Prithvi Shaw IPL 2021 DC Team Player: ಭರ್ಜರಿ ಫಾರ್ಮ್ನಲ್ಲಿರುವ ಪೃಥ್ವಿ ಶಾ ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಮಿಂಚಬಹುದೇ?
Prithvi Shaw profile: 14 ವರ್ಷದ ಬಾಲಕನಾಗಿದ್ದಾಗ ಹ್ಯಾರಿಸ್ ಷೀಲ್ಡ್ಗಾಗಿ ನಡೆದ ಪಂದ್ಯವೊಂದರಲ್ಲಿ ಶಾ 546 ರನ್ ಬಾರಿಸಿದಾಗಲೇ ಅವರ ಪ್ರತಿಭೆ ಬಗ್ಗೆ ಚರ್ಚೆಗಳು ಅರಂಭವಾಗಿದ್ದವು.
ಇಂಡಿಯನ್ ಪ್ರಿಮೀಯರ್ ಲೀಗ್ ಪ್ರತಿ ಸೀಸನ್ನಲ್ಲಿಯೂ ಹೊಸ ಸೂಪರ್ ಸ್ಟಾರ್ಗಳನ್ನು ಹುಟ್ಟು ಹಾಕುತ್ತದೆ. ಅವರು ಉದಯೋನ್ಮುಖ ಆಟಗಾರರಾಗಿಬೇಕು ಅಂತೇನಿಲ್ಲ, ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಸರು ಮಾಡಿರುವ ಆಟಗಾರರು ಸಹ ಈ ಟೂರ್ನಿಯಲ್ಲಿ ಉತ್ಕೃಷ್ಟ ಪ್ರದರ್ಶನಗಳನ್ನು ಮೆರೆಯುತ್ತಾರೆ. ಆದರೆ ಈ ಟೂರ್ನಿಯು ಯುವ ಪ್ರತಿಭಾವಂತರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಯಾಗಿರುವುದು ಮಾತ್ರ ಅಕ್ಷರಶಃ ಸತ್ಯ.
ಮುಂಬಯಿನ ಅಪ್ಪಟ ಪ್ರತಿಭಾವಂತ ಪೃಥ್ವಿ ಶಾ ಬಗ್ಗೆ ಯಾರಿಗೆ ಗೊತ್ತಿಲ್ಲ? ಮೂರ್ನಾಲ್ಕು ವರ್ಷಗಳ ಹಿಂದೆ ಅವರನ್ನು ಭಾರತದ ಮುಂದಿನ ಲಿಟ್ಲ್ ಮಾಸ್ಟರ್ ಮತ್ತು ಮುಂದಿನ ಸಚಿನ್ ತೆಂಡೂಲ್ಕರ್ ಅಂತ ಗುರುತಿಸಲಾಗಿತ್ತು. 14 ವರ್ಷದ ಬಾಲಕನಾಗಿದ್ದಾಗ ಹ್ಯಾರಿಸ್ ಷೀಲ್ಡ್ಗಾಗಿ ನಡೆದ ಪಂದ್ಯವೊಂದರಲ್ಲಿ ಶಾ 546 ರನ್ ಬಾರಿಸಿದಾಗಲೇ ಅವರ ಪ್ರತಿಭೆ ಬಗ್ಗೆ ಚರ್ಚೆಗಳು ಅರಂಭವಾಗಿದ್ದವು. ಅದಾದ ಮೂರು ವರ್ಷಗಳ ನಂತರ ಅವರು 2016-17 ರಣಜಿ ಸೀಸನ್ನಲ್ಲಿ ಮುಂಬಯಿ ತಂಡಕ್ಕೆ ಆಯ್ಕೆಯಾಗಿ ತಾನಾಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದರು. ಮರುವರ್ಷ, ಅವರಿಗೆ ದುಲೀಪ್ ಟ್ರೋಫಿ ಟೂರ್ನಮೆಂಟ್ನಲ್ಲಿ ಪಶ್ಚಿಮ ವಲಯದಿಂದ ಆಡುವ ಅವಕಾಶ ಕಲ್ಪಸಿದಾಗ ಅಲ್ಲೂ ಅವರು ತನ್ನ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದರು. ಕೇವಲ ಸಚಿನ್ ತೆಂಡೂಲ್ಕರ್ ಮಾತ್ರ ಶಾ ಅವರಗಿಂತ ಮೊದಲು ಇಂಥ ಸಾಧನೆಯನ್ನು ಮಾಡಿದ್ದರು.
