ಹೃದಯವಂತ ಕನ್ನಡಿಗ: ಸ್ಮಾರ್ಟ್‌ಫೋನ್ ಉಡುಗೊರೆಯಾಗಿ ನೀಡಿದ ರಾಹುಲ್
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಏಕದಿನ ಪಂದ್ಯದಲ್ಲಿ ಕಿವೀಸ್ ಪಡೆ 41 ಓವರ್‌ಗಳಲ್ಲಿ 134 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಭಾರತ 26 ಓವರ್‌ಗಳಲ್ಲಿ 113 ರನ್ ಗಳಿಸಿದ್ದಾಗ ಮಳೆ ಬಂದಿದ್ದರಿಂದ, ಡಕ್ವರ್ತ್ ಲೂಯಿಸ್ (DLS) ನಿಯಮದ ಪ್ರಕಾರ ಭಾರತವನ್ನು 4 ರನ್‌ಗಳಿಂದ ವಿಜಯಿ ಎಂದು ಘೋಷಿಸಲಾಯಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಐದು ಮ್ಯಾಚ್ಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ, ಕ್ರಿಕೆಟ್ ಮೈದಾನದಲ್ಲಿ ನಡೆದ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಂದ್ಯದ ನಂತರ ತಮಗೆ ಸಿಕ್ಕ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಹುಮಾನವನ್ನು ಭಾರತದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಅವರು ಮೈದಾನದ ಅಧಿಕಾರಿಯೊಬ್ಬರಿಗೆ ಉಡುಗೊರೆಯಾಗಿ ನೀಡುವ ಮೂಲಕ ಮತ್ತೊಮ್ಮೆ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ವಿಶೇಷ ‘ಇಂಪ್ಯಾಕ್ಟ್ ಅವಾರ್ಡ್’ ಮುಡಿಗೇರಿಸಿಕೊಂಡಿದ್ದರು. ಈ ಪ್ರಶಸ್ತಿಯ ಭಾಗವಾಗಿ ಅವರಿಗೆ ನಗದು ಚೆಕ್ ಹಾಗೂ ಹೊಚ್ಚಹೊಸ ನೋವಾ ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಬಹುಮಾನವಾಗಿ ನೀಡಲಾಗಿತ್ತು. ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸಿದ ರಾಹುಲ್ ಅವರ ಚಿತ್ರಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.
ಮೈದಾನದ ಅಧಿಕಾರಿಗೆ ಸರ್ಪ್ರೈಸ್ ಗಿಫ್ಟ್!
ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣ ಕೆ.ಎಲ್. ರಾಹುಲ್ ಅವರು ಎಲ್ಲರೂ ಬೆರಗಾಗುವಂತಹ ನಿರ್ಧಾರವೊಂದನ್ನು ತಗೆದುಕೊಂಡರು. ತಮಗೆ ಸಿಕ್ಕ ಬೆಲೆಬಾಳುವ ಸ್ಮಾರ್ಟ್‌ಫೋನ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳುವ ಬದಲು, ಆ ಪಂದ್ಯದ ಯಶಸ್ವಿ ಆಯೋಜನೆಗಾಗಿ ಮೈದಾನದಲ್ಲಿ ಹಗಲಿರುಳು ಶ್ರಮಿಸಿದ ಅಲ್ಲಿನ ಅಧಿಕಾರಿಯೊಬ್ಬರಿಗೆ ನೇರವಾಗಿ ಉಡುಗೊರೆಯಾಗಿ ನೀಡಿದರು. ರಾಹುಲ್ ಅವರಿಂದ ಈ ನಿರೀಕ್ಷಿಸದ ಉಡುಗೊರೆ ಪಡೆದ ಆ ಅಧಿಕಾರಿಯ ಮುಖದಲ್ಲಿ ಆನಂದ ಮೂಡಿತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Big player. Bigger heart 💙
🎥 An act of kindness and pure 𝙆𝙇𝙖𝙨𝙨 🙌
#TeamIndia | #NZvIND | @klrahul https://t.co/BgT005WZlp
— BCCI (@BCCI) November 8, 2026
ಅಭಿಮಾನಿಗಳ ಹೃದಯ ಗೆಲ್ಲುವ ‘ಕಿಂಗ್’ ರಾಹುಲ್:
ಕೆ.ಎಲ್. ರಾಹುಲ್ ಅವರು ತಮ್ಮ ಪ್ರಶಸ್ತಿಗಳನ್ನು ಅಭಿಮಾನಿಗಳಿಗೆ ಅಥವಾ ಮೈದಾನದ ಸಿಬ್ಬಂದಿಗೆ ನೀಡುತ್ತಿರುವುದು ಇದೇ ಮೊದಲೇನಲ್ಲ.
- ಟ್ರೋಫಿ ಉಡುಗೊರೆ: 2018ರ ಐಪಿಎಲ್ ಸರಣಿಯಲ್ಲಿ ತಮಗೆ ಸಿಕ್ಕಿದ್ದ ‘ಸ್ಟೈಲಿಶ್ ಪ್ಲೇಯರ್ ಆಫ್ ದಿ ಮ್ಯಾಚ್’ ಟ್ರೋಫಿಯನ್ನು ನೇರವಾಗಿ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬರಿಗೆ ನೀಡಿ ರಾಹುಲ್ ಸುದ್ದಿಯಾಗಿದ್ದರು.
- ಮ್ಯಾಚ್ ಗ್ಲೌಸ್: ಇತ್ತೀಚಿನ ಪಂದ್ಯವೊಂದರ ಗೆಲುವಿನ ನಂತರವೂ ತಮ್ಮ ಆಟದ ಗ್ಲೌಸ್ (ಕೈಗವಸು) ಅನ್ನು ಪುಟ್ಟ ಅಭಿಮಾನಿಗೆ ನೀಡಿ ಸಂಭ್ರಮಿಸಿದ್ದರು.
ಇದನ್ನೂ ಓದಿ: 184 ರನ್‌ಗೆ 7 ವಿಕೆಟ್: 242 ರನ್ ಚಚ್ಚಿ ಹೊಸ ಇತಿಹಾಸ ಬರೆದ ತೌಹಿದ್ ಹೃದೋಯ್!
ಪ್ರಸ್ತುತ, ತಮಗೆ ಲಭಿಸಿದ ಸ್ಮಾರ್ಟ್‌ಫೋನ್ ಅನ್ನು ಮೈದಾನದ ಅಧಿಕಾರಿಗೆ ಉಡುಗೊರೆಯಾಗಿ ನೀಡಿದ ಈ ಅಪರೂಪದ ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಕೆ.ಎಲ್. ರಾಹುಲ್ ಅವರ ಉದಾರ ಗುಣಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ರಾಹುಲ್ ಅವರ ಈ ನಡೆಗೆ ಮನಸೋತು, ಅವರನ್ನು “ರಿಯಲ್ ಹೀರೋ” ಎಂದು ಕೊಂಡಾಡುತ್ತಿದ್ದಾರೆ. ಮೈದಾನದ ಒಳಗೆ ಬ್ಯಾಟಿಂಗ್ ಮೂಲಕ ಮಿಂಚುವ ರಾಹುಲ್, ಮೈದಾನದ ಹೊರಗೂ ತಮ್ಮ ದೊಡ್ಡ ಗುಣದ ಮೂಲಕ ತಾವೊಬ್ಬ ಶ್ರೇಷ್ಠ ವ್ಯಕ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.




