ಐಪಿಎಲ್ ಹೊಸ ನಿಯಮಗಳು | 20 ಓವರ್​ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು, ಸಾಫ್ಟ್ ಸಿಗ್ನಲ್ ಇನ್ನು ನಗಣ್ಯ: ಬಿಸಿಸಿಐ

IPL New Rules: ನಿಗದಿತ ಅವಧಿಯಲ್ಲಿ ಓವರ್​ಗಳು ಪೂರ್ಣಗೊಳ್ಳುವುದನ್ನು ನೋಡಿಕೊಳ್ಳುವ ಜವಾಬ್ದಾರಿ ಫೋರ್ಥ್​​ ಅಂಪೈರ್​ ಮೇಲಿರುತ್ತದೆ. ಬ್ಯಾಟಿಂಗ್ ಮಾಡುವ ತಂಡ ಸಮಯ ವ್ಯರ್ಥಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದರೆ ಫೋರ್ಥ್ ಅಂಪೈರ್ ವಾರ್ನ್ ಮಾಡಬಹುದಾಗಿದೆ.

ಐಪಿಎಲ್ ಹೊಸ ನಿಯಮಗಳು | 20 ಓವರ್​ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು, ಸಾಫ್ಟ್ ಸಿಗ್ನಲ್ ಇನ್ನು ನಗಣ್ಯ: ಬಿಸಿಸಿಐ
ಐಪಿಎಲ್ 2021
Arun Belly

|

Mar 30, 2021 | 9:31 PM

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯು ಇಂಡಿಯನ್ ಪ್ರಿಮೀಯರ್ ಲೀಗ್ 2021 ಸೀಸನ್​ಗೆ ಆಟದ ನಿಯಮಾವಳಿಗಳಲ್ಲಿ ಕೆಲ ಬದಲಾವಣೆಗಳನ್ನು ತಂದಿದ್ದು, ಹೊಸ ನಿಯಮಗಳನ್ನು ಈಗಾಗಲೇ ಎಲ್ಲ ಫ್ರಾಂಚೈಸಿಗಳಿಗೆ ಕಳಿಸಿಲಾಗಿದೆ. ಹೊಸ ನಿಯಮದ ಪ್ರಕಾರ 20ನೇ ಓವರ್ 90 ನಿಮಿಷಗಳ ಆಟದಲ್ಲಿ ಮುಗಿಯಬೇಕು. ಮೊದಲು 20ನೇ ಓವರನ್ನು 90ನೇ ನಿಮಿಷದಿಂದ ಆರಂಭಿಸಬಹುದಿತ್ತು. ಪಂದ್ಯದ ನಿಗದಿತ ಅವಧಿಯ ಮೇಲೆ ಹತೋಟಿ ಸಾಧಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್ ಪಂದ್ಯಗಳಲ್ಲಿ ಒಂದು ಗಂಟೆಯ ಅವಧಿಯಲ್ಲಿ ಸರಾಸರಿ 14.11 ಓವರ್​ಗಳನ್ನು ಬೌಲ್ ಮಾಡಲೇಬೇಕು (ಟೈಮ್-ಔಟ್​ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ) ಎಂದು ಬಿಸಿಸಿಐ ಹೇಳಿದೆ.

ಇದರರ್ಥ ಯಾವುದೇ ಆಡಚಣೆ ಎದುರಾಗದ ಪಂದ್ಯವೊಂದು ಆರಂಭಗೊಂಡ ನಂತರ 20ನೇ ಓವರ್ 90 ನಿಮಿಷಗಳೊಳಗೆ ಮುಗಿಯಬೇಕು (85 ನಿಮಿಷ ಆಟದ ಅವಧಿ ಮತ್ತು ಎರಡೂವರೆ ನಿಮಿಷಗಳ ಎರಡು ಟೈಮ್-ಔಟ್). ವಿಳಂಬಗೊಂಡ ಇಲ್ಲವೆ ಮಳೆ ಅಥವಾ ಬೇರೆ ಕಾರಣಗಳಿಗೆ ಅಡಚಣೆ ಉಂಟಾದ ಪಂದ್ಯಗಳಲ್ಲಿ 90 ನಿಮಿಷಗಳ ಆಟದ ಅವಧಿಯಲ್ಲಿ ಪ್ರತಿ ಓವರ್​ಗೆ 4.15 ನಿಮಿಷ ಕಡಿತ ಮಾಡಲಾಗುವುದು. ಪಂದ್ಯವೊಂದರಲ್ಲಿ 10 ಓವರ್​ ಕಡಿತಗೊಳಿಸಿದ್ದೇಯಾದರೆ, ಒಂದು ಇನ್ನಿಂಗ್ಸ್ 42.5 ನಿಮಿಷದಲ್ಲಿ ಕೊನೆಗೊಳ್ಳಬೇಕು.

