AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್ 2026: 4x400m ರಿಲೇಯಲ್ಲಿ ಭಾರತೀಯ ವನಿತೆಯರಿಗೆ ಬಂಗಾರ: ಈ ಸಾಧನೆಗೆ ಸಾಕ್ಷಿಯಾದ ಕರ್ನಾಟಕದ ಪೂವಮ್ಮ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ 4x400m ರಿಲೇ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದಿದೆ. 32 ವರ್ಷಗಳ ನಂತರ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನ ಇದಾಗಿದೆ. ವಿತ್ಯಾ ರಾಮ್‌ರಾಜ್, ಕಿರಣ್ ಪಹಲ್, ಪೂವಮ್ಮ ಮತ್ತು ಪ್ರಾಚಿ ತಂಡ ಈ ಸಾಧನೆ ಮಾಡಿದೆ. ವಿತ್ಯಾ ಈ ಕೂಟದಲ್ಲಿ ಮೂರು ಪದಕಗಳನ್ನು ಗೆದ್ದು, ಪಿ.ಟಿ. ಉಷಾ ಅವರ ದಾಖಲೆಯನ್ನು ಮುರಿದಿದ್ದಾರೆ.

ಏಷ್ಯನ್ ಗೇಮ್ಸ್ 2026: 4x400m ರಿಲೇಯಲ್ಲಿ ಭಾರತೀಯ ವನಿತೆಯರಿಗೆ ಬಂಗಾರ: ಈ ಸಾಧನೆಗೆ ಸಾಕ್ಷಿಯಾದ ಕರ್ನಾಟಕದ ಪೂವಮ್ಮ
ಭಾರತ ಅಥ್ಲೆಟಿಕ್ಸ್ ಚಿನ್ನದ ಪದಕ
ಅಕ್ಷಯ್​ ಪಲ್ಲಮಜಲು​​
|

Updated on:Sep 29, 2026 | 6:47 PM

Share

ಮುಖ್ಯಾಂಶಗಳು

  • ಭಾರತೀಯ ಅಥ್ಲೆಟಿಕ್ಸ್ ಪಡೆಗೆ ಕೊನೆಗೂ ಬಂಗಾರದ ಪದಕ
  • ಮಹಿಳೆಯರ 4x400 ಮೀಟರ್ಸ್ ರಿಲೇಯಲ್ಲಿ ಭಾರತೀಯ ವನಿತೆಯರ ಪಡೆ
  • ದೇಶಕ್ಕೆ ಅಥ್ಲೆಟಿಕ್ಸ್ ವಿಭಾಗದ ಮೊದಲ ಚಿನ್ನದ ಪದಕ

ಜಪಾನ್, ಸೆ,29: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಸಾಲು ಸಾಲು ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ತೃಪ್ತಿಪಟ್ಟುಕೊಂಡಿದ್ದ ಭಾರತೀಯ ಅಥ್ಲೆಟಿಕ್ಸ್ ಪಡೆಗೆ ಕೊನೆಗೂ ಬಂಗಾರದ ಪದಕ ಸಿಕ್ಕಿದೆ. ಮಂಗಳವಾರ ನಡೆದ ಮಹಿಳೆಯರ 4×400 ಮೀಟರ್ಸ್ ರಿಲೇಯಲ್ಲಿ ಭಾರತೀಯ ವನಿತೆಯರ ಪಡೆ ಅದ್ಭುತ ಪ್ರದರ್ಶನ ನೀಡಿ ದೇಶಕ್ಕೆ ಅಥ್ಲೆಟಿಕ್ಸ್ ವಿಭಾಗದ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ. ಇನ್ನು ಸಾಧನೆಯಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವಲ್ಲಿ ಕರ್ನಾಟಕದ ಪೂವಮ್ಮ ವಿಶೇಷ ಪಾತ್ರವಹಿಸಿದ್ದಾರೆ.

