IND vs SL ODI Series: ಆ ಒಂದು ಸ್ಥಾನಕ್ಕಾಗಿ ಭಾರತ ತಂಡದಲ್ಲಿ ಶುರುವಾಗಿದೆ ಬಿಗ್ ಫೈಟ್
ಏಕದಿನ ಹಾಗೂ ಟಿ-20 ಸರಣಿಗಾಗಿ ಶ್ರೀಲಂಕಾ ಪ್ರವಾಸ ಬೆಳೆಸಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಈಗ ಪ್ರಾರಂಭಿಕ ಅಥವಾ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಯಾರು ಮೈದಾನಕ್ಕೆ ಇಳಿಯುತ್ತಾರೆ ಎಂಬ ಕುರಿತಾಗಿ ಕುತೂಹಲ ಇದೆ.
ಏಕದಿನ ಹಾಗೂ ಟಿ-20 ಸರಣಿಗಾಗಿ ಶ್ರೀಲಂಕಾ ಪ್ರವಾಸ ಬೆಳೆಸಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಇದೇ ಜುಲೈ 13 ರಂದು ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗಲಿದೆ. ಹೀಗಿರುವಾಗ ಟೀಮ್ ಇಂಡಿಯಾದ ಆಡುವ ಬಳಗ ಹೇಗಿರಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾರಂತಹ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಸೀಮಿತ ಓವರ್ಗಳ ಸರಣಿಗೆ ಬಿಸಿಸಿಐ 20 ಸದಸ್ಯರ ನೂತನ ತಂಡ ಪ್ರಕಟಿಸಿತ್ತು. ಇದರಲ್ಲಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಇಬ್ಬರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಸದ್ಯ ಇವರಿಬ್ಬರಲ್ಲಿ ಪ್ಲೇಯಿಂಗ್ XI ಸ್ಥಾನಕ್ಕಾಗಿ ತಂಡದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿದೆ.
ಇಶಾನ್ ಕಿಶನ್ ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕೂಡ ಕಾರಣರಾಗಿದ್ದರು. ಇತ್ತ ಸಂಜು ಸ್ಯಾಮ್ಸನ್ ಕೂಡ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ ಅನುಭವ ಹೊಂದಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬಹುದು. ಹೀಗಾಗಿ ಇವರಿಬ್ಬರ ಪೈಕಿ ಯಾರನ್ನು ಕಣಕ್ಕಿಳಿಸಬೇಕು ಎಂಬುದು ಟೀಮ್ ಇಂಡಿಯಾಕ್ಕೆ ಗೊಂದಲವಾಗಿ ಉಳಿದಿದೆ.
ಇಶಾನ್ ಕಿಶನ್ ಅವರನ್ನು ಆಡುವ ಬಳಗಕ್ಕೆ ಪರಿಗಣಿಸಬೇಕು ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರು ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ನಡುವೆ ಯಾರು ಆಡಿದರೆ ಉತ್ತಮ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಮಂಜ್ರೇಕರ್ ಪ್ರಕಾರ, “ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಕಳೆದ ಕೆಲವು ಸಮಯದಿಂದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಇಶಾನ್ ಕಿಶನ್ ಅವರನ್ನು ಆಡುವ ಬಳಗಕ್ಕೆ ಪರಿಗಣಿಸಬೇಕು. ಸೀಮಿತ ಓವರ್ಗಳ ಕ್ರಿಕೆಟ್ಗೆ ವಿಕೆಟ್ ಕೀಪಿಂಗ್ ಅಷ್ಟೊಂದು ಮುಖ್ಯವಾಗುವುದಿಲ್ಲ. ಕಿಶನ್ ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಭಾರತ ಪ್ಲೇಯಿಂಗ್ XIಗೆ ಕಳೆದ ಹಲವು ವರ್ಷಗಳಿಂದ ತಮ್ಮ ವೈಯಕ್ತಿಕ ಪ್ರದರ್ಶನದಲ್ಲಿ ಏರಿಳಿತಗಳನ್ನು ಕಂಡಿರುವ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು ಕಿಶನ್ಗೆ ಅವಕಾಶ ನೀಡಬೇಕು” ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಬಿಸಿಸಿಐ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಿದೆ. ಭವಿಷ್ಯದಲ್ಲಿ ಬಲಿಷ್ಠ ತಂಡ ಕಟ್ಟಲು ಹೊಸ ಮುಖಗಳಿಗೆ ಮಣೆಹಾಕಿದೆ. ಈ ಸರಣಿಯಲ್ಲಿ ಮುಖ್ಯವಾಗಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೇವದತ್ ಪಡಿಕ್ಕಲ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ:
( India vs Sri Lanka ODI series fight has begun in Team India for the opening position)