Short Run

ಶಾರ್ಟ್​ ರನ್

ನಿಗದಿತ ಅವಧಿಯಲ್ಲಿ ಓವರ್​ಗಳು ಪೂರ್ಣಗೊಳ್ಳುವುದನ್ನು ನೋಡಿಕೊಳ್ಳುವ ಜವಾಬ್ದಾರಿ ನಾಲ್ಕನೇ ಅಂಪೈರ್​ ಮೇಲಿರುತ್ತದೆ. ಬ್ಯಾಟಿಂಗ್ ಮಾಡುವ ತಂಡ ಸಮಯ ವ್ಯರ್ಥಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದರೆ ಫೋರ್ಥ್ ಅಂಪೈರ್​ಗೆ ವಾರ್ನ್ ಮಾಡುವ ಆಧಿಕಾರವನ್ನು ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

‘ಕ್ಲಾಸ್ 12.7.3.4 ( ಬ್ಯಾಟಿಂಗ್ ತಂಡ ಸಮಯ ವ್ಯರ್ಥ ಮಾಡುವುದು) ಅಡಿಯಲ್ಲಿ ಒಂದು ಪಕ್ಷ ಫೀಲ್ಡಿಂಗ್ ಟೀಮಿಗೆ ಒದಗಿಸಲಾಗುವ ಸಮಯ ಭತ್ಯೆಯನ್ನು, ಓವರ್ ರೇಟ್ ಅನ್ನು ಪರಿಶೀಲಿಸಿ ಬ್ಯಾಟಿಂಗ್ ಮಾಡುತ್ತಿರುವ ಟೀಮಿನ ಸಮಯ ಭತ್ಯೆಯಲ್ಲಿ ಕಡಿತಗೊಳಿಸಲಾಗವುದು. ಬ್ಯಾಟಿಂಗ್ ಮಾಡುತ್ತಿರುವ ಟೀಮಿನ ನಾಯಕ (ಬ್ಯಾಟಿಂಗ್ ಕ್ರೀಸಿನಲ್ಲಿರದ ಪಕ್ಷದಲ್ಲಿ) ಮತ್ತು ಟೀಮ್ ಮ್ಯಾನೇಜರ್​ಗೆ ಎಚ್ಚರಿಕೆ ನೀಡಿರುವ ಸಂಗತಿ ಗೊತ್ತು ಮಾಡುವುದು ಫೋರ್ಥ್ ಅಂಪೈರ್ ಹೊಣೆಗಾರಿಕೆಯಾಗಿದೆ’ ಎಂದು ಬಿಸಿಸಿಐ ಹೇಳಿದೆ.

ಹಾಗೆಯೇ, ಬಿಸಿಸಿಐ ಸಾಫ್ಟ್ ಸಿಗ್ನಲ್ ನಿಯಮದಲ್ಲಿ ಬದಲಾವಣೆ ತಂದಿದೆ. ಹೊಸ ನಿಯಮದ ಪ್ರಕಾರ ಆನ್-ಫೀಲ್ಡ್ ಅಂಪೈರ್ ನೀಡುವ ನಿರ್ಣಯ ಥರ್ಡ್​ ಅಂಪೈರ್ ನಿರ್ಣಯದ ಮೇಲೆ ಯಾವುದೇ ಪರಿಣಾಮ ಬೀರದು. ಆನ್-ಫೀಲ್ಡ್ ಅಂಪೈರ್ ನಿರ್ಣಯವೊಂದನ್ನು ಥರ್ಢ್ ಅಂಪೈರ್​ಗೆ ರೆಫರ್ ಮಾಡುವಾಗ ಆತನ ಸಾಫ್ಟ್​ ಸಿಗ್ನಲ್ ನಿರ್ಣಯ ಗಣನೆಗೆ ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ.

ಆನ್-ಫೀಲ್ಡ್ ಅಂಪೈರ್​ಗಳಿಗೆ ಥರ್ಢ್​ ಅಂಪೈರ್​ ನೆರವು ಬೇಕಿದ್ದರೆ, ಬೌಲರ್ ಕಡೆ ಇರುವ ಅಂಪೈರ್, ಸ್ಟ್ರೈಕರ್​ (ಸ್ಕ್ವೇರ್ ಲೆಗ್ ಅಂಪೈರ್) ಕಡೆ ಇರುವ ಅಂಪೈರ್​ನೊಂದಿಗೆ ಸಮಾಲೋಚನೆ ನಡೆಸಿ ಎರಡೂ ಕಡೆ ಇಬ್ಬಗೆ ರೇಡಿಯೊ ಸಂಪರ್ಕದ ಮೂಲಕ ಥರ್ಢ್ ಅಂಪೈರ್​ನನ್ನು ಸಂಪರ್ಕಿಸಬಹುದಾಗಿದೆ ಎಂದು ಬಿಸಿಸಿಐ ಹೇಳಿದೆ.

