Paris Olympics 2024: ಒಂದು ಪಂಚ್, 46 ಸೆಕೆಂಡುಗಳಿಗೆ ಪಂದ್ಯ ಅಂತ್ಯ; ಒಲಿಂಪಿಕ್ಸ್​ನಲ್ಲಿ ಹೊಸ ವಿವಾದ

Paris Olympics 2024: ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿ 66 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫ್ ಅವರನ್ನು ಎದುರಿಸಿದ್ದರು. ಆದರೆ ಪಂದ್ಯ ಆರಂಭವಾದ ಕೇವಲ 46 ಸೆಕೆಂಡುಗಳಲ್ಲಿಯೇ ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮಹಿಳಾ ಸ್ಪರ್ಧಿಯ ವಿರುದ್ಧ ದೈಹಿಕವಾಗಿ ಪುರುಷನ ಗುಣಲಕ್ಷಣಗಳನ್ನು ಹೊಂದಿರುವ ಇಮಾನ್ ಖಲೀಫ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದು.

Paris Olympics 2024: ಒಂದು ಪಂಚ್, 46 ಸೆಕೆಂಡುಗಳಿಗೆ ಪಂದ್ಯ ಅಂತ್ಯ; ಒಲಿಂಪಿಕ್ಸ್​ನಲ್ಲಿ ಹೊಸ ವಿವಾದ
ಏಂಜೆಲಾ ಕ್ಯಾರಿನಿ, ಇಮಾನ್ ಖಲೀಫ್

Updated on: Aug 01, 2024 | 10:35 PM

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಂದರ ಹಿಂದೆ ಒಂದರಂತೆ ಹಲವು ವಿವಾದಗಳು ಹುಟ್ಟಿಕೊಳ್ಳುತ್ತಿವೆ. ಈ ಹಿಂದೆ ಹಿಜಾಬ್ ಧರಿಸಿದ್ದ ಅಥ್ಲೀಟ್‌ಗೆ ಉದ್ಘಾಟನಾ ಸಮಾರಂಭದಲ್ಲಿ ನಿಷೇಧ ಹೇರಿದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮಹಿಳಾ ಬಾಕ್ಸರ್ ಎದುರು ಪುರುಷ ಬಾಕ್ಸರ್​ನ ಕಣಕ್ಕಿಳಿಸಿದ ಆರೋಪ ಕೇಳಿಬಂದಿದೆ. ವಾಸ್ತವವಾಗಿ ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿ 66 ಕೆಜಿ ವೆಲ್ಟರ್‌ವೇಟ್ ವಿಭಾಗದಲ್ಲಿ ಅಲ್ಜೀರಿಯಾದ ಬಾಕ್ಸರ್ ಇಮಾನ್ ಖಲೀಫ್ ಅವರನ್ನು ಎದುರಿಸಿದ್ದರು. ಆದರೆ ಪಂದ್ಯ ಆರಂಭವಾದ ಕೇವಲ 46 ಸೆಕೆಂಡುಗಳಲ್ಲಿಯೇ ಇಟಲಿಯ ಬಾಕ್ಸರ್ ಏಂಜೆಲಾ ಕ್ಯಾರಿನಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಮಹಿಳಾ ಸ್ಪರ್ಧಿಯ ವಿರುದ್ಧ ದೈಹಿಕವಾಗಿ ಪುರುಷನ ಗುಣಲಕ್ಷಣಗಳನ್ನು ಹೊಂದಿರುವ ಇಮಾನ್ ಖಲೀಫ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿರುವುದು.

ತೃತೀಯ ಲಿಂಗಿಗಳಿಗೆ ಅವಕಾಶ

ವಾಸ್ತವವಾಗಿ, ಲಿಂಗ ಬದಲಾವಣೆಗೆ ಒಳಗಾದ ಅನೇಕ ಪುರುಷ ಕ್ರೀಡಾಪಟುಗಳು ಸಹ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗೆ ಲಿಂಗ ಬದಲಾವಣೆ ಮಾಡಿಕೊಂಡಿರುವ ಸ್ಪರ್ಧಿಗಳನ್ನು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಆಯೋಜಕರ ಈ ನಿರ್ಣಯವೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಲಿಂಗ ಬದಲಿಸಿಕೊಂಡಿರುವ ಪುರುಷರ ವಿರುದ್ಧ ಮಹಿಳಾ ಸ್ಪರ್ಧಿಗಳನ್ನು ಸ್ಪರ್ಧೆಗಿಳಿಸಿರುವುದು ಮಹಿಳಾ ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೇ ಪಂಚ್​ಗೆ ಇಂಜುರಿ

