ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. 60 ಪಂದ್ಯಗಳ ಸುದೀರ್ಘ ಹೋರಾಟದ ನಂತರವೂ ಇದುವರೆಗೆ ಯಾವುದೇ ಒಂದು ತಂಡ ಪ್ಲೇಆಫ್ ಹಂತಕ್ಕೆ ಅಧಿಕೃತವಾಗಿ ಅರ್ಹತೆ ಪಡೆದಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್​ ಈಗಾಗಲೇ ಹೊರಬಿದ್ದಿದ್ದರೆ, ಬಾಕಿ ಉಳಿದಿರುವ 10 ಲೀಗ್ ಪಂದ್ಯಗಳು ಉಳಿದ 8 ತಂಡಗಳ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.

ಕೊನೆಯ 10 ಪಂದ್ಯಗಳಲ್ಲಿ 8 ತಂಡಗಳ ಪ್ಲೇಆಫ್​ ಭವಿಷ್ಯ ನಿರ್ಧಾರ!
Ipl 2026

Updated on: May 17, 2026 | 10:33 AM

IPL 2026: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಠಿಣ ಪ್ಲೇಆಫ್ ರೇಸ್‌ಗೆ 2026ರ ಸೀಸನ್ ಸಾಕ್ಷಿಯಾಗಿದೆ. ಲೀಗ್​ ಹಂತದ 60 ಪಂದ್ಯಗಳು ಮುಗಿದರೂ ಇನ್ನೂ ಕೂಡ ಯಾವುದೇ ತಂಡದ ಪ್ಲೇಆಫ್​ಗೆ ಎಂಟ್ರಿ ಕೊಟ್ಟಿಲ್ಲ. ಆದರೆ ಉಳಿದಿರುವ ಕೊನೆಯ 10 ಲೀಗ್ ಪಂದ್ಯಗಳು 8 ತಂಡಗಳ ಭವಿಷ್ಯವನ್ನು ನಿರ್ಧರಿಸಲಿವೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ.

ಇದೀಗ 8 ತಂಡಗಳ ನಡುವೆ 4 ಸ್ಥಾನಗಳಿಗಾಗಿ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಈ ವಾರದೊಳಗೆ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

8 ತಂಡಗಳ ಪ್ಲೇಆಫ್  ಸಮೀಕರಣಗಳು:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ಅಂಕಗಳು: 16
  •  ಉಳಿದಿರುವ ಪಂದ್ಯಗಳು: 2 (vs PBKS, SRH)
  • ಸಮೀಕರಣ: ಹಾಲಿ ಚಾಂಪಿಯನ್ಸ್ ಆರ್‌ಸಿಬಿ ಸದ್ಯ ಅತ್ಯುತ್ತಮ ನೆಟ್ ರನ್ ರೇಟ್ (+1.053) ಹೊಂದಿದೆ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿದರೂ ಪ್ಲೇಆಫ್ ಆಡುವುದು ಖಚಿತವಾಗಲಿದೆ. ಎರಡೂ ಪಂದ್ಯ ಗೆದ್ದರೆ ಟಾಪ್-2 ಸ್ಥಾನ ಸಿಗಲಿದೆ.

 

  • ಗುಜರಾತ್ ಟೈಟಾನ್ಸ್ (GT) – ಅಂಕಗಳು: 16
  • ಉಳಿದಿರುವ ಪಂದ್ಯ: 1 (vs CSK)
  • ಸಮೀಕರಣ: ಗುಜರಾತ್ ಟೈಟಾನ್ಸ್ ಈಗಾಗಲೇ 13 ಪಂದ್ಯಗಳನ್ನು ಆಡಿದ್ದು 16 ಅಂಕ ಗಳಿಸಿದೆ. ಕೊನೆಯ ಪಂದ್ಯವನ್ನು ಗೆದ್ದರೆ ಪ್ಲೇಆಫ್ ಜೊತೆಗೆ ಟಾಪ್-2 ರೇಸ್‌ನಲ್ಲಿ ಉಳಿಯಲಿದೆ. ಒಂದು ವೇಳೆ ಸೋತರೆ ಪ್ಲೇಆಫ್​ಗೇರಲು ಇತರ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗುತ್ತದೆ.

 

  • ಸನ್‌ರೈಸರ್ಸ್ ಹೈದರಾಬಾದ್ (SRH) – ಅಂಕಗಳು: 14
  • ಉಳಿದಿರುವ ಪಂದ್ಯಗಳು: 2 (vs CSK, RCB)
  • ಸಮೀಕರಣ: ಎಸ್‌ಆರ್‌ಹೆಚ್ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೆ ಸುಲಭವಾಗಿ 18 ಅಂಕಗಳೊಂದಿಗೆ ಕ್ವಾಲಿಫೈ ಆಗಲಿದೆ. ಒಂದು ಪಂದ್ಯ ಗೆದ್ದು 16 ಅಂಕ ಗಳಿಸಿದರೂ ಉತ್ತಮ ರನ್ ರೇಟ್ ನೆರವಿನಿಂದ ಪ್ಲೇಆಫ್​ಗೇರುವ ಅವಕಾಶ ಇದೆ.

