ಭಾರತದಲ್ಲಿ ಪಂದ್ಯ, ಅಫ್ಘಾನಿಸ್ತಾನಕ್ಕೆ ಕೋಟಿ ಕೋಟಿ ಲಾಭ!

ಭಾರತದಲ್ಲಿ ಪಂದ್ಯ ನಡೆದರೆ ಎದುರಾಳಿ ಕ್ರಿಕೆಟ್ ಮಂಡಳಿಗಳ ಖಜಾನೆ ತುಂಬುವುದು ಗ್ಯಾರಂಟಿ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಭದ್ರತಾ ಕಾರಣಗಳಿಂದಾಗಿ ತನ್ನದೇ ನೆಲದಲ್ಲಿ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗದ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್, ಟೀಮ್ ಇಂಡಿಯಾ ವಿರುದ್ಧ ಭಾರತದ ದೆಹಲಿಯಲ್ಲಿ ನಡೆದ ಟಿ20 ಸರಣಿಯ ಮೂಲಕ ಬರೋಬ್ಬರಿ ಕೋಟಿ ಕೋಟಿ ನಿವ್ವಳ ಲಾಭಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ.

ಭಾರತದಲ್ಲಿ ಪಂದ್ಯ, ಅಫ್ಘಾನಿಸ್ತಾನಕ್ಕೆ ಕೋಟಿ ಕೋಟಿ ಲಾಭ!
ಅಫ್ಘಾನಿಸ್ತಾನ್ ತಂಡ
Image Credit source: ICC

Updated on: Sep 23, 2026 | 9:06 AM

ಕ್ರಿಕೆಟ್ ಜಗತ್ತಿನಲ್ಲಿ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಹೊಂದಿರುವ ಕಮರ್ಷಿಯಲ್ ಮೌಲ್ಯ ಎಂಥದ್ದು ಎಂಬುದು ಇಡೀ ಜಗತ್ತಿಗೆ ಗೊತ್ತು. ಭಾರತದ ವಿರುದ್ಧ ಒಂದು ದ್ವಿಪಕ್ಷೀಯ ಸರಣಿ ಆಡಿದರೆ ಸಾಕು, ಎದುರಾಳಿ ಕ್ರಿಕೆಟ್ ಮಂಡಳಿಗಳ ಖಜಾನೆ ತುಂಬಿ ತುಳುಕುತ್ತದೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ .

ಭದ್ರತಾ ಕಾರಣಗಳಿಂದಾಗಿ ತನ್ನ ಸ್ವದೇಶದಲ್ಲಿ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಿಲ್ಲದ ಅಫ್ಘಾನಿಸ್ತಾನ್, ಭಾರತದ ದೆಹಲಿಯಲ್ಲಿ ನಡೆದ ಟಿ20 ಸರಣಿಯ ಮೂಲಕ ಬರೋಬ್ಬರಿ ರೂ. 50 ಕೋಟಿಗೂ ಅಧಿಕ ನಿವ್ವಳ ಲಾಭಗಳಿಸಿ ಅಚ್ಚರಿ ಮೂಡಿಸಿದೆ. ಭಾರತದ ಮಣ್ಣಿನಲ್ಲಿ ಪಂದ್ಯ ನಡೆದರೂ ಅಫ್ಘಾನಿಸ್ತಾನ್ ಇಷ್ಟೊಂದು ದೊಡ್ಡ ಮಟ್ಟದ ಕಮರ್ಷಿಯಲ್ ಯಶಸ್ಸು ಗಳಿಸಿದ್ದು ಹೇಗೆ? ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ:

‘ಹೋಸ್ಟ್’ ಹಕ್ಕು ಅಫ್ಘಾನಿಸ್ತಾನದ್ದು!

ಅಫ್ಘಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸೂಕ್ತ ಭದ್ರತೆಯ ವಾತಾವರಣ ಇಲ್ಲದೇ ಇರುವುದರಿಂದ, ಭಾರತದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಅಫ್ಘಾನಿಸ್ತಾನ್ ತನ್ನ ‘ಹೋಮ್ ಗ್ರೌಂಡ್’ ಆಗಿ ಬಳಸಿಕೊಂಡಿತ್ತು. ಭಾರತದ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯ ಎಲ್ಲಾ ಪಂದ್ಯಗಳು ಇಲ್ಲೇ ಜರುಗಿದವು. ಆದರೆ, ನಿಯಮಗಳ ಪ್ರಕಾರ ಈ ಇಡೀ ಸರಣಿಯ ಅಧಿಕೃತ ‘ಆತಿಥೇಯ ತಂಡದ ಹಕ್ಕು’ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ (ACB) ಹೊಂದಿತ್ತು.

ವ್ಯವಸ್ಥೆ ಬಿಸಿಸಿಐನದ್ದು:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಸರಣಿಯಲ್ಲಿ ಕೇವಲ ಮೈದಾನದ ಸಿದ್ಧತೆ, ಆಟಗಾರರ ವಸತಿ ಹಾಗೂ ಸಾರಿಗೆಯಂತಹ ವ್ಯವಸ್ಥೆಗಳನ್ನು ಮಾತ್ರ ನೋಡಿಕೊಂಡಿತ್ತು. ಇದಕ್ಕಾಗಿ ಬಿಸಿಸಿಐಗೆ ನಿರ್ದಿಷ್ಟ ಸೇವಾ ಶುಲ್ಕ ಸಂದಾಯವಾಗುತ್ತದೆ. ಆದರೆ, ಪಂದ್ಯದ ಪ್ರಸಾರ, ಪ್ರಾಯೋಜಕತ್ವ ಹಾಗೂ ಟಿಕೆಟ್ ಮಾರಾಟದಿಂದ ಬರುವ ಅಸಲಿ ಬೃಹತ್ ಆದಾಯದ ಸಂಪೂರ್ಣ ಹಕ್ಕು ಅಫ್ಘಾನಿಸ್ತಾನ್ ಬೋರ್ಡ್ ಪಾಲಾಯಿತು.

