
ಬ್ಯಾಟಿಂಗ್ ಪರಾಕ್ರಮದಿಂದ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ ಸಚಿನ್ ರಮೇಶ್ ತೆಂಡೂಲ್ಕರ್ ಅವರ ಹೆಸರು ಕ್ರಿಕೆಟ್ ದುನಿಯಾದಲ್ಲಿ ಅಚ್ಚಳಿಯದೆ ಉಳಿದಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿರುವ ಸಚಿನ್ ಅವರು ಇಂದು ತಂದೆಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ವಿಶೇಷ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸಚಿನ್ ತನ್ನ ತಂದೆ ರಮೇಶ್ ತೆಂಡೂಲ್ಕರ್ ಅವರ ನೆನಪಿಗಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ತಮ್ಮ ತಂದೆಯೊಂದಿಗಿನ ಘಟನೆಯನ್ನು ಹಂಚಿಕೊಂಡಿದ್ದಾರೆ.
ಸಚಿನ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರ ತಂದೆ ವಿಶ್ರಾಂತಿ ಪಡೆಯಲು ಕೂರುತ್ತಿದ್ದ ತೂಗುಯ್ಯಾಲೆ ಮಾದರಿಯ ಚೇರ್ ಬಗ್ಗೆ ಭಾವನಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಸಚಿನ್ ಇದನ್ನು ಹೇಳುತ್ತಿರುವಾಗ, ಅವರು ಕೂಡ ಭಾವುಕರಾಗುವುದನ್ನು ಕಾಣಬಹುದು.
ತಂದೆ ಸಾವಿನ ದುಃಖದಲ್ಲೂ ಕ್ರಿಕೆಟ್ ಆಡಿದ ಸಚಿನ್
ಸಚಿನ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲ್ಪಟ್ಟಿದ್ದಾರೆ. ಆದರೆ ಸಚಿನ್ ಈ ಪದವಿಗಾಗಿ ಶ್ರಮಿಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅನುಭವಿ ಬೌಲರ್ನನ್ನು ಎದುರಿಸಿದ ಸಚಿನ್, ಪ್ರತಿಯೊಂದು ಪರಿಸ್ಥಿತಿಯಲ್ಲೂ ಭಾರತ ಪರ ಮಿಂಚಿದ್ದಾರೆ. ಅಂತಹ ಸ್ಮರಣಿಯ ಆಟವನ್ನು ಅನೇಕರು ಮರೆತಿರಬಹುದು. ಅದು 1999 ರ ವಿಶ್ವಕಪ್ನಲ್ಲಿ ಕೀನ್ಯಾ ವಿರುದ್ಧ ಸಚಿನ್ 140 ರನ್ ಗಳಿಸಿದರು. ತಂದೆ ತೀರಿಕೊಂಡ ಮೂರು ದಿನಗಳ ನಂತರ ಅವರು ಈ ಅದ್ಭುತ ಇನ್ನಿಂಗ್ಸ್ ಆಡಿದರು. ಸಚಿನ್ ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನೆದು ಭಾವುಕರಾಗಿದ್ದರು. ತಂದೆಯ ಹಠಾತ್ ಸಾವಿನಿಂದ ಸಚಿನ್ ವಿಶ್ವಕಪ್ನಿಂದ ಹಿಂದೆ ಸರಿಯಲಿದ್ದಾರೆ ಎಂಬ ಊಹಪೋಹಗಳು ಎದ್ದಿದ್ದವು. ಆದರೆ ವಿಶ್ವಕಪ್ನಲ್ಲಿ ಆಡುವುದನ್ನು ಮುಂದುವರೆಸಲು ತಾಯಿ ಒತ್ತಾಯಿಸಿದ ನಂತರ ಸಚಿನ್ ಮೈದಾನಕ್ಕೆ ಇಳಿದಿದ್ದರು.