IPL 2022: ಐಪಿಎಲ್ನ 62ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗುಜರಾತ್ ಟೈಟನ್ಸ್ (CSK vs GT) ಭರ್ಜರಿ ಜಯ ಸಾಧಿಸಿದೆ. ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಈ ಬಾರಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದು ಖಚಿತವಾಗಿದೆ. ಏಕೆಂದರೆ ಆಡಿರುವ 13 ಪಂದ್ಯಗಳಲ್ಲಿ ಗುಜರಾತ್ ತಂಡವು 10 ಗೆಲುವು ದಾಖಲಿಸಿದೆ. ಈ ಮೂಲಕ ಒಟ್ಟು 20 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 2 ಪಂದ್ಯಗಳಿದ್ದು, ಈ ಎರಡು ಮ್ಯಾಚ್ನಲ್ಲೂ ಗೆದ್ದು 20 ಪಾಯಿಂಟ್ಸ್ ಪಡೆದರೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನ ಪಡೆಯಬಹುದು. ಒಂದು ವೇಳೆ ಲಕ್ನೋ ಅಗ್ರಸ್ಥಾನ ಅಲಂಕರಿಸಿದರೂ 2ನೇ ಸ್ಥಾನ ಗುಜರಾತ್ ಟೈಟನ್ಸ್ ಪಾಲಾಗಲಿದೆ.
ಇನ್ನು ಗುಜರಾತ್ ಟೈಟನ್ಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಆರ್ಸಿಬಿ ವಿರುದ್ದ ಆಡಬೇಕಿದೆ. ಈ ಪಂದ್ಯದಲ್ಲಿ ಗೆದ್ದರೂ, ಸೋತರೂ ಪಾಯಿಂಟ್ಸ್ ಟೇಬಲ್ನಲ್ಲಿ ಮಹತ್ವದ ಬದಲಾವಣೆ ಆಗುವುದಿಲ್ಲ. ಹೀಗಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನ ಅಥವಾ 2ನೇ ಸ್ಥಾನದಲ್ಲೇ ಕಾಣಿಸಿಕೊಳ್ಳಲಿರುವ ಗುಜರಾತ್ ಟೈಟನ್ಸ್ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದು ಖಚಿತವಾಗಿದೆ.
ಇಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಲಾಭವೆಂದರೆ, ಈ ಪಂದ್ಯದಲ್ಲಿ ಗೆದ್ದರೆ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಒಂದು ವೇಳೆ ಸೋತರೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ದೊರೆಯಲಿದೆ. ಅದರಂತೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಮೂಲಕ ಮತ್ತೊಮ್ಮೆ ಫೈನಲ್ಗೆ ಪ್ರವೇಶಿಸುವ ಅವಕಾಶ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಇರಲಿದೆ.
ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯ ಗೆದ್ದರೆ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ 2ನೇ ತಂಡವಾಗಿ ಲಕ್ನೂ ಸೂಪರ್ ಜೈಂಟ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಮುಂದಿನ 2 ಪಂದ್ಯಗಳನ್ನು ಅತ್ಯುತ್ತಮ ನೆಟ್ ರನ್ ರೇಟ್ನೊಂದಿಗೆ ಗೆದ್ದರೆ ಮಾತ್ರ 2ನೇ ಸ್ಥಾನಕ್ಕೇರಬಹುದು.
ಇದರ ಹೊರತಾಗಿ 14 ಪಾಯಿಂಟ್ಸ್ ಕಲೆಹಾಕಿ 4ನೇ ಸ್ಥಾನದಲ್ಲಿರುವ ಆರ್ಸಿಬಿ ತಂಡಕ್ಕೆ 2ನೇ ಸ್ಥಾನಕ್ಕೇರುವ ಅವಕಾಶವಿಲ್ಲ. ಏಕೆಂದರೆ ಆರ್ಸಿಬಿ ತಂಡಕ್ಕೆ ಇನ್ನುಳಿದಿರುವುದು ಕೇವಲ 1 ಪಂದ್ಯ ಮಾತ್ರ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಸಿಗಲಿದೆ. ಆದರೆ ಇಲ್ಲಿ ಆರ್ಸಿಬಿ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪೈಪೋಟಿ ನೀಡಲಿದೆ. ಏಕೆಂದರೆ ಈ ಎರಡೂ ತಂಡಗಳಿಗೂ 16 ಪಾಯಿಂಟ್ಸ್ ಗಳಿಸುವ ಅವಕಾಶವಿದ್ದು, ಹೀಗಾಗಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ತಂಡಗಳು ಮುಂದಿನ 2 ಪಂದ್ಯಗಳನ್ನು ಗೆದ್ದರೆ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೇರಬಹುದು. ಇದರಿಂದ ಆರ್ಸಿಬಿ ತಂಡವು ಪ್ಲೇಆಫ್ ನಿಂದ ಹೊರಬೀಳಬಹುದು.
ಏಕೆಂದರೆ ಆರ್ಸಿಬಿ ತಂಡದ ನೆಟ್ ರನ್ ರೇಟ್ ಮೈನಸ್ನಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನೆಟ್ ರನ್ ರೇಟ್ ಪ್ಲಸ್ನಲ್ಲಿದೆ. ಹೀಗಾಗಿ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಅತ್ಯುತ್ತಮ ನೆಟ್ ರನ್ ರೇಟ್ನೊಂದಿಗೆ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಳ್ಳಬೇಕಿದೆ. ಈ ಮೂಲಕ ಆರ್ಸಿಬಿ ತಂಡ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು.
ಒಟ್ಟಿನಲ್ಲಿ ಲೀಗ್ ಹಂತದಲ್ಲಿ 10 ಗೆಲುವು ದಾಖಲಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡವು ಪ್ಲೇಆಫ್ನಲ್ಲಿ ಮೊದಲ ಕ್ವಾಲಿಫೈಯರ್ ಆಡುವ ಮೊದಲ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಪಡೆ ತನ್ನ ಬಲಿಷ್ಠತೆಯನ್ನು ತೆರೆದಿಟ್ಟಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.