ಕೋಟಿ ತಂದುಕೊಟ್ಟ ಡಿಜಿಟಲ್ ಹಾಗೂ ಟಿವಿ ಪ್ರಸಾರ ಹಕ್ಕುಗಳು!

ಟೀಮ್ ಇಂಡಿಯಾ ಆಡುವ ಪಂದ್ಯಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇದನ್ನು ಅಚ್ಚುಕಟ್ಟಾಗಿ ಬಳಸಿಕೊಂಡ ಅಫ್ಘಾನಿಸ್ತಾನ್ ಬೋರ್ಡ್, ಸರಣಿಯ ಪ್ರಸಾರ ಹಕ್ಕುಗಳಿಂದಲೇ ಸಿಂಹಪಾಲು ಆದಾಯ ಗಳಿಸಿದೆ. ಕೇವಲ 3 ಟಿ20 ಪಂದ್ಯಗಳ ಟಿವಿ ಮತ್ತು ಡಿಜಿಟಲ್ ಹಕ್ಕುಗಳಿಂದ ಎಸಿಬಿ ಬರೋಬ್ಬರಿ ರೂ. 57 ಕೋಟಿ ($6 ಮಿಲಿಯನ್) ಆದಾಯವನ್ನು ತನ್ನ ಜೇಬಿಗೆ ಇಳಿಸಿಕೊಂಡಿದೆ. ಅಂದರೆ ಪ್ರತಿ ಪಂದ್ಯಕ್ಕೆ ಅಂದಾಜು ರೂ. 19 ಕೋಟಿ ಲಭಿಸಿದೆ!

ಒಟ್ಟು ಆದಾಯ ರೂ. 85 ಕೋಟಿ!

ಮೀಡಿಯಾ ರೈಟ್ಸ್ ಜೊತೆಗೆ ಮೈದಾನದ ಒಳಗೆ ರಾರಾಜಿಸುವ ಪ್ರಾಯೋಜಕತ್ವಗಳು ಮತ್ತು ದೆಹಲಿ ಕ್ರೀಡಾಂಗಣದ ಟಿಕೆಟ್ ಮಾರಾಟದಿಂದ ಬಂದ ಹಣ ಎಲ್ಲವೂ ಸೇರಿದಾಗ ಈ ಸರಣಿಯ ಒಟ್ಟು ಆದಾಯ ಬರೋಬ್ಬರಿ ರೂ. 75 ರಿಂದ 85 ಕೋಟಿ ದಾಟಿದೆ. ಇದರಲ್ಲಿ ದೆಹಲಿ ಕ್ರೀಡಾಂಗಣದ ಬಾಡಿಗೆ, ಬಿಸಿಸಿಐ ಶುಲ್ಕ ಹಾಗೂ ಆಟಗಾರರ ವೆಚ್ಚ ಸೇರಿದಂತೆ ಎಲ್ಲಾ ನಿರ್ವಹಣಾ ವೆಚ್ಚಗಳನ್ನು ಕಳೆದ ನಂತರವೂ ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್‌ಗೆ ಅಂತಿಮವಾಗಿ ಸುಮಾರು ರೂ. 50 ಕೋಟಿಗೂ ಅಧಿಕ ಲಾಭ ಲಭಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!

ಅಫ್ಘಾನಿಸ್ತಾನ್ ಕ್ರಿಕೆಟ್‌ಗೆ ಸಿಕ್ಕ ಮಹಾ ಜೀವನಾಡಿ:

ಆರ್ಥಿಕವಾಗಿ ಕಷ್ಟದಲ್ಲಿರುವ ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ ಈ ರೂ. 50 ಕೋಟಿ ಎಂಬುದು ಸಾಮಾನ್ಯ ಹಣವಲ್ಲ. ಅವರ ದೇಶೀಯ ಕ್ರಿಕೆಟ್ ಮೂಲಸೌಕರ್ಯ, ಕಿರಿಯರ ಕ್ರಿಕೆಟ್ ಅಕಾಡೆಮಿಗಳು ಮತ್ತು ಆಟಗಾರರ ಒಪ್ಪಂದದ ನವೀಕರಣಕ್ಕೆ ಈ ಬೃಹತ್ ಆದಾಯವು ಸಂಜೀವಿನಿಯಾಗಲಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳ ಶಕ್ತಿ ಹಾಗೂ ಬಿಸಿಸಿಐನ ಉದಾರತೆಯಿಂದಾಗಿ ಅಫ್ಘಾನಿಸ್ತಾನ್ ಕ್ರಿಕೆಟ್ ಇಂದು ಜಾಗತಿಕ ಮಟ್ಟದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಡಲು ಸಾಧ್ಯವಾಗಿದೆ.

Loading...
Unable to load recommendations.
Follow Us