ಈ ಬಗೆಯ ಸಮಾಲೋಚನೆಯನ್ನು ಟಿವಿ ಸ್ಕ್ರೀನ್ ಆಕಾರವನ್ನು ಸೂಚಿಸುವ ಸನ್ನೆಯೊಂದಿಗೆ ಬೌಲರ್ ಬದಿಯಿರುವ ಅಂಪೈರ್ ಆರಂಭಿಸಬೇಕು. ಬ್ಯಾಟ್ಸ್​ಮನ್ ನೀಡಿದ ಕ್ಯಾಚನ್ನು ಫೀಲ್ಡರ್ ಸಮರ್ಪಕವಾಗಿ ಹಿಡಿದಿದ್ದಾನೆಯೇ, ಬಾಲು ನೇರವಾಗಿ ಫೀಲ್ಡರ್​ನೆಡೆ ಚಿಮ್ಮಿತೇ (ಬಂಪ್ ಬಾಲ್) ಅಥವಾ ಬ್ಯಾಟ್ಸ್​ಮನ್ ಉದ್ದೇಶಪೂರ್ವಕವಾಗಿ ಫೀಲ್ಡರ್​ಗೆ ಅಡಚಣೆ ಉಂಟುಮಾಡಿದನೇ ಎನ್ನುವುದನ್ನು ಲಭ್ಯವಿರುವ ತಂತ್ರಜ್ಞಾನದ ನೆರವಿನಿಂದ ಥರ್ಡ್​ ಅಂಪೈರ್ ನಿರ್ಣಯ ತೆಗೆದುಕೊಳ್ಳುತ್ತಾನೆ’ ಎಂದು ಬಿಸಿಸಿಐ ಹೇಳಿದೆ.

ಸಾಫ್ಟ್ ಸಿಗ್ನಲ್ ಕುರಿತು ಭಾರತದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ವಿಶ್ವದ ಹಲವಾರು ಆಟಗಾರರು ಅಸಮಾಧಾನ ಮತ್ತು ವಿರೋಧ ವ್ಯಕ್ತಪಡಿಸಿದ್ದಾರೆ. ಎಲ್​ಬಿಡಬ್ಲ್ಯು ನಿರ್ಣಯಗಳಲ್ಲಿ ಅಂಪೈರ್​ನ ನಿರ್ಣಯ ಅಂತ ಥರ್ಡ್ ಅಂಪೈರ್ ಹೇಳುವುದನ್ನು ಸಹ ಕೊಹ್ಲಿ ವಿರೋಧಿಸಿದ್ದಾರೆ. ಆದರೆ, ಅದನ್ನು ಬದಲಾಯಿಸುವ ಗೋಜಿಗೆ ಬಿಸಿಸಿಐ ಹೋಗಿಲ್ಲ.

ಫೀಲ್ಡ್ ಅಂಪೈರ್​ಗಳು ತೆಗೆದುಕೊಳ್ಳುವ ಶಾರ್ಟ್ ರನ್ ನಿರ್ಣಯದಲ್ಲೂ ಬಿಸಿಸಿಐ ಬದಲಾವಣೆ ತಂದಿದೆ. ಮೇನ್ ಅಂಪೈರ್​ಗಳು ಶಾರ್ಟ್ ರನ್ ನೀಡಿ, ಬ್ಯಾಟಿಂಗ್ ಟೀಮಿನ ಮೊತ್ತದಿಂದ ರನ್ ಕಡಿತ ಮಾಡುವುದನ್ನು ಥರ್ಢ್ ಅಂಪೈರ್ ನಗಣ್ಯಗೊಳಿಸಬಹುದಾಗಿದೆ. ಕಳೆದ ಬಾರಿಯ ಐಪಿಎಲ್ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯವೊಂದರಲ್ಲಿ ಶಾರ್ಟ್ ರನ್ ನಿರ್ಣಯ ಭಾರಿ ವಿವಾದವನ್ನು ಸೃಷ್ಟಿಸಿತ್ತು. ಸ್ಕ್ವೇರ್ ಲೆಗ್ ಅಂಪೈರ್ ನೀಡಿದ ನಿರ್ಣಯ ಪಂಜಾಬ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತ್ತು.

ಇದನ್ನೂ ಓದಿ: IPL 2021: ಹೊಸ ಜರ್ಸಿಯಲ್ಲಿ ಇಂಡಿಯನ್​ ಆರ್ಮಿಗೆ ಗೌರವ ಸಲ್ಲಿಸಿದ ಸಿಎಸ್​ಕೆ! ನಾಯಕ ಧೋನಿಯಿಂದ ಅನಾವರಣ

ಇದನ್ನೂ ಓದಿ:IPL 2021: ಹೊಸ ಜರ್ಸಿ ಅನಾವರಣಗೊಳಿಸಿದ ಮುಂಬೈ ಇಂಡಿಯನ್ಸ್.. ಜರ್ಸಿಯ ವಿಶೇಷತೆ ಏನು ಗೊತ್ತಾ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada