ ಫಾರ್ಮ್ಗೆ ಮರಳುವ ಸಾಧ್ಯತೆಗಳಿವೆ.
ಇದನ್ನೂ ಓದಿ: India vs England: ನಿರ್ಣಾಯಕ ಟೆಸ್ಟ್ ಯಾವ ಚಾನೆಲ್ನಲ್ಲಿ ಪ್ರಸಾರ, ಟೆಸ್ಟ್ ಆರಂಭದ ಸಮಯ, ಸ್ಥಳ, ತಂಡಗಳ ಮಾಹಿತಿ ಇಲ್ಲಿದೆ
Published On - 2:48 pm, Wed, 3 March 21