ಈ ಪಂದ್ಯದಲ್ಲಿ 25ರ ಹರೆಯದ ಕ್ಯಾರಿನಿ ಅವರ ಮುಖಕ್ಕೆ ಖಲೀಫ್ ಗುದ್ದಿದ್ದರು. ಇದರಿಂದ ಅವರ ಮೂಗಿಗೆ ಗಾಯವಾಗಿದ್ದು, ಅವರು ಧರಿಸಿದ್ದ ಮಾಸ್ಕ್ ಕೂಡ ಕಳಚಿ ಬಿದ್ದಿದೆ. ಹೀಗಾಗಿ ಕೂಡಲೇ ಕ್ಯಾರಿನಿ ತನ್ನ ತರಬೇತುದಾರರೊಂದಿಗೆ ಮಾತನಾಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಕೇವಲ 46 ಸೆಕೆಂಡುಗಳ ಕಾಲ ನಡೆದ ಪಂದ್ಯದಲ್ಲಿ ಖಲೀಫ್ ಅವರನ್ನು ವಿಜೇತೆ ಎಂದು ಘೋಷಿಸಲಾಗಿದೆ. ತನಗಾದ ಅನ್ಯಾಯವನ್ನು ಬಾಕ್ಸಿಂಗ್ ರಿಂಗ್​ನಲ್ಲೇ ಹೊರಹಾಕಿರುವ ಏಂಜೆಲಾ ಕ್ಯಾರಿನಿ, ಕಣ್ಣೀರಿಟ್ಟರು. ಜೊತೆಗೆ ಇದು ತುಂಬಾ ದುಃಖಕರ ಸಂಗತಿ. ನನ್ನ ಜೀವನದಲ್ಲಿ ನಾನು ಅಂತಹ ಬಲವಾದ ಹೊಡೆತವನ್ನು ಎಂದಿಗೂ ಅನುಭವಿಸಿರಲಿಲ್ಲ ಎಂದರು.

ಲಿಂಗ ಪರೀಕ್ಷೆಯಲ್ಲಿ ಖಲೀಫ್ ಫೇಲ್

ವಿಶೇಷವೆಂದರೆ ಕಳೆದ ವರ್ಷ ನಡೆಸಿದ್ದ ಲಿಂಗ ಪರೀಕ್ಷೆಯಲ್ಲಿ ಖಲೀಫ್ ಅನುತ್ತೀರ್ಣರಾಗಿದ್ದರು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ​​ನಡೆಸಿದ ಪರೀಕ್ಷೆಯಲ್ಲಿ ಇಮಾನ್ ಖಲೀಫ್ ಅವರ ಟೆಸ್ಟೋಸ್ಟೆರಾನ್ ತುಂಬಾ ಹೆಚ್ಚಾಗಿತ್ತು. ಇದರೊಂದಿಗೆ, ಅವರ ಡಿಎನ್ಎ ಪರೀಕ್ಷೆಯಲ್ಲಿ XY ಕ್ರೋಮೋಸೋಮ್ಗಳು ಕಂಡುಬಂದಿದ್ದವು. XY ಕ್ರೋಮೋಸೋಮ್ ಪತ್ತೆಯಾದರೆ ಆತ ಹುಡುಗ ಎಂದರ್ಥ. ಕೇವಲ XX ಕ್ರೋಮೋಸೋಮ್ಗಳು ಕಂಡು ಬಂದರೆ ಆಕೆ ಹೆಣ್ಣು ಎಂದರ್ಥ. ಈ ಕಾರಣಕ್ಕಾಗಿ ಅಂತರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಖಲೀಫ್ ಅವರನ್ನು ನಿಷೇಧಿಸಿತ್ತು. ಇದರ ನಂತರ, ಅಲ್ಜೀರಿಯಾದ ಬಾಕ್ಸರ್ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಒಟ್ಟಿನಲ್ಲಿ ಡಿಎನ್​ಎ ಪರೀಕ್ಷೆಯಲ್ಲಿ ಇಮಾನ್ ಖಲೀಫ್ ಹುಡುಗಿಯೇ ಅಲ್ಲ ಎಂಬುದು ಸಾಬೀತಾಗಿತ್ತು.

ಅಸಮಾಧಾನ ಹೊರಹಾಕಿದ ಇಟಲಿ ಪ್ರಧಾನಿ

ಈ ಘಟನೆಗೆ ಸಂಬಂಧಿಸಿದಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ಪರ್ಧೆ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲ. ನಾನು ಐಒಸಿಯನ್ನು ಒಪ್ಪುವುದಿಲ್ಲ. ಹೀಗಾಗಿ ನಾನು ಇಟಾಲಿಯನ್ ಕ್ರೀಡಾಪಟುಗಳೊಂದಿಗೆ ಸಭೆ ನಡೆಸಿದ್ದೇನೆ. ಪುರುಷ ಆನುವಂಶಿಕ ಗುಣಲಕ್ಷಣಗಳನ್ನು ಹೊಂದಿರುವ ಕ್ರೀಡಾಪಟುಗಳನ್ನು ಮಹಿಳಾ ಸ್ಪರ್ಧೆಗಳ ವಿರುದ್ಧ ಸ್ಪರ್ಧೆಗೆ ಇಳಿಸಬಾರದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 pm, Thu, 1 August 24