ವಿತ್ಯಾ ರಾಮ್‌ರಾಜ್, ಕಿರಣ್ ಪಹಲ್, ಮಾಚೆಟ್ಟಿರ ಪೂವಮ್ಮ ಹಾಗೂ ಪ್ರಾಚಿ ಅವರನ್ನೊಳಗೊಂಡ ಭಾರತೀಯ ನಾಲ್ವರ ಮಹಿಳಾ ತಂಡವು 3 ನಿಮಿಷ 29.69 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನದೊಂದಿಗೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಬಲಶಾಲಿ ಬಹ್ರೇನ್ ತಂಡ (3:30.21) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರೆ, ಆತಿಥೇಯ ಚೀನಾ ತಂಡ (3:31.02) ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

1994ರ ಹಿರೋಶಿಮಾ ಏಷ್ಯನ್ ಗೇಮ್ಸ್ ನಂತರ ಇದೇ ಮೊದಲ ಬಾರಿಗೆ ಭಾರತ ಅಥ್ಲೆಟಿಕ್ಸ್‌ನಲ್ಲಿ ಒಂದೂ ಚಿನ್ನದ ಪದಕವಿಲ್ಲದೆ ಖಾಲಿ ಕೈಯಲ್ಲಿ ಹಿಂತಿರುಗುವ ಭೀತಿಗೆ ಸಿಲುಕಿತ್ತು. ಆದರೆ, ಭಾರತೀಯ ಮಹಿಳಾ ರಿಲೇ ತಂಡವು ರನ್‌ವೇಯಲ್ಲಿ ನೀಡಿದ ಬಿರುಗಾಳಿಯಂತಹ ಪ್ರದರ್ಶನವು 32 ವರ್ಷಗಳ ಬಳಿಕ ಎದುರಾಗಿದ್ದ ಗೋಲ್ಡ್ ಜಿಂಕ್ಸ್ ಅನ್ನು ಸಂಪೂರ್ಣವಾಗಿ ಮೆಟ್ಟಿ ನಿಂತಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ನಲ್ಲಿ ಹೊಸ ಇತಿಹಾಸ: ನೀರು ಧಂಡಾಗೆ ಐತಿಹಾಸಿಕ ಚಿನ್ನ!

ವಿತ್ಯಾ ರಾಮ್‌ರಾಜ್ ಹ್ಯಾಟ್ರಿಕ್ ಪದಕದ ಕ್ರಾಂತಿ:

ತಮಿಳುನಾಡಿನ ಅಥ್ಲೀಟ್ ವಿತ್ಯಾ ರಾಮ್‌ರಾಜ್ ಪಾಲಿಗೆ ಈ ಬಾರಿಯ ಏಷ್ಯನ್ ಗೇಮ್ಸ್ ಅತ್ಯಂತ ಸ್ಮರಣೀಯವಾಗಿ ಮೂಡಿಬಂದಿದೆ. ಈ ಕೂಟದಲ್ಲಿ ಅವರು ಗಳಿಸಿದ 3ನೇ ಪದಕ ಇದಾಗಿದೆ:

ಮಹಿಳೆಯರ 4x400m ರಿಲೇ: ಚಿನ್ನದ ಪದಕ

ಮಿಕ್ಸೆಡ್ 4x400m ರಿಲೇ: ಬೆಳ್ಳಿ ಪದಕ

ಮಹಿಳೆಯರ 400m ಹರ್ಡಲ್ಸ್: ಕಂಚಿನ ಪದಕ

ವಿಶೇಷವೆಂದರೆ, 400 ಮೀಟರ್ ಹರ್ಡಲ್ಸ್‌ನಲ್ಲಿ ಅವರು 54.75 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ, ಪಿ.ಟಿ. ಉಷಾ ಅವರು 42 ವರ್ಷಗಳ ಹಿಂದೆ (1984ರಲ್ಲಿ) ಬರೆದಿದ್ದ 55.42 ಸೆಕೆಂಡುಗಳ ಸುದೀರ್ಘ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಮಹಿಳೆಯರ ರಿಲೇಯಲ್ಲಿ ಚಿನ್ನ ಸಿಗುವ ಮುನ್ನವೇ ಮಂಗಳವಾರ ಭಾರತಕ್ಕೆ ಹಲವು ಪದಕಗಳು ಹರಿದುಬಂದಿದ್ದವು,

ಗುಲ್ವೀರ್ ಸಿಂಗ್ ಹ್ಯಾಟ್ರಿಕ್ ಸಾಧನೆ: ಪುರುಷರ 5000 ಮೀಟರ್ಸ್ ಓಟದಲ್ಲಿ ಗುಲ್ವೀರ್ ಸಿಂಗ್ 13:32.75 ಸಮಯದಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. ಈ ಹಿಂದೆ 10,000 ಮೀ. ಹಾಗೂ 1500 ಮೀ.ನಲ್ಲಿ ಬೆಳ್ಳಿ ಗೆದ್ದಿದ್ದ ಗುಲ್ವೀರ್‌ಗೆ ಇದು ಕೂಟದ 3ನೇ ಪದಕ.