ಅವರ ಬ್ಯಾಟಿಂಗ್ ಪ್ರತಿಭೆ ಮತ್ತು ನಾಯಕತ್ವದ ಗುಣಗಳನ್ನು ಗಮನಿಸುತ್ತಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2018ರಲ್ಲಿ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಭಾಗವಹಿಸಿದ ಭಾರತೀಯ ತಂಡಕ್ಕೆ ನಾಯಕನಾಗಿ ಘೋಷಿಸಿತು. ಬಿಸಿಸಿಐ ತನ್ನ ಮೇಲಿಟ್ಟಿದ್ದ ವಿಶ್ವಾಸವನ್ನು ಉಳಿಸಿಕೊಂಡ ಶಾ ಆ ವಿಶ್ವಕಪ್ ಗೆದ್ದಿದ್ದೂ ಅಲ್ಲದೆ ಬ್ಯಾಟಿಂಗ್ನಲ್ಲಿ ಸಹ ಮಿಂಚಿ 65 ರ ಸರಾಸರಿಯಲ್ಲಿ 261 ರನ್ ಬಾರಿಸಿದರು. ಶಾ ನೇತೃತ್ವದ ಟೀಮಿಗೆ ಕನ್ನಡಿಗ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರೆನ್ನುವುದು ವಿಶೇಷ.
ಓಕೆ, ಅವರ ಈ ಪ್ರದರ್ಶನಗಳ ನಂತರ ರಾಷ್ಟ್ರೀಯ ತಂಡಕ್ಕೆ ಬುಲಾವ್ ಬರೋದು ಕೇವಲ ಔಪಚಾರಿಕತೆಯಾಗಿತ್ತು. 2018ರಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಬಂದಾಗ ಟೆಸ್ಟ್ ಆಡುವ ತಂಡದಲ್ಲಿ ಶಾ ಸ್ಥಾನ ಗಿಟ್ಟಿಸಿದರು. ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸುವ ತನ್ನ ಪರಂಪರೆಯನ್ನು ಅವರು ಇಲ್ಲೂ ಮುಂದುವರೆಸಿದರು. ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಬಾರಿಸಿದ ಕೆಲವೇ ಭಾರತೀಯ ಆಟಗಾರರ ಪಟ್ಟಿಯಲ್ಲಿ ಶಾ ಹೆಸರು ದಾಖಲಾಯಿತು. ನಿಮಗೆ ಗೊತ್ತಿರಲಿ: ಸಚಿನ್ ತೆಂಡೂಲ್ಕರ್, ಸುನಿಲ್ ಗಾವಸ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮೊದಲಾದ ದಿಗ್ಗಜರ ಹೆಸರು ಈ ಲಿಸ್ಟ್ನಲ್ಲಿಲ್ಲ!
ದುರದೃಷ್ಟಕರ ಸಂಗತಿಯೆಂದರೆ ಖ್ಯಾತಿ ಬಹಳ ಬೇಗ ಶಾ ತಲೆಗೇರಿಬಿಟ್ಟಿತು. ಅವರಲ್ಲಿ ಅಟಿಡ್ಯೂಟ್ ಸಮಸ್ಯೆಗಳು ತಲೆದೋರಿದವು. ಒಮ್ಮೆ ಅವರು ನಿಷೇಧಿತ ಪದಾರ್ಥವನ್ನು ಸೇವಿಸಿ ಬಿಸಿಸಿಐನಿಂದ ಅಲ್ಪಾವಧಿಗೆ ನಿಷೇಧಕ್ಕೂ ಒಳಗಾದರು. ಆದರೆ, ಶಾ ತಮ್ಮ ತಪ್ಪುಗಳನ್ನು ಬೇಗ ತಿದ್ದಿಕೊಂಡರು. ಮತ್ತೊಮ್ಮೆ ಕೇವಲ ಕ್ರಿಕೆಟ್ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದರು. ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ತೆರಳಿದ್ದ ಭಾರತೀಯ ತಂಡದಲ್ಲಿ ಆರಂಭ ಆಟಗಾರನಾಗಿ ಆಯ್ಕೆಯಾದ ಶಾ ಅವರು ಇನ್ಸ್ವಿಂಗರ್ಗಳನ್ನು ಸಮರ್ಥವಾಗಿ ಆಡಲು ವಿಫಲರಾಗಿ ಸ್ಥಾನ ಕಳೆದುಕೊಂಡರು.
