- Kannada News Photo gallery Cricket photos India vs SA T20 Cancelled: Sanju Samson Misses Big Opportunity for Team India
IND vs SA: ಸಂಜು ಸ್ಯಾಮ್ಸನ್‌ಗೆ ಸಿಕ್ಕಿದ್ದ ಕೊನೆಯ ಅವಕಾಶವನ್ನು ಕಿತ್ತುಕೊಂಡ ದಟ್ಟ ಮಂಜು
Sanju Samson opportunity: ಭಾರತ-ದಕ್ಷಿಣ ಆಫ್ರಿಕಾ 4ನೇ ಟಿ20 ಪಂದ್ಯ ಹವಾಮಾನ ವೈಪರಿತ್ಯದಿಂದ ರದ್ದಾಗಿದೆ. ಶುಭ್ಮನ್ ಗಿಲ್ ಗಾಯಗೊಂಡಿದ್ದರಿಂದ ಆಡುವ ಅವಕಾಶದ ನಿರೀಕ್ಷೆಯಲ್ಲಿದ್ದ ಸಂಜು ಸ್ಯಾಮ್ಸನ್‌ಗೆ ಇದರಿಂದ ನಿರಾಸೆಯಾಗಿದೆ. 5ನೇ ಪಂದ್ಯದಲ್ಲಿ ಗಿಲ್ ಫಿಟ್ ಆದರೆ ಸ್ಯಾಮ್ಸನ್‌ಗೆ ಮತ್ತೆ ಅವಕಾಶ ಕೈತಪ್ಪಲಿದೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಈ ಅವಕಾಶಗಳು ಅವರಿಗೆ ನಿರ್ಣಾಯಕವಾಗಿದ್ದವು.
Updated on: Dec 18, 2025 | 7:29 AM

ಭಾರತ ಹಾಗೂ ದಕ್ಷಿಣ ಅಫ್ರಿಕಾ ನಡುವೆ ಲಕ್ನೋದಲ್ಲಿ ನಡೆಯಬೇಕಿದ್ದ ನಾಲ್ಕನೇ ಟಿ20 ಪಂದ್ಯ ಹವಾಮಾನ ವೈಪರಿತ್ಯದಿಂದ ರದ್ದಾಯಿತು. ಉಭಯ ತಂಡಗಳ ನಡುವಿನ ಈ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ. ಇದರೊಂದಿಗೆ ಭಾರತ ತಂಡ ಸರಣಿ ಸೋಲಿನಿಂದ ಪಾರಾದರೆ, ಇತ್ತ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಇರಾದೆಯಲ್ಲಿದ್ದ ವಿಕೆಟ್ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ನಿರಾಸೆ ಎದುರಾಗಿದೆ.

ವಾಸ್ತವವಾಗಿ ಟಿ20 ತಂಡದ ಉಪನಾಯಕ ಶುಭ್ಮನ್ ಗಿಲ್ ಪಾದದ ಗಾಯಕ್ಕೆ ತುತ್ತಾಗಿದ್ದು, ಅವರನ್ನು 4ನೇ ಟಿ20 ಪಂದ್ಯದಿಂದ ಹೊರಗಿಡಲಾಗಿದೆ ಎಂಬ ಮಾಹಿತಿ ಪಂದ್ಯ ಆರಂಭಕ್ಕೂ ಮುನ್ನವೇ ಹೊರಬಿದ್ದಿತ್ತು. ಹೀಗಾಗಿ ಗಿಲ್ ಬದಲಿಯಾಗಿ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿತ್ತು. ಇದಕ್ಕೆ ಪೂರಕವಾಗಿ ಸಂಜು ಸ್ಯಾಮ್ಸನ್ ಕೂಡ ಟೀಂ ಇಂಡಿಯಾ ಪ್ಲೇಯಿಂಗ್ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಪಂದ್ಯ ರದ್ದಾದ ಕಾರಣ ಸಂಜುಗೆ ಆಡುವ ಅವಕಾಶ ಸಿಗಲಿಲ್ಲ.

ಈಗ ಐದನೇ ಪಂದ್ಯಕ್ಕೂ ಮುನ್ನ ಶುಭಮನ್ ಗಿಲ್ ಫಿಟ್ ಆದರೆ, ಸಂಜು ಸ್ಯಾಮ್ಸನ್ ಮತ್ತೆ ಬೆಂಚ್ ಮೇಲೆ ಕುಳಿತು ಪಂದ್ಯವನ್ನು ವೀಕ್ಷಿಸಬೇಕಾಗುತ್ತದೆ. ಆದ್ದರಿಂದ ಮಂಜು ಅವರಿಗೆ ಸಿಕ್ಕ ಅವಕಾಶಗಳಲ್ಲಿ ಒಂದನ್ನು ಕಸಿದುಕೊಂಡಿದೆ ಎಂದು ಹೇಳಬಹುದು. ಐದನೇ ಟಿ20 ಪಂದ್ಯ ಡಿಸೆಂಬರ್ 19 ರಂದು ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತದ ಆಡುವ 11 ಬಗ್ಗೆ ಕುತೂಹಲ ಹೆಚ್ಚಿದೆ. ಶುಭ್ಮನ್ ಗಿಲ್ ಎರಡು ದಿನಗಳಲ್ಲಿ ಫಿಟ್ ಆಗುತ್ತಾರೋ ಇಲ್ಲವೋ? ಇದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಒಂದು ವೇಳೆ ಕೊನೆಯ ಟಿ20 ಪಂದ್ಯಕ್ಕೂ ಮುನ್ನ ಗಿಲ್ ಗುಣಮುಖರಾಗದಿದ್ದರೆ, ಸಂಜು ಸ್ಯಾಮ್ಸನ್‌ಗೆ ಆಡುವ ಅವಕಾಶ ಸಿಗುವುದಂತೂ ಖಚಿತ. ಆದಾಗ್ಯೂ ಆ ಪಂದ್ಯದಲ್ಲಿ ಸಂಜು ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೆ, ಅವರಿಗೆ ತಂಡದಿಂದ ಗೇಟ್ಪಾಸ್ ಖಚಿತ. ಏಕೆಂದರೆ ಈ ಸರಣಿ ಮುಗಿದ ಬಳಿಕ ಭಾರತ ತಂಡ ಮುಂದಿನ ವರ್ಷದ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಆ ಬಳಿಕ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಆ ಸಮಯದಲ್ಲಿ ತಂಡದಲ್ಲಿ ಪ್ರಯೋಗ ಮಾಡಲು ಆಯ್ಕೆ ಮಂಡಳಿ ಸಿದ್ಧರಿರುವುದಿಲ್ಲ.

ಅಂದರೆ ಟಿ20 ವಿಶ್ವಕಪ್ ದೃಷ್ಟಿಯಿಂದ ಬಲಿಷ್ಠ ಪ್ಲೇಯಿಂಗ್ 11 ರೂಪಿಸಲು ಆಯ್ಕೆ ಮಂಡಳಿ ಶುಭ್ಮನ್ ಗಿಲ್ಗೆ ಆಡುವ ಅವಕಾಶ ನೀಡುವುದು ಖಚಿತ. ಹೀಗಾಗಿ ಸಂಜು ಸ್ಯಾಮ್ಸನ್ ಅಲ್ಲೂ ಕೂಡ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗಬಹುದು. ಒಂದು ವೇಳೆ ಸಂಜುಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗದಿದ್ದರೆ, ಅವರ ವೃತ್ತಿಜೀವನ ಭಾಗಶಃ ಮುಗಿದಿದೆ ಎಂತಲೇ ಅರ್ಥ.