 

  • ಪಂಜಾಬ್ ಕಿಂಗ್ಸ್ (PBKS) – ಅಂಕಗಳು: 13
  •  ಉಳಿದಿರುವ ಪಂದ್ಯಗಳು: 2 (vs RCB, LSG)
  • ಸಮೀಕರಣ: ಸತತ 5 ಸೋಲುಗಳಿಂದ ಕಂಗಾಲಾಗಿರುವ ಪಂಜಾಬ್ ಕಿಂಗ್ಸ್​ ತಂಡಕ್ಕೆ ಇನ್ನುಳಿದ ಪಂದ್ಯಗಳು ‘ಡೂ ಆರ್ ಡೈ ಮ್ಯಾಚ್’. ಪಂಜಾಬ್ ಪಡೆ 17 ಅಂಕ ತಲುಪಲು ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು. ಒಂದು ಸೋತರೆ ರೇಸ್‌ನಿಂದ ಹೊರಬೀಳುವ ಆತಂಕವಿದೆ.

 

  • ರಾಜಸ್ಥಾನ್ ರಾಯಲ್ಸ್ (RR) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 3 (vs DC, LSG, MI)
  • ಸಮೀಕರಣ: ರಾಜಸ್ಥಾನ್ ರಾಯಲ್ಸ್​ ಕೈಯಲ್ಲಿ ಇನ್ನೂ 3 ಪಂದ್ಯಗಳಿವೆ. ಈ ಮೂರನ್ನೂ ಗೆದ್ದರೆ ಯಾವುದೇ ಅಡೆತಡೆಯಿಲ್ಲದೆ 18 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.

 

  •  ಚೆನ್ನೈ ಸೂಪರ್ ಕಿಂಗ್ಸ್ (CSK) – ಅಂಕಗಳು: 12
  • ಉಳಿದಿರುವ ಪಂದ್ಯಗಳು: 2 (vs SRH, GT)
  • ಸಮೀಕರಣ: ಸಿಎಸ್​ಕೆ ತಂಡವು  ಪ್ಲೇಆಫ್ ಆಸೆಯನ್ನು ಜೀವಂತವಾಗಿಡಲು ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು 16 ಅಂಕ ಗಳಿಸಬೇಕು. ಹಾಗೆಯೇ ಇತರ ತಂಡಗಳ ಸೋಲನ್ನು ಸಹ ಎದುರು ನೋಡಬೇಕು.

 

  • ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಅಂಕಗಳು: 11
  • ಉಳಿದಿರುವ ಪಂದ್ಯಗಳು: 2 (vs MI, DC)
  • ಸಮೀಕರಣ: ಕೆಕೆಆರ್ ಗರಿಷ್ಠ 15 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯ. ಪ್ಲೇಆಫ್ ತಲುಪುವ ಸಾಧ್ಯತೆ ಕೇವಲ 3.6% ರಷ್ಟಿದ್ದು, ಪವಾಡಗಳು ಸಂಭವಿಸಿದರೆ ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್​ ಮುಂದಿನ ಹಂತಕ್ಕೇರಬಹುದು.

 

  • ಡೆಲ್ಲಿ ಕ್ಯಾಪಿಟಲ್ಸ್ (DC) – ಅಂಕಗಳು: 10
  • ಉಳಿದಿರುವ ಪಂದ್ಯಗಳು: 2 (vs RR, KKR)
  • ಸಮೀಕರಣ: ಡೆಲ್ಲಿ ಕ್ಯಾಪಿಟಲ್ಸ್​ ತಂಡ ಉಳಿದಿರುವ 2 ಮ್ಯಾಚ್​ಗಳನ್ನು ಗೆದ್ದರೂ ಗರಿಷ್ಠ 14 ಅಂಕ ತಲುಪಬಹುದು. ಆದರೆ ಅತ್ಯಂತ ಕಳಪೆ ನೆಟ್ ರನ್ ರೇಟ್ (-0.993) ಹೊಂದಿರುವುದರಿಂದ ಇವರ ಪ್ಲೇಆಫ್ ಕನಸು ಬಹುತೇಕ ಅಂತ್ಯವಾಗಿದೆ ಎನ್ನಬಹುದು.

ಇದನ್ನೂ ಓದಿ: IPL 2026: ಇಂದಿನ  ಪಂದ್ಯಕ್ಕೂ RCB ತಂಡದ ಸ್ಟಾರ್ ಆಟಗಾರ ಅಲಭ್ಯ!

ಇನ್ನು 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದ್ದು, ಇದಾಗ್ಯೂ ಈ ತಂಡಗಳ ವಿರುದ್ಧದ ಫಲಿತಾಂಶಗಳು ಇತರೆ ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧರಿಸಲಿದೆ.

 

 

Published On - 10:32 am, Sun, 17 May 26

Follow Us