ಮಹಿಳೆಯರ ಹೈಜಂಪ್: ಪೂಜಾ ಅವರು ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.

ಮಿಕ್ಸೆಡ್ 4x100m ರಿಲೇ: ಭಾರತೀಯ ಓಟಗಾರರ ಪಡೆ ಮತ್ತೊಂದು ಕಂಚಿನ ಪದಕಕ್ಕೆ ಮುತ್ತಿಕ್ಕಿತು.

ಇನ್ನು ಓಟಗಾರ ಅವಿನಾಶ್ ಸಾಬ್ಲೆ 3000m ಸ್ಟೀಪಲ್‌ಚೇಸ್‌ನಲ್ಲಿ ಪದಕ ಕೈತಪ್ಪಿದ ನಂತರ 5000m ಫೈನಲ್‌ನಿಂದ ಹಿಂದೆ ಸರಿದರು. ಇನ್ನು ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ತಾನ್ಯಾ ಚೌಧರಿ (63.35m – ವೈಯಕ್ತಿಕ ಶ್ರೇಷ್ಠ) 4ನೇ ಸ್ಥಾನ ಮತ್ತು ಅನುಷ್ಕಾ ಯಾದವ್ (64.56m) 5ನೇ ಸ್ಥಾನ ಪಡೆದು ಪದಕದ ಅಂಚಿನಲ್ಲಿ ಎಡವಿದರು. ಆದರೆ, ಸಂಜೆಯ ವೇಳೆಗೆ ವನಿತೆಯರ 4x400m ರಿಲೇ ತಂಡ ನೀಡಿದ ಈ ಮಹಾಸಾಧನೆ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದೆ.

ಸಾಮನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು

ಪ್ರಶ್ನೆ: ಏಷ್ಯನ್ ಗೇಮ್​ಸ್​​​ನಲ್ಲಿ ಅಥ್ಲೆಟಿಕ್ಸ್ ವಿಭಾಗದ ಭಾರತಕ್ಕೆ ಇದು ಎಷ್ಟನೇ ಚಿನ್ನದ ಪದಕ? 

ಉತ್ತರ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ರಿಲೇ ತಂಡವು ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ

ಪ್ರಶ್ನೆ: ಮಾಚೆಟ್ಟಿರ ಪೂವಮ್ಮ ಎಲ್ಲಿಯವರು ? ಅವರ ಸಾಧನೆಗಳೇನು?

ಉತ್ತರ:  ಮಾಚೆಟ್ಟಿರ ರಾಜು ಪೂವಮ್ಮ (ಎಂ. ಆರ್. ಪೂವಮ್ಮ) ಅವರು ಕರ್ನಾಟಕದ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನವರು. 400 ಮೀಟರ್ ಓಟ ಹಾಗೂ ರಿಲೇ ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಇವರು, ಮಂಗಳೂರಿನ ಎಸ್‌ಡಿಎಮ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ (Mixed) 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಪ್ರಶ್ನೆ: ಏಷ್ಯನ್ ಗೇಮ್​ಸ್​​​ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿತ್ಯಾ ರಾಮ್‌ರಾಜ್ ಮಾಡಿದ ಸಾಧನೆ ಏನು?

ಉತ್ತರ: ತಮಿಳುನಾಡಿನ ಅಥ್ಲೀಟ್ ವಿತ್ಯಾ ರಾಮ್‌ರಾಜ್ ಏಷ್ಯನ್ ಗೇಮ್ಸ್​​ನಲ್ಲಿ 3 ಕಂಚಿನ ಪದಕ ಪಡೆದಿದ್ದಾರೆ. ವಿಶೇಷವೆಂದರೆ, 400 ಮೀಟರ್ ಹರ್ಡಲ್ಸ್‌ನಲ್ಲಿ ಪಿ.ಟಿ. ಉಷಾ ಅವರು ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Tue, 29 September 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More