ಹಿಂದೊಮ್ಮೆ, ಟೀಮ್ ಇಂಡಿಯಾದ ಕೋಚ್ ಆಗಿದ್ದ ಆಸ್ಟ್ರೇಲಯಾದ ಲೆಜೆಂಡರಿ ಬ್ಯಾಟ್ಸ್ಮನ್ ಗ್ರೆಗ್ ಚಾಪೆಲ್, ಶಾ ಅವರ ಸಮಸ್ಯೆಯನ್ನು ಗಮನಿಸಿ ಕೆಲವು ಟಿಪ್ಗಳನ್ನು ನೀಡಿದರಂತೆ. ಆ ಸಲಹೆಗಳನ್ನು ಅನೂಚಾನಾಗಿ ಜಾರಿಗೆ ತಂದ ಶಾ ಇದೇ ತಿಂಗಳು ಕೊನೆಗೊಂಡ ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಬ್ಯಾಟ್ಸ್ಮನಂತೆ ಆಡಿ ಒಂದು ದ್ವಿಶತಕವೂ ಸೇರಿದಂತೆ 4 ಶತಕಗಳನ್ನು ಬಾರಿಸಿ ದಾಖಲೆಯ 827 ರನ್ ಕಲೆ ಹಾಕಿ ಮುಂಬಯಿಗೆ ಟ್ರೋಫಿಯನ್ನು ಗೆದ್ದುಕೊಟ್ಟರು. ಟೀಮಿನ ಸಾರಥ್ಯವನ್ನೂ ಅವರೇ ವಹಿಸಿದ್ದು ಮತ್ತೊಂದು ವಿಶೇಷ ಸಂಗತಿ. ಇನ್ಕಮಿಂಗ್ ಬಾಲ್ಗಳನ್ನು ಅಡುವಲ್ಲಿ ಇದ್ದ ನ್ಯೂನತೆಯನ್ನು ಅವರು ತೊಡೆದು ಹಾಕಿದ್ದಾರೆ ಎಂದು ಮುಂಬಯಿ ಟೀಮಿನ ಕೋಚ್ ರಮೇಶ್ ಪೊವಾರ್ ಹೇಳಿದರು.
ಇಂಥ ಪೃಥ್ವಿ ಶಾ ಅವರನ್ನು 2018ರ ಸೀಸನ್ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರ್ಯಾಂಚೈಸಿಯು ರೂ.1.2 ಕೋಟಿ ನೀಡಿ ಖರೀದಿಸಿದೆ. ಆ ಸೀಸನ್ನಲ್ಲಿ 9 ಪಂದ್ಯಗಳನ್ನಾಡಿದ ಅವರು 27.22 ಸರಾಸರಿಯಲ್ಲಿ 245 ರನ್ ಗಳಿಸಿದರು. ಅತ್ಯಧಿಕ ಸ್ಕೋರ್ 65 ಅಗಿತ್ತು ಮತ್ತು ಸ್ಟ್ರೈಕ್ ರೇಟ್ 153.12. 2019 ರ ಸೀಸನಲ್ಲಿ ಶಾ 16 ಪಂದ್ಯಗಳನ್ನಾಡಿ 99 ರ ಗರಿಷ್ಠ ಸ್ಕೋರ್ನೊಂದಿಗೆ 22.06 ಸರಾಸರಿಯಲ್ಲಿ 353 ರನ್ ಕಲೆಹಾಕಿದರು. ಸ್ಟ್ರೈಕ್ ರೇಟ್ 133.71 ಆಗಿತ್ತು.
ಕೊವಿಡ್-19 ಪಿಡುಗಿನಿಂದಾಗಿ ಯುಎಈಯಲ್ಲಿ ನಡೆದ 2020ರ ಸೀಸನ್ನಲ್ಲಿ ಶಾ 13 ಪಂದ್ಯಗಳನ್ನಾಡಿದರು. 136.5 ಸ್ಟ್ರೈಕ್ ರೇಟ್ನಲ್ಲಿ 66 ರನ್ಗಳ ಅತ್ಯಧಿಕ ಸ್ಕೋರ್ನೊಂದಿಗೆ 228 ರನ್ ಗಳಿಸಿದರು. ವಿಜಯ ಹಜಾರೆ ಟ್ರೋಫಿಯಲ್ಲಿ ಈ ವರ್ಷ ತೋರಿದ ಪ್ರದರ್ಶನಗಳನ್ನು ಅವರು ಪುನರಾವರ್ತಿಸಿದರೆ, ಡೆಲ್ಲಿ ತಂಡ ಕಳೆದ ಬಾರಿಯ ಸಾಧನೆ (ಪೈನಲ್ ಪ್ರವೇಶಿಸಿತ್ತು) ಈ ಸಲವೂ ಮಾಡಬಹುದು.
ಇದನ್ನೂ ಓದಿ: IPL 2021: ಮಾರ್ಚ್ 29ರಿಂದ ಆರ್ಸಿಬಿ ಸಮರಾಭ್ಯಾಸ! ಇಷ್ಟರಲ್ಲೇ ತಂಡ ಸೇರ್ತಿದ್ದಾರೆ ಆರ್ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್
Published On - 10:08 pm, Mon, 29 March 21